Friday, October 18, 2024

ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌: ಕುಂದಾಪುರದಲ್ಲೊಂದು ಸುಸಜ್ಜಿತ ಬ್ಯಾಡ್ಮಿಂಟನ್‌ ಕೇಂದ್ರ

ಕುಂದಾಪುರ: ಒಲಿಂಪಿಕ್ಸ್‌ ಕ್ರೀಡೆಗಳಲ್ಲಿ ಒಂದಾಗಿರುವ ಬ್ಯಾಡ್ಮಿಂಟನ್‌ ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯ ಕ್ರೀಡೆ ಎನಿಸಿದೆ. ಕುಂದಾಪುರದ ಪಡುಕೋಣೆ ಮೂಲದ ಪ್ರಕಾಶ್‌ ಪಡುಕೋಣೆಯವರು Prakash Padukone ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ ಆಗಿ ದೇಶಕ್ಕೆ ಕೀರ್ತಿ ತಂದರೂ ಕುಂದಾಪುರದಲ್ಲೊಂದು ಎಲ್ಲರಿಗೂ ಅನುಕೂಲವಾಗುವ ಬ್ಯಾಡ್ಮಿಂಟನ್‌ ಅಕಾಡೆಮಿಯೊಂದನ್ನು ಸ್ಥಾಪಿಸಲಾಗಲಿಲ್ಲ ಎಂಬುದು ಬೇಸರದ ಸಂಗತಿ. ಆದರೆ ಇನ್ನು ಈ ಬೇಸರ ದೂರವಾಗಲಿದೆ. ಏಕೆಂದರೆ ಕಷ್ಟಗಳ ನಡುವೆ ಬೆಳೆದು, ತನಗಿಷ್ಟವಾದ ಕ್ರೀಡೆಯನ್ನು ಹುಟ್ಟೂರಿನಲ್ಲಿ ಜನಪ್ರಿಯಗೊಳಿಸಬೇಕೆಂದು ಕುಂದಾಪುರದ ಅಜಿತ್‌ ಡಿಕೋಸ್ಟಾ ಅವರು ಇಲ್ಲಿನ ವಿನಾಯಕ ಟಾಕೀಸ್‌ ಸಮೀಪದ ಅರಾಲ್‌ಗುಡ್ಡೆಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಮೂರು ಕೋರ್ಟ್‌ಗಳಿರುವ ಕೋಸ್ಟಾ ಬ್ಯಾಡ್ಮಿಂಟ್‌ ಸೆಂಟರ್‌ ಆರಂಭಿಸಿದ್ದಾರೆ. Kundapura got International standard new Badminton Academy called Costa Badminton Centre.

ಜೂನ್‌ 30ರಂದು ಈ ಬ್ಯಾಡ್ಮಿಂಟನ್‌ ಸೆಂಟರ್‌ಗೆ ಚಾಲನೆ ಸಿಕ್ಕಿತು. ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ, ಹಳ್ಳಿಯ ಸೊಗಡಿನ ನಡುವೆ ಎದ್ದು ನಿಂತಿರುವ ಈ ಅಕಾಡೆಮಿಯನ್ನು ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗಿಯಾಗಿರುವ ಅಜಿತ್‌ ಕೋಸ್ಟಾ ಅವರು ಸ್ಥಾಪಿಸಿದ್ದಾರೆ. ಈ ಬ್ಯಾಡ್ಮಿಂಟನ್‌ ಸೆಂಟರ್‌ನ ಉದ್ದೇಶ ಹಾಗೂ ಕಾರ್ಯಶೈಲಿಯ ಬಗ್ಗೆ ಅಜಿತ್‌ ಡಿಕೋಸ್ಟಾ ಅವರು www.sportsmail.net ಜೊತೆ ಹಂಚಿಕೊಂಡಿದ್ದಾರೆ.

“ಕುಂದಾಪುರದಲ್ಲಿ ಓದುತ್ತಿರುವಾಗ ನಮಗೆ ಆಟದಲ್ಲಿ ಪಾಲ್ಗೊಳ್ಳುವುದು ಒತ್ತಟ್ಟಿಗಿರಲಿ ಧರಿಸಲು ಉತ್ತಮ ಚಡ್ಡಿಯೂ ಇರುತ್ತಿರಲಿಲ್ಲ. ಇದರಿಂದಾಗಿ ಯಾವುದೇ ಕ್ರೀಡೆಯಲ್ಲಿ ಪಾಲ್ಗೊಳ್ಳಲಾಗಲಿಲ್ಲ. ಕೊಲ್ಲಿ ರಾಷ್ಟ್ರದಲ್ಲಿ ನನ್ನ ಮಗ ಮತ್ತು ಮಗಳು ಬ್ಯಾಡ್ಮಿಂಟನ್‌ ಆಡುತ್ತಿರುವುದನ್ನು ಕಂಡಾಗ ಊರಿನಲ್ಲಿ ಉತ್ತಮ ಅಕಾಡೆಮಿಯನ್ನು ಸ್ಥಾಪಿಸಬೇಕು ಎಂದೆನಿಸಿತು. ಅದಕ್ಕಾಗಿ ಯೋಜನೆಗಳನ್ನು ರೂಪಿಸಿ, ನಮ್ಮದೇ ಜಾಗದಲ್ಲಿ ನಮ್ಮದೇ ಹೆಸರಿನಲ್ಲಿ ಬ್ಯಾಡ್ಮಿಂಟನ್‌ ಸೆಂಟರ್‌ ಸ್ಥಾಪಿಸಿದೆವು,” ಎಂದು ಅಜಿತ್‌ ಹೇಳಿದರು.

“ಇದು ಆರಂಭಿಕ ಹಂತ. ಈಗ ಚಿಕ್ಕ ಮಕ್ಕಳಿಗಾಗಿ ವಿವಿಧ ವಯೋಮಿತಿಯಲ್ಲಿ ತರಬೇತಿ ನೀಡಲಿದ್ದೇವೆ. ಅದೇ ರೀತಿ ಹಿರಿಯರಿಗೂ ವಾರ್ಷಿಕ ಸದಸ್ಯತ್ವ ನೀಡಿ ಅವರಿಗೂ ಅವಕಾಶ ಕಲ್ಪಿಸಲಿದ್ದೇವೆ. ದೇಹದ ಫಿಟ್ನೆಸ್‌ ಕಾಯ್ದುಕೊಳ್ಳು ಬ್ಯಾಡ್ಮಿಂಟನ್‌ ನಂಬರ್‌ ಒನ್‌ ಕ್ರೀಡೆ. ಬ್ಯಾಡ್ಮಿಂಟನ್‌ ಆಡುವುದರಿಂದ ದೇಹದ ಎಲ್ಲ ಅಂಗಗಳೂ ಚಟುವಟಿಕೆಯಿಂದ ಕೂಡಿರುತ್ತದೆ. ಇದರಿಂದಾಗಿ ನಮ್ಮಲ್ಲಿರುವ ಜಡತ್ವ ಹೊರಟು ಹೋಗುತ್ತದೆ. ದೇಶದ ಪ್ರತಿಯೊಂದು ನಗರಗಳಲ್ಲೂ, ವಿದೇಶಗಳಲ್ಲೂ ಇಂಥ ಅಕಾಡೆಮಿಗೆ ಪ್ರತಿಯೊಂದು ವಯೋಮಾನದವರು ಸೇರಿ ಬ್ಯಾಡ್ಮಿಂಟನ್‌ ಆಡುತ್ತಿರುತ್ತಾರೆ. ನಮ್ಮ ಕುಂದಾಪುರದ ಸುತ್ತಮುತ್ತಲಿನ ಜನರೂ ಈ ಒಲಿಂಪಿಕ್ಸ್‌ ಕ್ರೀಡೆಯಲ್ಲಿ ಪಾಲ್ಗೊಳ್ಳಲಿ ಎಂಬುದು ನಮ್ಮ ಉದ್ದೇಶ” ಎಂದು ಅಜಿತ್‌ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದರು.

ಕುಂದಾಪುರದ ಯುವಕರು ರಾಜ್ಯವನ್ನು ಪ್ರತಿನಿಧಸಬೇಕು:

“ನಮ್ಮ ಸೆಂಟರ್‌ನಲ್ಲಿ ಉತ್ತಮ ತರಬೇತುದಾರರು ಕಾರ್ಯನಿರ್ವಹಿಸಲಿದ್ದಾರೆ. ಬೆಳಗ್ಗಿನಿಂದ ಸಂಜೆಯವರೆಗೂ ಇಲ್ಲಿ ತರಬೇತಿಗೆ ಅವಕಾಶ ಇರುತ್ತದೆ, ನಮ್ಮ ಕಾಲದಲ್ಲಿ ಆಡಲು ಅವಕಾಶ ಇಲ್ಲದೆ ವಂಚಿತರಾದೆವು. ಇಲ್ಲಿಯ ಮಕ್ಕಳು ಮೊಬೈಲ್‌ ಚಟಕ್ಕೆ ಬಲಿಯಾಗದೆ. ಒಂದು ಒಲಿಂಪಿಕ್ಸ್‌ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮಾಡುವಂತಾಗಬೇಕು. ಅದಕ್ಕೆ ಪೂರಕವಾದ ಎಲ್ಲ ನೆರವನ್ನೂ ನೀಡಲಿದ್ದೇವೆ,” ಎಂದರು.

“ಇದು ಅಭಿವೃದ್ಧಿಹೊಂದುತ್ತಿರುವ ಪುಟ್ಟ ಪಟ್ಟಣ, ಇಲ್ಲಿ ಎಲ್ಲರಿಗೂ ದುಬಾರಿ ಬೆಲೆಯ ರಾಕೆಟ್‌, ಶೂ ಖರೀದಿಸಲು ಸಾಧ್ಯವಿರುವುದಿಲ್ಲ. ಈ ಕಾರಣಕ್ಕಾಗಿ ಬಾಡಿಗೆಗೆ ಅಗತ್ಯವಿರುವ ಕ್ರೀಡಾ ಸಾಮಗ್ರಿಗಳನ್ನು ನೀಡಲಿದ್ದೇವೆ. ಬಡ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಅವರಿಗೆ ತರಬೇತಿ ಪಡೆಯಲು ಅನುಕೂಲವಾದ ಸವಲತ್ತುಗಳನ್ನು ನೀಡಲಿದ್ದೇವೆ,” ಎಂದು ಅಜಿತ್‌ ಡಿಕೋಸ್ಟಾ ಹೇಳಿದರು,

ಈ ಅಕಾಡೆಮಿಗೆ ಕೋಟ್ಯಂತರ ರೂ. ವೆಚ್ಚ ಮಾಡಲಾಗಿದೆ. ಹಲವಾರು ಅಕಾಡೆಮಿಗಳನ್ನು ಗಮನಿಸಿ, ಅಲ್ಲಿಯ ಸೌಲಭ್ಯಗಳ ಬಗ್ಗೆ ಗಮನಹರಿಸಿ ಇಲ್ಲಿಯೂ ಉತ್ತಮ ಸೌಲಭ್ಯಗಳನ್ನು ನೀಡಲು ಯತ್ನಿಸಲಾಗಿದೆ, ಮೂರು ಕೋರ್ಟ್‌ಗಳನ್ನು ಬೆಂಗಳೂರಿನ ತಜ್ಞರು ನಿರ್ಮಿಸಿದ್ದಾರೆ. ಓದಿನ ನಡುವೆ ಒಂದಿಷ್ಟು ಸಮಯವನ್ನು ಈ ಕ್ರೀಡೆಗೆ ವಿನಿಯೋಗಿಸಿದರೆ ಉತ್ತಮ ಬ್ಯಾಡ್ಮಿಂಟನ್‌ ತಾರೆಗಳನ್ನು ಹುಟ್ಟುಹಾಕಬಹುದು, ಮುಂದಿನ ದಿನಗಳಲ್ಲಿ ಇಲ್ಲಿ ವಿವಿಧ ವಯೋಮಿತಿಯ ಟೂರ್ನಿಗಳನ್ನು ಆಯೋಜಿಸಿ ಇಲ್ಲಿ ಮಕ್ಕಳಿಗೆ ಅನುಭವಿ ಆಟಗಾರರೊಂದಿಗೆ ಆಡುವ ಅವಕಾಶ ಕಲ್ಪಿಸಲಾಗುವುದು. ರಾಜ್ಯದ ಅನುಭವಿ ಆಟಗಾರರು ಈ ಕೋರ್ಟನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಹ್ವಾಯ್‌ ಮತ್ತ್ಯಂತಕ್‌ ತಡ, ನಿಮ್ಮನಿ ಮಕ್ಕಳನ್ನ ಇಲ್ಲಿಗೆ ಸೇರ್ಸಿಯೆ,”

ಕುಟುಂಬದವರ ಬೆಂಬಲ: ಈ ಕೇಂದ್ರವನ್ನು ಸ್ಥಾಪಿಸಲು ಅಜಿತ್‌ ಅವರಿಗೆ ಗೆಳೆಯರು ಎಲ್ಲಾ ರೀತಿಯ ನೆರವನ್ನು ಮಾಡಿದ್ದಾರೆ. ಜೊತೆಯಲ್ಲಿ ಪತ್ನಿ ರೇಶ್ಮಾ ಡಿಕೋಸ್ಟಾ, ಮಗಳು ಅನಿಶಾ ಡಿಕೋಸ್ಟಾ ಹಾಗೂ ಮಗ ಅಮನ್‌ ಡಿಕೋಸ್ಟಾ ಕೂಡ ಪ್ರೋತ್ಸಾಹ ಮತ್ತು ಪ್ರೇರಣೆ ನೀಡಿದ್ದಾರೆ. ಅಮನ್‌ ಡಿಕೋಸ್ಟಾ ಕೊಲ್ಲಿ ರಾಷ್ಟ್ರಗಳಲ್ಲಿ ಸಿಬಿಎಸ್‌ಸಿ ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್‌ನಲ್ಲಿ ಪಾಲ್ಗೊಂಡ ಆಟಗಾರ. ಅಜಿತ್‌ ಈ ಸಂದರ್ಭದಲ್ಲಿ ತಂದೆ ಕೈತಾನ್‌ ಡಿಕೋಸ್ಟಾ ಹಾಗೂ ತಾಯಿ ಕಾಸೆಸ್‌ ಡಿಕೋಸ್ಟಾ ಅವರನ್ನೂ ಸ್ಮರಿಸಿದ್ದಾರೆ.

ಇಂದು ದೇಶವನ್ನು ಪ್ರತಿನಿಧಿಸುತ್ತಿರುವ ಅನೇಕ ಬ್ಯಾಡ್ಮಿಂಟನ್‌ ತಾರೆಗಳಲ್ಲಿ ಅನೇಕರು ಹಳ್ಳಿಗಳಿಂದ ಬಂದವರೇ, ಹಿರಿಯರ ಆಟವನ್ನು ನೋಡಿ, ಅವರ ತಂತ್ರಗಳನ್ನು ಅರಿತುಕೊಂಡು ಇಂಥ ಅಕಾಡೆಮಿಗಳಲ್ಲಿ ಕಾರ್ಯರೂಪಕ್ಕೆ ತಂದು ಪಳಗಿದರೆ ಕುಂದಾಪುರದಿಂದ ಉತ್ತಮ ಬ್ಯಾಡ್ಮಿಂಟನ್‌ ತಾರೆಗಳು ಹುಟ್ಟಿಕೊಳ್ಳಲು ಸಾಧ್ಯ, ಆ ನಿಟ್ಟಿನಲ್ಲಿ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ COSTA BADMINTON CENTER ನ ಯೋಜನೆಗಳು ಕಾರ್ಯರೂಪಕ್ಕೆ ಬರಲಿದೆ. ಎಲ್ಲ ಅಗತ್ಯ ಸೌಲಭ್ಯಗಳ ಜೊತೆಯಲ್ಲಿ ಇಲ್ಲಿ ಸೋಲಾರ್‌ ವಿದ್ಯುತ್ತನ್ನೂ ಅಳವಡಿಸಲಾಗಿದೆ.

Related Articles