Tuesday, December 3, 2024

ಕರಾವಳಿ ಬಾಕ್ಸಿಂಗ್‌ಗೆ ವರಪ್ರಸಾದವಾದ ಗುರು ಶಿವಪ್ರಸಾದ್‌

ಕರ್ನಾಟಕದ ಕರಾವಳಿಯಲ್ಲಿ ಜನಪ್ರಿಯ ಕ್ರೀಡೆ ಎಂದರೆ ಕ್ರಿಕೆಟ್‌ ಹಾಗೂ ಅಥ್ಲೆಟಿಕ್ಸ್‌. ಎಲ್ಲಿಯಾದರೂ ಬಾಕ್ಸಿಂಗ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ National Boxing Championship ಕರಾವಳಿಗೆ ಪದಕ ಬಂದ ಸುದ್ದಿ ಕೇಳಿದ್ದೀರಾ?. ಕರಾವಳಿಯವರು ಬೇರೆ ರಾಜ್ಯಗಳಲ್ಲಿದ್ದು ಅಲ್ಲಿ ಸಾಧನೆ ಮಾಡಿದ ಉದಾಹರಣೆಗಳು ಸಿಗಬಹುದು. ಆದರೆ ಕರಾವಳಿಯಲ್ಲೇ ಬಾಕ್ಸಿಂಗ್‌ ಕಲಿತು ರಾಷ್ಟ್ರ ಮಟ್ಟದಲ್ಲಿ ಪದಕ ಗೆದ್ದಿರುವ ಉದಾಹರಣಿ ಇಲ್ಲ. ಆದರೆ ಬಂಟಕಲ್ಲಿನ ಬಾಕ್ಸಿಂಗ್‌ ಗುರು ಶಿವ ಪ್ರಸಾದ್‌ ಆಚಾರ್ಯ ಅವರು ಕರಾವಳಿಯಲ್ಲಿ ಬಾಕ್ಸಿಂಗ್‌ ಕ್ರಾಂತಿ Boxing in Udupi District ಮಾಡುತ್ತಿದ್ದಾರೆ.

ಇತ್ತೀಚಿಗೆ ನಡೆದ ರಾಷ್ಟ್ರೀಯ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಕರಾವಳಿಯ ಬಾಕ್ಸರ್‌ ಶಾರ್ವಿ ರಾಜೇಶ್‌ ಶೆಟ್ಟಿ ಅವರು ಕಂಚಿನ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಕರ್ನಾಟಕದ ಕ್ರೀಡಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕರಾವಳಿಗೆ ಬಾಕ್ಸಿಂಗ್‌ನಲ್ಲಿ ರಾಷ್ಟ್ರ ಮಟ್ಟದ ಪದಕ ಬಂದಿರುವುದು. ಹರಿಯಾಣ ಮತ್ತು ಪಂಜಾಬ್‌ ಸೇರಿದಂತೆ ಉತ್ತರ ಭಾರತದವರೇ ಪ್ರಭುತ್ವ ಸಾಧಿಸುವ ಬಾಕ್ಸಿಂಗ್‌ ನಲ್ಲಿ ಕರಾವಳಿಯ ಮಹಿಳಾ ಬಾಕ್ಸರ್‌ ಒಬ್ಬರು ಹೇಗೆ ಪದಕ ಗೆದ್ದರು ಎಂಬುದನ್ನು ತಿಳಿಯಲು ಹೊರಟಾಗ ಅಚ್ಚರಿ ಕಾದಿತ್ತು.

ಶಿವಪ್ರಸಾದ್‌ ಅವರ ಕ್ರೀಡಾ ಸ್ಫೂರ್ತಿ: ಮಣಿಪಾಲದ ಟಿಎಂಎ ಪೈ ಪಾಲಿಟೆಕ್ನಿಕ್‌ನಲ್ಲಿ ಇನ್‌ಸ್ಟ್ರಕ್ಟರ್‌ ಆಗಿರುವ ಶಿವಪ್ರಸಾದ್‌ ಆಚಾರ್ಯ ಅವರ ಕ್ರೀಡಾ ಬದುಕಿನ ಹಾದಿಯನ್ನೊಮ್ಮೆ ಅರಿತಾಗಿ ನಿಜವಾಗಿಯೂ ಅಚ್ಚರಿಯಾಗುತ್ತದೆ. ಕ್ರೀಡೆಯಲ್ಲಿ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಬೇಕೆಂಬ ಅವರ ಹಂಬಲಕ್ಕೆ ಯಾವುದೇ ರೀತಿಯ ಪ್ರೋತ್ಸಾಹ ಸಿಗಲಿಲ್ಲ. ತನ್ನಿಂದ ಮಾಡಲಾಗದ ಸಾಧನೆಯನ್ನು ಇತರರಿಂದ ಮಾಡಿಸಬೇಕೆಂಬ ಛಲ ಹೊತ್ತ ಶಿವಪ್ರಸಾದ್‌ ತಮ್ಮ ವೃತ್ತಿಯ ನಡುವೆ ವರ್ಷದಲ್ಲಿ ಒಂದು ತಿಂಗಳು ರಜೆ ಪಡೆದು ಮುಂಬಯಿಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಬಾಕ್ಸಿಂಗ್‌ ಪ್ರಧಾನ ಕೋಚ್‌ ಜಸ್ವಂತ್‌ ಸಿಂಗ್‌ ಅವರಿಂದ ತರಬೇತಿ ಪಡೆಯುತ್ತಾರೆ. ಹೀಗೆ ಮಕ್ಕಳಿಗೆ ಬಾಕ್ಸಿಂಗ್‌ ತರಬೇತಿ ನೀಡಲು ಸಾಕಾಗುವಷ್ಟು ಜ್ಞಾನ ಪಡೆದ ಆಚಾರ್ಯರು ಮೊದಲಿಗೆ ಉಡುಪಿಯಲ್ಲಿ 2012ರಲ್ಲಿ ಚಿಕ್ಕ ಅಕಾಡೆಮಿಯನ್ನು ಸ್ಥಾಪಿಸಿರು. 8 ಮಕ್ಕಳಿಂದ ಆರಂಭಗೊಂಡು ಅಕಾಡೆಮಿಯಲ್ಲಿ ಈಗ 20 ಬಾಕ್ಸರ್‌ಗಳು ತರಬೇತಿ ಪಡೆಯುತ್ತಿದ್ದಾರೆ ಮಾತ್ರವಲ್ಲ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಈಗ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲೂ ಶಿವಪ್ರಸಾದ್‌ ಅವರು ಉತ್ಸಾಹಿ ಬಾಕ್ಸರ್‌ಗಳಿಗೆ ತರಬೇತಿ ನೀಡುತ್ತಿದ್ದಾರೆ. ಈಗಾಗಲೇ ಅಸ್ಥಿತ್ವದಲ್ಲಿರುವ ಕ್ರೀಡೆಗಳಲ್ಲಿ ಪ್ರಭುತ್ವ ಸಾದಿಸುವುದು ಕಷ್ಟವಲ್ಲ. ಆದರೆ ಪರಿಚಯವೇ ಇಲ್ಲದ ಪರಿಸರದಲ್ಲಿ ಬಾಕ್ಸಿಂಗ್‌ ಕ್ರೀಡೆಯನ್ನು ಬೆಳೆಸಿ ಕರ್ನಾಟಕದಲ್ಲಿ ಎರಡು ಬಾರಿ ಸಮಗ್ರ ಚಾಂಪಿಯನ್‌ ಪಟ್ಟ, ಮೂರು ಬಾರಿ ಬೆಸ್ಟ್‌ ಬಾಕ್ಸರ್‌ ಅವಾರ್ಡ್‌ ಪ್ರೊ ಬಾಕ್ಸಿಂಗ್‌ನಲ್ಲಿ ಪದಕಗಳು ಹೀಗೆ ಶಿವಪ್ರಸಾದ್‌ ಅವರು ಕರಾವಳಿಗರ ಪಾಲಿಗೆ ವರಪ್ರಸಾದವಾಗಿದ್ದಾರೆ.

ಉಡುಪಿ ಜಿಲ್ಲಾ ಬಾಕ್ಸಿಂಗ್‌ ಸಂಸ್ಥೆ ಸ್ಥಾಪನೆ: ಕಳೆದ 12 ವರ್ಷಗಳ ನಿರಂತರ ಶ್ರಮದಿಂದಾಗಿ ಶಾರ್ವಿ ಶೆಟ್ಟಿ ಅವರು ಪದಕ ಗೆಲ್ಲುವ ಮೂಲಕ ಉಡುಪಿ ರಾಷ್ಟ್ರಿಯ ಬಾಕ್ಸಿಂಗ್‌ನಲ್ಲಿ ಇತಿಹಾಸ ನಿರ್ಮಿಸಿತು. ವಿರಾಜ್‌ ಮೆಂಡನ್‌ ಪ್ರೋ ಬಾಕ್ಸಿಂಗ್‌ನಲ್ಲೂ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದರು. ಉಡುಪಿ ಎಂಜಿಎಂ ಕಾಲೇಜಿನ ಉದ್ಯೋಗಿ ಯಮಣೂರಪ್ಪ ಪೂಜಾರ  ರಾಜ್ಯ ಮಟ್ಟದಲ್ಲಿ ಪದಕ ಗೆದ್ದಿದ್ದಾರೆ. 2013ರಲ್ಲಿ ಉಡುಪಿ ಜಿಲ್ಲಾ ಅಮೆಚೂರ್‌ ಬಾಕ್ಸಿಂಗ್‌ ಸಂಸ್ಥೆಯನ್ನು ಸ್ಥಾಪಿಸಿ ಪ್ರತಿ ವರ್ಷ ದಸರಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ ಆಯೋಜಿಸುತ್ತಿದ್ದಾರೆ. ಮಣಿಪಾಲದ ಮಾಹೆಯಲ್ಲಿ ನಡೆಯುವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ಗಳಲ್ಲಿ ಮುಖ್ಯ ರೆಫರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.  2017ರಲ್ಲಿ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಶಿವಪ್ರಸಾದ್‌ ಆಚಾರ್ಯ ಅವರು ಕುಸ್ತಿ ತರಬೇತಿ ಕೇಂದ್ರವನ್ನು ಆರಂಭಿಸಿದ್ದು ಅಲ್ಲಿ 13 ಬಾಕ್ಸರ್‌ಗಳು ತರಬೇತಿ ಪಡೆಯುತ್ತಿದ್ದಾರೆ.

ವಿದೇಶಿ ವಿದ್ಯಾರ್ಥಿಗಳು: ಶಿವ ಪ್ರಸಾದ್‌ ಅವರಲ್ಲಿ ತರಬೇತಿ ಪಡೆದ ಅನೇಕ ಬಾಕ್ಸರ್‌ಗಳು ವೃತ್ತಿಯಲ್ಲಿ ಎಂಜಿನಿಯರ್‌ ಹಾಗೂ ಡಾಕ್ಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಣಿಪಾಲಕ್ಕೆ ಉನ್ನತ ಅಧ್ಯಯನಕ್ಕೆ ಬಂದ ರಷ್ಯಾ ಹಾಗೂ ಅಫಘಾನಿಸ್ಥಾನದ ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ.  ಕೆಎಂಸಿ ಮಂಗಳೂರಿನ ಅನೇಕ ವೈದ್ಯರೂ ಆಚಾರ್ಯ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕ್ರೀಡಾ ಜಗತ್ತಿನ ಅತ್ಯಂತ ಅಪಾಯಕಾರಿ ಕ್ರೀಡೆಗಳಲ್ಲಿ ಒಂದಾಗಿರುವ ಬಾಕ್ಸಿಂಗ್‌ನಲ್ಲಿ ಕರಾವಳಿಯ ಎರಡು ಜಿಲ್ಲೆಗಳ ಸ್ಪರ್ಧಿಗಳು ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಳ್ಳುವ ಹಂಬಲವನ್ನು ಆಚಾರ್ಯರು

ಹೊಂದಿದ್ದಾರೆ. “ನನ್ನಿಂದ ಈ ಕ್ರೀಡೆಯಲ್ಲಿ ಯಾವುದೇ ಸಾಧನೆ ಮಾಡಲಾಗಲಿಲ್ಲ. ಕರಾಟೆಯಲ್ಲಿ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕರೂ ಕೊನೆಯ ಕ್ಷಣದಲ್ಲಿ ತಾಂತ್ರಿಕ ಕಾರಣದಿಂದ ತಪ್ಪಿಹೋಯಿತು. ಆದ್ದರಿಂದ ನಮ್ಮ ಅಕಾಡೆಮಿಯಲ್ಲಿ ತರಬೇತಿ ಪಡೆದ ಮಕ್ಕಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಬೇಕು. ಆ ನಿಟ್ಟಿನಲ್ಲಿ ಅವರಿಗೆ ತರಬೇತಿ ನೀಡುವೆ,” ಎನ್ನುತ್ತಾರೆ ಶಿವಪ್ರಸಾದ್‌ ಆಚಾರ್ಯ.

ರಿಂಗ್‌ ಅಗತ್ಯವಿದೆ: ರಾಷ್ಟ್ರ ಮಟ್ಟದಲ್ಲಿ ಪದಕ ಗೆದ್ದಿರುವುದು ಯಾವುದೋ ಅತ್ಯಾಧುನಿಕ ರಿಂಗ್‌ನಲ್ಲಿ ಅಭ್ಯಾಸ ಮಾಡಿಯಲ್ಲ. ಬದಲಾಗಿ ಸಾಮಾನ್ಯ ನೆಲದಲ್ಲಿ ಅಭ್ಯಾಸ ಮಾಡಿ ಶ್ರಾವ್ಯ ಶೆಟ್ಟಿ ಸಾಧನೆ ಮಾಡಿದ್ದಾರೆ. “ಉತ್ತಮ ರೀತಿಯಲ್ಲಿ ತರಬೇತಿ ನೀಡಲು ಬಾಕ್ಸಿಂಗ್‌ ರಿಂಗ್‌ನ ಅಗತ್ಯ ಇದೆ. ಇದಕ್ಕೆ 4-5 ಲಕ್ಷ ರೂ. ತಗಲುತ್ತದೆ. ಸರಕಾರ ಈ ಬಗ್ಗೆ ಯೋಚಿಸುವುದೂ ಇಲ್ಲ. ಯಾರಾದರೂ ಆರ್ಥಿಕ ನೆರವು ನೀಡಿದರೆ ನಮ್ಮ ಬಾಕ್ಸರ್‌ಗಳಿಗೆ ತರಬೇತಿ ಮಾಡಲು ಸಹಾಯವಾಗುತ್ತದೆ,” ಎನ್ನುತ್ತಾರೆ ಬಾಕ್ಸಿಂಗ್‌ ಗುರು ಶಿವಪ್ರಸಾದ್‌ ಆಚಾರ್ಯ.

ಶಿವಪ್ರಸಾದ್‌ ಆಚಾರ್ಯ ಅವರ ಕ್ರೀಡಾಪ್ರೀತಿಗೆ ಟಿಎಂಎಪೈ ಪಾಲಿಟೆಕ್ನಿಕ್‌ನಲ್ಲಿ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ಸಿಗುತ್ತಿದೆ. ಮಗಳು ಸ್ತುತಿ ಆಚಾರ್ಯಳನ್ನು ಅಂತಾರಾಷ್ಟ್ರೀಯ ಮಟ್ಟದ ಬಾಕ್ಸರ್‌ ಮಾಡಿ, ಆಕೆಯನ್ನು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ತರಬೇತಿ ನೀಡಲಾಗುವುದು ಎಂದು ಶಿವಪ್ರಸಾದ್‌.  ಕರಾವಳಿಯಲ್ಲಿ ಬಾಕ್ಸಿಂಗ್‌ನ ಪಂಚ್‌ ಪರಿಚಯಿಸಿದ ಶಿವಪ್ರಸಾದ್‌ ಅವರ ಕ್ರೀಡಾ ಯಶಸ್ಸಿನಲ್ಲಿ ಅವರ ಪತ್ನಿ, ಶಿಕ್ಷಕಿ ಜ್ಯೋತಿ ಅವರ ಪಾತ್ರ ಪ್ರಮುಖವಾಗಿದೆ.

ಆರ್ಚರಿ, ಚೆಸ್‌ ಬಾಕ್ಸಿಂಗ್‌, ಕರಾಟೆ, ಬಾಕ್ಸಿಂಗ್‌ ಹೀಗೆ ಹಲವು ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶಿವಪ್ರಸಾದ್‌ ಆಚಾರ್ಯ ಅವರಿಗೆ ಕ್ರೀಡಾ ಇಲಾಖೆ ಬಾಕ್ಸಿಂಗ್‌ ರಿಂಗ್‌ ನೀಡಿದರೆ ಕರಾವಳಿಯಿಂದ ಇನ್ನಷ್ಟು ಬಾಕ್ಸರ್‌ಗಳು ರಾಷ್ಟ್ರ ಮಟ್ಟದಲ್ಲಿ ಮಿಂಚಬಹುದು.

Related Articles