Sunday, December 22, 2024

ಫಿಫಾ ವಿಶ್ವಕಪ್‌2026: ಕತಾರ್‌ಗೆ 3-0 ಅಂತರದಲ್ಲಿ ಸೋತ ಭಾರತ

ಭುವನೇಶ್ವರ:  ಫಿಫಾ ವಿಶ್ವಕಪ್‌ 2026 ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ತಂಡ ಕತಾರ್‌ ವಿರುದ್ಧ 0-3 ಗೋಲುಗಳ ಅಂತರದಲ್ಲಿ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಭಾರತದ ನೆಲದಲ್ಲಿ ನಡೆದ 15 ಪಂದ್ಯಗಳಲ್ಲಿ ಸೋಲರಿಯದ ಭಾರತಕ್ಕೆ ಕೊನೆಗೂ ಸೋಲು ಪ್ರಾಪ್ತಿಯಾಯಿತು. FIFA World Cup 2026 Qualifier: India lost to Qatar by 3-0

ಮಂಗಳವಾರ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಸಿಕ್ಕ ಅವಕಾಶಗಳನ್ನು ಗೋಲಾಗಿಸುವಲ್ಲಿ ವಿಫಲವಾಯಿತು. ವಿಜೇತ ತಂಡದ ಪರ ಮುಸ್ತಾಫ ಮಶಾಲ್‌ 4ನೇ ನಿಮಿಷದಲ್ಲಿ, ಅಲ್ಲಿಯೋಜ್‌ ಅಲಿ 47ನೇ ನಿಮಿಷ ಹಾಗೂ ಯೂಸುಫ್‌ ಅದುರಿಸಾಗ್‌ 86ನೇ ನಿಮಿಷದಲ್ಲಿ ಗೋಲು ಗಳಿಸಿ ಜಯದ ರೂವಾರಿ ಎನಿಸಿದರು.

ನಾಲ್ಕು ವರ್ಷಗಳ ಹಿಂದೆ ಕತಾರ್‌ ವಿರುದ್ಧ 0-0 ಗೋಲಿನಿಂದ ಡ್ರಾ ಸಾಧಿಸಿದ್ದನ್ನೇ ಸ್ಫೂರ್ತಿಯಾಗಿಸಿಕೊಂಡಿದ್ದ ಭಾರತ ಈ ಬಾರಿ ಯಶಸ್ಸಿನ ಹಾದಿ ತುಳಿಯುವಲ್ಲಿ ವಿಫಲವಾಯಿತು. ಮೊದಲಾರ್ಧದ ಕೊನೆಯಲ್ಲಿ ಸಿಕ್ಕ ಎರಡು ಅವಕಾಶಗಳನ್ನು ಗೋಲಾಗಿಸುವಲ್ಲಿ ಭಾರತದ ಆಟಗಾರರು ವಿಫಲರಾದರು.

ಕತಾರ್‌ 90 ನಿಮಿಷಗಳ ಕಾಲವೂ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು, ಕೆಲವು ಅವಕಾಶಗಳನ್ನು ಕೈ ಚೆಲ್ಲಿತ್ತು, ಇಲ್ಲವಾದಲ್ಲಿ ಭಾರತದ ಸೋಲಿನ ಅಂತರ ಇನ್ನೂ ಹೆಚ್ಚಾಗಿರುತ್ತಿತ್ತು. ಕುವೈತ್‌ ವಿರುದ್ಧ 1-0 ಗೋಲಿನಿಂದ ಗೆದ್ದಿರುವ ಭಾರತ ತಂಡದ ಕೋಚ್‌ ಐಗರ್‌ ಸ್ಟಿಮ್ಯಾಕ್‌ ಅವರಿಗೆ ತಮ್ಮ ತಂಡ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ವಿಶ್ವಕಪ್‌ಗೆ ಅರ್ಹತೆ ಪಡೆಯುತ್ತದೆ ಎಂಬ ನಂಬಿಕೆ ಇದೆ. ಮುಂದಿನ ಪಂದ್ಯದಲ್ಲಿ ಭಾರತ ತಂಡ ಅಫಘಾನಿಸ್ತಾನದ ವಿರುದ್ಧ ಸೆಣಸಲಿದೆ.

Related Articles