Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಸತ್ತ ವಾಲಿಬಾಲ್‌ ಮೇಲೆ ವಿಶ್ವ ಕ್ಲಬ್‌ ಚಾಂಪಿಯನ್‌ಷಿಪ್‌!

ಎಲ್ಲರೂ ಬೆಂಗಳೂರಿನಲ್ಲಿ ನಡೆಯುತ್ತಿರುವ ಪುರುಷರ ವಿಶ್ವ ಕ್ಲಬ್‌ ವಾಲಿಬಾಲ್‌ ಚಾಂಪಿಯನ್‌ಷಿಪ್‌ನ ಸಂಭ್ರಮವನ್ನು ಸವಿಯುತ್ತಿದ್ದಾರೆ. ನಮ್ಮ ರಾಜ್ಯದ ವಾಲಿಬಾಲ್‌ ಹುಡುಗರು ಪಾಸ್‌ ಸಿಕ್ಕಿದ್ದರೆ ಕೋರಮಂಗಲ ಕ್ರೀಡಾಂಗಣದಲ್ಲಿ, ಇಲ್ಲ ಮನೆಯಲ್ಲೇ ಕುಳಿತುಕೊಂಡು ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ಪಂದ್ಯ ನೋಡುತ್ತಿದ್ದಾರೆ. ರಾಜ್ಯದಲ್ಲಿ ವಾಲಿಬಾಲ್‌ ಚಟುವಟಿಕೆಯೇ ನಿಂತಿರುವಾಗ ಇಂಥಹ ಲೀಗ್‌ಗಳನ್ನು ನಡೆಸಯುವುದರಲ್ಲಿ ಅರ್ಥವಿಲ್ಲ. What is the use of hosting men’s world Volleyball club championship, when there are no Volleyball activities in Karnataka.

ದೇಶದಲ್ಲಿ ವಾಲಿಬಾಲ್‌ ಕ್ರೀಡೆ ಕೋರ್ಟ್‌ನಲ್ಲಿ ನಡೆಯುತ್ತಿದೆ. ಪದಾಧಿಕಾರಿಗಳು ಹಗ್ಗ ಜಗ್ಗಾಟ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ಮೊದಲು ಎ ಮತ್ತು ಬಿ ಡಿವಿಜನ್‌ ಲೀಗ್‌ ಪಂದ್ಯಗಳು ನಡೆದಾಗ 25ಕ್ಕೂ ಹೆಚ್ಚು ತಂಡಗಳು ಪಾಲ್ಗೊಳ್ಳುತ್ತಿದ್ದವು. ಆದರೆ ಕಳೆದ ಐದಾರು ವರ್ಷಗಳಿಂದ ರಾಜ್ಯದಲ್ಲಿ ವಾಲಿಬಾಲ್‌ ನಡೆಯುತ್ತಿಲ್ಲ. ಆದರೆ ನಮಗೆ ಹಣ ಮಾಡುವ ಲೀಗ್‌ ನಡೆಸಲು ಆಟಗಾರರು ಸಿಕ್ಕಿಯೇ ಸಿಗುತ್ತಾರೆ. ರಾಜ್ಯದ ಮನೆ ಹಾಳಾಗಲಿ. ಬೇರೆ ರಾಜ್ಯಗಳಿಂದ, ದೇಶಗಳಿಂದ ಆಟಗಾರರನ್ನು ತರಿಸಿ ಆಡಿಸಿದರಾಯಿತು.

ಮೊದಲು ಕರ್ನಾಟಕ ರಾಜ್ಯ ವಾಲಿಬಾಲ್‌ ಸಂಸ್ಥೆಯಿಂದ ಜಿಲ್ಲಾ ಮಟ್ಟದಲ್ಲಿ ವಾಲಿಬಾಲ್‌ ಚಾಂಪಿಯನ್‌ಷಿಪ್‌ ನಡೆದು ಉತ್ತಮ ತಂಡವನ್ನು ಆಯ್ಕೆ ಮಾಡಿ ರಾಜ್ಯ ಮಟ್ಟದಲ್ಲಿ ಟೂರ್ನಿಗಳನ್ನು ನಡೆಸಲಾಗುತ್ತಿತ್ತು. ಈಗ ರಾಜ್ಯದಲ್ಲಿ ವಾಲಿಬಾಲ್‌ ಸತ್ತೇ ಹೋಗಿದೆ. ದೇಶದಲ್ಲಿ ವಾಲಿಬಾಲ್‌ ಜೀವಂತವಾಗಿದೆ ಎಂಬುದನ್ನು ಜಗತ್ತಿಗೆ ತೋರಿಸಲು ಪುರುಷರ ಕ್ಲಬ್‌ ವಾಲಿಬಾಲ್‌ ಚಾಂಪಿಯನ್‌ಷಿಪ್‌ ನಡೆಯುತ್ತಿದೆ.

ಎಎಸ್‌ಸಿ, ಎಂಇಜಿ, ಪೋಸ್ಟಲ್‌, ಪೊಲೀಸ್‌ ಮೊದಲಾದ ತಂಡಗಳಲ್ಲಿ ಆಡುವವರು ತಮ್ಮ ಬದುಕನ್ನು ರೂಪಿಸಿಕೊಳ್ಳಲು  ಪ್ರಯತ್ನಿಸುತ್ತಾರೆ. ಕ್ರೀಡಾ ಕೋಟಾದಡಿ ಕೆಲಸ ಪಡೆದವರಿಗೆ ಆಡಲು ಅವಕಾಶವೇ ಇಲ್ಲವೆಂದ ಮೇಲೆ ಯಾವ ಅಂತಾರಾಷ್ಟ್ರೀಯ ಟೂರ್ನಿ ನಡೆಸಿ ಏನು ಪ್ರಯೋಜನ. ಆಟ ಚೆನ್ನಾಗಿರುತ್ತದೆ. ನೋಡಿ ಖುಷಿ ಪಡಬಹುದು ಅಷ್ಟೆ.

ಕರ್ನಾಟಕದಲ್ಲಿ ರಾಜ್ಯ ಮಟ್ಟದ ಲೀಗ್‌ ಪಂದ್ಯಗಳು ನಡೆಯುತ್ತಿಲ್ಲ. ಹಿರಿಯರಿಗಾಗಿ ಅಸೋಸಿಯೇಷನ್‌‌ ಕಪ್‌ ನಡೆಯುತ್ತಿತ್ತು ಅದ ಕೂಡ ಈಗ ನಿಂತು ಹೋಗಿದೆ. ಪ್ರತಿಭೆಗಳನ್ನು ಹುಡುಕಲು ಅಂತರ್‌ ಕಾಲೇಜು ಮತ್ತು ಅಂತರ್‌ ಶಾಲಾ ವಾಲಿಬಾಲ್‌‌ ಚಾಂಪಿಯನ್‌ಷಿಪ್‌ ನಡೆಯುತ್ತಿತ್ತು. ಅವೆಲ್ಲ ಈಗ ಇತಿಹಾಸ. ರೆಫರಿ ಕೋರ್ಸ್‌ಗಳು, ರೆಫರಿ ಕ್ಲಿನಿಕ್‌ಗಳು, ರೆಫರಿ ಪರೀಕ್ಷೆಗಳು ನಡೆಯುತ್ತಿದ್ದವು. ಈಗ ಹಾಗಂದರೇನು? ಎಂದು ಕೇಳುವ ಕಾಲ.

ಒಬ್ಬ ವಾಲಿಬಾಲ್‌ ಆಟಗಾರ ಉತ್ತಮ ಆಟಗಾರನಾವಿ ರೂಪುಗೊಳ್ಳಲು 4-5 ವರ್ಷ ನಿರಂತರವಾಗಿ ಆಡಬೇಕಾಗುತ್ತದೆ. ಆ ಅವಧಿಯಲ್ಲೇ ಆಡಲು ಅವಕಾಶ ಸಿಗಲಿಲ್ಲವೆಂದರೆ ಇನ್ನು ಈ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡು ಏನು ಪ್ರಯೋಜನ ಎಂದು ಆಟಗಾರರು ಯೋಚಿಸುವಂತಾಗಿದೆ. ರಾಜ್ಯ ಮಟ್ಟದಲ್ಲಿ ಟೂರ್ನಿ ನಡೆಯದಿದ್ದರೆ ರಾಷ್ಟ್ರೀಯ ಮಟ್ಟಕ್ಕೆ ತಂಡವನ್ನು ಆಯ್ಕೆ ಮಾಡುವುದಾದರೂ ಹೇಗೆ? ಲೀಗ್‌ ಹಂತದಲ್ಲಿ ಪಂದ್ಯಗಳು ನಡೆಯದಿದ್ದರೆ ಆಟಗಾರರ ಆಯ್ಕೆ ಸುಲಭವಾಗುತ್ತದೆ. ಈ ಕ್ರೀಡೆಯನ್ನು ನಂಬಿಕೊಂಡು ಯುವಕರು ಮುಂದೆ ಬರುತ್ತಾರೆ. ಅನುಭವದ ಮೇಲೆ ಎಲ್ಲಾದದೂ ಕೆಲಸಕ್ಕೆ ಅರ್ಜಿ ಹಾಕಿ ಬದುಕು ಕಟ್ಟಿಕೊಳ್ಳಬಹುದು. ವಾಲಿಬಾಲ್‌ ಪಂದ್ಯಗಳೇ ನಡೆಯುತ್ತಿಲ್ಲವೆಂದರೆ ಹೆತ್ತವರು ತಮ್ಮ ಮಕ್ಕಳನ್ನು ಈ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಹೇಗೆ ಕಳಹಿಸುತ್ತಾರೆ? ಕ್ರಿಕೆಟ್‌ ಆಡ್ಕೊಳ್ಳಿ ಹೋಗಿ ಎಂದು ಮಕ್ಕಳಿಗೆ ಬ್ಯಾಟ್‌ ಬಾಲ್‌ ಕೊಟ್ಟು ಕಳುಹಿಸುತ್ತಾರೆ.

ಭಾರತದಲ್ಲಿ ವಾಲಿಬಾಲ್‌ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂದರೆ ಇಲ್ಲಿ ಚುನಾವಣೆಯೂ ನಡೆಯುತ್ತಿಲ್ಲ. ಇತ್ತೀಚಿಗೆ ಗೋವಾದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ವಾಲಿಬಾಲ್‌ ಪಂದ್ಯಗಳೇ ನಡೆದಿಲ್ಲ. ಕಾರಣ ಭಾರತೀಯ ವಾಲಿಬಾಲ್‌ ಸಂಸ್ಥೆಯನ್ನು ಭಾರತೀಯ ಒಲಿಂಪಿಕ್ಸ್‌‌ ಸಂಸ್ಥೆ ನಿಯೋಜಸಿದ ತಾತ್ಪೂರ್ತಿಕ ಸಮಿತಿ ನೋಡಿಕೊಳ್ಳುತ್ತಿದೆ. ದೇಶದಲ್ಲಿರುವ ಉತ್ತಮ ಎಂಟು ತಂಡಗಳನ್ನು ಆಯ್ಕೆ ಮಾಡಲು ಈ ಸಮಿತಿಗೆ ಸಾಧ್ಯವಾಗಲಿಲ್ಲ. ಭಾರತ ಕ್ರೀಡಾ ಇಲಾಖೆ ಈಗಿರುವ ಎಲ್ಲ ಪದಾಧಿಕಾರಿಗಳನ್ನು ತೆಗೆದು ಹೊಸ ಮುಖಕ್ಕೆ ಅವಕಾಶ ಕೊಟ್ಟು ದೇಶದಲ್ಲಿ ವಾಲಿಬಾಲ್‌ ಕ್ರೀಡೆಗೆ ಮತ್ತೆ ಜೀವ ತುಂಬಿದರೆ ಮಾತ್ರ ಪ್ರೈಮ್‌ ವಾಲಿಬಾಲ್‌ ಲೀಗ್‌ ಹಾಗೂ ವಿಶ್ವ ಕ್ಲಬ್‌ ವಾಲಿಬಾಲ್‌‌ ಚಾಂಪಿಯನ್‌ಷಿಪ್‌ ನಡೆಸಿದರೆ ಅರ್ಥವಿರುತ್ತದೆ. ಇಲ್ಲವಾದಲ್ಲಿ ಶವಕ್ಕೆ ಮಾಡಿದ ಶೃಂಗಾರದಂತೆಯೇ ಸರಿ. ಇದೆಲ್ಲದರ ನಡುವೆ ಮಹಿಳಾ ವಾಲಿಬಾಲ್‌‌ ಏನಾಯಿತೆಂದು ಕೇಳಬೇಡಿ ಮತ್ತೆ….


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.