Friday, November 22, 2024

Boxing Viraj Mendon : ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಮಲ್ಪೆಯ ಕಣ್ಣಿ ಹುಡುಗ ವಿರಾಜ್‌ ಮೆಂಡನ್‌

ಬೆಳಿಗ್ಗೆ 2:45ಕ್ಕೆ ಎದ್ದು, ಮಲ್ಪೆಯ ಬಂದರಿನಲ್ಲಿ ಕಣ್ಣಿ ಕೆಲಸ ಮಾಡಿಕೊಂಡು, ಬಿಡುವಿದ್ದಾಗ ಅಭ್ಯಾಸ ಮಾಡಿಕೊಂಡು, ಕರಾವಳಿಗೆ ತೀರಾ ಅಪರಿಚಿತ ಕ್ರೀಡೆಯಾಗಿರವ ಬಾಕ್ಸಿಂಗ್‌ನಲ್ಲಿ ಯಶಸ್ಸುಕಂಡ ಮೊಗವೀರ ಸಮಯದಾಯದ ಬಾಕ್ಸಿಂಗ್‌ ಚಾಂಪಿಯನ್‌ ವಿರಾಜ್‌ ಮೆಂಡನ್‌ (Boxing Viraj Mendon ) ಅವರ ಬದುಕಿನ ಕತೆ ಕ್ರೀಡಾ ಜಗತ್ತಿಗೆ ಸ್ಪೂರ್ತಿಯಾದುದು.

ತಮಿಳುನಾಡಿನ ನಮ್ಮಕಲ್‌ನಲ್ಲಿ ನಡೆದ ಪ್ರೋ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ವಿರಾಜ್‌ ಮೆಂಡನ್‌ ಚಾಂಪಿಯನ್‌ ಪಟ್ಟ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಅಲೆವೂರಿನ ಬಾಕ್ಸಿಂಗ್‌ ಗುರು ಶಿವಪ್ರಸಾದ್‌ ಬಂಟಕಲ್ಲು ಅವರಲ್ಲಿ ತರಬೇತಿ ಪಡೆಯುತ್ತಿರುವ ವಿರಾಜ್‌ ಕಳೆದ ವರ್ಷ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದೊಂದಿಗೆ “ಬೆಸ್ಟ್‌ ಬಾಕ್ಸರ್‌” ಎಂಬ ಹೆಗ್ಗಳಿಕೆಗೂ ವಿರಾಜ್‌ ಮೆಂಡನ್‌ ಪಾತ್ರರಾಗಿದ್ದಾರೆ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲೂ ಕರ್ನಾಟಕವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ವಿರಾಜ್‌ ಅವರದ್ದು.

ಇಂಡಿಯನ್‌ ಬಾಕ್ಸಿಂಗ್‌ ಕೌನ್ಸಿಲ್‌ ನಡೆಸುವ ಪ್ರೋ ಬಾಕ್ಸಿಂಗ್‌ನಲ್ಲಿ ವಿರಾಜ್‌ ಮೆಂಡನ್‌ ಒಟ್ಟು ನಾಲ್ಕು ಬಾರಿ ಸ್ಪರ್ಧಿಸಿದ್ದಾರೆ. 28 ವರ್ಷದ ಕಣ್ಣಿ ಹುಡುಗ ವಿರಾಜ್‌, ಮಲ್ಪೆ ಪಡುಕರೆಯ ಭಾಸ್ಕರ್‌ ಕುಂದರ್‌ ಹಾಗೂ ಮೋಹಿನಿ ಮೆಂಡನ್‌ ಅವರ ಪುತ್ರ. ಗೆಳೆಯರು ನೀಡಿದ ಸಲಹೆ ಮೇರಿಗೆ ವಿರಾಜ್‌ ಬಾಕ್ಸಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕಳೆದ ಎಂಟು ವರ್ಷಗಳಿಂದ ಈ ಯುವ ಪ್ರತಿಭೆ ಬಾಕ್ಸಿಂಗ್‌ನಲ್ಲಿ ತೊಡಗಿಸಿಕೊಂಡಿದ್ದು ವಿಶೇಷ. ಭಾರತದಲ್ಲಿ ಪ್ರೊ ಬಾಕ್ಸಿಂಗ್‌ನಲ್ಲಿ 5 ನೇ ರಾಂಕ್‌ ಹೊಂದಿರುವ ವಿರಾಜ್‌ ಮುಂದಿನ ದಿನಗಳಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ದೇಶಕ್ಕೆ ಕೀರ್ತಿ ತರಬೇಕೆಂಬ ಹಂಬಲ ಹೊಂದಿದ್ದಾರೆ.

Boxing Viraj Mendon : ಮೊಗವೀರ ಸಮುದಾಯದ ಪ್ರೋತ್ಸಾಹ ಅಗತ್ಯ:

ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಒಟ್ಟು 21 ಪದಕಗಳನ್ನು ವಿರಾಜ್‌ ಮೆಂಡನ್‌ ಗೆದ್ದಿದ್ದಾರೆ, ಅದರಲ್ಲಿ 14 ಚಿನ್ನದ ಪದಕ ಸೇರಿರುವುದು ವಿಶೇಷ. ಮಲ್ಪೆಯ ಬಂದರಿನಲ್ಲಿ ಕಣ್ಣಿ ಕೆಲಸ ಮಾಡಿಕೊಂಡು ಈ ರೀತಿ ಸಾಧನೆ ಮಾಡಿರುವ ವಿರಾಜ್‌ ಅವರ ಸಾಧನೆಯನ್ನು ಮೊಗವೀರ ಸಮುದಾಯ ಗುರುತಿಸದಿರುವುದು ಬೇಸರದ ಸಂಗತಿ. ಇದೇ ಸಾಧನೆಯನ್ನು ಬೇರೆ ಯಾರಠದರೂ ಮಾಡಿರುತ್ತಿದ್ದರೆ ಆ ಸಾಧಕನಿಗೆ ವಿವಿಧ ರೀತಿಯಲ್ಲಿ ಪ್ರೋತ್ಸಾಹ ಸಿಕ್ಕಿರುತ್ತಿತ್ತು. “ಬೆಳಿಗ್ಗೆ 2:45ಕ್ಕೆ ಎದ್ದು ಮಲ್ಪೆಯ ಬಂದರಿನಲ್ಲಿ ಮೀನುಗಾರಿಕೆಯ ಕಣ್ಣಿ ಕೆಲಸ ಮಾಡುತ್ತೇನೆ. ವಾರದಲ್ಲಿ ನಾಲ್ಕು ದಿನ ಅಭ್ಯಾಸ. ವಿಶೇಷವಾದ ಯಾವುದೇ ಡಯಟ್‌ ಇಲ್ಲ. ನಾಲ್ಕು ಪ್ರೋ ಬಾಕ್ಸಿಂಗ್‌ನಲ್ಲಿ ಮೂರು ಬಾರಿ ನಾಕೌಟ್‌ ಮೂಲಕ ಅಗ್ರ ಸ್ಥಾನ ಗಳಿಸಿರುವೆ. ಆದರೆ ಇಷ್ಟೆಲ್ಲ ಸಂಕಷ್ಟಗಳ ನಡುವೆ ಸಾಧನೆ ಮಾಡಿದರೂ ಇಲ್ಲಿ ಗುರುತಿಸುವವರು ಯಾರೂ ಇಲ್ಲ. ಬಾಕ್ಸಿಂಗ್‌ನಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ರಾಜ್ಯ ಮತ್ತು ರಾಷ್ಟ್ರಕ್ಕೆ ಕೀರ್ತಿ ತರಬೇಕು, ಉದ್ಯೋಗವನ್ನು ಕಂಡುಕೊಳ್ಳಬೇಕು,” ಎನ್ನುತ್ತಾರೆ ವಿರಾಜ್‌ ಮೆಂಡನ್‌.

ಇದನ್ನೂ ಓದಿ : ರಾಷ್ಟ್ರೀಯ ಡ್ರ್ಯಾಗ್‌ ರೇಸಿಂಗ್‌ನಲ್ಲಿ ದಾಖಲೆ ಬರೆದ 12ರ ಪೋರ ಬೆಂಗಳೂರಿನ ಶ್ರೇಯಸ್‌!

ಇದನ್ನೂ ಓದಿ : Rahul Dravid scuba diving: ಮಾಲ್ದೀವ್ಸ್‌ನಲ್ಲಿ‌ ರಾಹುಲ್ ದ್ರಾವಿಡ್‌ ಸ್ಕೂಬಾ ಡೈವಿಂಗ್

ಎರಡು ಬಾರಿ ರಾಜ್ಯದಲ್ಲಿ ಬೆಸ್ಟ್‌ ಬಾಕ್ಸರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಚಾಂಪಿಯನ್‌ ಒಬ್ಬ ಮಲ್ಪೆ ಬಂದರಿನಲ್ಲಿ ಕಣ್ಣಿ ಕೆಲಸ ಮಾಡಿಕೊಂಡು ಬದುಕುತ್ತಿದ್ದಾನೆ. ಆ ಯುವಕನಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತರಬೇತಿ ಪಡೆಯಲು ಸಮಾಜದ ಗಣ್ಯರು ಮುಂದೆ ಬರಬೇಕಾದ ಅಗತ್ಯವಿದೆ. ಮೀನುಗಾರಿಕೆಯನ್ನೇ ಬದುಕಾಗಿಸಿಕೊಂಡಿರುವ ವಿರಾಜ್‌ ಮೆಂಡನ್‌ ಅವರ ತಮ್ಮ ತಿಲಕ್‌ರಾಜ್‌ ಹಾಗೂ ಅಣ್ಣ ಗುಣರಾಜ್‌ ಮಲ್ಪೆ ಬಂದರ್‌ನಲ್ಲಿ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Articles