Thursday, November 21, 2024

71 ವರ್ಷಗಳ ನಂತರ ಶಾಟ್‌ಪುಟ್‌ನಲ್ಲಿ ಕಂಚಿನ ಪದಕ!

ಹೊಸದಿಲ್ಲಿ: ಆಕೆ ಕ್ರೀಡೆಯಲ್ಲಿ ಪಾಲ್ಗೊಂಡಿದ್ದೇ 2014ರಲ್ಲಿ, ಅದು ಕೂಡ ಕ್ರೀಡಾಕೂಟವೋದರಲ್ಲಿ ಬೇರೆಯವರ ಬದಲಿಗೆ ಆಕೆಯ ಹೆಸರು ದಾಖಲಾಗಿತ್ತು. ಆಗಾಗ ಎಸೆಯುತ್ತಿದ್ದುದು ಜಾವೆಲಿನ್‌. ಆದರೆ ಯಶಸ್ಸು ಕಂಡಿದ್ದು ಶಾಟ್‌ಪುಟ್‌ನಲ್ಲಿ. ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ Asian Games 2023 ನಲ್ಲಿ ಅಥ್ಲೆಟಿಕ್ಸ್‌ನ ಮೊದಲ ದಿನದಲ್ಲೇ ಭಾರತದ ಶಾಟ್‌ಪುಟ್‌ ತಾರೆ ಕಿರಣ್‌ ಬಲಿಯಾನ್‌ Kiran Baliyan ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಚೀನಾದ ಲಿಜಿಯಾವೋ ಜಾಂಗ್‌ ಮತ್ತು ಜಿಯಾಯೊನ್‌ ಸಾಂಗ್‌ ಅನುಕ್ರಮವಾಗಿ ಚಿನ್ನ ಹಾಗೂ ಬೆಳ್ಳಿಯ ಪದಕ ಗೆದ್ದರು.

ಬಲಿಯಾನ್‌ 17.36 ಮೀಟರ್‌ ದೂರಕ್ಕೆ ಎಸೆಯುವ ಮೂಲಕ ಭಾರತ 71 ವರ್ಷಗಳ ಬಳಿಕ ಏಷ್ಯನ್‌ ಗೇಮ್ಸ್‌ ಶಾಟ್‌ಪುಟ್‌ನಲ್ಲಿ ಪದಕ ಗೆಲ್ಲುವಂತಾಯಿತು.  ಕೆಲವೊಮ್ಮೆ ಹಾಗೆ, ನಾವು ನಿರೀಕ್ಷೆ ಇಡುವುದೇ ಯಾರ ಮೇಲೋ, ಪದಕ ಗೆಲ್ಲುವದೇ ಇನ್ನಾರೋ. ಕಿರಣ್‌ ಬಲಿಯಾನ್‌ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವುದು ಮಾತ್ರ ಗೊತ್ತಿತ್ತು. ಆದರೆ ಮನ್‌ಪ್ರೀತ್‌ ಕೌರ್‌ ಪದಕ ಗೆಲ್ಲುತ್ತಾರೆಂದು ಕ್ರೀಡಾ ತಜ್ಞರು ಭವಿಷ್ಯ ನುಡಿದಿದ್ದರು. ಆದರೆ 16.25 ಮೀ. ದೂರಕ್ಕೆ ಎಸೆದ ಕೌರ್‌ ಐದನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಮೀರತ್‌ನ 24 ವರ್ಷ ಪ್ರಾಯದ ಕಿರಣ್‌, ಕ್ರೀಡೆಗೆ ಬಂದದ್ದೇ ಅನಿರೀಕ್ಷಿತ. 2014ರಲ್ಲಿ ಮೀರತ್‌ನಲ್ಲಿ ಉತ್ತರ ವಲಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ನಡೆದಿತ್ತು. ಬೇರೆಯವರ ಬದಲಿಗೆ ಕಿರಣ್‌ ಅವರ ಹೆಸರು ಅಚಾತುರ್ಯವಾಗಿ ಸೇರಿಕೊಂಡಿತ್ತು. ಇದಕ್ಕೂ ಮೊದಲು ಕಿರಣ್‌ ಆಗಾಗ ಜಾವೆಲಿನ್‌ ಎಸೆಯುತ್ತಿದ್ದರು. ಕೋಚ್‌ ಧೈರ್ಯ ತುಂಬಿದ ಕಾರಣ ಶಾಟ್‌ಪುಟ್‌ನಲ್ಲಿ ಸ್ಪರ್ಧಿಸಿದರು. ಅಂದು ಶಾಟ್‌ಪುಟ್‌ನಲ್ಲಿ ಮೂರನೇ ಸ್ಥಾನ ಗಳಿಸಿ ಕಂಚು ಗೆದ್ದಿದ್ದು, ಅಚ್ಚರಿ ಮೂಡಿಸಿತ್ತು. ಏಷ್ಯನ್‌ ಗೇಮ್ಸ್‌ನಲ್ಲಿ ಗೆದ್ದ ಕಂಚಿನ ಪದಕ ಇತಿಹಾಸ ನಿರ್ಮಿಸಿತು.

ಟೆನಿಸ್‌ನ ಮಿಶ್ರಡಬಲ್ಸ್‌ನಲ್ಲಿ ಕನ್ನಡಿಗ ರೋಹನ್‌ ಬೋಪಣ್ಣ ಹಾಗೂ ರುತುಜಾ ಭೋಸ್ಲೆ ಜೋಡಿ ಅಗ್ರ ಸ್ಥಾನ ಗೆಲ್ಲುವ ಮೂಲಕ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಗೆದ್ದ ಸಂಭ್ರಮ.

ಭಾರತ 10 ಚಿನ್ನ, 13 ಬೆಳ್ಳಿ ಹಾಗೂ 13 ಕಂಚಿನ ಪದಕ ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ 4 ನೇ ಸ್ಥಾನ ಕಾಯ್ದುಕೊಂಡಿದೆ. 107 ಚಿನ್ನ, 66 ಬೆಳ್ಳಿ ಹಾಗೂ 33 ಕಂಚಿನ ಪದಕಗಳೊಂದಿಗೆ ಒಟ್ಟು 206 ಪದಕಗಳನ್ನು ಗೆದ್ದಿರುವ ಆತಿಥೇಯ ಚೀನಾ ಅಗ್ರ ಸ್ಥಾನದಲ್ಲಿದೆ.

Related Articles