ಬೆಂಗಳೂರು: ಇಂದು ಕರ್ನಾಟಕ ಕುಸ್ತಿ ಆಸೋಸಿಯೇಷನ್ ನಿವೃತ್ತ ನ್ಯಾಯಮೂರ್ತಿ ರಾಮಚಂದ್ರರವರು ರಿಟರ್ನಿಂಗ್ ಆಫೀಸರ್ ಆಗಿ ನೇಮಕರಾಗಿ ಅಡಾಕ್ ಸಮಿತಿ ನೇತೃತ್ವದಲ್ಲಿ ಕರ್ನಾಟಕ ರೆಸ್ಲಿಂಗ್ ಆಸೋಸಿಯೇಷನ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಅವಿರೋಧವಾಗಿ ನಾಲ್ಕು ವರ್ಷಗಳ ಅವಧಿಗೆ ಆಯ್ಕೆ ಮಾಡಿದರು.
ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿರವರು ಕರ್ನಾಟಕ ಕುಸ್ತಿ ಆಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾದರು. ಕರ್ನಾಟಕ ವಿವಿಧ ಜಿಲ್ಲೆಗಳಿಂದ ಕುಸ್ತಿಪಟುಗಳು, ಸಂಸ್ಥೆಯ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಗುಣರಂಜನ್ ಶೆಟ್ಟಿರವರು ಮಾತನಾಡಿ, “ಕರ್ನಾಟಕ ಕುಸ್ತಿ ಆಸೋಸಿಯೇಷನ್ ಗೆ 50ವರ್ಷಗಳ ಇತಿಹಾಸವಿದೆ. ಸಮರ್ಪಕ ನಿರ್ವಹಣೆ, ಕುಸ್ತಿಪಟುಗಳಿಗೆ ಪ್ರೋತ್ಸಾಹ ಮತ್ತು ಕುಸ್ತಿ ಸ್ಪರ್ಧೆಗಳು ಮಾಡದೇ ಕುಸ್ತಿ ಪಟುಗಳು ಅತಂಕ ಸ್ಥಿತಿಯಲ್ಲಿ ಇದ್ದರು. ಇಂದು ಕುಸ್ತಿ ಕ್ರೀಡೆ ಮತ್ತು ಸಂಸ್ಥೆಗೆ ನವಚೈತನ್ಯ ತುಂಬಲು, ಕುಸ್ತಿಪಟುಗಳಿಗೆ ಸಹಕಾರ ನೀಡಲು ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಎಲ್ಲಾ ಜಿಲ್ಲಾ, ಗ್ರಾಮದಲ್ಲಿ ಕುಸ್ತಿ ಕ್ರೀಡಾಪಟುಗಳನ್ನು ಗುರುತಿಸಿ, ತರಬೇತಿ ಸಹಕಾರ ನೀಡುವುದು, ಶಾಲಾ ಮಟ್ಟದಲ್ಲಿ ಬಾಲಕ, ಬಾಲಕಿಯರಿಗೆ ಕುಸ್ತಿ ಕ್ರೀಡೆಗಳ ಬಗ್ಗೆ ಅರಿವು ಮೂಡಿಸಿ ,ಕ್ರೀಡಾಪಟುಗಳಾಗಿ ಶಾಲೆ ಮಟ್ಟದಲ್ಲಿ ತಯಾರು ಮಾಡುವುದು. ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕುಸ್ತಿ ಸ್ಪರ್ಧೆಗಳನ್ನು ಆಯೋಜಿಸಿ, ರಾಷ್ಟ್ರ,ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳಲು ಕ್ರೀಡಾಪಟುಗಳನ್ನು ಸಜ್ಜುಗೊಳಿಸವುದು. ಒಲಂಪಿಕ್ ಕ್ರೀಡಾಕೂಟದಲ್ಲಿ ಕುಸ್ತಿ ಕ್ರೀಡೆಯಲ್ಲಿ ಭಾರತ ದೇಶಕ್ಕೆ ಅತಿ ಹೆಚ್ಚು ಪದಕ ದೊರಕಿದೆ. ಡಿಸೆಂಬರ್ ನಲ್ಲಿ ವಿಶಾಖಪಟ್ಟಂ ನಲ್ಲಿ ಅಖಿಲಾ ಭಾರತ ಕುಸ್ತಿ ಸ್ಪರ್ಧೆ ಜರುಗಲಿದೆ. ಹರಿಹರದಲ್ಲಿ ಡಿಸೆಂಬರ್ 10ರಂದು ರಾಷ್ಟ್ರೀಯ ಕುಸ್ತಿ ಸ್ಪರ್ಧೆಗೆ ಆಯ್ಕೆ ಪ್ರಕ್ರಿಯೆ ಸ್ಪರ್ಧೆಗಳು ನಡೆಯಲಿವೆ. ಅಂತರಾಷ್ಟ್ರೀಯ, ರಾಷ್ಟ್ರ ಮಟ್ಟದ ರಾಜ್ಯಮಟ್ಟದ ರೆಸ್ಲಿಂಗ್ ಕುಸ್ತಿ ಪಟುಗಳಿಗೆ ಸರ್ಕಾರದಿಂದ ಆರ್ಥಿಕ ಸಹಾಯ ಮತ್ತು ರೈಲು,ಬಸ್ ಪ್ರಯಾಣ ಉಚಿತವಾಗಿ ನೀಡುವ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಲಾಗುವುದು,” ಎಂದು ಹೇಳಿದರು.
ಪದಾಧಿಕಾರಿಗಳ ವಿವರ:
ಕರ್ನಾಟಕ ಕುಸ್ತಿ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ, ಹಿರಿಯ ಉಪಾಧ್ಯಕ್ಷರಾಗಿ ಜಿ ಎಸ್ ನ್ಯಾಮಗೌಡ, ಉಪಾಧ್ಯಕ್ಷರುಗಳಾಗಿ ಪ್ರಸಾದ್ ಶೆಟ್ಟಿ, ಸಹಜ್ ಜೆ ರೈ, ವೀರೇಶ್ ಕೆ ಎಂ, ಪ್ರಕಾಶ್ ಟಿ ಯಶವಂತ ಯಮನಪ್ಪನವರ್, ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀನಿವಾಸ ಜೆ ಖಜಾಂಚಿಯಾಗಿ ಶ್ರೀನಿವಾಸ ಅಂಗರಕೋಡ, ಜಂಟಿ ಕಾರ್ಯದರ್ಶಿಗಳಾಗಿ ವಿನೋದ್ ಕುಮಾರ್ ಕೆ ಉಮೇಶ್ ಕುಮಾರ್ ಜೆ ಸಂಜಯ್ ನಾಯಕ್ ಮತ್ತು ಕಾರ್ಯಕಾರಿ ಸದಸ್ಯರಾಗಿ ವಿಶ್ವನಾಥ ಜೋತಿಭಾ ಪಾಟೀಲ್ ಮತ್ತು ಮಿಥುನ್ ದೇವಾಡಿಗರವರು ಅವಿರೋಧವಾಗಿ ಆಯ್ಕೆಯಾದರು.