ಬೆಂಗಳೂರು: ಜುಲೈ 2022ರಲ್ಲಿ ಪ್ರಾರಂಭವಾಗಿದ್ದ ದಿ ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್ (HDBC), ಅಂತಿಮ ರೇಸ್‌ನಲ್ಲಿ ಟಾಪ್-20 ಸವಾರರು ಚಾಂಪಿಯನ್ ಆಗಲು ಸೆಣಸುವುದರೊಂದಿಗೆ ಮುಕ್ತಾಯವಾಯಿತು. ಫೈನಲ್ ರೇಸ್‌ನಲ್ಲಿ ಕನ್ನಡಿಗ ಚಿಕ್ಕಮಗಳೂರಿನ ಅಸಾದ್ ಖಾನ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ರಾಕೇಶ್ ಎನ್. ಮತ್ತು ಗಿಡ್ಯುನ್ ಅವರು ಅನುಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ರನ್ನರ್ ಅಪ್ ಆಗಿ ಮಿಂಚಿದರು.
ಮೋಟಾರು ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ವಿಶ್ವದ ಅತಿದೊಡ್ಡ ತಯಾರಕ ಸಂಸ್ಥೆಯಾಗಿರುವ ಹೀರೋ ಮೋಟೋಕಾರ್ಪ್ ಹಲವು ಕ್ರೀಡೆಗಳು ಮತ್ತು ಕ್ರೀಡಾಪಟುಗಳನ್ನು ಉತ್ತೇಜಿಸುವ ತನ್ನ ಬದ್ಧತೆಗೆ ಅನುಗುಣವಾಗಿ ಈಗ ಆಫ್-ರೋಡ್ ರೈಡಿಂಗ್ ಚಾಂಪಿಯನ್‌ಗಳನ್ನು ಘೋಷಿಸಿದೆ. ಭಾರತ ದೇಶದೆಲ್ಲೆಡೆ ನಾಲ್ಕು ತಿಂಗಳಿಗೂ ಹೆಚ್ಚು ಅವಧಿಯ ಕಠಿಣ ಸ್ಪರ್ಧೆಯಲ್ಲಿ ಉತ್ಸಾಹಿ ರೈಡರ್‌ಗಳು ಭಾಗವಹಿಸಿದ್ದರು.
ವಿಜೇತರು, ಮೊದಲ ಮತ್ತು ಎರಡನೇ ರನ್ನರ್ ಅಪ್‌ಗಳು ಜನಪ್ರಿಯ Hero Xpulse 200 4V ಮೋಟಾರ್ ಸೈಕಲ್ ಜತೆಗೆ ಕ್ರಮವಾಗಿ ರೂ. 10 ಲಕ್ಷ, ರೂ. 6 ಲಕ್ಷ ಹಾಗೂ ರೂ. 4 ಲಕ್ಷ ಮೌಲ್ಯದ ಪ್ರಾಯೋಜಕತ್ವಗಳ ಒಪ್ಪಂದಗಳನ್ನು ಸ್ವೀಕರಿಸಿದರು.
ಎಲ್ಲ ಸುತ್ತುಗಳಲ್ಲಿ ರೋಚಕ ಪ್ರದರ್ಶನ ನೀಡಿದ ಒಲೆಸ್ಯಾ ಡಯಾಸ್ ಅವರನ್ನು ಅತ್ಯುತ್ತಮ ಮಹಿಳಾ ಆಫ್-ರೋಡ್ ರೈಡರ್ ಎಂದು ಗೌರವಿಸಲಾಯಿತು.
ಈಗಾಗಲೇ ದ್ವಿಚಕ್ರದಲ್ಲಿ ನಾಲ್ಕು ಬಾರಿ ಹಾಗೂ ನಾಲ್ಕು ಚಕ್ರವಿಭಾಗದಲ್ಲಿ ಒಂದು ಬಾರಿ ರಾಷ್ಟ್ರೀಯ ಚಾಂಪಿಯನ್ ಪಟ್ಟ ಗೆದ್ದಿರುವ ಅಸಾದ್ ಒಟ್ಟು ಭಾಗಿಯಾದ 1ಲಕ್ಷ ಸ್ಪರ್ಧಿಗಳಲ್ಲಿ ಅಂತಿಮವಾಗಿ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.
ಜೈಪುರದಲ್ಲಿರುವ ಹೀರೋ ಮೋಟೋಕಾರ್ಪ್‌ನ ವಿಶ್ವದರ್ಜೆಯ ಸಂಶೋಧನೆ ಮತ್ತು ಅಭಿವೃದ್ಧಿ (R&D) ಹಬ್, ನಾವೀನ್ಯ ಮತ್ತು ತಂತ್ರಜ್ಞಾನದ ಕೇಂದ್ರ (CIT)ದ ಪರಿಸರದಲ್ಲಿ ಅಂತಿಮ ವಾರದ ಸ್ಪರ್ಧೆಗಳನ್ನು ನಡೆಸಲಾಯಿತು. ಉನ್ನತ ಅನುಭವಕ್ಕಾಗಿ ಅಂತಾರಾಷ್ಟ್ರೀಯ ಇವೆಂಟ್‌ಗಳಿಗೆ ಸಮಾನವಾಗಿ ಈ ಸ್ಪರ್ಧೆಯನ್ನು ವಿನ್ಯಾಸಗೊಳಿಸಲಾಗಿತ್ತು. ಹೀರೋ ಮೋಟೋಸ್ಪೋರ್ಟ್ಸ್ ಟೀಮ್ ರ‍್ಯಾಲಿ ಅಂತಿಮ ವಾರದ ಪೂರ್ಣ ಸ್ಪರ್ಧೆಯನ್ನು ಸಂಯೋಜಿಸಿತ್ತು.
ದೇಶವ್ಯಾಪಿಯಾಗಿ ನಾಲ್ಕು ಹಂತಗಳಲ್ಲಿ ನಡೆದ ಕಠಿಣತಮ HDBC ಗಾಗಿ 1,00,000 ಸ್ಪರ್ಧಿಗಳು ನೋಂದಾಯಿಸಿದ್ದರು. 41 ನಗರಗಳಲ್ಲಿ 120ಕ್ಕಿಂತ ಹೆಚ್ಚು ದಿನಗಳಿಗೆ ಈ ಸ್ಪರ್ಧೆಯು ವಿಸ್ತರಿಸಿತ್ತು. ಟಾಪ್-20 ಸ್ಪರ್ಧಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿತ್ತು.