Sunday, December 22, 2024

ಹಳ್ಳಿ ಹುಗ್ಡ ಪ್ಯಾಟಿಗ್‌ ಬಂದ ನ್ಯೂಜಿಲೆಂಡ್‌ನಲ್ಲಿ ಚಿನ್ನ ಗೆದ್ದ!

Sportsmail Desk:  ಈ ಶಿರೋನಾಮೆ ಓದುತ್ತಲೇ ಕನ್ನಡದ ರಿಯಾಲಿಟಿ ಶೋ “ಪ್ಯಾಟೇ ಮಂದಿ ಕಾಡಿಗ್‌ ಬಂದ್ರು” ನೆನಪಾಗಬಹುದು. ಪ್ಯಾಟೆ ಮಂದಿ ಕಾಡಿಗ್‌ ಬಂದು ನಿಮಗೆ ಮನೋರಂಜನೆ ನೀಡಿರಬಹುದು. ಆದರೆ ಈ ಕಾರ್ಯಕ್ರಮ ನಡೆಸಿಕೊಟ್ಟ ಶಿವಮೊಗ್ಗದ ಸೊರಬದ ರೈತನ ಮಗ ರಘು ರಾಮಪ್ಪ ಅವರು ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ನಡೆದ INBA Natural Bodybuilding World Championship Pacific Rim 2024 ದೇಹದಾರ್ಢ್ಯ ಸ್ಪರ್ಧೆಯಲ್ಲಿ 2 ಚಿನ್ನ ಮತ್ತು 2 ಬೆಳ್ಳಿಯ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. Sandalwood actor Raghu Ramappa won 2 Gold and 2 Silver INBA Natural Bodybuilding World Championship Auckland New Zealand.

ಆಕ್ಲೆಂಡ್‌ನಿಂದ sportsmail ಜೊತೆ ಮಾತನಾಡಿದ ರಘು ರಾಮಪ್ಪ ತಮ್ಮ ಬದುಕಿನ ಹಾದಿಯ ಹೈಲೈಟ್ಸ್‌ ತಿಳಿಸಿದ್ದಾರೆ. “ಪ್ರಾಯೋಜಕರು ಇಲ್ಲದೆ, ಗೆಳೆಯರು ನೀಡಿದ ನೆರವಿನಿಂದ ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದೇವೆ, ಶೋಧನ್‌ ರೈ ಇನ್ನೋರ್ವ ಸ್ಪರ್ಧಿ. ಮಾತನಾಡಿಸಿದ ನಿಮಗೂ ಧನ್ಯವಾದಗಳು,” ಎಂದರು.

“ನಮ್ಮ ದೇಶದ ಕ್ರೀಡೆ ಅಂದರೆ ಈಗ ಕ್ರಿಕೆಟ್‌ ಆಗಿಬಿಟ್ಟಿದೆ. ವರ್ಷದ ಪ್ರತಿ ದಿನವೂ ನಾವು ಕ್ರಿಕೆಟ್‌ ಬಗ್ಗೆ ಮಾತನಾಡುತ್ತೇವೆಯೇ ವಿನಃ ಬೇರೆ ಕ್ರೀಡೆಗಳ ಬಗ್ಗೆ ಚರ್ಚಿಸುವುದಿಲ್ಲ. ಇದು ಎಲ್ಲರಿಗೂ ತಿಳಿದ ಕಹಿ ಸತ್ಯ. ಬಾಡಿ ಬಿಲ್ಡಿಂಗ್‌ ಜಗತ್ತಿನ ಅತ್ಯಂತ ಕಠಿಣ ಕ್ರೀಡೆಗಳಲ್ಲಿ ಒಂದು. ದೇಹದ ಸಮತೋಲನವನ್ನು ಕಾಯ್ದುಕೊಳ್ಳುವುದು ಅಷ್ಟು ಸುಲಭವಲ್ಲ. 100 ಗ್ರಾಂ ಹೆಚ್ಚಾದುದಕ್ಕೆ ಒಲಿಂಪಿಕ್ಸ್‌ ಫೈನಲ್‌ ತಲುಪಿದರೂ ವಿನೇಶ್‌ ಫೋಗತ್‌ಗೆ ಪದಕ ಸಿಗಲಿಲ್ಲ. ಫಿಟ್ನೆಸ್‌ ಕಾಯ್ದುಕೊಳ್ಳುವುದು ಕಠಿಣ,” ಎಂದು ಹೇಳಿದರು.

ಪ್ಯಾಟೆ ಮಂದಿ ಕಾಡಿಗ್‌ ಬಂದ್ರು ರಿಯಾಲಿಟಿ ಶೋ ನಡೆಸಿಕೊಡುವಾಗ ರಘು ರಾಮಪ್ಪ ಅವರಳೊಗೊಬ್ಬ ಬಲಿಷ್ಠ ವ್ಯಕ್ತಿ ಇದ್ದಾನೆ ಎಂದು ಆ ಕ್ಷಣಕ್ಕೆ ಗೊತ್ತಾಗಲಿಲ್ಲ. ಸಾಧನೆಯ ಹಾದಿಯನ್ನೊಮ್ಮೆ ಹಿಂದಿರುಗಿ ನೋಡಿದಾಗ ಕಳೆದ 23 ವರ್ಷಗಳಿಂದ ದೇಹದಾರ್ಢ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೊತೆಯಲ್ಲಿ ಸಿನಿಮಾದಲ್ಲಿ ನಟಿಸಿ ಬದುಕನ್ನು ಕಟ್ಟಿಕೊಂಡಿರುತ್ತಾರೆ. ಉತ್ತಮ ಟ್ರೈನರ್‌ ಆಗಿರುವ ರಘು ಬೆಂಗಳೂರಿನಲ್ಲಿ ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಅನೇಕರಿಗೆ ಪರ್ಸನಲ್‌ ಟ್ರೈನರ್‌ ಆಗಿ ಕೆಲಸ ಮಾಡಿದ್ದಾರೆ.

ತಂದೆಯಂತೆ ಮಗ: ರಘು ಅವರ ತಂದೆ ರಾಮಪ್ಪ ಐಟಿಐನಲ್ಲಿ ಉದ್ಯೋಗಿಯಾಗಿದ್ದವರು. ಈಗ ಸೊರಬದಲ್ಲಿ ಕೃಷಿ ಮಾಡಿಕೊಂಡಿದ್ದಾರೆ. ರಾಮಪ್ಪ ಕೂಡ ದೇಹದಾರ್ಢ್ಯ ಪಟು. ಹಲವಾರು ಚಾಂಪಿಯನ್‌ಷಿಪ್‌ಗಳಲ್ಲಿ ಪ್ರಶಸ್ತಿ ಗೆದ್ದ ಸಾಧಕ. ಇದರಿಂದಾಗಿ ರಘು ಅವರಿಗೆ ತಂದೆಯೇ ಸ್ಫೂರ್ತಿಯಾದರು. ರಿಯಾಲಿಟಿ ಶೋ ಹಾಗೂ ಸಿನಿಮಾಗಳಲ್ಲಿ ನಟಿಸಿದರೂ ರಘು ಅವರಿಗೆ ಹೆಚ್ಚು ಖುಷಿ ಕೊಟ್ಟಿದ್ದು ಬಾಡಿ ಬಿಲ್ಡಿಂಗ್‌. “ನಮ್ಮ ತಂದೆಯೇ ನನಗೆ ಸ್ಫೂರ್ತಿ ಮತ್ತು ಗುರು. ಅವರ ಸಾಧನೆಯನ್ನು ನೋಡಿ ಅವರಂತೆಯೇ ಆಗಬೇಕು ಎಂದು ಕನಸು ಕಂಡೆ. ಆ ಕನಸು ಈಗ ನನಸಾಗಿದೆ,” ಎಂದು ರಘು ರಾಮಪ್ಪ ಹೇಳಿದ್ದಾರೆ.

ಪೊಲೀಸ್‌ ಕಮಿಷನರ್‌ ದಯಾನಂದ್‌, ರಘು ದೀಕ್ಷಿತ್‌ ನೆರವು: ರಾಜ್ಯದಲ್ಲಿ ಇತರ ಕ್ರೀಡೆಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲ ಎಂಬುದು ನಿತ್ಯದ ಮಾತು. ಪ್ರೋತ್ಸಾಹದ ವಿಷಯದಲ್ಲಿ ಸರಕಾರದ ಆಯ್ಕೆಯೂ ವಿಭಿನ್ನವಾಗಿದೆ. ಒಲಿಂಪಿಕ್ಸ್‌ ಹೊರತಾದ ಕ್ರೀಡೆ ಕ್ರೀಡೆಯೇ ಅಲ್ಲ ಎಂಬ ಮನಸ್ಥಿತಿ ನಿರ್ಮಾಣವಾಗಿದೆ. ರಘು ರಾಮಪ್ಪ ನ್ಯೂಜಿಲೆಂಡ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಲ್ಲಿರುವ ಹಲವಾರು ಕಾರ್ಪೋರೇಟ್‌ ವಲಯದ ಪ್ರಮುಖರನ್ನು ಭೇಟಿಯಾಗಿದ್ದರು, ಆದರೆ ಯಾರೂ ನೆರವು ನೀಡಲಿಲ್ಲ. “ಮನಸ್ಸಿಗೆ ಬಹಳ ಬೇಸರವಾಯಿತು. ಕಾರ್ಪೋರೇಟ್‌ ವಲಯದ ಹಲವಾರು ಪ್ರಮುಖರನ್ನು ಪ್ರಾಯೋಜಕತ್ವ ಕೇಳಿಕೊಂಡು ಭೇಟಿಯಾದೆ. ಆದರೆ ಎಲ್ಲರೂ ನಿರಾಕರಿಸಿದರು. ಅದರೆ ನೆರವು ನೀಡಿದ್ದು ನಮ್ಮ ಬೆಂಗಳೂರು ಪೊಲೀಸ್‌ ಕಮಿಷನರ್‌ ದಯಾನಂದ್‌ ಸರ್‌ ಹಾಗೂ ಖ್ಯಾತ ಹಾಡುಗಾರ ರಘು ದೀಕ್ಷಿತ್‌. ಇವರಲ್ಲಿ ನಾನು ನೆರವು ಕೇಳಲಿಲ್ಲ. ಆದರೆ ಪರಿಸ್ಥಿತಿಯನ್ನು ಅರಿತು ಅವರು ಪ್ರೋತ್ಸಾಹ ನೀಡಿದರು,” ಎನ್ನುತ್ತಾರೆ ರಘು ರಾಮಪ್ಪ.

ಮಿಸ್ಟರ್‌ ಇಂಡಿಯಾ!:  ಮೇ ತಿಂಗಳಲ್ಲಿ ಸಿಂಗಾಪುರದಲ್ಲಿ ನಡೆದ ಏಷ್ಯಾ ವಲಯದ ಚಾಂಪಿಯನ್‌ಷಿಪ್‌ನಲ್ಲಿ 1 ಚಿನ್ನ ಮತ್ತು 2 ಬೆಳ್ಳಿ ಪದಕ ಗೆಲ್ಲುವ ಮೂಲಕ ರಘು ರಾಮಪ್ಪ ನ್ಯೂಜಿಲೆಂಡ್‌ ವಿಶ್ವ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿದ್ದರು. ಈಗ ಅಮೆರಿಕದಲ್ಲಿ ನಡೆಯಲಿರುವ ನ್ಯಾಚುರಲ್‌ ಒಲಂಪಿಯಾದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮಜಲ್‌ ಮೇನಿಯಾ ರಘು ರಾಮಪ್ಪ ಮಿಸ್ಟರ್‌ ಇಂಡಿಯಾ ಗೌರವಕ್ಕೆ ಪಾತ್ರರಾಗಿದ್ದಾರೆ.

Related Articles