ಉಡುಪಿ: ಶಾಲೆಯಲ್ಲಿ ದೈಹಿಕ ಶಿಕ್ಷಣ ಮತ್ತು ದೈಹಿಕ ಶಿಕ್ಷಕರಿಗೆ ಗೌರವ ಸಿಗುವವರೆಗೂ ನಾವು ಒಲಿಂಪಿಕ್ಸ್‌ನಲ್ಲಿ ಹೀಗೆ ಒಂದೊಂದು ಸುತ್ತಿಗೋ, ಒಂದೊಂದು ಚಿನ್ನಕ್ಕೋ ಖುಷಿ ಪಡಬೇಕಾದ ಅನಿವಾರ್ಯತೆ. ನಮಗೆ ಚಿನ್ನ ಗೆದ್ದವರಿಗೆ ನಗದು ಬಹುಮಾನ ಪ್ರಕಟಿಸುವ ಉತ್ಸಾಹ ಚಿನ್ನ ಗೆಲ್ಲಲು ಬೇಕಾದ ಸೌಲಭ್ಯ ಒದಗಿಸುವಲ್ಲಿ ಇಲ್ಲ. ಕ್ರಿಕೆಟ್ ಅಂಗಣದಲ್ಲಿ ಕ್ರಿಕೆಟ್ ಮ್ಯಾಚ್ ನೋಡಲು ಉತ್ಸಾಹ ತೋರುವ ನಮ್ಮ ಜನಪ್ರತಿನಿಧಿಗಳು, ಇತರ ಕ್ರೀಡಾಕೂಟಗಳ ಉದ್ಘಾಟನೆಗೂ ಬರುವುದಿಲ್ಲ. ಕರ್ನಾಟಕದಲ್ಲೇ ಸುಮಾರು 30,000 ಶಾಲೆಗಳಲ್ಲಿ ಕ್ರೀಡಾಂಗಣಗಳೇ ಇಲ್ಲ. ದೈಹಿಕ ಶಿಕ್ಷಣಕ್ಕೆ ಶಾಲೆಗಳಲ್ಲಿ ಪ್ರಾಮುಖ್ಯತೆ ನೀಡುವುದಿಲ್ಲ. ದೈಹಿಕ ಶಿಕ್ಷಣದ ವೇಳೆಯಲ್ಲಿ ಗಣಿತ, ವಿಜ್ಞಾನ ಅಥವಾ ಇನ್ನಿತರ ವಿಷಯಗಳ ಪಾಠವನ್ನು ಮಾಡಲಾಗುತ್ತಿದೆ. ಶಾಲೆಗಳಲ್ಲಿ ಇತರ ವಿಷಯಗಳ ಶಿಕ್ಷಕರಿಗೆ ನೀಡುತ್ತಿರುವ ಗೌರವ ದೈಹಿಕ ಶಿಕ್ಷಕರಿಗೆ ನೀಡುವುದು ಕಡಿಮೆ. ನಮ್ಮ ಶಿಕ್ಷಣದ ಪರಿಸ್ಥಿತಿ ಹೀಗಿರುವಾಗ ನಾವು ಒಲಿಂಪಿಕ್ಸ್‌ನಲ್ಲಿ ಪದಕ ನಿರೀಕ್ಷಿಸುವುದು ಸರಿಯೇ? You can not expect more Olympic medals unless making Physical Education is compulsory.
“ಅಯ್ಯೋ, ನನ್ನ ಮಗ ಬೆಳಿಗ್ಗೆ ಟ್ಯೂಷನ್, ಸಂಜೆ ಟ್ಯೂಷನ್ ಅವನನ್ನು ಎಂಜಿನಿಯರ್ ಮಾಡುವುದೇ ನಮ್ಮ ಉದ್ದೇಶ,” ಎಂದು ಮಕ್ಕಳನ್ನು ಓದುವ ಯಂತ್ರವನ್ನಾಗಿಸಿದ ನಾವು ಅವರ ದೈಹಿಕ ಸಾಮರ್ಥ್ಯದ ಬಗ್ಗೆ ಗಮನ ಹರಿಸಲೇ ಇಲ್ಲ. ಅನೇಕ ಶಾಲೆಗಳಲ್ಲಿ ಇಂದು 100% ಫಲಿತಾಂಶ ನಿರೀಕ್ಷಿಸಲಾಗುತ್ತಿದೆ. ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಮಕ್ಕಳ ಅಂಕ ಕಡಿಮೆಯಾಗುತ್ತದೆ ಎಂಬುದು ಅನೇಕರ ವಾದ. ಹೀಗಾಗಿ ಮಕ್ಕಳ ದೈಹಿಕ ಶಿಕ್ಷಣವನ್ನು ಪ್ರಾಥಮಿಕ ಹಂತದಲ್ಲೇ ಮೊಟಕುಗೊಳಿಸಲಾಗುತ್ತಿದೆ. ಕಾಲೇಜುಗಳಲ್ಲಂತೂ ಕ್ರಿಕೆಟ್ ಆಡವುದು ಬಿಟ್ಟರೆ ಬೇರೆ ಕ್ರೀಡಾ ಚಟುವಟಿಕೆಗಳಿಗೆ ವಾರ್ಷಿಕ ಕ್ರೀಡಾಕೂಟವೇ ಬರಬೇಕು.
ಚೀನಾ, ಕೋರಿಯಾ, ಜಪಾನ್, ಇಂಗ್ಲೆಂಡ್ ಹಾಗೂ ಅಮೆರಿಕದಂಥ ರಾಷ್ಟ್ರಗಳಲ್ಲಿ ಪ್ರಾಥಮಿಕ ಹಂತದಲ್ಲೇ ಕ್ರೀಡೆಯನ್ನು ಕಡ್ಡಾಯವಾಗಿ ಕಲಿಸಲಾಗುತ್ತಿದೆ. ಇದರಿಂದಾಗಿ ಮಕ್ಕಳು ಯಾವುದಾದರೂ ಒಂದು ಕ್ರೀಡೆಯಲ್ಲಿ ಪಳಗಿರುತ್ತಾರೆ. ಒಲಿಂಪಿಕ್ಸ್‌ನಲ್ಲಿ ವೇಗದ ಓಟದಲ್ಲಿ ದಾಖಲೆ ಬರೆಯುತ್ತಾರೆ ಎಂಬುದನ್ನು ಗ್ರಾಫಿಕ್ ಡಿಸೈನ್ ಮಾಡುವುದೇ ನಮ್ಮ ಕೆಲಸ. ಅದನ್ನು ಚಿರತೆಯ ವೇಗದೊಂದಿಗೆ ಹೋಲಿಸಿ ಬರೆದರೆ ನಮ್ಮ ಒಲಿಂಪಿಕ್ಸ್ ಮುಗಿದಂತೆ. ಮತ್ತೆ 140 ಕೋಟಿ ಜನಸಂಖ್ಯೆ ಇರುವ ರಾಷ್ಟ್ರದಲ್ಲಿ ಒಲಿಂಪಿಕ್ಸ್‌ಗೆ ಕೇವಲ 117 ಜನ ಎಂದು ಬೇಸರ ವ್ಯಕ್ತಪಡಿಸಿವುದು. ಮತ್ತೆ ಮರೆತುಬಿಡುವುದು.
ತಮ್ಮ ಮಕ್ಕಳಲ್ಲಿ ಸಾಮರ್ಥ್ಯ ಇಲ್ಲದಿದ್ದರೂ ಕೆಲವು ಹೆತ್ತವರು ಅವರನ್ನ ಕ್ರಿಕೆಟ್ ಅಕಾಡೆಮಿಗೆ ನೂಕುತ್ತಾರೆಯೇ ಹೊರತು ಇತರ ಕ್ರೀಡೆಗಳಿಗೆ ಕಳುಹಿಸುವುದಿಲ್ಲ. ಭಾರತದಲ್ಲಿ ಕ್ರೀಡೆ ಅಭಿವೃದ್ಧಿಯಾಗದಿದ್ದರೂ ಕ್ರೀಡೆಯ ಹೆಸರಿನಲ್ಲಿ ಸಾಕಷ್ಟು ಹಣ ಮಾಡುತ್ತಿದ್ದಾರೆ. ಉದಾಹರಣೆಗೆ ಇಲ್ಲಿ ಯಶಸ್ಸು ಕಾಣುವ ಲೀಗ್‌ಗಳು.
ನಾವು ಮಕ್ಕಳಿಗೆ ಕ್ರೀಡೆಯಿಂದ ಆರ್ಥಿಕ ಲಾಭದ ಬಗ್ಗೆ ಹೇಳುತ್ತೇವೆಯೇ ವಿನಃ ಅದರಿಂದ ಸಿಗುವ ದೈಹಿಕ ಲಾಭದ ಬಗ್ಗೆ ಮಾತನಾಡುವುದಿಲ್ಲ. ನಾವು ಪದಕ ಗೆದ್ದವರ ಬಗ್ಗೆ ಮಾತನಾಡುತ್ತೇವೆಯೇ ವಿನಃ ಸೋತವರ ಬದುಕಿನ ಬಗ್ಗೆ ಮಾತನಾಡುವುದಿಲ್ಲ. ಯಾವಾಗಲೂ 1, 2 ಮತ್ತು 3 ನೇ ಸ್ಥಾನದ ಬ್ಗೆ ಮಾತನಾಡಿದ ಉಳಿದುದನ್ನು ಮರೆತುಬಿಡುತ್ತೇವೆ. ಉತ್ತಮ ಓದಿನ ನಡುವೆಯೂ ಜಾಗತಿಕ ಕ್ರೀಡೆಯಲ್ಲಿ ಮಿಂಚಿದ ಅನೇಕ ಸಾಧಕರು ನಮ್ಮ ಕಣ್ಣ ಮುಂದೆಯೇ ಇದ್ದಾರೆ. ಇವುಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಬರೇ ಕೊಹ್ಲಿ, ಸಚಿನ್ ಅಂತಿದ್ದರೆ ಒಲಿಂಪಿಕ್ಸ್‌ನಲ್ಲಿ ಪದಕ ಸಿಗದು.
ಹಣ ನುಂಗುವುದೇ ನಮ್ಮ ಗುರಿ: ಕ್ರೀಡೆಯ ಮೂಲಕ ಹಣ ನುಂಗುವುರ ಬಗ್ಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ ಇಟ್ಟರೆ ಆ ವಿಭಾಗದ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಎಲ್ಲವೂ ನಮಗೇ ಸಿಗುತ್ತದೆ. ಅದರಲ್ಲಿ ಸಿಂಗಲ್, ಡಬಲ್ಸ್, ಮಿಶ್ರಡಬಲ್ಸ್, ಟೀಮ್ ಯಾವುದೇ ವಿಭಾಗವಿದ್ದರೂ ಪದಕ ನಮಗೇ ಸಿಗುವುದು ಖಚಿತ. ಕ್ರೀಡೆಯ ಮೂಲಕ ಹಣ ಮಾಡುವುದಿದ್ದರೆ ನಾವು ವಿಶ್ವ ಬ್ಯಾಂಕ್ ಸಾಲ ಮಾಡಿಯಾದರೂ ಖರ್ಚು ಮಾಡುತ್ತೇವೆ ಆದರೆ ಫಲಿತಾಂಶದ ಬಗ್ಗೆ ಮಾತನಾಡಬೇಡಿ. ಕೇಂದ್ರ ಸರಕಾರ ಖೇಲೋ ಇಂಡಿಯಾಕ್ಕೆ ಅಪಾರ ಪ್ರಮಾಣದಲ್ಲಿ ಹಣ ವ್ಯಯ ಮಾಡುತ್ತಿದೆ ಆದರೆ ಕ್ರೀಡಾ ಫಲಿತಾಂಶ ಮಾತ್ರ ಅಷ್ಟಕಷ್ಟೇ. ವಾರ್ಷಿಕ ಕ್ರೀಡಾಕೂಟಗಳು ನಡೆಯುತ್ತಿವೆ ಆದರೆ ದಿನದ ಅಭ್ಯಾಸಗಳು ನಡೆಯುತ್ತಿಲ್ಲ.
ಕ್ರೀಡಾ ಸಂಸ್ಥೆಗಳಲ್ಲಿ ಕ್ರೀಡಾಪಟುಗಳೇ ಅಧಿಕಾರ ನಡೆಸುತ್ತಿರಬೇಕು. ಯಾವುದೇ ರಾಜಕೀಯ ಪುಡಾರಿ ನಡೆಸುತ್ತಿದ್ದರೆ ಅಲ್ಲಿ ಅವ್ಯವಹಾರ ನಡೆಯುವುದು ಸ್ಪಷ್ಟ. ಭಾರತ ಇಂಥ ಸುಳಿಯಲ್ಲಿ ಹಲವು ವರ್ಷಗಳಿಂದ ಸಿಕ್ಕಿಕೊಂಡಿರುವ ಕಾರಣ ಇಲ್ಲಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ.
ಉತ್ತಮ ಕ್ರೀಡಾ ನೀತಿ, ರಾಷ್ಟ್ರೀಯ ಶಿಕ್ಷಣ ನೀತಿ ಇವುಗಳನ್ನು ಕಾರ್ಯರೂಪಕ್ಕೆ ತಂದರೆ ಮಾತ್ರ ಕ್ರೀಡೆಯಲ್ಲಿ ಯಶಸ್ಸು ಕಾಣಲು ಸಾಧ್ಯ. ಇಲ್ಲವಾದಲ್ಲಿ ದೈಹಿಕ ಶಿಕ್ಷಣದ ವೇಳೆ ಗಣಿತ ಶಿಕ್ಷಕಿ ಪಾಠ ಮಾಡಿಕೊಂಡು ಬೇಗ ಮನೆಗೆ ಸಿಲೆಬಸ್ ಮುಗಿಸುತ್ತಾರೆ.