“ಪದಕ ಗೆದ್ದು ಬನ್ನಿ, ಆದರೆ ನಿಮಗೇನಾದರೂ ಗಾಯವಾದರೆ ನಿಮಗೆ ನೆರವು ನೀಡಲು ನಮ್ಮಲ್ಲಿ ಯಾವುದೇ ಯೋಜನೆ ಇಲ್ಲ” ಇದು ಕರ್ನಾಟಕ ಕ್ರೀಡಾ ಇಲಾಖೆಯು ಗಾಯಗೊಂಡಿರುವ ಒಬ್ಬ ಕ್ರೀಡಾಪಟುವಿಗೆ ನೀಡಿದ ಉತ್ತರದ ಸಾರಾಂಶ. There is no Scheme for medical help to Athlete in Karnataka.
ಬ್ರಹ್ಮಾವರ ತಾಲೂಕಿನ ಕೋಟ ಗ್ರಾಮದ ಅಖಲೇಶ್ ಭುವನೇಶ್ವರದಲ್ಲಿ ನಡೆದ ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಂಡಿದ್ದರು. ಟ್ರಿಪಲ್ ಜಂಪ್‌ನ ಎರಡನೇ ಸುತ್ತಿನಲ್ಲಿ ಸ್ಪರ್ಧಿಸುವಾಗ ಕಾಲಿನ ಮೂಳೆ ತುಂಡಾಯಿತು. ಅಖಿಲೇಶ್ ಅವರ ತಂದೆ ಜಯಪ್ರಕಾಶ್ ಅವರು ಸರಕಾರದ ನೆರವು ಕೇಳಿ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆದರೆ ಕ್ರೀಡಾ ಇಲಾಖೆ ಇದಕ್ಕೆ ನೆರವು ನೀಡುವ ಯಾವುದೇ ಯೋಜನೆ ನಮ್ಮಲ್ಲಿಲ್ಲ ಎಂದು ಸರಳವಾಗಿ ಉತ್ತರಿಸಿದೆ. ನಿಜವಾಗಿಯೂ ಇದು ಅಚ್ಚರಿಯ ಸಂಗತಿ. ಅಖಿಲೇಶ್ ಅವರ ಪ್ರಕರಣದ ಕುರಿತ ಪ್ರಸ್ತಾವನೆಗೆ ಪ್ರತಿಕ್ರಿಯೆ ನೀಡಿರುವ ಕ್ರೀಡಾ ಇಲಾಖೆ, “ಸದರಿ ಪ್ರಸ್ತಾವನೆಯಲ್ಲಿ ಪರಿಶೀಲಿಸಲಾಗಿ ಕ್ರೀಡಾಕೂಟಲ್ಲಿ ಬಿದ್ದು ಕ್ರೀಡಾಪಟುಗಳಿಗೆ ತೊಂದರೆಯಾದಲ್ಲಿ ಕ್ರಿಡಾಪಟುಗಳ ವೈದ್ಯಕೀಯ ಚಿಕಿತ್ಸಾ ವೆಚ್ಚಗಳನ್ನು ಭರಿಸುವ ಯಾವುದೇ ಯೋಜನೆಗಳು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಇರುವುದಿಲ್ಲ. ಆದರೆ ಯುವ ವ್ಯವಹಾರ ಮತ್ತು ಕ್ರೀಡಾ ಮಂತ್ರಾಲಯದಿಂದ ನೋಂದಣಿಯಾದ ಅಧಿಕೃತ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳಿಂದ ಆಯ್ಕೆಯಾಗಿ ರಾಷ್ಟ್ರೀಯ/ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ವಿಜೇತರಾದ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ, ಶೈಕ್ಷಣಿಕ ಶುಲ್ಕ ಮರುಪಾವತಿ, ಕ್ರೀಡಾ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ,” ಎಂದು ಕ್ರೀಡಾ ಇಲಾಖೆ ಉತ್ತರ ನೀಡಿದೆ.
ಸರಕಾರ ನೆರವು ಯಾಕೆ ನೀಡುವುದಿಲ್ಲ?: ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವುದು ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತರಲೆಂದು. ಅವರು ಪದಕ ಗೆದ್ದರೆ ಯಾವ ರಾಜ್ಯವನ್ನು ಪ್ರತಿನಿಧಿಸುತ್ತಾರೋ ಆ ರಾಜ್ಯಕ್ಕೂ ಗೌರವ ಸಲ್ಲುತ್ತದೆ. ಗೋವಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟಲ್ಲಿ ಪದಕಗಳ ಪಟ್ಟಿಯಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ. ಇದು ಕರ್ನಾಟಕಕ್ಕೆ ಸಂದ ಗೌರವ. ಆದರೆ ಈ ಪದಕ ಗೆಲ್ಲುವ ಕ್ರೀಡಾಪಟುಗಳು ಗಾಯಗೊಂಡರೆ ನಮಗೆ ಸಂಬಂಧವಿಲ್ಲ ಎನ್ನುವುದು ಬೇಸರದ ಸಂಗತಿ. ರಾಜ್ಯ ಸರಕಾರ ಕ್ರೀಡಾಪಟುಗಳಿಗಾಗಿ ವಿಮಾ ಸೌಲಭ್ಯವನ್ನು ಕಲ್ಪಿಸಬೇಕು. ಪ್ಯಾರಿಸ್ ಒಲಿಂಪಿಕ್ಸ್‌ಗೆ ಕ್ರೀಡಾಪಟುಗಳನ್ನು ಸಜ್ಜುಗೊಳಿಸುತ್ತೇವೆ ಎಂದು 75 ಕ್ರೀಡಾಪಟುಗಳನ್ನು ಆಯ್ಕೆ ಮಾಡಿ, ಸ್ಪರ್ಧೆಯಿಂದ ಹಿಂದೆ ಸರಿದವರು, ನಿವೃತ್ತಿಯಾದವರು ಕೂಡ ಈ ಯೋಜನೆಯ ಫಲ ಪಡೆದಿದ್ದಾರೆ. ಇಂಥ ಯೋಜನೆಗಳಿಗೆ ಸರಕಾರ ಬೇಗನೇ ಅಸಕ್ತಿ ತೋರುತ್ತದೆ. ಆ 75 ಕ್ರೀಡಾಪಟುಗಳಲ್ಲಿ ಕಳೆದ ಒಂದು ವರ್ಷದಲ್ಲಿ ಪದಕ ಗೆದ್ದವರು ಎಷ್ಟು ಮಂದಿ? ನಿಜವಾಗಿಯೂ ಅವರು ಆ ಹಣವನ್ನು ತರಬೇತಿಗೆ ಬಳಸುತ್ತಿದ್ದಾರೆಯೇ? ಈ ವಿಷಯಗಳ ಬಗ್ಗೆ ಕ್ರೀಡಾ ಇಲಾಖೆ ಆಸಕ್ತಿ ತೋರುವುದಿಲ್ಲ.
ಒಂದೆಡೆ ಮುಖ್ಯ ಮಂತ್ರಿಗಳು ಯಾವುದಾದರೂ ಕ್ರೀಡಾ ಕಾರ್ಯಕ್ರಮಗಳು ನಡೆದರೆ ಕ್ರೀಡಾ ಸಾಧಕರಿಗೆ ಇಂತಿಷ್ಟು ಪ್ರತಿಶತ ಉದ್ಯೋಗ ಮೀಸಲಿಡುತ್ತೇವೆ ಎನ್ನುತ್ತಾರೆ. ಆದರೆ ಅದನ್ನು ಕಾರ್ಯರೂಪಕ್ಕೆ ತರುವುದ ಯಾವಾಗ? ಕ್ರೀಡಾ ಇಲಾಖೆಯ ಪತ್ರ ಗಮನಿಸಿದಾಗ “ಸರಕಾರಿ ಉದ್ಯೋಗ ನೀಡುವ ಯೋಜನೆಯು ಪ್ರಸ್ತುತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಇರುವುದಿಲ್ಲ,” ಎಂದಿದೆ. ಒಡಿಶಾ ಸರಕಾರ ರಾಷ್ಟ್ರೀಯ ಕ್ರೀಡಾಕೂಟದ ಜಿಮ್ನಾಸ್ಟಿಕ್‌ನಲ್ಲಿ ನಾಲ್ಕು ಚಿನ್ನದ ಪದಕ ಗೆದ್ದ ಪ್ರಣತಿ ನಾಯ್ಕ್‌ಗೆ 32 ಲಕ್ಷ ರೂ. ನಗದು ಬಹುಮಾನ ನೀಡಿ ಗೌರವಿಸಿತು. ನಮ್ಮ ರಾಜ್ಯದ ಕ್ರೀಡಾ ಇಲಾಖೆ ಹೊರಡಿಸಿರುವ ಸುತ್ತೋಲೆ ಗಮನಿಸಿದಾಗ ನಿಜವಾಗಿಯೂ ನಗು ಬರುತ್ತದೆ. ನೀವು ಎಷ್ಟೇ ಪದಕ ಗೆದ್ದರೂ ಇಲ್ಲಿ ಪರಿಗಣಿಸುವುದು ಒಂದೇ ಪದಕವನ್ನು. ಈ ಕಾರಣಕ್ಕಾಗಿ ಅನೇಕ ಕ್ರೀಡಾಪಟುಗಳು ಕರ್ನಾಟಕ ತೊರೆಯುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.