ಭುವನೇಶ್ವರ: ವಿಶ್ವಕಪ್ನಲ್ಲಿ ಭಾರತ ಕ್ರಿಕೆಟ್ ತಂಡ ಸೋತಿದ್ದಕ್ಕೆ ಬದುಕೇ ಮುಗಿಯಿತು ಎಂಬಂತೆ ಮರುಗಬೇಡಿ. ಭಾರತ ಫುಟ್ಬಾಲ್ ತಂಡ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ನಾಳೆ ಕತಾರ್ ವಿರುದ್ಧ ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಸೆಣಸಲಿದೆ. ಫುಟ್ಬಾಲಿಗೂ ನಿಮ್ಮ ಪ್ರೋತ್ಸಾಹವಿರಲಿ. India facing strong Qatar in FIFA world cup football qualifier in Bhuvneshwar on Tuesday.
ಫಿಫಾ ವಿಶ್ವಕಪ್ 2026ರ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ಏಷ್ಯನ್ ಚಾಂಪಿಯನ್ ಕತಾರ್ ವಿರುದ್ಧ ಎರಡನೇ ಜಯಕ್ಕಾಗಿ ಸೆಣಸಲಿದೆ. ಕುವೈತ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತ 1-0 ಗೋಲಿನಿಂದ ಜಯ ಗಳಿಸಿತ್ತು. ಭಾರತ ತಂಡ ಈ ಬಾರಿ ಮನೆಯಂಗಣದಲ್ಲಿ ಸೋಲನುಭವಿಸಿಲ್ಲ ಎಂಬುದು ಸಂತಸದ ವಿಷಯ.
2019ರ ವಿಶ್ವಕಪ್ನಲ್ಲಿ ಕತಾರ್ ವಿರುದ್ಧದ ಪಂದ್ಯದಲ್ಲಿ ಭಾರತದ ಗೋಲ್ಕೀಪರ್ ಗುರ್ಪ್ರೀತ್ ಸಿಂಗ್ ಸಂಧೂ 11 ಬಾರಿ ಗೋಲುಗಳನ್ನು ತಡೆದ ಪರಿಣಾಮ ಭಾರತ ಪಂದ್ಯವನ್ನು 0-0 ಅಂತರದಲ್ಲಿ ಸಮಬಲಗೊಳಿಸಿತ್ತು. ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೋಚ್, ಸ್ಟಿಮ್ಯಾಕ್ ಅವರೊಂದಿಗೆ ಹಾಜರಾಗಿದ್ದ ಸಂಧೂ ಅವರ ಮೊಗದಲ್ಲಿ ಆತ್ಮವಿಶ್ವಾದ ಮನೆ ಮಾಡಿತ್ತು.
2022ರಲ್ಲಿ ಫಿಫಾ ವಿಶ್ವಕಪ್ ಆತಿಥ್ಯವಹಿಸಿದ್ದ ಕತಾರ್ಗೆ ಈ ಬಾರಿ ಅರ್ಹತೆ ಪಡೆಯುವ ಅಗತ್ಯವಿದೆ. ಆದರೆ ಇತ್ತೀಚಿಗೆ ನಡೆದ ಅಂತಾರಾಷ್ಟ್ರೀಯ ಸೌಹಾರ್ಧ ಪಂದ್ಯಗಳಲ್ಲಿ ಕತಾರ್ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು. ಆಡಿದ ನಾಲ್ಕು ಪಂದ್ಯಗಳಲ್ಲಿ 2 ಡ್ರಾ ಹಾಗೂ 2 ಸೋಲನುಭವಿಸಿತ್ತು. ಆದರೆ ಭಾರತ ಆ ಲೆಕ್ಕಾಚಾರವನ್ನು ಗಮನಿಸುವಂತಿಲ್ಲ. ಏಕೆಂದರೆ ಈ ಬಾರಿಯ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಅಫಘಾನಿಸ್ತಾನದ ವಿರುದ್ಧ 8-1 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಆತ್ಮವಿಶ್ವಾದಲ್ಲೇ ಭುವನೇಶ್ವರಕ್ಕೆ ಆಗಮಿಸಿದೆ.
ಕತಾರ್ ಹಿರಿಯರ ತಂಡ ಭಾರತಕ್ಕೆ ಬರುತ್ತಿರುವುದು ಇದೇ ಮೊದಲ, ಆದರೆ ಕತಾರ್ ಕೋಚ್ ಕಾರ್ಲೋಸ್ ಕ್ವಿರೋಜ್ 2015ರಲ್ಲಿ ಬೆಂಗಳೂರಿನಲ್ಲಿ ನಡೆದ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಇರಾನ್ ತಂಡದ ಕೋಚ್ ಆಗಿದ್ದರು. ಆಗ ಭಾರತ 3-0 ಗೋಲುಗಳ ಅಂತರದಲ್ಲಿ ಸೋಲನುಭವಿಸಿತ್ತು.