Friday, October 18, 2024

ಕರ್ನಾಟಕ ರಣಜಿ ತಂಡದ ಮೆಕ್ಯಾನಿಕಲ್‌ ಬೌಲರ್ ಕೌಶಿಕ್‌ ವಾಸುಕಿ

ಬೆಂಗಳೂರು: ಭಾರತ ಕ್ರಿಕೆಟ್‌ ತಂಡದಲ್ಲಿ ಜಾವಗಲ್‌ ಶ್ರೀನಾಥ್‌, ಅನಿಲ್‌ ಕುಂಬ್ಳೆ, ರವಿಚಂದ್ರನ್‌ ಅಶ್ವಿನ್‌ ಅವರಂಥ ಎಂಜಿನಿಯರ್‌ಗಳನ್ನು ನೋಡಿದ್ದೇವೆ. ಎಂಜಿನಿಯರಿಂಗ್‌ ಓದಿದರೂ ಕ್ರಿಕೆಟ್‌ನಲ್ಲಿ ಬದುಕು ರೂಪಿಸಿಕೊಂಡ ಶ್ರೇಷ್ಠ ಕ್ರಿಕೆಟಿಗರಿವರು. ಅದೇ ರೀತಿ ಕರ್ನಾಟಕ ರಣಜಿ ತಂಡದಲ್ಲಿ ಒಬ್ಬ ಎಂಜಿನಿಯರ್‌ ಬೌಲರ್‌ ಇದ್ದಾರೆ. ಹೆಸರು ಕೌಶಿಕ್‌‌ ವಾಸುಕಿ. Koushik Vasuki a Mechanical Engineer and a match winning bowler for Karnataka Ranji team.    

ಇದುವರೆಗೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಧ್ಯಮ ವೇಗಿ ಕೌಶಿಕ್‌ 70 ವಿಕೆಟ್‌ಗಳನ್ನು ಗಳಿಸಿ ಮುಂದೊಂದು ದಿನ ಭಾರತ ತಂಡವನ್ನು ಪ್ರತಿನಿಧಿಸಲು ಉತ್ಸುಕರಾಗಿದ್ದಾರೆ. ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿ ಮುಗಿಸಿರುವ ಕೌಶಿಕ್‌ ಕ್ರಿಕೆಟ್‌ ಆರಂಭಿಸಿದ್ದು ಟೆನಿಸ್‌ಬಾಲ್‌ ಕ್ರಿಕೆಟ್‌ ಮೂಲಕ. ಮೈಸೂರು ಮೂಲದ ಕೌಶಿಕ್‌ 2019ರಲ್ಲಿ ಕರ್ನಾಟಕ ರಣಜಿ ತಂಡವನ್ನು ಸೇರಿದವರು. ಲೆದರ್‌ ಬಾಲ್‌ ಕ್ರಿಕೆಟ್‌ ಆಡುವುದಕ್ಕೆ ಮುನ್ನ ಟೆನಿಸ್‌ಬಾಲ್‌ ಕ್ರಿಕೆಟ್‌ನಲ್ಲಿ ಹೆಚ್ಚು ಬೇಡಿಕೆ ಹೊಂದಿದ್ದ ಆಟಗಾರ. ತಂದೆ ವಾಸುಕಿಯವರು ರೈಲ್‌ ವೀಲ್‌ ಫ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿದ್ದ ಕಾರಣ ಯಶವಂತಪುರದ ಸುತ್ತಮುತ್ತ ಕೌಶಿಕ್‌ ಜನಪ್ರಿಯ ಬೌಲರ್‌ ಎನಿಸಿದ್ದರು. ನಂತರ ಬೆಂಗಳೂರು ಸ್ಪೋರ್ಟ್ಸ್‌ ಕ್ಲಬ್‌, ಬೆಂಗಳೂರು ಕ್ರಿಕೆಟರ್ಸ್‌, ಸರ್‌ ಸಯ್ಯದ್‌ ಕ್ರಿಕೆಟರ್ಸ್‌ ಮೊದಲಾದ ತಂಡಗಳಲ್ಲಿ ಆಡಿ ಈಗ ರಾಜಾಜಿನಗರ ಕ್ರಿಕೆಟರ್ಸ್‌ ಪರ ಲೀಗ್‌ ಪಂದ್ಯಗಳಲ್ಲಿ ಆಡುತ್ತಿದ್ದಾರೆ.

ಅಮೆಜಾನ್‌ನಲ್ಲಿ ಉದ್ಯೋಗಿ: ಉತ್ತಮ ಬೌಲಿಂಗ್‌ ಪ್ರದರ್ಶಿಸುತ್ತಿದ್ದ ಕೌಶಿಕ್‌, ಎಸ್‌ವಿಸಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಪದವಿ ಮುಗಿಸಿದ ಬಳಿಕ ಅಮೆಜಾನ್‌ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು. ನಂತರ ಕ್ರಿಕೆಟ್‌ನಲ್ಲಿ ತೋರಿದ ಸಾಧನೆಗೆ ಜಿಎಸ್‌ಟಿ ಕಸ್ಟಮ್ಸ್‌ನಲ್ಲಿ ಉದ್ಯೋಗ ಸಿಕ್ಕಿತು. ಈಗ ಕರ್ನಾಟಕ ರಣಜಿ ತಂಡದ ಪ್ರಮುಖ ಬೌಲರ್‌ ಆಗಿರುವ ಕೌಶಿಕ್‌ಗೆ ಭಾರತ ತಂಡವನ್ನು ಪ್ರತಿನಿಧಿಸುವ ಹಂಬಲ. “ಪ್ರತಿಯೊಬ್ಬ ಕ್ರಿಕೆಟಿಗರೂ ಕಾಣುವಂತೆ ನಾನು ಕೂಡ ಭಾರತ ತಂಡವನ್ನು ಪ್ರತಿನಿಧಿಸುವ ಬಗ್ಗೆ ಕನಸು ಕಂಡಿರುವೆ. ಆ ಕನಸು ಯಾವಾಗ ನನಸಾಗುತ್ತದೋ ತಿಳಿಯದು. ರಣಜಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆಡುವ ಹಂಬಲವಿದೆ. ಆದರೆ ಇನ್ನೂ ಅವಕಾಶ ಸಿಗಲಿಲ್ಲ. ಇದೆಲ್ಲಕ್ಕಾಗಿ ವಯಸ್ಸು ಕಾಯುವುದಿಲ್ಲ,” ಎನ್ನುತ್ತಾರೆ 32 ವರ್ಷ ಪ್ರಾಯದ ಬೌಲರ್‌ ಕೌಶಿಕ್‌.

ಕೌಶಿಕ್‌ ತಂದೆ ವಾಸುಕಿ ಹಾಸನ ಮೂಲದವರು, ತಾಯಿ ಮೈಸೂರಿನ ಬೊಕ್ಕಳ್ಳಿಯ ಕೃಷಿ ಕುಟುಂಬದಿಂದ ಬಂದವರು. “ನನ್ನ ಹೆತ್ತವರು ಕ್ರಿಕೆಟ್‌ನಲ್ಲಿ ಮಾಡಿರುವ ಸಾಧನೆಯ ಬಗ್ಗೆ ತೃಪ್ತಿ ಪಟ್ಟಿದ್ದಾರೆ. ಕರ್ನಾಟಕ ತಂಡವನ್ನು ಪ್ರತಿನಿಧಿಸುವುದು ಹೆಮ್ಮೆಯ ಸಂಗತಿ. ಈ ವರ್ಷ ನಮ್ಮ ತಂಡ ಉತ್ತಮ ರೀತಿಯಲ್ಲಿ ಸಮತೋಲನದಿಂದ ಕೂಡಿದೆ. ಕಳೆದ ಬಾರಿ ಸ್ವಲ್ಪ ಯುವ ಆಟಗಾರರ ಪ್ರಮಾಣ ಹೆಚ್ಚಿತ್ತು. ಈ ಬಾರಿ ವೇಗ ಮತ್ತು ಸ್ಪಿನ್‌ ಬೌಲರ್‌ಗಳ ಬ್ಯಾಲೆನ್ಸ್‌ ಇದೆ. ನಮ್ಮ ತಂಡ ಉತ್ತಮ ಪ್ರದರ್ಶನ ತೋರುತ್ತದೆ ಎಂಬ ಆತ್ಮವಿಶ್ವಾಸವಿದೆ. ಕರ್ನಾಟಕ ಮತ್ತೊಮ್ಮೆ ರಣಜಿ ಚಾಂಪಿಯನ್‌ ಆಗುವುದನ್ನು ನೋಡಿ ಸಂಭ್ರಮಿಸಬೇಕು,” ಎಂದು ಹಿತಮಿತ ಮೃದು ವಚನದ ಕೌಶಿಕ್‌ ಅವರ ಅಭಿಪ್ರಾಯ.

ಸಿಕ್ಕ ಅವಕಾಶದಲ್ಲೇ ಬದುಕನ್ನು ಕಟ್ಟಿಕೊಳ್ಳಬೇಕು: ಕೌಶಿಕ್‌ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಓದಿದರೂ ಅಮೆಜಾನ್‌ ಕಂಪೆನಿಯಲ್ಲಿ ಕಂಟೆಂಟ್‌ ವಿಭಾಗದಲ್ಲಿ ಕೆಲಸ ಮಾಡಿರುತ್ತಾರೆ. ಇದು ನಿಮ್ಮ ಶಿಕ್ಷಣಕ್ಕೆ ವಿರುದ್ಧವಾಗಿರಲಿಲ್ಲವೇ? ಎಂದು ಕೇಳಿದಾಗ, “ಬದುಕಿನಲ್ಲಿ ಎಲ್ಲವೂ ನಾವು ನಿರಿಕ್ಷಿಸಿದಂತೆ ಆಗುವುದಿಲ್ಲ. 17 ವರಯಸ್ಸಿನವರೆಗೂ ಕ್ಲಬ್‌ ಕ್ರಿಕೆಟ್‌ ಆಡಿರಲಿಲ್ಲ. ನನ್ನದು ತಡವಾದ ಪ್ರವೇಶ. ಉದ್ಯೋಗದ ವಿಷಯದಲ್ಲೂ ಹಾಗೆಯೇ. ಸಿಕ್ಕ ಕೆಲಸವನ್ನು ಮಾಡಬೇಕು, ಅಷ್ಟೆ. ಆಮೇಲೆ ಎಲ್ಲವೂ ಸರಿಹೋಗುತ್ತದೆ ಎಂಬ ನಂಬಿಕೆ. ಎಲ್ಲವೂ ಹಾಗೆಯೇ ಆಯಿತು. ಈಗ ಜಿಎಸ್‌ಟಿ ಮತ್ತು ಕಸ್ಟಮ್ಸ್‌ನಲ್ಲಿ ಕೆಲಸ ಮಾಡುತ್ತ ಕ್ರಿಕೆಟ್‌ ಆಡುತ್ತಿರುವೆ. ಖುಷಿ ಇದೆ,” ಎನ್ನುತ್ತಾರೆ ಕೌಶಿಕ್‌.

ಕೌಶಿಕ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 70, ಲಿಸ್ಟ್‌ ಎ ನಲ್ಲಿ 64 ಮತ್ತು ಟಿ20ಯಲ್ಲಿ 40 ವಿಕೆಟ್‌ಗಳನ್ನು ಗಳಿಸಿರುತ್ತಾರೆ. ಪಂದ್ಯವೊಂದರಲ್ಲಿ 41 ರನ್‌ಗೆ 7 ವಿಕೆಟ್‌ ಗಳಿಸಿರುವುದು ಅವರ ಜೀವನಶ್ರೇಷ್ಠ ಸಾಧನೆಯಾಗಿದೆ. ಕರ್ನಾಟಕ ಪ್ರೀಮಿಯರ್‌ ಲೀಗ್‌ ಮಹಾರಾಜ ಟ್ರೋಫಿಯಲ್ಲಿ ಈ ಬಾರಿ ಶಿವಮೊಗ್ಗ ಲಯನ್ಸ್‌ ಪರ ಆಡಿರುವ ಕೌಶಿಕ್‌ ಈ ಹಿಂದೆ ಶಾಮನೂರು ದಾವಣಗೆರೆ ಡೈಮಂಡ್ಸ್‌, ಬೆಂಗಳೂರು ಬ್ಲಾಸ್ಟರ್ಸ್‌, ಹುಬ್ಬಳ್ಳಿ ಟೈಗರ್ಸ್‌, ಮೈಸೂರು ವಾರಿಯರ್ಸ್‌ ತಂಡಗಳ ಪರ ಆಡಿದ್ದರು.

Related Articles