Thursday, November 21, 2024

ಭಾರತಕ್ಕೆ ಟಿ20 ಕ್ರಿಕೆಟ್‌ ಪರಿಚಯಿಸಿದ್ದೇ ಕರ್ನಾಟಕ ಕ್ರಿಕೆಟ್‌ ಸಂಸ್ಥೆ

ಬೆಂಗಳೂರು: ಟಿ20 ಕ್ರಿಕೆಟ್‌ ಭಾರತದಲ್ಲಿ ಯಾವ ಮಟ್ಟದಲ್ಲಿ ಪ್ರಭುತ್ವ ಸಾಧಿಸಿ ಎಷ್ಟು ಲೀಗ್‌ಗಳು ಹುಟ್ಟಿಕೊಂಡವು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಈ ಚುಟುಕು ಮಾದರಿಯ ಕ್ರಿಕೆಟನ್ನು ಭಾರತಕ್ಕೆ ಪರಚಯಿಸಿದ್ದೇ ಕರ್ನಾಟಕ ಕ್ರಿಕೆಟ್‌ ಅಸೋಸಿಯೇಷನ್‌. ಅದಕ್ಕೆ ಪ್ರಾಯೋಜಕತ್ವ ನೀಡಿದ್ದು ಯುನಿಬಿಕ್‌ ಬಿಸ್ಕಿಟ್.‌

2005 ಆಗಸ್ಟ್‌ 19 ರಿಂದ 21 ರವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಲವು ಅಂತಾರಾಷ್ಟ್ರೀಯ ಆಟಗಾರರನ್ನೊಳಗೊಂಡ ಟೂರ್ನಿ ನಡೆಯಿತು. ಯುನಿಬಿಕ್‌ ಬ್ರಾಡ್ಮನ್‌ ಕಪ್‌ ಟ್ವೆಂಟಿ20. ರಾಜ್ಯ ಮಟ್ಟದಲ್ಲೂ ಪ್ರೀಮಿಯರ್‌ ಲೀಗ್‌ ಮೊದಲು ಆರಂಭಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ.

ಮಹೇಂದ್ರ ಸಿಂಗ್‌ ಧೋನಿ, ಉಪುಲ್‌ ಚಂದನ, ಫರ್ವೇಜ್‌ ಮಹಾರೂಫ್‌, ರಮೇಶ್‌ ಕಲುವಿತರಣ, ಶೊಯೇಬ್‌ ಮಲಿಕ್‌, ಸಲ್ಮಾನ್‌ ಬಟ್‌, ಕಮ್ರಾನ್‌ ಅಕ್ಮಲ್‌, ಅಜಿತ್‌ ಅಗರ್ಕರ್‌ ಲ್ಯಾನ್ಸ್‌ ಕ್ಲೂಸ್ನರ್‌, ಡೀನ್‌ ಜೋನ್ಸ್‌, ಆಡಂ ಹಾಲಿವೋಕ್‌, ಮೊಹಮ್ಮದ್‌ ಸಾಮಿ, ಅಸೆಲ್‌ ಆರ್ನಾಲ್ಡ್‌ ಮತ್ತು ಕನ್ನಡಿಗ ಜಾವಗಲ್‌ ಶ್ರೀನಾಥ್‌ ಅಂದು ಪಾಲ್ಗೊಂಡಿದ್ದ ಪ್ರಮುಖ ಆಟಗಾರರು. ಈ ಆಟಗಾರರೆಲ್ಲ ಬ್ರಾಡ್ಮನ್‌ ವಿಶ್ವಇಲೆವೆನ್‌ ತಂಡವನ್ನು ಪ್ರತಿನಿಧಿಸಿದ್ದರು. ಆಗ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಕಾರ್ಯದರ್ಶಿಯಾಗಿ ಮಾಜಿ ಕ್ರಿಕೆಟಿಗ ಬ್ರಜೇಶ್‌ ಪಟೇಲ್‌ ಕಾರ್ಯನಿರ್ವಹಿಸುತ್ತಿದ್ದರು.

ಪಾಲ್ಗೊಂಡ ತಂಡಗಳು: ಬ್ರಾಡ್ಮನ್‌ ವಿಶ್ವ ಇಲೆವೆನ್‌, ನ್ಯೂ ಸೌತ್‌ವೇಲ್ಸ್‌, ಕೆಎಸ್‌ಸಿಎ ಇಲೆವೆನ್‌, ಬೆಂಗಾಲ್‌, ಕೆಮ್‌ಪ್ಲಾಸ್ಟ್‌. ಏರ್‌ ಇಂಡಿಯಾ.

ಕೆಎಸ್‌ಸಿಎ ಇಲೆವೆನ್‌ ಹಾಗೂ ಏರ್‌ಇಂಡಿಯಾ ತಂಡಗಳು ಫೈನಲ್‌ ತಲುಪಿದವು. ಮಳೆಯಿಂದಾಗಿ ಪಂದ್ಯವನ್ನು 17 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಏರ್‌ ಇಂಡಿಯಾ ತಂಡ ಕೆಎಸ್‌ಸಿಎ ಇಲೆವೆನ್‌ ವಿರುದ್ಧ 6 ವಿಕೆಟ್‌ ಜಯ ಗಳಿಸಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತು.

ಕೆಎಸ್‌ಸಿಎ ಇಲೆವೆನ್‌: J Arun Kumar, D Ganesh, Rowland Barrington, Sunil B Joshi, Robin Uthappa, Bharath Chipli, Vijay Bharadwaj, Sudheendra Shinde, Stuart T Binny, Udit B Patel, Thilak Naidu, N C Aiyappa, R Vinay Kumar, C Raghavendra, C Raghu and Gaurav Dhiman

Related Articles