Thursday, November 21, 2024

ನೇತ್ರಾವತಿಯ ತಟದಲ್ಲೊಂದು ಯೋಗದ ತಪೋವನ

ಸೋಮಶೇಖರ್‌ ಪಡುಕರೆ, ಬೆಂಗಳೂರು:

ತುಂಬೆಯ ಕಿಂಡಿ ಅಣೆಕಟ್ಟಿಗೆ ತುಂಬಿ ಹರಿವ ನೇತ್ರಾವತಿ, ಹಸಿರನುಟ್ಟ ಭೂಮಿ, ಉಸಿರಿಗೆ ತಂಪು ಗಾಳಿ, ನದಿ ತಟದಲ್ಲೊಂದು ಪುಟ್ಟ ಯೋಗ ಪೀಠ, ಮನಕ್ಕೆ ಮುದ ನೀಡುವ ವಿವಿಧ ಸಸ್ಯರಾಶಿ, ಹಕ್ಕಿಗಳ ಕಲರವ, ಒತ್ತಡಗಳಿಗೆ ಕಿಚ್ಚು ಹಚ್ಚುವ ಪ್ರಶಾಂತತೆ, ಯೋಗ, ಸೈಕ್ಲಿಂಗ್‌, ಬೋಟ್‌ ರೈಡಿಂಗ್‌. ತಂಗಲು ಸುಂದರ ಮನೆಗಳು, ಕೇರಳ ಶೈಲಿಯ ಚರುಪಾಡಿ (Sit Out). ಇದ್ದಷ್ಟು ದಿನ ಬಾಹ್ಯ ಜಗತ್ತನ್ನು ಮರೆಮಾಚಿದುವ ನಿಸರ್ಗದ ನಡುವೆ ಇರುವ “ತಪೋವನ.”

ಕಚೇರಿಯ ಒತ್ತಡಗಳ ನಡುವೆ ಕೆಲಸ ಮಾಡಿ, ದಣಿದವರಿಗೆ ಒಂದೆರಡು ದಿನ ವಿಶ್ರಾಂತಿ ಪಡೆಯಲು ಇದು ನಿಜವಾದ  ತಪೋವನ, ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದಲ್ಲಿರುವ ಈ ನೈಸರ್ಗಿಕ ತಪೋವನವನ್ನು ನಿರ್ಮಿಸಿದವರು ಡಾ. ಜಯಪ್ರಕಾಶ್‌ ಮಯ್ಯ ಹಾಗೂ ಶುಭ ಮಯ್ಯ. ನೇಪಾಳದ ಭರತ್‌ಪುರದಲ್ಲಿರುವ ವೈದ್ಯ ವಿಜ್ಞಾನ ಕಾಲೇಜಿನಲ್ಲಿ ಇಎನ್‌ಟಿ ವಿಭಾಗದ ಮುಖ್ಯಸ್ಥರಾಗಿರುವ ಡಾ. ಜಯಪ್ರಕಾಶ್‌ ಮಯ್ಯ ಅವರು ಮೂಲತಃ ಬಂಟ್ವಾಳದವರು. ದೇಶ ವಿದೇಶಗಳಲ್ಲಿ ವೈದ್ಯ ವೃತ್ತಿಯನ್ನು ಮಾಡಿದ ಅವರು ಸ್ವತಃ ಯೋಗಪಟು. ಸುಮಾರು ಐದು ಎಕರೆ ಭೂಮಿಯನ್ನು ಹಸಿರು ತಾಣವನ್ನಾಗಿ ಮಾಡಿರುವುದಲ್ಲದೆ ಅಲ್ಲಿ ಯೋಗಕ್ಕೆ ಪ್ರತ್ಯೇಕವಾದ ಸ್ಥಳವನ್ನು ನಿರ್ಮಿಸಿದ್ದಾರೆ.

ಸದಾ ತಂಪಿನ ತಾಣ:

ತಪೋನದ ಸುತ್ತಲೂ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಆಸನದ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ ಮತ್ತು ಸಂಜೆ ಜಾಗಿಂಗ್‌ ಮತ್ತು ವಾಕಿಂಗ್‌ ಮಾಡುವವರಿಗೆ ಟ್ರ್ಯಾಕ್‌ ನಿರ್ಮಿಸಲಾಗಿದೆ. ಇವು ಹಸಿರು ಮರ ಗಿಡಗಳ ನಡುವೆಯೇ ಇದೆ. ನಿತ್ಯವೂ ಯೋಗ, ಧ್ಯಾನ ಮಾಡುವವರಿಗೆ ಇದು ಸೂಕ್ತ ತಾಣ. ದೋಣಿ ವಿಹಾರದ ವ್ಯವಸ್ಥೆಯೂ ಇದೆ. ಬಾಹ್ಯ ಜಗತ್ತಿನ ಯಾವುದೇ ಶಬ್ದ ನಿಮ್ಮ ಧ್ಯಾನಕ್ಕೆ ಅಡ್ಡಿ ಮಾಡದು. ಪಕ್ಕದಲ್ಲೇ ನೇತ್ರಾವರಿ ನದಿಗೆ ಕಟ್ಟಲಾದ ತುಂಬೆ ಕಿಂಡಿ ಅಣೆಕಟ್ಟು ಈ ಪರಿಸರವನ್ನು ತಂಪಾಗಿಸಿದೆ.

ಸುಸಜ್ಜಿತ  ಕಾಟೇಜ್‌ಗಳು:

ಇಲ್ಲಿ ಸಾಂಪ್ರದಾಯಿಕ ಪರಿಕರಗಳ ಜೊತೆಗೆ ಆಧುನಿಕ ಸೌಲಭ್ಯಗಳಿಂದ ಕೂಡಿದ ಮೂರು ಕಾಟೇಜ್‌ಗಳಿವೆ. ಪಕ್ಕದಲ್ಲೇ ನದಿ ಇರುವುದರಿಂದ ಇಲ್ಲಿ ಏರ್‌ಕಂಡೀಷನ್‌ ಅಗತ್ಯವೆನಿಸುವುದಿಲ್ಲ. ಆದರೂ ಪ್ರತಿಯೊಂದು ಕಾಟೇಜ್‌ ಹವಾನಿಯಂತ್ರಣದ ವ್ಯವಸ್ಥೆಯನ್ನು ಹೊಂದಿದೆ. ಅತಿಥಿಗಳಿಗೆ ಸಸ್ಯಾಹಾರದ ವ್ಯವಸ್ಥೆ ಇರುತ್ತದೆ. ಸಹಾಯಕ್ಕೆ ಸಿಬ್ಬಂದಿಯೂ ಇರುತ್ತಾರೆ. ದಣಿದು ಬಂದವರು ಇಲ್ಲಿ ತಂಗಿದರೆ ಖಂಡಿತವಾಗಿಯೂ ಹೊಸ ಹುಮ್ಮಸ್ಸಿನೊಂದಿಗೆ ನಿರ್ಗಮಿಸುವರು.

ವ್ಯಾಪಾರದ ಉದ್ದೇಶದಿಂದ ಸ್ಥಾಪಿಸಿದ್ದಲ್ಲ:

ಈ ತಪೋವನವನ್ನು ನಿರ್ಮಿಸಿದ ಡಾ. ಜಯಪ್ರಕಾಶ್‌ ಮಯ್ಯ ಅವರು ವ್ಯಾಪಾರದ ದೃಷ್ಟಿಯಿಂದ ನಿರ್ಮಿಸಿದ್ದಲ್ಲ ಎನ್ನುತ್ತಾರೆ. “ಬದುಕು ತೀರಾ ಕಮರ್ಷಿಯಲ್‌ ಆಗಿರಬಾರದು. ಇಲ್ಲಿ ಹೆಚ್ಚೆಂದರೆ ಹತ್ತು ಜನ ವಾಸ ಮಾಡಬಹುದು. ಇದು ದುಬಾರಿ ರೆಸಾರ್ಟ್‌ ರೀತಿಯಲ್ಲ. ನಿಸರ್ಗವನ್ನು ಸವಿಯುವ ಉದ್ದೇಶ ಇದ್ದರೆ ಇಲ್ಲಿ ಆನಂದ ಸಿಗುತ್ತದೆ. ಮೋಜು, ಮಸ್ತಿ ಮಾಡುವವರಿಗೆ ಬೇರೆ ರೆಸಾರ್ಟ್‌ಗಳು ಇವೆ. ನೆಮ್ಮದಿಯನ್ನು ಹುಡುಕಿ ಬರುವವರಿಗೆ ಇಲ್ಲಿ ಖಂಡಿತವಾಗಿಯೂ ಖುಷಿ, ಸಂತೋಷ ಸಿಗುತ್ತದೆ. ನಿಸರ್ಗದೊಂದಿಗೆ ಒಂದಿಷ್ಟು ಸಮಯ ಕಳೆಯುವವರಿಗೆ ಇದು ಸೂಕ್ತವಾದ ಸ್ಥಳ. ಇಲ್ಲಿ ತಂಗಿದವರಲ್ಲಿ ಯಾರೂ ದುಬಾರಿಯಾಯಿತು ಎಂದು ಹೇಳಿಲ್ಲ,” ಎಂದು ಡಾ. ಜಯಪ್ರಕಾಶ್‌ ಮಯ್ಯ ಹೇಳಿದ್ದಾರೆ.

“ಆಧುನಿಕತೆಯ ಗುಂಗಿನಲ್ಲಿ ನಾವು ನಿಸರ್ಗದೊಂದಿಗಿನ ಸಂಬಂಧವನ್ನು ಕಳೆದುಕೊಳ್ಳುತ್ತಿದ್ದೇವೆ, ಪರಿಸರ ನಾಶವಾಗುತ್ತಿದೆ. ನಗರಗಳಲ್ಲಿ ಸೈಟ್‌ ತೆಗೆದುಕೊಂಡು ಬದುಕುವುದೇ ನೆಮ್ಮದಿ ಮತ್ತು ಸುರಕ್ಷಿತ ಎಂಬುದೇ ನಮ್ಮ ಸಂಕಲ್ಪವಾಗಿದೆ. ಆದರೆ ನಿಜವಾದ ಬದುಕು ಇರುವುದು ನಾವು ನಿಸರ್ಗದೊಂದಿಗೆ ಬದುಕಿದಾಗ. ಹಾಗಾಗಿ ಒಂದೊಂದೇ ವಸ್ತುಗಳು, ಸಮಯ ಸಿಕ್ಕಾಗ ವಿವಿಧ ರೀತಿಯ ಗಿಡಗಳನ್ನು ತಂದು ಸಾಕಿ ಸಲಹಿರುವೆ. ನನ್ನ ಶ್ರಮದಲ್ಲಿ ಪತ್ನಿ ಶುಭ ಮಯ್ಯ ಮತ್ತು ಮಕ್ಕಳಾದ ವರುಣ್‌ ಹಾಗೂ ರೋಹನ್‌ ಅವರ ಪಾತ್ರ ಪ್ರಮುಖವಾಗಿದೆ,” ಎಂದು ಡಾ. ಜಯಪ್ರಕಾಶ್‌ ಮಯ್ಯ ತಿಳಿಸಿದರು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಭರತ್‌ ರುಕ್ಮಯ್ಯ, ಮ್ಯಾನೇಜರ್‌, ತಪೋವನ-8971896810

Related Articles