ಬೆಂಗಳೂರು:
ಶೇಕಡಾ ನೂರು ಫಲಿತಾಂಶಕ್ಕಾಗಿ ಮಕ್ಕಳನ್ನು ಶಾಲಾ ಕೊಠಡಿಯಲ್ಲಿ ಕಟ್ಟಿ ಹಾಕಿ, ಅವರ ದೈಹಿಕ ಶಿಕ್ಷಣವನ್ನು ನಾಶ ಮಾಡುವ ಕಾಲೇಜುಗಳ ಸಂಖ್ಯೆ ಹೆಚ್ಚಿರುವ ಈಗಿನ ಕಾಲಮಾನದಲ್ಲಿ ಶಿಕ್ಷಣದ ಜೊತೆಯಲ್ಲಿ ದೈಹಿಕ ಶಿಕ್ಷಣಕ್ಕೂ ಹೆಚ್ಚಿನ ಒತ್ತು ನೀಡಿ ಅದರಲ್ಲಿಯೂ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಿದೆ ಎಂದು ತೋರಿಸಿಕೊಟ್ಟ ಬೆಂಗಳೂರಿನ ಬಿ.ಎಂ. ಶ್ರೀನಿವಾಸಯ್ಯ ಸ್ಮಾರಕ ಬಿಎಂಎಸ್ ಮಹಿಳಾ ಕಾಲೇಜಿಗೆ ಕರ್ನಾಟಕ ರಾಜ್ಯ ಸರಕಾರ 2021ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ ನೀಡಿ ಗೌರವಿಸಿರುವುದು ಸ್ತುತ್ಯರ್ಹ.
ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕರಾದ ಡಿ.ಆರ್. ರೂಪಾ ಮತ್ತು ಸಹಾಯಕ ನಿರದೇಶಕರಾದ ಮಾನಸ ಎಲ್.ಜಿ. ಅವರ ಕಾರ್ಯದಕ್ಷತೆ ಮತ್ತು ಬಿಎಂಎಸ್‌ಇಟಿ ಟ್ರಸ್ಟ್‌ನ ಅಧ್ಯಕ್ಷೆ ಡಾ. ಬಿ.ಎಸ್. ರಾಗಿಣಿ ನಾರಾಯಣ್, ಬಿಎಂಎಸ್ಇಟಿ ಟ್ರಸ್ಟಿ ಡಾ. ಪಿ. ದಯಾನಂದ ಪೈ ಅವರ ಪ್ರೋತ್ಸಾಹದಿಂದ ಇಂದು ಈ ಮಹಿಳಾ ಕಾಲೇಜು ಚಾಂಪಿಯನ್ನರಿಂದ ತುಂಬಿ ತುಳುಕುತ್ತಿದೆ.
1964ರಲ್ಲಿ ಆರಂಭಗೊಂಡ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಇದುವರೆಗೂ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ದೇಶಕ್ಕೆ ಉಡುಗೊರೆಯಾಗಿ ನೀಡಿದೆ. 1998 ರಲ್ಲಿ ರೂಪಾ ಡಿ.ಆರ್. ಮತ್ತು 2016ರಲ್ಲಿ ಮಾನಸ ಎಲ್.ಜಿ. ಅವರು ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕರಾಗಿ ಆಯ್ಕೆಯಾದಾಗಿನಿಂದ ಕಾಲೇಜಿನ ಆಡಳಿತ ಮಂಡಳಿ ಉತ್ತಮ ಮೂಲಭೂತ ಸೌಕರ್ಯಗಳನ್ನು ನೀಡಿತು. ಇದರಿಂದ ಉತ್ತಮ ಕ್ರೀಡಾಪಟುಗಳನ್ನು ಹುಟ್ಟುಹಾಕಲು ಸಾಧ್ಯವಾಯಿತು. ಇಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತರಬೇತಿ ಪಡೆದ ತರಬೇತುದಾರರಿದ್ದು, ವಿದ್ಯಾರ್ಥಿನಿಯರ ಕ್ರೀಡಾ ಸಾಧನೆಗೆ ಉತ್ತಮ ರೀತಿಯಲ್ಲಿ ಶ್ರಮಿಸಿದ್ದಾರೆ.
ಶ್ರೀನಿವಾಸನ್ (ಹ್ಯಾಂಡ್‌ಬಾಲ್), ಪ್ರಕಾಶ್ ಎನ್. (ವಾಲಿಬಾಲ್), ಸುಂದರ್ (ಕ್ರಿಕೆಟ್), ಮಹೇಶ್ ಪಿ. (ಖೋ ಖೋ), ಬಾಲಕೃಷ್ಣ (ಬ್ಯಾಡ್ಮಿಂಟನ್ ಮತ್ತು ಕಬಡ್ಡಿ), ನಂದಿನಿ ಎಲ್.ಜಿ (ನೆಟ್‌ಬಾಲ್), ಭಾರತಿ ಬಿ.ಎಲ್. (ಅಥ್ಲೆಟಿಕ್ಸ್) ಹೀಗೆ ಮಾಜಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳು, ವಿವಿಧ ಪ್ರಶಸ್ತಿಗೆ ಭಾಜನರಾಗಿರುವ ತರಬೇತುದಾರರು ಇಲ್ಲಿನ ಕ್ರೀಡಾಪಟುಗಳ ಬಾಳನ್ನು ಬೆಳಗುತ್ತಿದ್ದಾರೆ.
ಕ್ರೀಡಾಪಟುಗಳಿಗೆ ಪ್ರೋತ್ಸಾಹ:
ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿದ್ಯಾರ್ಥಿಗಳಿಗೆ ಹೊಸ ಬದುಕು ಸಿಕ್ಕಂತೆ. ಇಲ್ಲಿಯ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕದ ಸಾಧನೆ ಮಾಡಿದರೆ ನಗದು ಬಹುಮಾನದ ಜೊತೆಯಲ್ಲಿ ಉಚಿತ ಶಿಕ್ಷಣ ಪಡೆಯಬಹುದು. ವಿಶ್ವವಿದ್ಯಾನಿಲಯ ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಶುಲ್ಕದಲ್ಲಿ ಶೇ50ರಷ್ಟು ವಿನಾಯಿತಿ ಇರುತ್ತದೆ. ಕ್ರೀಡಾ ಕೋಟಾದಡಿ ಇಲ್ಲಿ ವಿದ್ಯಾಭ್ಯಾಸ ಪಡೆಯಲು ಪ್ರವೇಶವೂ ಸಿಗುತ್ತದೆ.
ಚಿನ್ನ ಗೆದ್ದವರಿಗೆ, ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದವರಿಗೆ 10,000 ರೂ. ನಗದು ಬಹುಮಾನವಿರುತ್ತದೆ. ನಿತ್ಯವೂ ಅಭ್ಯಾಸದಲ್ಲಿ ತೊಡಗುವ ಕ್ರೀಡಾಪಟುಗಳಿಗೆ ಉಚಿತ ಉಪಹಾರವಿರುತ್ತದೆ. ಅಂತರ್ ಕಾಲೇಜು, ರಾಜ್ಯ ಮತ್ತು ಅಖಿಲ ಭಾರತ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಎಲ್ಲ ರೀತಿಯ ಉಚಿತ ಸೌಲಭ್ಯವಿರುತ್ತದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಂಡ ಕ್ರೀಡಾಪಟುಗಳಿಗೆ ಕ್ರೀಡಾ ದಿನದಂದು ಸನ್ಮಾನ ಮತ್ತು 10,000 ರೂ. ನಗದು ಬಹುಮಾನ ನೀಡಲಾಗುತ್ತದೆ. ರಾಜ್ಯ ಮಟ್ಟದ ಕ್ರೀಡಾಪಟುಗಳಿಗೆ 5,000ರೂ. ನೀಡಿ ಸನ್ಮಾನಿಸಲಾಗುತ್ತದೆ. ಪ್ರತಿ ವರ್ಷ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿ ಮುಂದಿನ ಬದುಕನ್ನು ಕಟ್ಟಿಕೊಳ್ಳುತ್ತಿರುವ ಉತ್ತಮ ವಿದ್ಯಾರ್ಥಿಗೆ ಚಿನ್ನದ ಉಂಗುರ ನೀಡಿ ಗೌರವಿಸಲಾಗುತ್ತದೆ. ಕ್ರೀಡೆಯಲ್ಲಿ ತೊಡಗಿಸಿಕೊಂಡು ಓದಿನಲ್ಲಿ ನೂರು ಪ್ರತಿಶತ ಸಾಧನೆ ಮಾಡಿದ ಕ್ರೀಡಾಪಟುಗಳಿಗೂ ಚಿನ್ನದ ಉಂಗುರ ನೀಡಿ ಗೌರವಿಸಲಾಗುತ್ತದೆ. ಕ್ರೀಡೆಯಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು ಓದಿನಲ್ಲೂ ಹಿಂದೆ ಬೀಳಬಾರದು ಎಂದು ಅವರಿಗೆ ಉಚಿತ ಟ್ಯೂಷನ್ ನೀಡಲಾಗುತ್ತದೆ.
ರಾಜ್ಯ ಸರಕಾರ ಮತ್ತು ವಿವಿಯಿಂದ ಪ್ರೋತ್ಸಾಹ ಪಡೆದವರು:
ಇಲ್ಲಿಯ ಕ್ರೀಡಾ ಸಾಧಕರು ವಿವಿಧ ಕ್ರೀಡಾ ವಿಭಾಗಗಳಲ್ಲಿ ಸಾಧನೆ ಮಾಡಿ ರಾಜ್ಯ ಸರಕಾರ ಮತ್ತು ವಿಶ್ವವಿದ್ಯಾನಿಲಯ ನೀಡುವ ನಗದು ಬಹುಮಾನಗಳನ್ನು ಪಡೆದಿರುತ್ತಾರೆ. 30 ವಿದ್ಯಾರ್ಥಿನಿಯರು ರಾಜ್ಯ ಸರಕಾರ ಕ್ರೀಡಾ ಸಾಧನೆಗಾಗಿ ನೀಡುವ ಶುಲ್ಕ ವಿನಾಯಿತಿಗೆ ಅರ್ಹತೆ ಪಡೆದಿರುತ್ತಾರೆ. ಏಳು ಕ್ರೀಡಾ ಸಾಧಕರು ಒಟ್ಟು 21 ಲಕ್ಷ ರೂ.ಗಳ ನಗದು ಬಹುಮಾನ ಗಳಿಸಿರುತ್ತಾರೆ.
ಕ್ರೀಡೆಯಲ್ಲಿ ಸಾಧನೆ ಮಾಡಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕ್ರೀಡಾ ಸಾಧಕರು ಒಟ್ಟು 21 ಲಕ್ಷ ರೂ. ನಗದು ಬಹುಮಾನ ಗಳಿಸಿರುತ್ತಾರೆ. ವಿಶ್ವವಿದ್ಯಾನಿಲಯ ಕೂಡ ಅಂತರ್ ವಿಶ್ವವಿದ್ಯಾನಿಲಯಗಳ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದವರಿಗೆ ಅನುಕ್ರಮವಾಗಿ 10,000, 7000 ಮತ್ತು 5,೦೦೦ ರೂ. ನೀಡಿ ಗೌರವಿಸುತ್ತದೆ. ಬಿಎಂಎಸ್ ಮಹಿಳಾ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ಅಂತರ್ ವಲಯ ಕ್ರಿಕೆಟ್ ಮತ್ತು ಟೆನಿಸ್ ಉತ್ತಮ ಸಾಧನೆ ತೋರಿದ ಕಾರಣ ಬೆಂಗಳೂರು ವಿಶ್ವವಿದ್ಯಾನಿಲಯ ನಗದು ಬಹುಮಾನ ನೀಡಿ ಗೌರವಿಸಿದೆ.
70ಕ್ಕೂ ಹೆಚ್ಚು ದೈಹಿಕ ಶಿಕ್ಷಕರು ಉದ್ಯೋಗದಲ್ಲಿ:
ಕ್ರೀಡೆಯಲ್ಲಿಯೇ ಯಶಸ್ಸು ಕಂಡು, ಕ್ರೀಡೆಯನ್ನೇ ಬದುಕಾಗಿಸಿಕೊಂಡು, ಅದರಲ್ಲಿ ವೃತ್ತಿಪರತೆಯನ್ನು ಬೆಳೆಸಿಕೊಂಡ ಕ್ರೀಡಾಪಟುಗಳು M.P.Ed ಮತ್ತು B.P.Ed ಶಿಕ್ಷಣ ಪಡೆದು ಕರ್ನಾಟಕದ ಬೇರೆ ಬೇರೆ ಶಾಲಾ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು ಮತ್ತೆ ಚಾಂಪಿಯನ್ನರನ್ನು ಬೆಳೆಸುತ್ತಿದ್ದಾರೆ. ಹಲವಾರು ಕ್ರೀಡಾಪಟುಗಳು ತಮ್ಮ ಸಾಧನೆಯ ಮೂಲಕ ರೈಲ್ವೆ, ಎಲ್‌ಐಸಿ, ಪೋಲಿಸ್, ಪೋಸ್ಟಲ್ ಇಲಾಖೆಗಳಲ್ಲಿ ಉದ್ಯೋಗ ಹೊಂದಿರುತ್ತಾರೆ.
2016ರಿಂದ ಬಿಎಂಎಸ್ ಮಹಿಳಾ ಕಾಲೆಜಿನಲ್ಲಿ ಕ್ರೀಡಾ ಕೋಟಾದಡಿ 173 ಕ್ರೀಡಾ ಸಾಧಕರು ಪ್ರವೇಶ ಪಡೆದಿರುವುದು ಗಮನಾರ್ಹ. ಶಿಕ್ಷಣದ ಜೊತೆಯಲ್ಲಿ ಕ್ರೀಡೆಗೆ ಉತ್ತಮ ಪ್ರೋತ್ಸಾಹ ನೀಡುತ್ತಿರುವ ಮಹಿಳಾ ಕಾಲೇಜಿನ ಈ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರ ಕ್ರೀಡಾ ಪೋಷಕ ಪ್ರಶಸ್ತಿ ನೀಡಿ ಗೌರವಿಸಿರುವುದರಿಂದ ಈ ಕಾಲೇಜು ಇತರ ಕಾಲೇಜುಗಳಿಗೆ ಮಾದರಿ ಎನಿಸಿದೆ.