Sunday, December 22, 2024

198 ಅಂತಾರಾಷ್ಟ್ರೀಯ ಪಂದ್ಯಗಳು, 3 ಒಲಿಂಪಿಕ್ಸ್‌ ಕರ್ನಾಟಕದಲ್ಲಿ ಇದಕ್ಕೆ ಬೆಲೆಯೇ ಇಲ್ಲ!

ಬೆಂಗಳೂರು: 198 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ರೆಫರಿಯಾಗಿ ಪಾಲ್ಗೊಂಡು, ಮೂರು ಬಾರಿ ಒಲಿಂಪಿಕ್ಸ್‌ನಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಿ, ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್‌ ನೀಡುವ ಗೋಲ್ಡನ್‌ ವಿಝಿಲ್‌ ಗೌರವಕ್ಕೆ ಪಾತ್ರರಾದ ಭಾರತದ ಮೂವರು ರೆಫರಿಗಳಲ್ಲಿ ಒಬ್ಬರೆನಿಸಿ, ಇನ್ನೆರಡು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಿದರೆ ಡಬಲ್‌ ಗೋಲ್ಡನ್‌ ವಿಝಿಲ್‌ ಹಾಗೂ 200 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪೂರೈಸಿದಿ ಏಷ್ಯಾದ ಮೊದಲ ರೆಫರಿ ಎಂಬ ಗೌರವಕ್ಕೆ ಪಾತ್ರರಾಗಲಿರುವ ಕರ್ನಾಟಕದ ಹಾಕಿ ರೆಫರಿ ರಘುಪ್ರಸಾದ್‌ ಆರ್‌.ವಿ. ಅವರನ್ನು ಕನ್ನಡಿಗರಾದ ನಾವು ಗುರುತಿಸದೆ, ಗೌರವಿಸದೆ ಮೌನವಾಗಿದ್ದೇವೆ. ಇದು ನಮ್ಮ ಕ್ರೀಡಾ ಪ್ರೀತಿ ಮತ್ತು ಕ್ರೀಡಾ ಪ್ರೋತ್ಸಾಹ. Karnataka forgot to recognize International Hockey referee who officiated 198 internationals and 3 Olympics.

ಏರ್‌ಕ್ರಾಫ್ಟ್‌ ಮೇಂಟನೆನ್ಸ್‌ ಎಂಜಿನಿಯರ್‌ ಅಧ್ಯಯನ ಮಾಡಿರುವ ರಘುಪ್ರಸಾದ್‌ ಅವರಿಗೆ ಉದ್ಯೋಗ ಸಿಗದ ಕಾರಣ ಕರ್ನಾಟಕ ಹಾಕಿ ಸಂಸ್ಥೆಯಲ್ಲಿ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಕಿಯ ಬಗ್ಗೆ ಇರುವ ಅಪಾರ ಪ್ರೀತಿ ಮತ್ತು ಕಾಳಜಿ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಯುವಂತೆ ಮಾಡಿತು. ಹಾಕಿ ಅಂಗಣದಲ್ಲಿ ಒಬ್ಬ ಹಾಕಿ ಆಟಗಾರ ಎಷ್ಟು ಕಾರ್ಯನಿರ್ವಹಿಸುತ್ತಾನೋ ಅದಕ್ಕಿಂತ ಹೆಚ್ಚು ಚುರುಕಿನಿಂದ ರೆಫರಿ ಕಾರ್ಯನಿರ್ವಹಿಸಬೇಕಾಗುತ್ತದೆ. ಒಂದು ಪಂದ್ಯದ ಯಶಸ್ಸಿನಲ್ಲಿ ಒಬ್ಬ ಆಟಗಾರ ಎಷ್ಟು ಪ್ರಮುಖ ಪಾತ್ರವಹಿಸುತ್ತಾನೋ ಒಂದು ಟೂರ್ನಿಯ ಯಶಸ್ಸಿನಲ್ಲಿ ರೆಫರಿ ಅದಕ್ಕಿಂತಲೂ ಹೆಚ್ಚು ಜಬಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಾನೆ. ಆದರೆ ನಾವು ಗುರುತಿಸುವಾಗ ಕೇವಲ ಹಾಕಿ ಆಟಗಾರರನ್ನು ಗೌರವಿಸಿ ರೆಫರಿಯನ್ನು ಮರೆಯುತ್ತೇವೆ.

ಮೊನ್ನೆ ಕರ್ನಾಟಕ ಸರಕಾರ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಸಂದರ್ಭದಲ್ಲಿ ಕ್ರೀಡಾ ಸಾಧಕರನ್ನು ಗೌರವಿಸಿತು. ಆದರೆ ರಘುಪ್ರಸಾದ್‌ ಅವರ ನೆನಪಾಗಲೇ ಇಲ್ಲ. ಕರ್ನಾಟಕದಲ್ಲಿ ಒಲಿಂಪಿಕ್‌ ಹಾಕಿ ಆಟಗಾರರಿದ್ದಾರೆ, ಕ್ರೀಡೆಯಲ್ಲಿ ಉನ್ನತ ಹುದ್ದೆ ತಲುಪಿದವರಿದ್ದಾರೆ ಅವರಿಗೂ ಕೂಡ ಇಂಥ ಒಬ್ಬ ಸಾಧಕನನ್ನು ಗುರುತಿಸಲು ನೆನಪಾಗದಿದ್ದುದು ಈ ರಾಜ್ಯದ ಕ್ರೀಡಾ ದುರಂತ.

ಗೌರವದ ಕೆಲಸ: ಅಂತಾರಾಷ್ಟ್ರೀಯ ಹಾಕಿ ಪಂದ್ಯಗಳಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಿದರೆ ಯಾವುದೇ ರೀತಿಯ ವೇತನ ನೀಡುವುದಿಲ್ಲ. ಬದಲಾಗಿ ದಿನದ ಭತ್ಯೆ ಎಂದು 100 ಡಾಲರ್‌ ನೀಡುತ್ತಾರೆ. ವಸತಿ ಸೌಲಭ್ಯ ಕೊಟ್ಟರೂ ಊಟ ರೆಫರಿಗಳೇ ನೋಡಿಕೊಳ್ಳಬೇಕು. ಇದು ಒಂದು ಗೌರವದ ಕೆಲಸ ನಿಜ ಆದರೆ ಇದಕ್ಕೆ ಎಷ್ಟು ಶ್ರಮ ಪಡಬೇಕು, ಎಷ್ಟು ತ್ಯಾಗ ಇರುತ್ತದೆ? ಎಂಬುದನ್ನು ರೆಫರಿಗಳು ಮಾತ್ರ ಬಲ್ಲರು. ಒಂದು ಕ್ರೀಡೆಯ ಯಶಸ್ಸಿನ ಹಿಂದೆ ಬರೇ ಆಟಗಾರರು ಮಾತ್ರ ಇರುವುದಿಲ್ಲ. ಕೋಚ್‌, ರೆಫರಿ, ಸಂಸ್ಥೆಗಳು, ಸರಕಾರ ಎಲ್ಲರೂ ಪಾತ್ರವಹಿಸಿರುತ್ತಾರೆ. ಆದರೆ ರೆಫರಿಗಳನ್ನು ಮರೆತು ಹಾಕಿಯ ಯಶಸ್ಸನ್ನು ಗುಣಗಾನ ಮಾಡುವುದನ್ನು ಊಹಿಸುವುದು ಕಷ್ಟ. ಕರ್ನಾಟಕ ರಾಜ್ಯ ಸರಕಾರ ಇತ್ತೀಚಿಗೆ 12 ಆಟಗಾರರಿಗೆ ಉದ್ಯೋಗ ನೀಡಿತು. ಉದ್ಯೋಗ ನೀಡುವಾಗ ಇಂಥ ರೆಫರಿಗಳ ಸಾಧನೆಯನ್ನೂ ಪರಿಗಣಿಸುವುದು ಕ್ರೀಡಾ ಸ್ಫೂರ್ತಿಗೆ ಒತ್ತು ನೀಡಿದಂತಾಗುತ್ತದೆ.

ರಘುಪ್ರಸಾದ್‌ ಅವರಿಗೆ ಈಗ 46 ವರ್ಷ ಇನ್ನು ಒಂದು ವರ್ಷ ಕಾಲ ಅವರು ಹಾಕಿ ರೆಫರಿಯಾಗಿ ಕಾರ್ಯನಿರ್ವಹಿಸಬಹುದು. ರೆಫರಿ ನಿವೃತ್ತಿಯ ವಯಸ್ಸು 47. ರಘುಪ್ರಸಾದ್‌ ಅವರ ಸಾಧನೆ ಏನೆಂಬುದು ಹಾಕಿ ಜಗತ್ತಿಗೆ ಗೊತ್ತಿದೆ. ಅದು ಹಸಿರಾಗಿಯೇ ಇರುತ್ತದೆ. ಕಾಲಚಕ್ರದಲ್ಲಿ ಬದುಕಿನ ಪಂದ್ಯ ಮುಗಿಯುತ್ತಿದ್ದಂತೆ ಪ್ರತಿಯೊಬ್ಬರೂ ಅಂಗಣದಿಂದ ನಿರ್ಗಮಿಸಬೇಕಾಗುತ್ತದೆ. ಆಗಲಾದರೂ ಇಂಥ ಸಾಧಕರನ್ನು ಗುರುತಿಸುವ ಕಾರ್ಯ ನಡೆಯಬಹುದೆಂಬುದು ಧನಾತ್ಮಕ ಯೋಚನೆ.

Related Articles