Sunday, October 27, 2024

ಶ್ರೇಯಸ್‌ ಯಶಸ್ಸಿನ ಹಿಂದೆ ಕೋಚ್‌ ನಾಗರಾಜ್‌ ಪಂಡಿತ್‌

ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಕೆನಡಾ ತಂಡದ ಪರ ಆಡುತ್ತಿರುವ ದಾವಣಗೆರೆ ಮೂಲದ ವಿಕೆಟ್‌ಕೀಪರ್‌ ಮತ್ತು ಬ್ಯಾಟ್ಸ್‌ಮನ್‌ ಶ್ರೇಯಸ್‌ ಮೊವ್ವ ಉತ್ತಮ ಆಟ ಪ್ರದರ್ಶಿಸುತ್ತಿದ್ದು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಕೆನಡ ತಂಡ ಆಡಿರುವ ಎರಡು ಪಂದ್ಯಗಳಲ್ಲಿ ಒಂದು ಜಯ, ಒಂದು ಸೋಲು ಅನುಭವಿಸಿದೆ. ಚಿತ್ರದುರ್ಗದಲ್ಲಿ ಹುಟ್ಟಿ, ದಾವಣಗೆರೆಯಲ್ಲಿ ಬೆಳೆದು ಕೆನಡದಲ್ಲಿ ಯಶಸ್ಸು ಕಂಡ ಈ ಕ್ರಿಕೆಟಿಗನ ಬದುಕಿನಲ್ಲಿ ಹಲವರು, ಹಲವು ರೀತಿಯಲ್ಲಿ ಪ್ರೋತ್ಸಾಹ, ಪ್ರಭಾವ ಬೀರಿದ್ದಾರೆ. ಅವರಲ್ಲಿ ಕರ್ನಾಟಕ ಕ್ರೀಡಾ ಇಲಾಖೆಯಲ್ಲಿ ಕೋಚ್‌ ಆಗಿ ಕಾರ್ಯನಿರ್ವಹಿಸಿ, ಈಗ ಶಿವಮೊಗ್ಗದಲ್ಲಿ ಸಹ್ಯಾದ್ರಿ ಕ್ರಿಕೆಟ್‌ ಅಕಾಡೆಮಿಯನ್ನು ನಡೆಸುತ್ತಿರುವ ನಾಗರಾಜ್‌ ಪಂಡಿತ್‌ ಅವರ ಕೊಡುಗೆಯೂ ಅಪಾರವಾದುದು. Kannadiga Shreyas Movva in Canada T20 World Cup Team.

2021ರಲ್ಲಿ ನೇಪಾಳ ವಿರುದ್ಧ ಏಕದಿನ ಕ್ರಿಕೆಟ್‌ಗೆ ಕಾಲಿಟ್ಟ ಶ್ರೇಯಸ್‌ ಮೊವ್ವ ಇದುವರೆಗೂ 7 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 98 ರನ್‌ ಗಳಿಸಿರುತ್ತಾರೆ. ಅದೇ ವರ್ಷ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ, 7 ಪಂದ್ಯಗಳಲ್ಲಿ 5 ಇನ್ನಿಂಗ್ಸ್‌ ಆಡಿ 110 ರನ್‌ ಗಳಿಸಿರುತ್ತಾರೆ. ಕರ್ನಾಟಕದಲ್ಲಿ ವಿವಿಧ ಹಂತದ ಲೀಗ್‌ ಪಂದ್ಯಗಳಲ್ಲಿ ಪಾಲ್ಗೊಂಡು ಬಿಇ ಅಧ್ಯಯನ ಮಾಡುವಾಗ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಯ ನಾಯಕನಾಗಿಯೂ ಆಡಿರುತ್ತಾರೆ. ನಂತರ ಉನ್ನತ ಅಧ್ಯಯನಕ್ಕಾಗಿ (MS) ಕೆನಡ ಸೇರಿ ಅಲ್ಲಿಯ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದರು.

ಉದ್ಯಮಿ ಎಂಜಿ ವಾಸುದೇವ ರೆಡ್ಡಿ ಹಾಗೂ ನಿವೃತ್ತಿ ಶಿಕ್ಷಕಿ ಯಶೋಧ ಅವರ ಮಗನಾಗಿರುವ ಶ್ರೇಯಸ್‌ ಮೊವ್ವ, ದಾವಣಗೆರೆಯಲ್ಲಿರುವ ವೀನಸ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದರೂ, ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಆರಂಭದಿಂದಲೂ ಪ್ರೋತ್ಸಾಹಿಸಿದರವು ತರಬೇತುದಾರರಾದ ನಾಗರಾಜ್‌ ಪಂಡಿತ್‌. ಈ ಬಗ್ಗೆ ಶ್ರೇಯಸ್‌ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. “ಶ್ರೇಯಸ್‌ ಅವರಲ್ಲಿ ಉತ್ತಮ ರೀತಿಯ ಪ್ರತಿಭೆ ಇದೆ. ಅದು ಚಿಕ್ಕಂದಿನಲ್ಲಿಯೇ ಪ್ರಕಟವಾಗಿತ್ತು. ಇಲಾಖೆಯ ವತಿಯಿಂದ ನಡೆಯುತ್ತಿರುವ ತರಬೇತಿಯಲ್ಲಿ ಅವರು ಪಾಲ್ಗೊಳ್ಳುತ್ತಿದ್ದರು. ವಿಕೆಟ್‌ ಕೀಪರ್‌ ಆಗುವ ಎಲ್ಲ ಅರ್ಹತೆಯೂ ಅವರಲ್ಲಿ ಚಿಕ್ಕಂದಿನಲ್ಲಿಯೇ ಕಂಡು ಬಂದಿತ್ತು. ಹಾಗಾಗಿ ಅವರು ಬ್ಯಾಟಿಂಗ್‌ ಜೊತೆಯಲ್ಲಿ ವಿಕೆಟ್‌ ಕೀಪಿಂಗ್‌ ಅನ್ನೂ ಕರಗತ ಮಾಡಿಕೊಂಡಿರು. ನನ್ನ ಶಿಷ್ಯನೊಬ್ಬ ವಿಶ್ವಕಪ್‌       ಟಿ20ಯಲ್ಲಿ ಆಡುತ್ತಿರುವುದು ಹೆಮ್ಮೆ ಅನಿಸುತ್ತಿದೆ. ಇದು ಭಾರತದ ಹೆಮ್ಮೆ ಮತ್ತು ಕನ್ನಡಿಗರೂ ಹೆಮ್ಮೆಪಡುವಂಥ ವಿಷಯ,” ಎಂದು ನಾಗರಾಜ್‌ ಪಂಡಿತ್‌ ಅವರು ಹೇಳಿದ್ದಾರೆ.

ಶ್ರೇಯಸ್‌ ತಂದೆಯೂ ಕ್ರಿಕೆಟ್‌ ಆಟಗಾರ: ಶ್ರೇಯಸ್‌ ಮೊವ್ವ ಅವರ ತಂದೆ ವಾಸುದೇವ ರೆಡ್ಡಿ ಅವರು ಕಾಲೇಜು ತಂಡದಲ್ಲಿದ್ದು ವಿಶ್ವವಿದ್ಯಾನಿಲಯ ಹಂತದ ವರೆಗೂ ಆಡಿದ್ದಾರೆ. ಮಗನ ಯಶಸ್ಸಿನ ಬಗ್ಗೆ sportsmail ಜೊತೆ ಮಾತನಾಡಿದ ವಾಸುದೇವ ಅವರು, “ಚಿತ್ರದುರ್ಗದಲ್ಲಿ ಇರುವಾಗ ಟೆನಿಸ್‌ ಬಾಲ್‌ ಕ್ರಿಕೆಟ್‌ ಆಡುತ್ತಿದ್ದೆ. ನಂತರ ಕಾಲೇಜು ತಂಡಗಳಲ್ಲಿ ಆಡುತ್ತಿರುವುದನ್ನು ಶ್ರೇಯಸ್‌ ನೋಡುತ್ತಿದ್ದ. ನಾವು ಆರು ಮಂದಿ ಸಹೋದರರು. ಎಲ್ಲರೂ ವಿವಿಧ ಹಂತಗಳಲ್ಲಿ ಕ್ರಿಕೆಟ್‌ ಆಡಿರುತ್ತಾರೆ. ಶ್ರೇಯಸ್‌ ಕೆನಡಕ್ಕೆ ಹೋದದ್ದು, ಎಂಎಸ್‌ ಮಾಡಲು. ಅಲ್ಲಿ ಅವನ ಪ್ರತಿಭೆಗೆ ಉತ್ತಮ ಅವಕಾಶ ಸಿಕ್ಕಿತು. ಶ್ರೇಯಸ್‌ ಯಶಸ್ಸಿನಲ್ಲಿ ಕೋಚ್‌ ನಾಗರಾಜ್‌ ಪಂಡಿತ್‌ ಅವರ ಪಾತ್ರ ಪ್ರಮುಖವಾಗಿದೆ,” ಎಂದರು. ಪ್ರಸಕ್ತ ವಿಶ್ವಕಪ್‌ನಲ್ಲಿ ಅಮರಿಕ ವಿರುದ್ಧ ನಡೆದ ಪಂದ್ಯದಲ್ಲಿ ಶ್ರೇಯಸ್‌ ಅಜೇಯ 32 ರನ್‌ ಗಳಿಸಿದ್ದರು, ಆ ಪಂದ್ಯದಲ್ಲಿ ಕೆನಡ ಸೋಲನುಭವಿಸಿತ್ತು. ನಂತರ ಐರ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಶ್ರೇಯಸ್‌ 37 ರನ್‌ ಗಳಿಸಿದ್ದು, ಕೆನಡ ಜಯ ಗಳಿಸಿತ್ತು.

Related Articles