ತುಮಕೂರು:
ಪ್ರಸಾದಿತ್ಯ 46ನೇ ಕರ್ನಾಟಕ -1000 ರ‍್ಯಾಲಿಯ ಮೊದಲ ಹಂತದಲ್ಲಿ ಅರ್ಕಾ ಮೋಟಾರ್ಸ್‌ನ ಕರ್ಣ ಕಡೂರ್ ಮತ್ತು ಸಹ ಚಾಲಕ ನಿಖಿಲ್ ವಿ ಪೈ ಅವರು ಸಮಗ್ರ ಮುನ್ನಡೆ ಕಂಡುಕೊಂಡಿದ್ದಾರೆ. ಬ್ಲೂಬ್ಯಾಂಡ್ ಎಫ್‌ಎಂಎಸ್‌ಸಿಐ ಇಂಡಿಯನ್ ರ‍್ಯಾಲಿ ಚಾಂಪಿಯನ್‌ಷಿಪ್‌ನ ಮೊದಲ ದಿನದಲ್ಲಿ ಕಳೆದ ಬಾರಿಯ ಚಾಂಪಿಯನ್ ಗೌರವ್ ಗಿಲ್ ಮತ್ತು ಮೂಸಾ ಶರೀಫ್ ತಾಂತ್ರಿಕ ಕಾರಣದಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದರು.
ತಾಂತ್ರಿಕ ಕಾರಣದಿಂದಾಗಿ ದಿನದ ಆರಂಭ ತಡವಾದ ಕಾರಣ ಆರು ವಿಶೇಷ ಹಂತಗಳ ಬದಲಾಗಿ ನಾಲ್ಕು ವಿಶೇಷ ಹಂತಗಳಿಗೆ ಸೀಮಿತಗೊಳಿಸಲಾಯಿತು. ಚಾಂಪಿಯನ್ ಲೀಡರ್ ಕಡೂರ್ 47.4 ಸೆಕೆಂಡುಗಳ ಅಂತರದಲ್ಲಿ ಪಾಲಕ್ಕಾಡಿನ ಫಬೀದ್ ಅಹಮಿರ್ (ಸನತ್ ಜಿ) ಅವರನ್ನು ಹಿಂದಿಕ್ಕಿದರು. ಮಾಂಡೋವಿ ರೇಸಿಂಗ್‌ನ ಆರೂರ್ ಅರ್ಜುನ್ ರಾವ್ (ಸತೀಶ್ ರಾಜಗೋಪಾಲ್) ಮೂರನೇ ಸ್ಥಾನಿಯಾದರು. ಭಾನುವಾರ ನಾಲ್ಕು ಹಂತದ ಸ್ಪರ್ಧೆ ನಡೆಯಲಿದೆ.
2021ರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಯಿಂದ ವಂಚಿತರಾಗಿದ್ದ ಅಹಮಿರ್ ಐಎನ್‌ಆರ್‌ಸಿ 2 ವಿಭಾಗದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಜೆಕೆ ರ‍್ಯಾಲಿಯಿಂಗ್ ಮಣಿಂದರ್ ಸಿಂಗ್ ಪ್ರಿನ್ಸ್ (ಸೂರಜ್ ಕೇಶವ ಪ್ರಸಾದ್) ಐಎನ್‌ಆರ್‌ಸಿ3 ವಿಭಾಗದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅಮ್ಮಿಫೀಡ್ ರ‍್ಯಾಲಿಯಿಂಗ್‌ನ ಏಮನ್ ಅಹಮ್ಮದ್ (ಸಾಗರ್ ಎಂ) ಐಎನ್‌ಆರ್‌ಸಿ 4 ವಿಭಾಗದಲ್ಲಿ, ಎಸ್‌ಎನ್‌ಎಪಿ ರೇಸಿಂಗ್‌ನ ಅರ್ಣವ್ ಪ್ರತಾಪ್ ಸಿಂಗ್ (ಅರ್ಜುನ್ ಎಸ್‌ಎಸ್‌ಬಿ) ಜೆಐಎನ್‌ಆರ್‌ಸಿಯಲ್ಲಿ ಮತ್ತು ಸಮರ್ಥ್ ಯಾದವ್ (ಚಂದ್ರಶೇಖರ್ ಎಂ) ಜಿಪ್ಸಿ ಚಾಲೆಂಜ್ ವಿಭಾಗದಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.
ಕರ್ಣ ಕಡೂರ್ ದಿನದಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡರೆ ಏಳು ಬಾರಿ ರಾಷ್ಟ್ರೀಯ ಚಾಂಪಿಯನ್ ಗಿಲ್ ಮೊದಲ ಹಂತದ ರೇಸ್‌ನ ಎರಡು ಕಿಲೋ ಮೀಟರ್‌ನಲ್ಲೇ ಗೇರ್‌ಬಾಕ್ಸ್ ಸಮಸ್ಯೆಯಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದರು. ಅವರು ಮಹೀಂದ್ರ xuv300 ವಾಹವನ್ನು ಚಲಾಯಿಸುತ್ತಿದ್ದರು.
ಚಾಂಪಿಯನ್‌ಷಿಪ್‌ನಲ್ಲಿ ಗಿಲ್‌ಗಿಂತ 44 ಅಂಕಗಳ ಮುನ್ನಡೆಯೊಂದಿಗೆ ಈ ಬಾರಿಯ ರಾಷ್ಟ್ರೀಯ ಚಾಂಪಿಯನ್ ಪಟ್ಟದ ಗುರಿಹೊಂದಿರುವ ಕರ್ಣ ಕಡೂರ್, “ನಾವು ನಮ್ಮ ಯೋಜನೆಗೆ ತಕ್ಕಂತೆ ಕಾರನ್ನು ಯಶಸ್ವಿಯಾಗಿ ಗುರಿ ತಲುಪಿಸಿದ್ದೇವೆ. ಮಧ್ಯಾಹ್ನ ನಡೆದ ಎರಡನೇ ಸುತ್ತಿನಲ್ಲಿ ನಾವು ಹೆಚ್ಚು ಮುನ್ನಡೆ ಕಂಡೆವು, ಬೆಳಗ್ಗಿನ ಅವಧಿಯಲ್ಲಿ ಸಮಯದ ಹೊಂದಾಣಿಕೆ ಮಾಡಿಕೊಂಡೆವು. ಇವತ್ತಿನ ಚಾಲನೆ ನನಗೆ ಖುಷಿ ಕೊಟ್ಟಿದೆ. ನಾಳೆಯೂ ಸಮರ್ಪಕ ರೀತಿಯಲ್ಲಿ ಗುರಿ ತಲಪುವ ಆಶಯ ಇದೆ. ಪ್ರತಿಯೊಂದು ಹಂತದಲ್ಲೂ ಕಲಿಯುವುದಿದೆ, ನಾಳೆ ಉತ್ತಮ ರೀತಿಯಲ್ಲಿ ನಮ್ಮ ಹಾದಿ ಸಾಗಲಿದೆ ಎಂಬ ಆತ್ಮವಿಶ್ವಾಸವಿದೆ,” ಎಂದರು.