ಕನಕಪುರ: ರಾಜ್ಯ ಕಂಡ ಉತ್ತಮ ಕ್ರೀಡಾಪಟು, ಉತ್ತಮ ಕೋಚ್ ಮನೋಜ್ ಕುಮಾರ್ ಅವರು ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ನಮ್ಮನ್ನಗಲಿದರು. ಅಗಲಿದ ಗೆಳೆಯನ ಕುಟುಂಬದ ನೆರವಿಗಾಗಿ ಕನಕಪುರದ ಕ್ರೀಡಾಭಿಮಾನಿಗಳೆಲ್ಲ ಒಂದಾಗಿ ಕನಕಪುರದ ತುಗಣಿಯಲ್ಲಿರುವ ಶ್ರೀ ಕುವೆಂಪು ಬಡಾವಣೆಯಲ್ಲಿ ನವೆಂಬರ್ 5 ರಂದು ರಾಕ್‌ಸಿಟಿ ರನ್ RockCity Run Cross Country Race ಗುಡ್ಡಗಾಡು ಓಟವನ್ನು ಆಯೋಜಿಸಿದ್ದಾರೆ.
ಉತ್ತಮ ಅಥ್ಲೀಟ್ ಆಗಿದ್ದ ಮನೋಜ್ ಕುಮಾರ್ 400 ಮೀ. ಹರ್ಡಲ್ಸ್‌ನಲ್ಲಿ ರಾಜ್ಯ ಕಂಡ ಉತ್ತಮ ಕ್ರೀಡಾಪಟುವಾಗಿದ್ದರು. ಮೂಡಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದು, ಜೈನ್ ಕಾಲೇಜಿನ Center for Sports Training and Transformation (CSTT) ಯಲ್ಲೂ ಕಾರ್ಯನಿರ್ವಹಿಸಿದ್ದ ಮನೋಜ್ ಮರ್ಚೆಂಟ್ ನೇವಿಯಲ್ಲಿ ಉದ್ಯೋಗಿಯಾಗಿದ್ದರು. ಇದೇ ವೇಳೆ Adventure Athletics Academy ಯಲ್ಲಿ ಪ್ರಧಾನ ಕೋಚ್ ಹಾಗೂ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಹಲವಾರು ಯುವ ಪ್ರತಿಭೆಗಳಿಗೆ ಪ್ರೇರಣೆಯಾಗಿದ್ದರು. ಆದರೆ ಹೆದ್ದಾರಿಯಲ್ಲಿನ ಅವೈಜ್ಞಾನಿಕ ಹಂಪ್ ಮನೋಜ್ ಅವರನ್ನು ಬಲಿತೆಗೆದುಕೊಂಡಿತು. ಮನೋಜ್ ಅವರ ತಂದೆ ಶಾಲಾ ಬಸ್ ಚಾಲಕರಾಗಿದ್ದು ಮನೋಜ್ ಇಲ್ಲದೆ ಈಗ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.
ಕನಕಪುರದ Adventure Athletics Academy ಯ ಅಧ್ಯಕ್ಷರಾದ ಆನಂದ್, ಅಕಾಡೆಮಿಯ ನಿರ್ದೇಶಕ ಹಾಗೂ ಉದ್ಯಮಿ ಶಂಕರ್, ಅಕಾಡೆಮಿಯ ಖಜಾಂಚಿ ಮನು, ನಿರ್ದೇಶಕ ಬಾಲಕೃಷ್ಣ ಅವಲಕ್ಕಿ ಹಾಗೂ ದೈಹಿಕ ಶಿಕ್ಷಕ ಬೈರೇ ಗೌಡ ಇವರೆಲ್ಲ ಸೇರಿ ಈ ಗುಡ್ಡಗಾಡು ಓಟ ಅಯೋಜಿಸಿದ್ದಾರೆ.
2.28 ಲಕ್ಷ ರೂ. ಬಹುಮಾನ!
ರಾಮನಗರ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಆಶ್ರಯದಲ್ಲಿ ನಡೆಯಲಿರುವ ಈ ಸ್ಪರ್ಧೆಯು ಒಟ್ಟು 2,27,000 ನಗದು ಬಹುಮಾನವನ್ನು ಒಳಗೊಂಡಿರುತ್ತದೆ. 10, 12, 14 ಮತ್ತು 16 ವರ್ಷ ವಯೋಮಿತಿಯ ಓಟಗಾರರಿಗಾಗಿ ನಡೆಯುವ ಈ ಸ್ಪರ್ಧೆಯ ಪ್ರವೇಶ ಶುಲ್ಕ 799 ರೂ. ಉಳಿದ ಮ್ಯಾರಥಾನ್ ಗಳಿಗೆ ಹೋಲಿಕೆ ಮಾಡಿದರೆ ಇದು ದುಬಾರಿ ಅನಿಸಬಹುದು ಆದರೆ ಬಹುಮಾನದ ಮೊತ್ತ, ನೀಡುವ ಟಿ-ಶರ್ಟ್‌ನ ಗುಣ ಮಟ್ಟ ಎಲ್ಲಕ್ಕಿಂತ ಮುಖ್ಯವಾಗಿ ಈ ಓಟದ ಉದ್ದೇಶವನ್ನು ಗಮನಿಸಿದಾಗ ಇದು ದೊಡ್ಡ ಮೊತ್ತವಲ್ಲ.
ಹೆಚ್ಚಿನ ವಿವರಗಳಿಗೆ : 96032041973/9892398044 ದೂರವಾಣಿಯನ್ನು ಸಂಪರ್ಕಿಸಬಹುದು.