Friday, November 22, 2024

ಅರಬ್‌ ನಾಡಿನ ಅನುಭವಿ ಅಂಪೈರ್‌ ಕರ್ನಾಟಕದ ಅರುಣ್‌ ಡಿʼಸಿಲ್ವಾ

ಸೋಮಶೇಖರ್‌ ಪಡುಕರೆ, ಬೆಂಗಳೂರು

ಕ್ರೀಡೆ ಒಬ್ಬ ವ್ಯಕ್ತಿಯನ್ನು ಸದಾ ಕ್ರಿಯಾಶೀಲನಾಗಿರುವಂತೆ ಮಾಡುತ್ತದೆ. ಅದು ಬ್ಯಾಡ್ಮಿಂಟನ್‌ ಆಗಿರಬಹುದು ಇಲ್ಲ ಕ್ರಿಕೆಟ್‌ ಆಗಿರಬಹುದು. ಚಿಕ್ಕಂದಿನಲ್ಲಿ ಬ್ಯಾಡ್ಮಿಂಟನ್‌ ಆಡಿಕೊಂಡು, ಜೊತೆಯಲ್ಲಿ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡು. ಆಡುವ ವಯಸ್ಸು ದಾಟಿದರೂ ಅಂಪೈರಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡು ದೂರದ ಸೌಧಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದುಕೊಂಡು ಅಲ್ಲಿ ಕ್ರಿಕೆಟ್‌ ಅಂಪೈರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯವರಾದ, ಈಗ ಉಡುಪಿ ಜಿಲ್ಲೆಯ ಬಾರಕೂರಿನಲ್ಲಿ ನೆಲೆಸಿರುವ ಅರುಣ್‌ ಡಿʼಸಿಲ್ವಾ ಅವರ ಬದುಕಿನ ಕತೆ ಇದು.

ಮೂಲ್ಕಿಯ ಚೇತನ್‌ ನರ್ಸಿಂಗ್‌ ಹೋಮ್‌ನಲ್ಲಿರುವ ವೈದ್ಯರೊಬ್ಬರು ದಿನವೂ ಬ್ಯಾಡ್ಮಿಂಟನ್‌ ಆಡುತ್ತಿರುವುದನ್ನು ನೋಡಿ ಕಲಿತು, ಅವರೊಂದಿಗೆ ಆಡಲು ಆರಂಭಿಸಿದ ಅರುಣ್‌ ಡಿʼಸಿಲ್ವಾ ಅವರು ತಾನು ಮುಂದೊಂದು ದಿನ ದಕ್ಷಿಣ ಆಫ್ರಿಕಾದಿಂದ ಅಂಪೈರಿಂಗ್‌ನಲ್ಲಿ ಲೆವೆಲ್‌ ಒನ್‌ ಕೋರ್ಸ್‌ ಮಾಡಿ ಸೌಧಿ ಅರೇಬಿಯಾದಲ್ಲಿ ಜನಪ್ರಿಯ ಅಂಪೈರ್‌ ಆಗುತ್ತೇನೆಂದು ಊರಿಸಿರಲಿಲ್ಲ. ಆದರೆ ಕ್ರೀಡೆಯ ಬಗ್ಗೆ ಅಪಾರವಾದ ಪ್ರೀತಿ ಇಂದು ಕನ್ನಡಿಗನೊಬ್ಬ ಸೌಧಿ ಅರೇಬಿಯಾ ಕ್ರಿಕೆಟ್‌ ಸಂಸ್ಥೆಯಲ್ಲಿ ಅಂಪೈರ್‌ ಆಗಿ ಕಾರ್ಯನಿರ್ವಹಿಸುವಂತೆ ಮಾಡಿದೆ.

ಮೂಲ್ಕಿಯ ಮೆಡ್ಲಿನ್‌ ಹೈಸ್ಕೂಲಿನಲ್ಲಿ ಓದುತ್ತಿರುವಾಗ ದೈಹಿಕ ಶಿಕ್ಷಕರಾದ ಕುಶಲ್‌ ಶೆಟ್ಟಿ ಅವರು ವಾಲಿಬಾಲ್‌ ತರಬೇತಿ ನೀಡುತ್ತಿದ್ದರು. ವಾಲಿಬಾಲ್‌ ಆಟವಾಡಿದ ನಂತರ ಅರುಣ್‌ ಚರ್ಚ್‌ನಲ್ಲಿ ಹುಡುಗರೊಂದಿಗೆ ಸೇರಿಕೊಂಡು ಬ್ಯಾಡ್ಮಿಂಟನ್‌ ಆಡುತ್ತಿದ್ದರು. ವಾಲಿಬಾಲ್‌ನಲ್ಲೂ ಪಳಗಿ ಜೊತೆಯಲ್ಲಿ ಬ್ಯಾಡ್ಮಿಂಟನ್‌ನಲ್ಲೂ ತಮ್ಮನ್ನು ತೊಡಗಿಸಿಕೊಂಡರು. ಸುರೇಶ್‌ ಬನ್ನಂಜೆ ಮತ್ತು ಅರುಣ್‌ ಪೂವಯ್ಯ ಅವರ ಆಟ ನೋಡಿ ಉತ್ತಮ ಬ್ಯಾಡ್ಮಿಂಟನ್‌ ಆಟಗಾರರಾದರು. ಈ ನಡುವೆ ಟೆನಿಸ್‌ ಬಾಲ್‌ ಕ್ರಿಕೆಟ್‌ನಲ್ಲೂ ತಮ್ಮನ್ನು ತೊಡಗಿಸಿಕೊಂಡು ಬೆಂಗಳೂರಿನಲ್ಲಿ ಬಂದು ನೆಲೆಸಿದ ನಂತರ ಲೆದರ್‌ಬಾಲ್‌ ಕ್ರಿಕೆಟ್‌ ಜೊತೆಯಲ್ಲಿ ಅಂಪೈರಿಂಗ್‌ ಕೂಡ ಮಾಡುತ್ತಿದ್ದರು. ಮೂಲ್ಕಿ ಸಮುದಾಯ ಭವನದಲ್ಲಿ ಮಕ್ಕಳಿಗೆ ಬ್ಯಾಡ್ಮಿಂಟನ್‌ ತರಬೇತಿ ನೀಡುವ ಮೂಲಕ ಯುವಕರಲ್ಲಿ ಆ ಆಟದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಅಲ್ಲಿನ ವ್ಯಾಸಮಹರ್ಶಿ ಶಾಲೆಯಲ್ಲಿ 35 ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಿದ ಅರುಣ್‌, ಚಿಕ್ಕ ಪ್ರಾಯದಲ್ಲೇ ಕ್ರೀಡೆಯನ್ನು ಅಭಿವೃದ್ಧಿಪಡಿಸುವ ಉತ್ಸಾಹ ಹೊಂದಿದ್ದರು. ಅದೇ ರೀತಿ ಯಶಸ್ಸನ್ನೂ ಕಂಡವರು. ಸಿಮೆಂಟ್‌ ನೆಲದಲ್ಲಿ ಬ್ಯಾಡ್ಮಿಂಟನ್‌ ಕಲಿತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿ ಹಲವಾರು ಟೂರ್ನಿಗಳಲ್ಲಿ ಪಾಲ್ಗೊಂಡು, ಬಳಿಕ ಮೂಲ್ಕಿ, ಪಡುಬಿದ್ರಿ ಹಾಗೂ ಮೂಡಬಿದಿರೆಗಳಲ್ಲಿ ವಿವಿಧ ಮಟ್ಟದಲ್ಲಿ ಬ್ಯಾಡ್ಮಿಂಟನ್‌ ಟೂರ್ನಿಗಳನ್ನು ಆಯೋಜಿಸಿ ಜನಪ್ರಿಯಗೊಂಡರು.

ಮಣಿಪಾಲದ ಸತೀಶ್‌ ಮಲ್ಯ ಅವರ ನೆರವಿನೊಂದಿಗೆ ಬ್ಯಾಡ್ಮಿಂಟನ್‌ ಅಂಪೈರಿಂಗ್‌ನಲ್ಲೂ ಅರುಣ್‌ ಪರಿಣತಿ ಪಡೆದರು. ಬೆಂಗಳೂರಿಗೆ ತೆರಳಿದ ಬಳಿಕ ಕೆಲಸ ಮಾಡಿಕೊಂಡು, ಜೊತೆಯಲ್ಲಿ ಉನ್ನತ ಶಿಕ್ಷಣವನ್ನು ಪಡೆದು ಕ್ರಿಕೆಟ್‌ ಅಂಪೈರಿಂಗ್‌ನಲ್ಲೂ ಭಾಗಿಯಾದರು. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ನಡೆಸುವ ಅಂಪೈರಿಂಗ್‌ ಪರೀಕ್ಷೆಗೂ ಹಾಜರಾದರು. ಇದರಿಂದಾಗಿ ವಿವಿಧ ಲೀಗ್‌ ಹಾಗೂ ಡಿವಿಜನ್‌ ಪಂದ್ಯಗಳಲ್ಲಿ ಅಂಪೈರ್‌ ಆಗಿ ಕಾರ್ಯನಿರ್ವಹಿಸಿದರು. ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ ನಡೆದ ಅಖಿಲ ಭಾರತ ಅಂತರ್‌ ವಿವಿ ಕ್ರಿಕೆಟ್‌ ಚಾಂಪಿಯನ್‌ಷಿಪ್‌ನಲ್ಲಿ ಅರುಣ್‌ ಉತ್ತಮ ರೀತಿಯಲ್ಲಿ ಅಂಪೈರ್‌ ಆಗಿ ಕಾರ್ಯನಿರ್ವಹಿಸಿ ಜನಮೆಚ್ಚುಗೆ ಗಳಿಸಿದರು. ದಕ್ಷಿಣ ವಲಯದ ಪಂದ್ಯಗಳಲ್ಲೂ ಅಂಪೈರ್‌ ಆಗಿ ಕೆಲಸ ಮಾಡಿದರು.

ಬದುಕನರಸಿ ಸೌದಿ ಅರೇಬಿಯಾಕ್ಕೆ:  2014ರಲ್ಲಿ ಉದ್ಯೋಗಿ ಅರಸಿ ಸೌದಿ ಅರೇಬಿಯಾ ಸೇರಿದ ಅರುಣ್‌ ಡಿʼಸಿಲ್ವಾ  ಸೊಲಾಸ್‌ ಮೆರಿನ್‌ ಸರ್ವಿಸಸ್‌ನಲ್ಲಿ ಉದ್ಯೋಗಿಯಾಗಿದ್ದಾರೆ. ಸೌದಿ ಅರೇಬಿಯಾದಲ್ಲಿ ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಎಂಬ ನಾಲ್ಕು ವಲಯಗಳಲ್ಲಿ ಕ್ರಿಕೆಟ್‌ ಪಂದ್ಯಗಳು ನಡೆಯುತ್ತಿದ್ದು, ಇವೆಲ್ಲವೂ ಸೌದಿ ಅರೇಬಿಯಾ ಕ್ರಿಕೆಟ್‌ ಸಂಸ್ಥೆಯ ವ್ಯಾಪ್ತಿಗೆ ಒಳಪಟ್ಟ ಕ್ರಿಕೆಟ್‌ ವಲಯಗಳಾಗಿವೆ. ಕಳೆದ ವರ್ಷ ಸೌದಿ ನ್ಯಾಷನಲ್‌ ಟಿ20 ಕ್ರಿಕೆಟ್‌ ಚಾಂಪಿಯನ್‌ಷಿಪ್‌ನ ಫೈನಲ್‌ ಪಂದ್ಯದಲ್ಲಿ ಅರುಣ್‌ ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ್ದು ಕನ್ನಡಿಗರ ಹೆಮ್ಮೆ. ಇದುವರೆಗೂ ಸೌದಿಯಲ್ಲಿ ನೂರಕ್ಕೂ ಹೆಚ್ಚು ಅಧಿಕೃತ ಪಂದ್ಯಗಳಲ್ಲಿ ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ ಕೀರ್ತಿ ಅರುಣ್‌ಗೆ ಸಲ್ಲುತ್ತದೆ.

“ಸೌದಿ ಅರೇಬಿಯಾದಲ್ಲಿ ಮೊದಲು ಮುಸಲ್ಮಾನರಿಗೆ ಮಾತ್ರ ಕ್ರಿಕೆಟ್‌ ಆಡುವ ಅವಕಾಶ ಇದ್ದಿತ್ತು. ಆದರೆ ಈಗ ಎಲ್ಲ ದೇಶದ ಜನರಿಗೂ ಅಲ್ಲಿ ಆಡುವ ಅವಕಾಶ ಇದೆ. ತಂಡಗಳಲ್ಲಿ ಹೆಚ್ಚಾಗಿ ಪಾಕಿಸ್ತಾನ ಮತ್ತು ಭಾರತ ಮೂಲದ ಆಟಗಾರರು ಆಡುತ್ತಿದ್ದಾರೆ. ಕರ್ನಾಟಕದ ಅನೇಕ ಆಟಗಾರರು ಅಲ್ಲಿ ಆಡುತ್ತಿರುವುದು ವಿಶೇಷ. ಸೌದಿ ಅರೇಬಿಯಾ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ನಡೆಸುವ ಅರ್ಹತಾ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿದೆ. ಅಲ್ಲಿ ಫುಟ್ಬಾಲ್‌ಗೆ ಹೆಚ್ಚಿನ ಒತ್ತು ನೀಡುತ್ತಿದ್ದರೂ, ಕ್ರಿಕೆಟ್‌ ಈಗ ಸಹಜವಾಗಿಯೇ ತನ್ನ ಪ್ರಭುತ್ವನ್ನು ಸಾಧಿಸಿದೆ,” ಎನ್ನುತ್ತಾರೆ ಅರುಣ್‌ ಡಿʼಸಿಲ್ವಾ.

ದಕ್ಷಿಣ ಆಫ್ರಿಕಾದಿಂದ ಅಂಪೈರಿಂಗ್‌ ತರಬೇತಿ: ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿರುವ ವೆಸ್ಟರ್ಸ್‌ ಪ್ರಾವಿನ್ಸ್‌ ಕ್ರಿಕೆಟ್‌ ಅಂಪೈರ್ಸ್‌ ಅಸೋಸಿಯೇಷನ್‌ನಿಂದ ಅರುಣ್‌ ಡಿʼಸಿಲ್ವಾ ಸಿಎಸ್‌ಎ ಲೆವೆಲ್‌ ಒನ್‌ ಅಂಪೈರಿಂಗ್‌ ತರಬೇತಿಯನ್ನು ಪಡೆದಿರುತ್ತಾರೆ. ಅಲ್ಲಿಯ ತರಬೇತುದಾರ ಥಾಮಸ್‌ ಮೊಕೊರೊಸಿ ಅವರು ತರಬೇತಿ ನೀಡಿರುತ್ತಾರೆ. ಮುಂದಿನ ಏಪ್ರಿಲ್‌ನಲ್ಲಿ ಲೆವೆಲ್‌ 2 ಮತ್ತು 3 ರ ಪರೀಕ್ಷೆಗೆ ಅರುಣ್‌ ಹಾಜರಾಗಲಿದ್ದಾರೆ. 47 ವರ್ಷ ಪ್ರಾಯದ ಅರುಣ್‌ ಉತ್ಸಾಹದ ಚಿಲುಮೆ.

“ವೃತ್ತಿಯ ಜೊತೆಯಲ್ಲಿ ನಮ್ಮ  ಉತ್ತಮ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಹೋಗಬೇಕು. ಅದು ಒಂದಲ್ಲ ಒಂದು ರೀತಿಯಲ್ಲಿ ಬದುಕಿನ ಹಾದಿಯಲ್ಲಿ ನೆರವಾಗುತ್ತದೆ. ಮಾಜಿ ಕ್ರಿಕೆಟಿಗ ವಿಜಯ್‌ ಅಳ್ವಾ ಅವರು ನನ್ನ ಪಾಲಿನ ಗುರುಗಳು. ಉತ್ತಮ ಕ್ರಿಕೆಟಿಗನಾಗದಿದ್ದರೂ ಉತ್ತಮ ಅಂಪೈರ್‌ ಆಗಬೇಕೆಂಬ ಹಂಬಲವಿದೆ. ಆ ನಿಟ್ಟಿನಲ್ಲಿ ನನ್ನ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವೆ. ಕೊಲ್ಲಿ ರಾಷ್ಟ್ರಗಳಲ್ಲಿ ಈಗ ಕ್ರಿಕೆಟ್‌ ಉತ್ತಮ ರೀತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಇಲ್ಲಿ ಅಂಪೈರ್‌ಗಳಿಗೆ ಉತ್ತಮ ರೀತಿಯಲ್ಲಿ ಗೌರವ ನೀಡುತ್ತಾರೆ. ಉತ್ತಮ ರೀತಿಯಲ್ಲಿ ತೀರ್ವು ನೀಡಿದರೆ ಸಂಸ್ಥೆಯವರು ಅಷ್ಟೇ ಗೌರವದಿಂದ ನೋಡಿಕೊಳ್ಳುತ್ತಾರೆ. ಸಂಭಾವನೆಯನ್ನೂ ನೀಡುತ್ತಾರೆ. ಕ್ರೀಡೆ ನನ್ನ ಬದುಕಿಗೆ ಹೊಸ ಉಲ್ಲಾಸವನ್ನು ನೀಡಿದೆ,” ಎನ್ನುತ್ತಾರೆ ಅರುಣ್‌ ಡಿʼಸಿಲ್ವಾ.

Related Articles