ಕ್ರಿಕೆಟ್‌ನಲ್ಲಿ ಯಾವುದೋ ಲೀಗ್ ಆಡಲು ಆಯ್ಕೆಯಾದರೆ ಅಭಿನಂದನೆ, ಸನ್ಮಾನ ಸಾಮಾನ್ಯವಾಗಿರುತ್ತದೆ. ಕಬಡ್ಡಿಯಲ್ಲಿ ಆಯ್ಕೆಯಾಗಿ ಆಡದಿದ್ದರೂ ಅಲ್ಲಲ್ಲಿ ಪ್ರೋತ್ಸಾಹ ನೀಡುತ್ತಾರೆ. ಕರಾವಳಿಯ ಎರಡು ಜಿಲ್ಲೆಗಳಲ್ಲಿ ಕಾಣಸಿಗದ ಬಾಕ್ಸಿಂಗ್ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ National Boxing Championship ಮೊದಲ ಪದಕ ಗೆದ್ದು ಕೀರ್ತಿ ತಂದ ಸಾಧಕಿಯನ್ನು ಕನಿಷ್ಠ ಕರೆ ಮಾಡಿ ಅಭಿನಂದಿಸುವ ಸೌಜನ್ಯ ಇಲ್ಲಿಯ ಕ್ರೀಡಾ ಅಧಿಕಾರಿಗಳಿಗಾಗಲಿ, ಜನಪ್ರತಿನಿಧಿಗಳಿಗಾಗಲೀ ಇಲ್ಲದಿರುವುದು ಬೇಸರದ ಸಂಗತಿ.
ಆರು ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಪಟ್ಟ ಗೆದ್ದಿರುವ ಎಂ.ಸಿ. ಮೇರಿ ಕೋಮ್ ಅವರ ಬದುಕನ್ನೇ ಆದರ್ಶವಾಗಿರಿಸಿಕೊಂಡು, ಅವರ ಆತ್ಮಚರಿತ್ರೆ “ಅನ್ ಬ್ರೇಕೆಬಲ್” ಕೃತಿಯಿಂದ ಸ್ಫೂರ್ತಿ ಪಡೆದು ತಾನು ಕಲಿತ ವೂಷು, ಕರಾಟೆ, ಕಬಡ್ಡಿ, ಸಾಫ್ಟ್‌ಬಾಲ್ ಮತ್ತು ಅಥ್ಲೆಟಿಕ್ಸ್ ಕ್ರೀಡೆಗಳನ್ನು ಬದಿಗೊತ್ತಿ, ಬಾಕ್ಸಿಂಗ್ ಗುರು ಶಿವಪ್ರಸಾದ್ ಆಚಾರ್ಯ ಅವರಲ್ಲಿ ಪಳಗಿ ರಾಷ್ಟ್ರ ಮಟ್ಟದಲ್ಲಿ ಪದಕ ಗೆದ್ದಿರುವ ಶಾರ್ವಿಗೆ ಈಗ ಪ್ರೋತ್ಸಾಹದ ಅಗತ್ಯವಿದೆ.
ಮಂಗಳೂರಿನ ಶಕ್ತಿ ಪಿ.ಯು. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಾಮರ್ಸ್ ಓದುತ್ತಿರುವ ಶಾರ್ವಿ ಶೆಟ್ಟಿ ರಾಜ್ಯ ಮಟ್ಟದಲ್ಲಿ ಇದುವರೆಗೂ 6 ಚಿನ್ನದ ಪದಕಗಳನ್ನು ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಹೈಸ್ಕೂಲ್ ತನಕ ಕಾಸರಗೋಡಿನಲ್ಲಿ ಓದಿರುವ ಶಾರ್ವಿ ಶೆಟ್ಟಿ ಕ್ರೀಡೆಯ ಜೊತೆಯಲ್ಲಿ ಭರತ ನಾಟ್ಯಕ್ಕೂ ಸೈ, ಪಾಶ್ಚಿಮಾತ್ಯ ನೃತ್ಯಕ್ಕೂ ಸೈ ಎನಿಸಿಕೊಂಡಿದ್ದಾರೆ. ಮಾರ್ಷಲ್‌ಆರ್ಟ್‌ನಲ್ಲಿ ಪ್ರಮುಖವೆನಿಸಿರುವ ಕರಾಟೆಯಲ್ಲೂ ಪಳಗಿ, ವೂಷುವಿನಲ್ಲಿ ರಾಜ್ಯ ಮಟ್ಟದಲ್ಲಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಶಾರ್ವಿಯ ಕ್ರೀಡಾ ಬದುಕಿಗೆ ಚಾಲನೆ ನೀಡಿದ್ದೇ ಕಾಸರಗೋಡಿನ ದೈಹಿಕ ಶಿಕ್ಷಕ ಕೆ.ಎಂ. ಬಲ್ಲಾಳ್. ಕರಾವಳಿಯಲ್ಲಿ ಬಾಕ್ಸಿಂಗ್ ತರಬೇತಿ ಸದ್ಯ ಉಡುಪಿ ಮತ್ತು ಮಂಗಳೂರಿನಲ್ಲಿ ಮಾತ್ರ ಇದೆ. ಈ ಎರಡೂ ಕಡೆಗಳಲ್ಲೂ ತರಬೇತಿ ನೀಡುತ್ತಿರುವುದು ಬಂಟಕಲ್ಲಿನ ಶಿವಪ್ರಸಾದ್ ಆಚಾರ್ಯ. ಇಲ್ಲಿಗೆ ಅಪರೂಪವೆನಿಸುರುವ ಬಾಕ್ಸಿಂಗ್‌ನಲ್ಲಿ ಯಶಸ್ಸು ಕಾಣುವುದು ಅಷ್ಟು ಸುಲಭವಲ್ಲ. ಏಕೆಂದರೆ ಹರಿಯಾಣ, ಪಂಜಾಬ್, ದೆಹಲಿ ಮತ್ತು ಮಣಿಪುರದ ಬಾಕ್ಸರ್‌ಗಳ ವಿರುದ್ಧ ಜಯ ಸಾಧಿಸುವುದು ಅಷ್ಟು ಸುಲಭವಲ್ಲ. ಆದರೆ ಬಾಕ್ಸಿಂಗ್ ಕ್ರೀಡೆಯನ್ನು ತನ್ನ ಉಸಿರಾಗಿಸಿಕೊಂಡು, ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಬೇಕೆಂದಿರುವ ಶಾರ್ವಿಯ ಸಾಧನೆ ನಿಜವಾಗಿಯೂ ಸ್ತುತ್ಯರ್ಹ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಾಕ್ಸಿಂಗ್ ಕ್ರೀಡೆ ಕಾಣಸಿಗುವುದು ವಿರಳ. ಹಾಗೆ ಇಲ್ಲಿ ಜನಪ್ರಿಯವಲ್ಲದ ಕ್ರೀಡೆಯಲ್ಲಿ ತನ್ನನ್ನು ತೊಡಗಿಸಿಕೊಂಡು ರಾಷ್ಟ್ರ ಮಟ್ಟದಲ್ಲಿ ಕಂಚಿನ ಪದಕ ಗೆದ್ದ ಮಂಗಳೂರಿನ ಸಾಧಕಿ ಶಾರ್ವಿ ಶೆಟ್ಟಿಯ ಸಾಧನೆ ಕರ್ನಾಟಕದ ಕ್ರೀಡಾ ಇತಿಹಾಸಲ್ಲಿ ಒಂದು ಮೈಲಿಗಲ್ಲು. ಚಿಕ್ಕಪುಟ್ಟ ಕ್ರಿಕೆಟ್ ಟೂರ್ನಿಗಳಿಗೆ ಪ್ರಾಯೋಜಕತ್ವ ನೀಡುವ ಇಲ್ಲಿಯ ಕ್ರೀಡಾ ಪ್ರೇಮಿಗಳಿಗೆ ಶಾರ್ವಿ ಶೆಟ್ಟಿ ಬಾಕ್ಸಿಂಗ್‌ನಲ್ಲಿ ಮಾಡಿದ ಸಾಧನೆ ಪ್ರಮುಖವೆನಿಸಲೇ ಇಲ್ಲ.
ಭೋಪಾಲ್‌ನಲ್ಲಿ ಇತ್ತೀಚಿಗೆ ನಡೆದ ರಾಷ್ಟ್ರೀಯ ಬಾಕ್ಸಿಂಗ್‌ನಲ್ಲಿ ಪದಕ ಗೆಲ್ಲುವುದಕ್ಕೆ ಮುನ್ನ ಶಾರ್ವಿ ರಾಷ್ಟ್ರೀಯ ಸ್ಕೂಲ್ ಗೇಮ್ಸ್‌ನಲ್ಲೂ ಕರ್ನಾಟಕವನ್ನು ಪ್ರತಿನಿಧಿಸಿದ್ದರು. “ನನ್ನ ಯಶಸ್ಸಿಗೆ ಕೋಚ್ ಶಿವಪ್ರಸಾದ್ ಸರ್ ಅವರ ಕೊಡುಗೆ ಪ್ರಮುಖವಾದುದು, ಜೊತೆಯಲ್ಲಿ ನನ್ನ ತಾಯಿ ಅನಿತಾ ಅವರ ಕೊಡುಗೆ ಸ್ಮರಣೀಯ. ಬಾಕ್ಸಿಂಗ್‌ನಂಥ ಅಪಾಯಕಾರಿ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಹೆತ್ತವರು ಹಿಂದೆ ಸರಿಯುತ್ತಾರೆ. ಆದರೆ ನನ್ನ ತಾಯಿ ಶಾಲಾ ದಿನಗಳಲ್ಲಿ ಕ್ರೀಡಾಪಟುವಾಗಿದ್ದ ಕಾರಣ ಈ ಅವಕಾಶಕ್ಕೆ ಎಡೆಮಾಡಿಕೊಟ್ಟರು. ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವುದು ನನ್ನ ಗುರಿ,” ಎನ್ನುತ್ತಾರೆ ಶಾರ್ವಿ.
ಮಾವ ಯುವರಾಜ್ ಶೆಟ್ಟಿ, ದೊಡ್ಡಮ್ಮ ಶಕುಂತಲ, ದೊಡ್ಡಪ್ಪ ವಿನಯ ಸಾಗರ ಶೆಟ್ಟಿ, ಸುಮಿತ್ರಾ, ಪವನ್ ಶೆಟ್ಟಿ, ಶ್ರೀಶಾ ಮತ್ತು ದಕ್ಷಯ್ ಪ್ರತಿಯೊಬ್ಬರೂ ಕ್ರೀಡಾ ಯಶಸ್ಸಿಗೆ ನೆರವಾಗಿದ್ದಾರೆ ಎಂದು ಶಾರ್ವಿ ಎಲ್ಲರನ್ನೂ ಸ್ಮರಿಸುತ್ತಾರೆ.
ಉತ್ತಮ ಕೋಚ್ ಶಿವಪ್ರಸಾದ್: ಕರಾವಳಿ ಜಿಲ್ಲೆಗೆ ಬಾಕ್ಸಿಂಗ್ ಪರಿಚಯಿಸಿದ ಕೀರ್ತಿ ಕೋಚ್ ಶಿವಪ್ರಸಾದ್ ಅವರಿಗೆ ಸಲ್ಲುತ್ತದೆ. “ನಮಗೆ ರಿಂಗ್ ಸೌಲಭ್ಯ ಇಲ್ಲ. ನೆಲದಲ್ಲಿಯೇ ಅಭ್ಯಾಸ ಮಾಡುತ್ತೇವೆ. ಆದರೆ ನಮ್ಮ ಕೋಚ್ ಶಿವಪ್ರಸಾದ್ ಸರ್ ಯಾವುದೇ ಎದುರಾಳಿಯನ್ನು ಎದುರಿಸುವ ಆತ್ಮವಿಶ್ವಾಸ ಹುಟ್ಟುವ ರೀತಿಯಲ್ಲಿ ತರಬೇತಿ ನೀಡುತ್ತಾರೆ. ತಮ್ಮ ವೈಯಕ್ತಿಕ ಕೆಲಸಗಳನ್ನು ಬದಿಗೊತ್ತಿ ಒಂದು ದಿನವೂ ತಪ್ಪದಂತೆ ಅವರು ತರಬೇತಿ ನೀಡುತ್ತಾರೆ. ದೂರದ ಬಂಟಕಲ್ಲಿನಿಂದ ಮಂಗಳೂರಿಗೆ ಬಂದು ತರಬೇತಿ ನೀಡುತ್ತಾರೆ. ಇಂಥ ತರಬೇತುದಾರರು ಸಿಗುವುದು ತೀರಾ ವಿರಳ. ಅವರ ಬದ್ಧತೆಗೆ ಪೂರಕವಾಗಿ ನಾವು ಶ್ರಮ ವಹಿಸಬೇಕು. ಪದಕಗಳನ್ನು ಗೆಲ್ಲಲೇಬೇಕು,” ಎನ್ನುತ್ತಾರೆ ಶಾರ್ವಿ. ಇದೇ ಸಂದರ್ಭದಲ್ಲಿ ಕ್ರೀಡಾ ಬದುಕಿಗೆ ಪ್ರೋತ್ಸಾಹ ನೀಡಿದ ಮಹೇಶ್ ಶೆಟ್ಟಿ ಅವರನ್ನೂ ಸ್ಮರಿಸುತ್ತಾರೆ.
ಬಾಕ್ಸಿಂಗ್ ರಿಂಗ್ ಅಗತ್ಯವಿದೆ: “ಬಾಕ್ಸಿಂಗ್‌ನಲ್ಲಿ ನಾವು ಯಾವ ತೂಕದಲ್ಲಿ ಸ್ಪರ್ಧಿಸಲಿದ್ದೇವೊ ಆ ತೂಕವನ್ನು ಕಾಯ್ದುಕೊಳ್ಳುವುದು ಪ್ರಮುಖ. 70-75 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರೆ ಅದಕ್ಕಿಂತ ಒಂದು ಗ್ರಾಮ್ ಹೆಚ್ಚು ಅಥವಾ ಕಡಿಮೆಯಾದರೆ ಅನರ್ಹ ಎಂದು ಘೋಷಿಸುತ್ತಾರೆ. ಆದ್ದರಿಂದ ಫಿಟ್ನೆಸ್ ಹಾಗೂ ತೂಕವನ್ನು ಕಾಯ್ದುಕೊಳ್ಳುವುದು ಪ್ರಮುಖ. ಬಾಕ್ಸಿಂಗ್‌ನಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಕಾಣಬೇಕಾದರೆ ನಮ್ಮ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ತಲಾ ಒಂದು ಬಾಕ್ಸಿಂಗ್ ರಿಂಗ್‌ನ ಅಗತ್ಯವಿದೆ. ಇದನ್ನು ರಾಜ್ಯ ಕ್ರೀಡಾ ಇಲಾಖೆ ಅಥವಾ ದಾನಿಗಳು ನೀಡಿದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಈ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯ,” ಎಂದು ಶಾರ್ವಿ ವಿನಂತಿಸಿಕೊಂಡಿದ್ದಾರೆ.
ಒಬ್ಬ ಕ್ರೀಡಾಪಟುವಿನ ಯಶಸ್ಸಿನಲ್ಲಿ ಅವರು ಓದುತ್ತಿರುವ ಶಿಕ್ಷಣ ಸಂಸ್ಥೆಯ ಪಾತ್ರ ಪ್ರಮುಖವಾಗಿರುತ್ತದೆ. ಸ್ಪರ್ಧೆಗಳಿರುವಾಗ ರಜೆ ನೀಡುವುದು, ಓದಿನಲ್ಲಿ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಿರುತ್ತದೆ. ಈ ನೆಲೆಯಲ್ಲಿ ಮಂಗಳೂರಿನ ಶಕ್ತಿ ಪಿಯು ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕ ವೃಂದವನ್ನು ಶಾರ್ವಿ ಸ್ಮರಿಸಿದ್ದಾರೆ. “ಪ್ರಾಂಶುಪಾಲರಾದ ಪ್ರಥ್ವಿರಾಜ್ ಹಾಗೂ ದೈಹಿಕ ಶಿಕ್ಷಕರಾದ ಮನೋಜ್ ಹಾಗೂ ಇತರ ಉಪನ್ಯಾಸಕರು ನನ್ನ ಯಶಸ್ಸಿಗೆ ನೆರವಾಗಿದ್ದಾರೆ. ಇದರಿಂದ ಇನ್ನೂ ಹೆಚ್ಚಿನ ಸಾಧನೆ ಮಾಡಲು ಸ್ಫೂರ್ತಿ ಸಿಕ್ಕಿದೆ,” ಎನ್ನುತ್ತಾರೆ ಶಾರ್ವಿ ಶೆಟ್ಟಿ.