Friday, November 22, 2024

ಚಿಕ್ಕಮಗಳೂರಿನ ದೊಡ್ಡ ಸ್ಫೂರ್ತಿ ರಕ್ಷಿತಾ ರಾಜು!

ಮಂಜುಳ ಹುಲ್ಲಹಳ್ಳಿ Manjula Hullahalli

ಕುಮಾರಿ ರಕ್ಷಿತಾ ರಾಜು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಗುಡ್ನಳ್ಳಿಯ ಅಂಧ
ಹೆಣ್ಣುಮಗಳು. ಹುಟ್ಟಿದ ಎರಡೇ ವರ್ಷಕ್ಕೆ ತಾಯಿಯನ್ನೂ, ಹತ್ತನೇ ವರ್ಷಕ್ಕೆ ತಂದೆಯನ್ನೂ ಕಳೆದುಕೊಂಡವಳು.
ಆದರೂ ಅವಳು ಅನಾಥಳಾಗಲಿಲ್ಲ. ಮಾತು ಬಾರದ, ಕಿವಿಯೂ ಕೇಳದ ಅಜ್ಜಿಯ ಪ್ರೀತಿ ಅವಳಲ್ಲಿ ಜೀವನಚೈತನ್ಯ ತುಂಬಿತು. ಈಕೆಯ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿಯವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. Rakshita Raju she can’t see the world but won the heart of Prime Minister Narendra Modi
ಆದರೆ, ಕಣ್ಣಿದ್ದವರ ಬಿರುನುಡಿಗಳು ಇವಳನ್ನೂ ಅಜ್ಜಿಯನ್ನೂ ಹಿಂಡಿ ಹಿಪ್ಪೆ ಮಾಡುತ್ತಿದ್ದವು. ಕೆಲವರಂತೂ ಅಜ್ಜಿಗೆ, ‘ಏನಂತಾ ಸಾಕ್ತೀಯಾ? ನೀನೂ ಸತ್ತರೆ ಇದು ಭಿಕ್ಷೆ ಬೇಡಾದೇ ಸೈ’ ಎಂದೂ ಅಂದರು.ಎಲ್ಲಾ ನೋವುಗಳನ್ನು ನುಂಗಿ ಬೆಳೆದ ಅವಳಿಗೀಗ ಇಪ್ಪತ್ತೆರಡು ವರ್ಷ.
ಛಲದ ಅವಳ ಸಾಧನೆಗೆ ‘ಅಂತರರಾಷ್ಟ್ರೀಯ ಕ್ರೀಡಾಪಟು’ ಎನ್ನುವ ಗೌರವದ ಮನ್ನಣೆ. ಅವಳ ಜೊತೆಗೆ ನಿಂತದ್ದು ಅಜ್ಜಿ ಲಲಿತಮ್ಮರ ಅಭಿಮಾನದ ಜೊತೆಗೆ ಅವಳ ಪ್ರೀತಿಯ ಟೀಚರ್ ಬಾಳೂರಿನ ಸಿಂಥಿಯಾ ಫೈಸ್, ಚಿಕ್ಕಮಗಳೂರಿನ ಆಶಾಕಿರಣ ಮತ್ತು ಡಾ. ಜೆ. ಪಿ. ಕೃಷ್ಣೇಗೌಡರು ಮತ್ತು ಬೆಂಗಳೂರಿನ ಅಂತರರಾಷ್ಟ್ರೀಯ ತರಬೇತುದಾರರಾದ ಶ್ರೀ ರಾಹುಲ್ ಬಾಲಕೃಷ್ಣ ಮತ್ತಿವರ ಸಹಧರ್ಮಿಣಿ ಸೌಮ್ಯ ರಾಹುಲ್. ಇವರ ಮಾರ್ಗದರ್ಶನ ಮತ್ತು ತನ್ನೊಳಗಿನ ಅಪಾರ ತುಡಿತಗಳಿಂದ ನಿರಂತರ ಸಾಧನೆ ಮಾಡಿ ಇದೀಗ
ಪ್ಯಾರಾ ಏಷ್ಯಾಡ್ ಕ್ರೀಡಾಕೂಟಗಳಲ್ಲಿ ಎರಡು ಚಿನ್ನದ ಪದಕ ಪಡೆದು ದೇಶದ ಕಣ್ಮಣಿಯಾಗಿದ್ದಾಳೆ.
ಈ ಬಾರಿ ಚೀನದಿಂದ ಹಿಂದಿರುಗಿ ಬಂದಾಗ ಮಾನ್ಯ ಪ್ರಧಾನಮಂತ್ರಿಗಳು ನೀಡಿದ ಅಭಿನಂದನಾ ಸಂದರ್ಭದಲ್ಲಿ ಮಾನ್ಯ ಪ್ರಧಾನ ಮಂತ್ರಿಯವರಿಗೇ ಅಂಧ ಓಟಗಾರರು ಮತ್ತು ಗೈಡ್ ರನ್ನರ್ ನಡುವೆ ಕೊಂಡಿಯಾಗಿ ಕೆಲಸ ಮಾಡುವ ‘ಟ್ವಿಟ್ಟರ್’ ಅನ್ನು ಉಡುಗೊರೆಯಾಗಿ ನೀಡಿ ಅದರ ಅತ್ಯುಪಯುಕ್ತತೆಯನ್ನು ಮನವರಿಕೆ ಮಾಡಿಕೊಡುತ್ತಾ ಅಂಧ ಕ್ರೀಡಾಪಟುಗಳ ಬಗೆಗೆ ತೆಗೆದುಕೊಳ್ಳಬೇಕಾದ ಎಲ್ಲಾ ಎಚ್ಚರಿಕೆಗಳ ಬಗೆಗೆ ಧ್ವನಿಯಾಗಿದ್ದಾಳೆ. ಎಲ್ಲರ ಮುಕ್ತ ಅಭಿನಂದನೆಗಳಿಗೆ ಪಾತ್ರಳಾಗಿದ್ದಾಳೆ.
‘ಸ್ಫೂರ್ತಿಯ ಚಿಲುಮೆ’ ಯೂಟ್ಯೂಬ್ ಚಾನಲ್ ಮೂಲಕ ಆತ್ಮವಿಶ್ವಾಸದ ಮಾರ್ಗದರ್ಶಿಯೂ ಆಗಿರುವ ಈ ಅಪ್ಪಟ ಸ್ಫೂರ್ತಿ ರಕ್ಷಿತಾ ರಾಜುಗೆ ಇಂದು ಚಿಕ್ಕಮಗಳೂರು ಜಿಲ್ಲಾಡಳಿತದ ವತಿಯಿಂದ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಗುತ್ತಿದೆ.
ಇಂದು, ಈಗ ಅವಳ ಮಾತು ಬಾರದ ಅಜ್ಜಿ, ತನ್ನ ಹಾವಭಾವಗಳಿಂದಲೇ ಎಲ್ಲರನ್ನೂ ಕೇಳುತ್ತಿದ್ದಾರೆ,
‘ ಕಣ್ಣಿಲ್ಲದ ನನ್ನ ಮೊಮ್ಮಗಳು ಇಪ್ಪತ್ತೆರಡು ವರುಷಕ್ಕೇ ಮಾಡಿರುವ ಸಾಧನೆಗಳನ್ನು ನೋಡಿ. ಕಣ್ಣಿರುವ ನೀವು ಏನು ಸಾಧಿಸಿರುವಿರಿ ಹೇಳಿ!’
ಉತ್ತರಿಸಲು ಮನದ ಕಣ್ಣುಗಳೇ ತೆರೆಯಬೇಕು!

Related Articles