Tuesday, December 3, 2024

ಅರ್ಚನಾ ಕಾಮತ್‌: ಮಂಗಳೂರಿನಿಂದ ಪ್ಯಾರಿಸ್‌ ಒಲಿಂಪಿಕ್ಸ್‌ಗೆ

ಟೇಬಲ್‌ ಟೆನಿಸ್‌ ಕರ್ನಾಟಕದಲ್ಲಿ ಜನಪ್ರಿಯ ಕ್ರೀಡೆಯಾಗಿರಲಿಲ್ಲ. ಆದರೆ ಅಣ್ಣನ ಜೊತೆಯಲ್ಲಿ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ಬಾಲಕಿ ಅಣ್ಣನಿಂದ ಸ್ಫೂರ್ತಿ ಪಡೆದು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ, ಯೂಥ್‌ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದು, ಈಗ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವುದು ಕನ್ನಡಿಗರ ಹೆಮ್ಮೆ. ಇದು ಮಂಗಳೂರು ಮೂಲದ, ಈಗ ಬೆಂಗಳೂರಿನಲ್ಲಿ ನೆಲೆಸಿರುವ ಡಾ. ಗುರೀಶ್‌ ಕಾಮತ್‌ ಗುರುಪುರ ಹಾಗೂ ಡಾ. ಅನುರಾಧಾ ಕಾಮತ್‌ ಅವರ ಪುತ್ರಿ ಅರ್ಚನಾ ಕಾಮತ್‌ ಅವರ ಯಶೋಗಾಥೆ. Archana Kamath Mangalore to Paris Olympics

ಮಂಗಳೂರಿನಿಂದ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಎರಡನೇ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅರ್ಚನಾ ಕಾಮತ್‌ ಇದುವರೆಗೂ ಟೇಬಲ್‌ ಟೆನಿಸ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 22 ಚಿನ್ನ, 11 ಬೆಳ್ಳಿ ಮತ್ತು 25 ಕಂಚಿನ ಪದಕ ಸೇರಿ ಒಟ್ಟು 58 ಪದಕಗಳನ್ನು ಗೆದ್ದಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ 14 ಬಾರಿ ರಾಷ್ಟ್ರೀಯ ಚಾಂಪಿಯನ್‌ ಪಟ್ಟ ಸೇರಿ 39 ಚಿನ್ನ, 13 ಬೆಳ್ಳಿ ಹಾಗೂ 19 ಕಂಚಿನ ಪದಕಗಳು ಸೇರಿ ಒಟ್ಟು 71 ಪದಕಗಳನ್ನು ಗೆದ್ದಿದ್ದಾರೆ. ಡಬಲ್ಸ್‌ನಲ್ಲಿ ಮೊನಿಕಾ ಬಾತ್ರಾ ಅವರೊಂದಿಗೆ ವಿಶ್ವದಲ್ಲಿ 3ನೇ ರ್ಯಾಂಕ್‌ ತಲುಪಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2015ರಲ್ಲಿ ಕ್ರೀಡಾ ಸಾಧನೆಗಾಗಿ ರಾಷ್ಟ್ರಪತಿಗಳಿಂದ ಶ್ರೇಷ್ಠ ಬಾಲ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸದ್ಯ ನೊಯಿಡಾದಲ್ಲಿ ಒಲಿಂಪಿಕ್ಸ್‌ಗಾಗಿ ತರಬೇತಿ ಪಡೆಯುತ್ತಿರುವ ಅರ್ಚನಾ ಕಾಮತ್‌, ಕೇಂದ್ರ ಸರಕಾರದ TOPS ಮತ್ತು OGQ ಯೋಜನೆಯಪಡೆದ ಆಟಗಾರ್ತಿ ಎನಿಸಿದ್ದಾರೆ.

Sportsmail ನಡೆಸಿದ ವಿಶೇಷ ಸಂದರ್ಶನದಲ್ಲಿ ಅರ್ಚನಾ ಕಾಮತ್‌ ಕ್ರೀಡಾ ಬದುಕಿನಲ್ಲಿ ತಾವು ನಡೆದು ಬಂದ ಹಾದಿಯನ್ನೊಮ್ಮೆ ಹಿಂದಿರುಗಿ ನೋಡಿದ್ದಾರೆ. ತನಗೆ ನೆರವಾದ ಎಲ್ಲರನ್ನೂ ಸ್ಮರಿಸಿದ್ದಾರೆ.

ಅಣ್ಣನೇ ಸ್ಫೂರ್ತಿ: “ಬೇಸಿಗೆ ಶಿಬಿರದಲ್ಲಿ ಚಿಕ್ಕಪ್ಪ ಪ್ರಕಾಶ್‌ ಕಾಮತ್‌ ಅವರು ಟೇಬಲ್‌ ಟೆನಿಸ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದರು. ಅಪ್ಪ, ಅಮ್ಮ ಕೂಡ ಇದಕ್ಕೆ ಪ್ರೋತ್ಸಾಹ ನೀಡಿದರು. ಅಣ್ಣ ಅಭಿನವ್‌ ಕಾಮತ್‌ ಚೆನ್ನಾಗಿ ಟಿಟಿ ಆಡುತ್ತಿದ್ದ. ಆತನಂತೆಯೇ ಆಡಬೇಕೆಂಬ ಹಂಬಲ. ಇದರಿಂದಾಗಿ ಅಪ್ಪ ಮನೆಗೆ ಟೇಬಲ್‌ ಟೆನಿಸ್‌ ಟೇಬಲ್‌ ತರಿಸಿದರು. ಇದರಿಂದಾಗಿ ಈ ಆಟದಲ್ಲಿ ತೊಡಗಿಸಿಕೊಳ್ಳಲು ನೆರವಾಯಿತು.

ಮರೆಯಲಾಗದು ಅಮ್ಮನ ತ್ಯಾಗ: “ಅಪ್ಪ-ಅಮ್ಮನ ಪ್ರೋತ್ಸಾಹ ಇಲ್ಲದೇ ಇರುತ್ತಿದ್ದರೆ ಇಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತಲೇ ಇರಲಿಲ್ಲ. ಅಮ್ಮ ಡಾಕ್ಟರ್‌ ಆಗಿದ್ದರೂ ತನ್ನ ವೃತ್ತಿಯನ್ನು ಬದಿಗಿಟ್ಟು ಎಲ್ಲೇ ಟೂರ್ನಿ ನಡೆದರೂ ನನ್ನೊಂದಿಗೆ ಬರುತ್ತಿದ್ದರು. ನನ್ನ ಪ್ರತಿಯೊಂದು ಜಯದಲ್ಲೂ ಅಪ್ಪ-ಅಮ್ಮನ ಕೊಡುಗೆ ಅಪಾರ. ಸೋಲಿರಲಿ, ಗೆಲುವಿರಲಿ ಅಮ್ಮ ಜೊತೆಯಲ್ಲೇ ಇರುತ್ತಿದ್ದರು. ಅಪ್ಪ ನನ್ನಲ್ಲಿ ಸ್ಫೂರ್ತಿ ತುಂಬಿ ಮತ್ತೊಂದು ಟೂರ್ನಿಗೆ ಸಜ್ಜು ಮಾಡುತ್ತಿದ್ದರು. ಇದೆಲ್ಲದರ ಜೊತೆಯಲ್ಲಿ ಡಿವೈಇಎಸ್‌, ಟಾಪ್‌, ಒಜಿಕ್ಯೂ ಹಾಗೂ ಇಂಡಿಯನ್‌ ಆಯಿಲ್‌ ನನ್ನ ಯಶಸ್ಸಿಗಾಗಿ ಪ್ರೋತ್ಸಾಹ ನೀಡಿದೆ.”

14 ವರ್ಷಗಳಿಂದ ಸ್ಪರ್ಧೆ: ಅರ್ಚನಾ ಕಾಮತ್‌ ಅವರಿಂದಾಗಿ ಕರ್ನಾಟಕ ಇಂದು ಟೇವಲ್‌ ಟೆನಿಸ್‌ನಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸ್ಪೂರ್ತಿಯಾಯಿತು. ಈಗ ಅನೇಕ ಯುವ ಆಟಗಾರರು ರಾಜ್ಯಕ್ಕಾಗಿ ಯಶಸ್ಸು ತರುತ್ತಿದ್ದಾರೆ. ಈಗ ವಿಶ್ವದಲ್ಲಿ ಸಿಂಗಲ್ಸ್‌ನಲ್ಲಿ 103ನೇ ರ್ಯಾಂಕ್‌ ಹೊಂದಿರುವ ಅರ್ಚನಾ, ಡಬಲ್ಸ್‌ನಲ್ಲಿ ಮನಿಕಾ ಬಾತ್ರಾ ಅವರೊಂದಿಗೆ 3ನೇ ರ್ಯಾಂಕ್‌ ಹೊಂದಿದ್ದಾರೆ. 9ನೇ ವಯಸ್ಸಿನಿಂದ ಟೇಬಲ್‌ ಟೆನಿಸ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅರ್ಚನಾಗೆ ಇದುವರೆಗೂ ಗೆದ್ದಿರುವ ಪದಕಗಳ ಸಂಖ್ಯೆ ಎಷ್ಟೆಂದು ಕೇಳಿದರೆ ನಕ್ಕು ಸುಮ್ಮನಾಗುತ್ತಾರೆ. ಆದರೆ ಅವರ ತಂದೆ ಗಿರೀಶ್‌ ಕಾಮತ್‌ ಮಗಳ ಸಾಧನೆಗಳನ್ನು ಪಟ್ಟಿ ಮಾಡಿ ಅತ್ಯಂತ ಖುಷಿಯಿಂದ ಹಂಚಿಕೊಳ್ಳುತ್ತಾರೆ. 2013ರಲ್ಲಿ ಅರ್ಚನಾ ಕಾಮತ್‌ U15 ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್‌ ಪಟ್ಟ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಾಣವಾಯಿತು. ಅದಕ್ಕೂ ಮುನ್ನ 14 ವರ್ಷಗಳಿಂದ ಕರ್ನಾಟಕ ರಾಷ್ಟ್ರೀಯ ಚಾಂಪಿಯನ್‌ ಪಟ್ಟ ಗೆದ್ದಿರಲಿಲ್ಲ. “ಕ್ರೀಡಾ ಬದುಕಿನ ಹಾದಿಯನ್ನೊಮ್ಮೆ ಹಿಂದಿರುಗಿ ನೋಡಿದಾಗ ಅತ್ಯಂತ ಖುಷಿಯಾಗುತ್ತದೆ. ಇದಕ್ಕೆ ಹೆತ್ತವರಿಂದ ಸಿಕ್ಕ ಪ್ರೋತ್ಸಾಹ ಗಮನಾರ್ಹವಾದುದು. ಪೂರ್ಣಪ್ರಜ್ಞಾ ಶಾಲೆ, ಜೈನ್‌ ಕಾಲೇಜಿನ ಬೆಂಬಲವನ್ನೂ ಮರೆಯುವಂತಿಲ್ಲ,” ಎನ್ನುತ್ತಾರೆ.

ಪದಕ ಗೆಲ್ಲುವುದೇ ಗುರಿ: “ಹಿಂದೆ ಚೀನಾ, ಕೊರಿಯಾ ರಾಷ್ಟ್ರಗಳು ಬಲಿಷ್ಠವೆನಿಸಿದ್ದವು. ಈಗ ಒಲಿಂಪಿಕ್ಸ್‌ನ ಟಿಟಿಯಲ್ಲಿ ಪಾಲ್ಗೊಳ್ಳುತ್ತಿರುವ 16 ತಂಡಗಳೂ ಬಲಿಷ್ಠವೆನಿಸಿವೆ. ಏಕೆಂದರೆ ಟೇಬಲ್‌ ಟೆನಿಸ್‌ ಇಂದು ಜಗತ್ತಿನಾದ್ಯಂತ ಹಬ್ಬಿರುವ ಜನಪ್ರಿಯ ಕ್ರೀಡೆಯಾಗಿವೆ. ಇತರ ದೇಶಗಳಲ್ಲೂ ಕೊರಿಯಾ ಮತ್ತು ಚೀನಾದ ಆಟಗಾರರು ಸೇರಿಕೊಂಡಿದ್ದಾರೆ. ಭಾರತವೂ ಕೂಡ ಜಾಗತಿಕ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದೆ. ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರಿ ಪದಕ ಗೆಲ್ಲುವುದೇ ನಮ್ಮ ಗರಿ,”

ಯೂಥ್‌ ಒಲಿಂಪಿಕ್ಸ್‌ ಖುಷಿ ಮತ್ತು ಬೇಸರ: “2018ರ ಯೂಥ್‌ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಸಿಕ್ಕಿರುವುದು ಖುಷಿಯ ಸಂಗತಿ. ಆದರೆ ಕಂಚಿನ ಪದಕ ಗೆಲ್ಲಲಾಗಲಿಲ್ಲ ಎಂಬ ನೋವು ಈಗಲೂ ಇದೆ. ಕ್ರೀಡಾಪಟುವಿನ ಬದುಕಿನಲ್ಲಿ ಈ ನೋವು ನಲಿವು ಸಾಮಾನ್ಯವಾಗಿರುತ್ತದೆ. ಬ್ಯೂನಸ್‌ ಐರಿಸ್‌ನಲ್ಲಿ ನಡೆದ ಯೂಥ್‌ ಒಲಿಂಪಿಕ್ಸ್‌ ನನ್ನ ಬದುಕಿನ ಅವಿಸ್ಮರಣೀಯ ಟೂರ್ನಿ. ಈ ಯೂಥ್‌ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ ತಲುಪಿದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ. ಸಿಂಗಲ್ಸ್‌ನಲ್ಲಿ ಈ ಸಾಧನೆ ಮಾಡಿರುವುದು ನನಗೂ ಖುಷಿ ಕೊಟ್ಟಿದೆ. ಪದಕ ಕೈ ತಪ್ಪಿರುವ ನೋವು ಇದ್ದೇ ಇರುತ್ತದೆ,”

1996ರಲ್ಲಿ ಮಂಗಳೂರಿನ ಸತೀಶ್‌ ರೈ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ನಂತರ ಇದೇ ಮೊದಲ ಬಾರಿಗೆ ಮಂಗಳೂರು ಮೂಲದ ಕ್ರೀಡಾಪಟುವೊಬ್ಬರು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕರ್ನಾಟಕದ ಹೆಮ್ಮೆಯ ಟೇಬಲ್‌ ಟೆನಿಸ್‌ ತಾರೆ ಅರ್ಚನಾ ಕಾಮತ್‌ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಯಶಸ್ಸು ಕಾಣಲಿ ಎಂಬುದೇ ಕನ್ನಡಿಗರ ಹಾರೈಕೆ.

Related Articles