ಬೆಂಗಳೂರು, ನವೆಂಬರ್ 25: ಜಯದೊಂದಿಗೆ ನಿರಂತರ ಪ್ರಭುತ್ವ ಸಾಧಿಸುತ್ತಿರುವ ಬಿಡಿಎಫ್‌ಎ ಸೂಪರ್ ಡಿವಿಜನ್ ಕ್ಲಬ್ ಎಫ್‌ಸಿ ಬೆಂಗಳೂರು ಯುನೈಟೆಡ್ ಋತುವಿನ ಕೊನೆಯ ಹಂತ ತಲುಪಿದ್ದು ಈಗ ಆಟದ ವೇಗವನ್ನು ಹೆಚ್ಚಿಸಿಕೊಂಡಿದೆ. ಎರಡು ಬಾರಿ ಬಿಡಿಎಫ್‌ಎ ಸೂಪರ್ ಡಿವಿಜನ್ ಚಾಂಪಿಯನ್ ಪಟ್ಟ ಗೆದ್ದಿರುವ ತಂಡ ಈ ಬಾರಿಯೂ ಪ್ರಶಸ್ತಿ ಉಳಿಸಿಕೊಳ್ಳುಲು ಉತ್ತಮ ಪ್ರದರ್ಶನ ತೋರುತ್ತಿದ್ದು, ಸ್ಪೋರ್ಟಿಂಗ್ ಕ್ಲಬ್ ಬೆಂಗಳೂರು ಜೊತೆಯಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.
ಸ್ಥಳೀಯ ಆಟಗಾರರಾದ ಮನೋಜ್ ಕಣ್ಣನ್ ಮತ್ತು ಶ್ರೀಜಿತ್ ಆರ್. ಅವರು ಖಾಲಿದ್ ಜಮೀಲ್ ಅವರ ತಂಡದಲ್ಲಿ ಇದುವರೆಗೂ ಉತ್ತಮ ಪ್ರದರ್ಶನ ತೋರಿದ್ದು, ತಂಡಕ್ಕೆ ರಕ್ಷಣ ಕೋಟೆಯಂತೆ ನೆರವಾಗಿದ್ದಾರೆ, ಲೀಗ್‌ನಲ್ಲಿ ಅತಿ ಕಡಿಮೆ ಗೋಲು ನೀಡಿದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಬೆಂಗಳೂರಿನಲ್ಲಿ ಬೆಳೆದ 26 ವರ್ಷದ ಮನೋಜ್ ಲೆಫ್ಟ್-ಬ್ಯಾಕ್ ಆಟಗಾರ, ಆದರೆ ಎಫ್‌ಸಿಬಿಯು ಪ್ರಧಾನ ಕೋಚ್ ಜಮೀಲ್ ಅವರನ್ನು ಸೆಂಟರ್ ಬ್ಯಾಕ್‌ಗೆ ಸ್ಥಳಾಂತರಿಸಿದರು. “ಎಫ್‌ಸಿಬಿಯು ಮತ್ತು ಪ್ರಧಾನ ಕೋಚ್ ಯಾವಾಗಲೂ ಆಟಗಾರರಲ್ಲಿರುವ ಕೌಶಲವನ್ನು ಉತ್ತಮಪಡಿಸಲು ಮತ್ತು ಸುಧಾರಣೆ ಕಂಡುಕೊಳ್ಳಲು ಎಲ್ಲ ರೀತಿಯ ನೆರವನ್ನು ಮಾಡುತ್ತಾರೆ. ಈ ಕಾರಣಕ್ಕಾಗಿಯೇ ಅವರು ನನ್ನನ್ನು ಸೆಂಟರ್ ಬ್ಯಾಕ್‌ನಲ್ಲಿ ಆಡಲು ಸೂಚಿಸಿದರು. ಅಲ್ಲಿ ನಾನು ಚೆಂಡನ್ನು ಉತ್ತಮ ರೀತಿಯಲ್ಲಿ ವೇಗವಾಗಿ ಚೆಂಡನ್ನು ಹಂಚಲು ಸಹಾಯಕವಾಯಿತು,” ಎನ್ನುತ್ತಾರೆ ಮನೋಜ್.
ಎಫ್‌ಸಿ ಬೆಂಗಳೂರು ಯುನೈಟೆಡ್ ಕ್ಲಬ್ ಆರಂಭಗೊಂಡಾಗಿನಿಂದ ಗೋಲ್‌ಕೀಪರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಜಿತ್, ತಮ್ಮ ಎದುರಿಗಿರುವ ಜೈರೀ ರೋಡ್ರಿಗಸ್ ಹಾಗೂ ಮನೋಜ್ ಅವರೊಂದಿಗೆ ಬಂಡೆಯಾಗಿ ನಿಂತಿದ್ದಾರೆ. “2018ರಲ್ಲಿ ನನಗೆ ಮೊಣಕಾಲು ನೋವಾಗಿತ್ತು,” ಎಂದು ಶ್ರೀಜಿತ್ ಹಳೆಯ ನೋವನ್ನು ನೆನಪಿಸಿಕೊಂಡರು. “ನನಗೆ ಸ್ವಯಂ ಆಗಿ ನೆಲದ ಮೇಲೆ ಕಾಲೂರಲು ಆಗುತ್ತಿರಲಿಲ್ಲ. ಚೆಂಡನ್ನೂ ತುಳಿಯಲಾಗುತ್ತಿರಲಿಲ್ಲ. ಆ ಋತುವಿನಲ್ಲೂ ನನಗೆ ಆಡಲಾಗಲಿಲ್ಲ. ಗಾಯದಿಂದ ಚೇತರಿಸಿಕೊಳ್ಳಲು ನನಗೆ ಮೂರು ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ನನ್ನ ವಿಶ್ವಾಸ ಮತ್ತು ಆತ್ಮವಿಶ್ವಾಸ ತಳಮಟ್ಟ ತಲುಪಿತ್ತು. ಈ ಸಂದರ್ಭದಲ್ಲಿ ನನ್ನ ತಂದೆ ನನ್ನಲ್ಲಿ ಉತ್ಸಾಹ ತುಂಬಿದರು. ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದರು. ಇದರಿಂದಾಗಿ ಎಫ್‌ಸಿಬಿಯುನ ಭಾಗವಾಗಲು ಸಾಧ್ಯವಾಯಿತು. ಖಾಲೀದ್ ಅವರು ಕೋಚ್ ಆಗಿ ಸೇರಿದ ನಂತರ ನಮ್ಮ ಆಟ ಮತ್ತು ಯೋಚನೆಗಳ ಮೇಲೆ ಅಘಾದವಾದ ಪರಿಣಾಮ ಬೀರಿದರು. ಅವರ ಯೋಚನೆಗಳು ಆಟಕ್ಕೆ ಮೊದಲು ನಮ್ಮ ಆತ್ಮಬಲವನ್ನು ಹೆಚ್ಚಿಸಿತು, ಉತ್ತಮ ಪ್ರದರ್ಶನ ತೋರಲು ಕಾರಣವಾಯಿತು,” ಎಂದು ಹೇಳಿದರು.
ಫುಟ್ಬಾಲ್ ಕ್ಲಬ್ ತನ್ನದೇ ಆದ ಯುನೈಟೆಡ್ ಪ್ರೋ ಫುಟ್ಬಾಲ್ ಸ್ಕೂಲ್ ಹೊಂದಿದ್ದು, ಸದ್ಯ ಬೆಂಗಳೂರಿನ ಏಳು ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಚಿಕ್ಕ ವಯಸ್ಸಿನಲ್ಲೇ ಇಲ್ಲಿ ಉತ್ತಮ ರೀತಿಯ ತರಬೇತಿ ನೀಡಲಾಗುತ್ತಿದೆ. ಒಂದು ಕ್ಲಬ್‌ನಲ್ಲಿ ಅಕಾಡೆಮಿ ಯಾವ ರೀತಿಯಲ್ಲಿ ಪಾತ್ರವಹಿಸುತ್ತದೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ ಮನೋಜ್, “ಎಫ್‌ಸಿಬಿಯು ಉತ್ತಮ ರೀತಿಯ ಮೂಲಭೂತ ಸೌಕರ್ಯವನ್ನು ನೀಡಿದೆ. ಬೆಂಗಳೂರಿನ ಯುವ ಆಟಗಾರರಿಗೆ ಉತ್ತಮ ರೀತಿಯಲ್ಲಿ ತರಬೇತಿ ಸಿಗುತ್ತಿದ್ದು, ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ನೆರವಾಗಿದೆ. ಕ್ರೀಡೆಯಲ್ಲಿ ನಿಮ್ಮದೇ ಆದ ಛಾಪನ್ನು ಮೂಡಿಸಬೇಕಾದರೆ ವೃತ್ತಿಪರತೆ ಹಾಗೂ ಶಿಸ್ತು ಪ್ರಮುಖ ಪಾತ್ರವಹಿಸುತ್ತದೆ. ಎಫ್‌ಸಿಬಿಯು ಈ ವಿಷಯದಲ್ಲಿ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ,” ಎಂದರು.
ಶ್ರೀಜಿತ್ ಅವರ ತಂದೆ ಮತ್ತು ಅಜ್ಜ ಫುಟ್ಬಾಲ್ ಕ್ರೀಡೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು, ಇದು ಅವರನ್ನು ಫುಟ್ಬಾಲ್‌ನಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿತು. ಬೆಂಗಳೂರಿನಲ್ಲಿ ಫುಟ್ಬಾಲ್ ಅಭಿವೃದ್ಧಿಯ ಬಗ್ಗೆ ನಿಮ್ಮ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ 19 ತಂಡಗಳು ಆಡುತ್ತಿರುವುದರಿಂದ ಸ್ಥಳೀಯ ಆಟಗಾರರಿಗೆ ಉತ್ತಮ ಅವಕಾಶ ಸಿಗುತ್ತಿದೆ. ಲೆನ್, ಇಶಾನ್ ಮತ್ತು ಗುರ್ವೀರ್ ಅವರಂಥ ಎಫ್‌ಸಿಬಿಯು ಅಕಾಡೆಮಿಯ ಹುಡುಗರಿಗೂ ಅವಕಾಶ ಸಿಕ್ಕಿದೆ, ಇಲ್ಲಿ ಉತ್ತಮ ತರಬೇತಿ ಜೊತೆಯಲ್ಲಿ ಅವಕಾಶವೂ ಸಿಗುತ್ತದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ. ಅಕಾಡೆಮಿಯಲ್ಲಿರುವ ಪ್ರತಿಯೊಬ್ಬರಲ್ಲೂ ಸಾಮರ್ಥ್ಯ ಇದೆ, ಆದರೆ ಪ್ರಧಾನ ತಂಡದಲ್ಲಿ ಅವಕಾಶ ಸಿಕ್ಕಾಗ ಮಾತ್ರ ಅವರಿಗೆ ಮಿಂಚಲು ಸಾಧ್ಯ,” ಶ್ರೀಜಿತ್ ಯುನೈಟಿಡ್ ಪ್ರೋ ಫುಟ್ಬಾಲ್ ಸ್ಕೂಲ್‌ನಲ್ಲಿ ಶ್ರೀಜಿತ್ ಗೋಲ್‌ಕೀಪಿಂಗ್ ತರಬೇತಿಯನ್ನೂ ನೀಡುತ್ತಿದ್ದಾರೆ.
ನವೆಂಬರ್ 28ರಂದು ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡ ಬೆಂಗಳೂರು ಎಫ್‌ಸಿ ವಿರುದ್ಧ ಬಿಡಿಎಫ್‌ಎ ಸೂಪರ್ ಡಿವಿಜನ್‌ನ ಮುಂದಿನ ಪಂದ್ಯವನ್ನು ಆಡಲಿದೆ.