Friday, October 18, 2024

ಅಥ್ಲೆಟಿಕ್ಸ್‌ನಲ್ಲಿ ರಾಜ್ಯದ ಹೊಸ ಪ್ರತಿಭೆ ಕರಾವಳಿಯ ಅಖಿಲೇಶ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು:

ಥ್ರೋ ಬಾಲ್‌, ಕಬಡ್ಡಿ ಮತ್ತು ಬ್ಯಾಡ್ಮಿಂಟನ್‌ನಲ್ಲಿ ಉಡುಪಿ ಜಿಲ್ಲಾ ಮಟ್ಟದಲ್ಲಿ ಮಿಂಚಿ, ವಾಲಿಬಾಲ್‌ನಲ್ಲಿ ರಾಜ್ಯ ಮಟ್ಟದಲ್ಲಿ ಮಿನುಗಿ ಟ್ರಿಪಲ್‌ ಜಂಪ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಅಗ್ರ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದ ಕೋಟದ ಅಖಿಲೇಶ್‌ ತಾನೊಬ್ಬ ಭವಿಷ್ಯದ ತಾರೆ ಎಂಬುದವನ್ನು ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಸಾಬೀತುಪಡಿಸಿದ್ದಾರೆ. ಈ ಪ್ರತಿಭಾವಂತ ಗ್ರಾಮೀಣ ಕ್ರೀಡಾಪಟುವಿಗೆ ಬೇಕಾಗಿರುವುದು ನಮ್ಮೆಲ್ಲರ ಪ್ರೋತ್ಸಾಹ.

ಉಡುಪಿ ಜಿಲ್ಲೆಯ ಮಾಬುಕಳದಲ್ಲಿರುವ ಬಿ.ಡಿ, ಶೆಟ್ಟಿ ಕಾಲೇಜಿನಲ್ಲಿ ಬಿಕಾಂ ಓದುತ್ತಿರುವ ಅಖಿಲೇಶ್‌ ಕಳೆದ ವಾರ ಚೆನ್ನೈನಲ್ಲಿ ನಡೆದ ಸೌತ್‌ ವೆಸ್ಟ್‌ ಅಂತರ್‌ ವಿಶ್ವವಿದ್ಯಾನಿಲಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದ ಅಖಿಲೇಶ್‌ ಚಿನ್ನದ ಪದಕದೊಂದಿಗೆ ವಿಶ್ವವಿದ್ಯಾನಿಲಯಕ್ಕೆ ಹಾಗೂ ತಾನು ಕಲಿಯುತ್ತಿರುವ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ವಿವೇಕ ಪದವಿಪೂರ್ವ ಕಾಲೇಜಿನಲ್ಲಿ ಓದುತ್ತಿರುವಾಗಲೇ ಹಲವಾರು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪದಕ ಗೆದ್ದಿದ್ದ ಅಖಿಲೇಶ್‌ಗೆ ಆರಂಭದಲ್ಲಿ ತರಬೇತಿ ನೀಡಿದವರು ಬ್ರಹ್ಮಾವರ ಎಸ್‌ಎಂಎಸ್‌ ಕಾಲೇಜಿ ದೈಹಿಕ ಶಿಕ್ಷಕರಾದ ಸತ್ಯನಾರಾಯಣ. ಅವರ ನಿಧನದ ನಂತರ ರಾಜ್ಯ ಕಂಡ ಉತ್ತಮ ಅಥ್ಲೆಟಿಕ್ಸ್‌ ಕೋಚ್‌ ವಸಂತ್‌ ಜೋಗಿ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಎಎಸ್‌ಐ ಆಗಿರುವ ಜಯಪ್ರಕಾಶ್‌ ಹಾಗೂ ಸುಮನ ಕೊತ್ವಾಲ್‌ ಅವರ ಕಿರಿಯ ಮಗನಾಗಿರುವ ಅಖಿಲೇಶ್‌ ಚಿಕ್ಕಂದಿನಿಂದಲೂ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಆರನೇ ತರಗತಿಯಿಂದಲೇ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆದ್ದವರು.

ರಾಷ್ಟ್ರ ಮಟ್ಟದಲ್ಲಿ ಚಿನ್ನ: ಅಸ್ಸಾಂನಲ್ಲಿ ನಡೆದ ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಅಖಿಲೇಶ್‌ ರಾಷ್ಟ್ರದ ಕಿರಿಯರ ವಿಭಾಗದ ಉತ್ತಮ ಟ್ರಿಪಲ್‌ ಜಂಪರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದಕ್ಕೂ ಮುನ್ನ ಪಂಜಾಬ್‌ನಲ್ಲಿ ಸ್ಕೂಲ್‌ ಗೇಮ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ ಆಯೋಜಿಸಿದ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದರು.

ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ ಕೇಂದ್ರ ಸರಕಾರದ ಕ್ರೀಡಾ ಇಲಾಖೆ ನಡೆಸುವ ಅತ್ಯಂತ ಪ್ರತಿಷ್ಠಿತ ಕ್ರೀಡಾಕೂಟ. 2020ರಲ್ಲಿ ನಡೆದ ಈ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಅಖಿಲೇಶ್‌ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದರು.

ಕಳೆದ ವರ್ಷ ಗುಜರಾತ್‌ನಲ್ಲಿ ನಡೆದ ಜೂನಿಯರ್‌ ಫೆಡರೇಷನ್‌ ಕಪ್‌ ಅಥ್ಲೆಟಿಕ್ಸ್‌‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕದ ಸಾಧನೆ ಮಾಡಿದರು.

2022ರಲ್ಲಿ ಹರಿಯಾಣದಲ್ಲಿ ನಡೆದ ಪ್ರತಿಷ್ಠಿತ ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕದ ಸಾಧನೆ ಮಾಡಿದರು. ಹೀಗೆ ನಿರಂತರ ಅಭ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅಖಿಲೇಶ್‌ ಅವರು ಟ್ರಿಪಲ್‌ ಜಂಪ್‌ನಲ್ಲಿ 15.99 ಮೀ. ದೂರಕ್ಕೆ ಜಿಗಿದದ್ದು ಅವರ ವೈಯಕ್ತಿಕ ಉತ್ತಮ ಸಾಧನೆಯಾಗಿದೆ.

ಕಠಿಣ ಅಭ್ಯಾಸ: ಈಗ ಕೋಟದಲ್ಲಿ ನೆಲೆಸಿರುವ ಅಖಿಲೇಶ್‌ ಬೆಳಿಗ್ಗೆ ಬೇಗನೇ ಎದ್ದು ಅಭ್ಯಾಸಕ್ಕಾಗಿ 38 ಕಿಮೀ ದೂರದಲ್ಲಿರುವ ಉಡುಪಿಗೆ ಪ್ರಯಾಣಿಸುತ್ತಾರೆ. ಅಲ್ಲಿ ಅಥ್ಲೆಟಿಕ್ಸ್‌ ಕೋಚ್‌ ವಸಂತ್‌ ಜೋಗಿ ಅವರಲ್ಲಿ ತರಬೇತಿ ಪಡೆದು ಮತ್ತೆ ಕಾಲೇಜಿಗೆ ಬಂದು ಅಧ್ಯಯನದಲ್ಲಿ ತೊಡಗಿಕೊಂಡು ಮತ್ತೆ ಸಂಜೆ ಉಡುಪಿಯ ಅಜ್ಜರಕಾಡಿನಲ್ಲಿರುವ ಅಂಗಣದಲ್ಲಿ ಅಭ್ಯಾಸ ನಡೆಸುತ್ತಾರೆ. ಹೀಗೆ ದಿನಕ್ಕೆ ಎರಡು ಹೊತ್ತು ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡಿರುವ ಈ ಕ್ರೀಡಾ ಸಾಧಕನಿವೆ ಬಿ,ಡಿ ಶೆಟ್ಟಿ ಕಾಲೇಜಿವ ಆಡಳಿತ ಮಂಡಳಿ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ಕ್ರೀಡೆಯ ಜೊತೆ ಓದಿನಲ್ಲೂ ಅಗ್ರ ಸ್ಥಾನ ಗಳಿಸಿರುವ ಅಖಿಲೇಶ್‌ ಎಸ್‌ಎಸಲ್‌ಸಿಯಲ್ಲಿ 91.7% ಮತ್ತು ಪಿಯುಸಿಯಲ್ಲಿ 91.33% ಅಂಕಗಳಲ್ಲು ಗಳಿಸಿರುತ್ತಾರೆ.

“ಅಖಿಲೇಶ್‌ ಉತ್ತಮ ಶಿಸ್ತಿನ ಕ್ರೀಡಾಪಟು. ಇದೇ ರೀತಿಯಲ್ಲಿ ಅಭ್ಯಾಸ ಮುಂದುವರಿಸಿದರೆ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಬಲ್ಲರೆಂಬ ನಂಬಿಕೆ ನನಗಿದೆ,” ಎನ್ನುತ್ತಾರೆ ಕೋಚ್‌ ವಸಂತ ಜೋಗಿ.

ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಹಂಬಲ: ಪ್ರತಿಯೊಬ್ಬ ಕ್ರೀಡಾಪಟುವಿನ ಅಂತಿಮ ಗುರಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದಾಗಿರುತ್ತದೆ.  ಅಖಿಲೇಶ್‌ ಕೂಡ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಗುರಿ ಹೊಂದಿದ್ದಾರೆ. ದೇಶದ ಹಾಗೂ ಜಾಗತಿಕ ಮಟ್ಟದ ಟ್ರಿಪಲ್‌ ಜಂಪ್‌ ತಾರೆಗಳ ಸಾಧನೆಯ ಬಗ್ಗೆ ಚೆನ್ನಾಗಿ ಅರಿತಿರುವ ಅಖಿಲೇಶ್‌ ಅವರ ಸಾಧನೆಯ ಹಾದಿಯಲ್ಲೇ ಸಾಗುವ ಗುರಿ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ, ಏಷ್ಯನ್‌ ಹಾಗೂ ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಒಲಿಂಪಿಕ್ಸ್‌ಗೆ ತೇರ್ಗಡೆಯಾಗುವ ಗುರಿ ಹೊಂದಿದ್ದಾರೆ. ಸದ್ಯಕ್ಕೆ ಮುಂದಿನ ತಿಂಗಳು ನಡೆಯಲಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ಅಖಿಲೇಶ್‌ ಚಿನ್ನಕ್ಕೆ ಗುರಿ ಇಟ್ಟಿದ್ದಾರೆ.

ಬಡ ಕುಟುಂಬದಿಂದ ಬಂದಿರುವ ಈ ಕ್ರೀಡಾ ಸಾಧಕನಿಗೆ ಮುಂದಿನ ಯಶಸ್ಸಿಗಾಗಿ ಉತ್ತಮ ತರಬೇತಿ ಹಾಗೂ ಇತರ ಪ್ರೋತ್ಸಾಹದ ಅಗತ್ಯವಿರುತ್ತದೆ.

Related Articles