ಗೆಳೆಯರೊಬ್ಬರು ಕರೆ ಮಾಡಿ ಹಾರ್ದಿಕ್ ಪಾಂಡ್ಯ ಬದಲಿಗೆ ಕ್ರುನಾಳ್ ಪಾಂಡ್ಯ ಯಾಕೆ ಆಡುತ್ತಿಲ್ಲ? ಎಂದು. Why Krunal Pandya not playing in the place of Hardik Pandya? ನಗು ತಡೆಯಲಾಗಲಿಲ್ಲ, ಪ್ರಶ್ನೆ ತಮಾಶೆಯಾಗಿದ್ದರೂ ಭಾರತದ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಒಂದು ದಿನ ಇಂತಹ ಕೆಲಸವನ್ನು ಮಾಡಿದರೂ ಅಚ್ಚರಿಪಡಬೇಕಾಗಿಲ್ಲ.
ಭಾರತ ಕ್ರಿಕೆಟ್ ತಂಡದ ಉಪನಾಯಕ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ತಂಡದಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಸಹೋದರನಾದ ಕ್ರುನಾಳ್ ಪಾಂಡ್ಯಾಗೆ ಅವಕಾಶ ನೀಡದೆ ಯುವ ಆಲ್ರೌಂಡರ್ಗೆ ಅನ್ಯಾಯ ಮಾಡಿದ್ದಾರೆ ಎಂಬುದು ಗೆಳೆಯರ ವಾದ.
ಭಾರತ ಕ್ರಿಕೆಟ್ ತಂಡದ ಆಯ್ಕೆ ಪ್ರಕ್ರಿಯೆಯನ್ನು ಗಮನಿಸಿದಾಗ ಇಂಥಹ ತರ್ಲೆ ಪ್ರಶ್ನೆಗಳು ಉದ್ಭವಿಸಲೇ ಬೇಕು. ಹಾರ್ದಿಕ್ ಬದಲಿಗೆ ಸೂರ್ಯಕುಮಾರ್ ಯಾದವ್ ತಂಡಲ್ಲಿರುವುದು ಉತ್ತಮ ಆಯ್ಕೆ. ಶಾರ್ದೂಲ್ ಠಾಕೂರ್ ಬದಲಿಗೆ ಮೊಹಮ್ಮದ್ ಶಮಿ ಅಂಗಣಕ್ಕಿಳಿದು 5 ವಿಕೆಟ್ ಗಳಿಕೆಯ ಸಾಧನೆ ಮಾಡಿದರು. ಒಂದು ವೇಳೆ ಪಾಂಡ್ಯಾ ಗಾಯಗೊಳ್ಳದೆ ಇರುತ್ತಿದ್ದರೆ ಈ ಬದಲಾವಣೆ ಆಗುವುದರಲ್ಲಿ ಸಂಶಯವಿದ್ದಿತ್ತು. ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ತೋರಿದ ಮೊಹಮ್ಮದ್ ಶಮಿಯನ್ನು ಹೊರಗಿಟ್ಟು ಶಾರ್ದೂಲ್ ಠಾಕೂರ್ ಅವರನ್ನು ಆಡಿಸುವ ಆಯ್ಕೆ ಮಂಡಳಿಯ ಆ ನಂತರ ಬದಲಾಯಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಬಂದಿರುವ ಟೀಕೆ ಹಾಗೂ ವೀಕ್ಷಕ ವಿವರಣೆಗಾರರ ಕಿಡಿ ನುಡಿಯಿಂದಾಗಿ.
ಹಾರ್ದಿಕ್ ಪಾಂಡ್ಯ ಉತ್ತಮ ಆಲ್ರೌಂಡರ್ ನಿಜ. ಆದರೆ ಇತ್ತೀಚಿನ ದಿನಗಳಲ್ಲಿ ಅವರ ಪ್ರದರ್ಶನ ಹೇಗಿದೆ. 86 ಏಕದಿನ ಪಂದ್ಯಗಳನ್ನಾಡಿದರೂ ಒಂದು ಶತಕ ಗಳಿಸಲಾಗದ ಆಟಗಾರ. ಬರೇ ಐಪಿಎಲ್ನಲ್ಲಿ ಮಿಂಚಿದ ಕಾರಣಕ್ಕೆ ತಂಡದಲ್ಲಿ ಸ್ಥಾನ ಕಾಯಂ ಆಗಿದೆ. ಇತರ ಆಲ್ರೌಂಡರ್ಗಳಿಗೆ ಅವಕಾಶ ನೀಡದೆ ಒಬ್ಬರನ್ನೇ ಆತುಕೊಂಡು ಕುಳಿತು ಅವರಿಗೇ ಅವಕಾಶ ನೀಡುತ್ತಿದ್ದರೆ ಇದೇ ಪರಿಸ್ಥಿತಿ ಎದುರಾಗುತ್ತದೆ. ಕೆ ಎಲ್ ರಾಹುಲ್ ಹೊರತುಪಡಿಸಿದರೆ ದಕ್ಷಿಣ ಭಾರತದ ಆಟಗಾರರು ಯಾರಿದ್ದಾರೆ? ಹೌದು ಪ್ರತಿಭೆಯನ್ನಾಧರಿಸಿ ತಂಡದಲ್ಲಿ ಸ್ಥಾನ ನೀಡಬೇಕೇ ಹೊರತು ಪ್ರದೇಶವನ್ನಾಧರಿಸಿ ಅಲ್ಲ. ಆದರೆ ಅವಕಾಶವೇ ನೀಡದಿದ್ದರೆ ಪ್ರತಿಭಾವಂತರು ಮಿಂಚುವುದಾದರೂ ಹೇಗೆ?
ಶಮಿಯನ್ನು ಯಾವ ಕಾರಣಕ್ಕೆ ಇದುವರೆಗೂ ಹೊರಗಿಟ್ಟರು ಎಂಬುದಕ್ಕೆ ಆಯ್ಕೆ ಸಮಿತಿ ಉತ್ತರ ನೀಡುತ್ತಿಲ್ಲ. ನೀಡುವುದೂ ಇಲ್ಲ. 54 ರನ್ಗೆ 5 ವಿಕೆಟ್ ಕಿತ್ತ ಶಮಿ ವಿಶ್ವಕಪ್ನಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಎರಡನೇ ಬೌಲರ್ ಎನಿಸಿದ್ದಾರೆ. ಒಟ್ಟು 36 ವಿಕೆಟ್ ಗಳಿಕೆಯ ಸಾಧನೆ ಮಾಡಿದ್ದಾರೆ. ಅಗ್ರ ಸ್ಥಾನವನ್ನು ಜಹೀರ್ ಖಾನ್ ಹಾಗೂ ಜಾವರಲ್ ಶ್ರೀನಾಥ್ (44) ಹಂಚಿಕೊಂಡಿದ್ದಾರೆ.
ಉತ್ತಮ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರಿಗೆ ಅವಕಾಶ ನೀಡುವ ಲಕ್ಷಣ ಕಾಣುತ್ತಿಲ್ಲ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕುಲದೀಪ್ ಯಾದವ್ 2 ವಿಕೆಟ್ ಗಳಿಸಲು 10 ಓವರ್ಗಳಲ್ಲಿ 75 ರನ್ ನೀಡಿದರು. ಆದರೆ ಅವರನ್ನು ಬದಲಾಯಿಸಲು ಆಯ್ಕೆ ಸಮಿತಿ ಮನಸ್ಸು ಮಾಡದು ಏಕೆಂದರೆ ಉತ್ತರ ಮತ್ತು ದಕ್ಷಿಣದ ವಿಷಯ.
ಕಾರ್ಯದರ್ಶಿ ಜಯ್ ಶಾ ಎಲ್ಲ ಬಿಸಿಸಿಐನ ಎಲ್ಲ ವಿಷಯಗಳಲ್ಲೂ ಮೂತು ತೂರಿಸುತ್ತಿದ್ದರೆ ರಬ್ಬರ್ ಸ್ಟಾಂಪ್ ಎನಿಸಿರುವ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಯಾವ ವಿಷಯಕ್ಕೂ ಬಾಯಿ ಬಿಡೊಲ್ಲ. ಈ ರೀತಿಯಾಗಿ ಬಿಸಿಸಿಐನಲ್ಲಿ ದಕ್ಷಿಣ ಭಾರತದವರ ಪ್ರವೇಶ ಕಡಿಮೆಯಾಗುತ್ತಿದೆ.