Friday, October 18, 2024

ಕರ್ನಾಟಕದ ರೇಸ್‌ ವಾಕರ್‌ ಅಂಬಿಕಾ ಕೋಳಿಯ ಕಷ್ಟ ಕೇಳಿ!

ಕಲಬುರಗಿ: ಕಲ್ಯಾಣ ಕರ್ನಾಟಕವನ್ನು ಕಲ್ಯಾಣ ಮಾಡುತ್ತೇವೆ ಎಂದು ಹೇಳಿದವರು ಕಲ್ಯಾಣವಾಗಿ ಆರಾಮವಾಗಿರಬಹುದು, ಆದರೆ ಇಲ್ಲಿರುವ ಕಷ್ಟಗಳಿಗೆ ಮುಕ್ತಿ ಸಿಕ್ಕಿಲ್ಲ. ಈಗ ಹೇಳ ಹೊರಟಿರುವುದು ಒಬ್ಬ ಪ್ರತಿಭಾವಂತ ಯುವ ರೇಸ್‌ವಾಕರ್‌ ಬದುಕಿನ ಬಗ್ಗೆ. ಒಲಿಂಪಿಕ್ಸ್‌ ಕ್ರೀಡೆಯಾಗಿರುವ ರೇಸ್‌ವಾಕ್‌ನಲ್ಲಿ ಕಲಬುರಗಿ ಜಿಲ್ಲೆಯ ಅಫ್ಜಲ್‌ಪುರ ತಾಲೂಕಿನ ಕರಜಗಿ ಗ್ರಾಮದ ಅಂಬಿಕಾ ಕೋಳಿಯ ಬಗ್ಗೆ. ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವ ಈ ಸಾಧಕಿಗೆ ಮುಂದಿನ ಯಶಸ್ಸಿನ ಹಾದಿಗಾಗಿ ನೆರವು ಬೇಕಾಗಿದೆ. This Kalaburagi race walker Ambika Koli need your support for her sports achievement.

ಅಂಬಿಕಾ ಕೋಳಿ ರಾಜ್ಯ ಮಟ್ಟದಲ್ಲಿ 5 ಚಿನ್ನ ಹಾಗೂ ದಕ್ಷಿಣ ವಲಯದಲ್ಲಿ ಬೆಳ್ಳಿ ಗೆದ್ದಿರುವ ಈ ಗ್ರಾಮೀಣ ಪ್ರತಿಭೆ ಸದ್ಯ ಆಂದ್ರಪ್ರದೇಶದ ಗುಂಟೂರಿನಲ್ಲಿ ನಡೆಯಲಿರುವ ರೇಸ್‌ವಾಕ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಮೂಡಬಿದಿರೆಯ ಆಳ್ವಾಸ್‌‌ ಶಿಕ್ಷಣ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ಕಾರ್ಮಸ್‌ ಓದುತ್ತಿರುವ ಅಂಬಿಕಾ 34ನೇ ದಕ್ಷಿಣ ವಲಯ ರೇಸ್‌ವಾಕ್‌ನಲ್ಲಿ ಬೆಳ್ಳಿ ಗೆದ್ದಿರುತ್ತಾರೆ. 67ನೇ ರಾಷ್ಟ್ರೀಯ ಸ್ಕೂಲ್‌ ಗೇಮ್ಸ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ಅಂಬಿಕಾ, ಮಂಗಳೂರಿನಲ್ಲಿ ನಡೆದ ರಾಜ್ಯ ಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ 5000 ಮೀ. ರೇಸ್‌ವಾಕ್‌ನಲ್ಲಿ ಚಿನ್ನದ ಸಾಧನೆ ಮಾಡಿರುತ್ತಾರೆ. ಮೈಸೂರಿನಲ್ಲಿ ನಡೆದ 23 ವರ್ಷ ವಯೋಮಿತಿಯ ರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ 10000 ಮೀ. ರೇಸ್‌ವಾಕ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಅಂಬಿಕಾ ಕಲಬುರಗಿಗೆ ಕೀರ್ತಿ ತಂದಿರುತ್ತಾರೆ.

ಕಬಡ್ಡಿ ಚಾಂಪಿಯನ್‌ ಅಮ್ಮ: ಅಂಬಿಕಾ ಅವರ ತಾಯಿ ಸವಿತಾ ಹೊರ್ತಿ ರಾಜ್ಯ ಮಟ್ಟದ ಕಬಡ್ಡಿ ಆಟಗಾರ್ತಿ. ಚಿಕ್ಕಂದಿನಲ್ಲೇ ಮದುವೆ ಮಾಡಿದರು. ಎರಡು ಮಕ್ಕಳಾದ ನಂತರ ಆ ಗಂಡನೆನ್ನುವ ಜೀವಿ ಮನೆಬಿಟ್ಟು ಹೊರಟೇ ಹೋಗಿ 16 ವರ್ಷಗಳೇ ಕಳೆದಿವೆ.‌ ಬಿಎಬಿಇಡಿ ಪದವಿ ಪಡೆದಿರುವ ಸವಿತಾ ಟೀಚಿಂಗ್‌ ಎಲಿಜೆಬಲಿಟಿ ಟೆಸ್ಟ್‌ (TET) ಕೂಡ ಪಾಸಾಗಿದ್ದಾರೆ. ಆದರೆ ಕರ್ನಾಟಕ ಸರಕಾರ ಸ್ಥಾಪನೆ ಮಾಡಿರುವ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನಲ್ಲಿ ಕಳೆದ ಐದು ವರ್ಷಗಳಿಂದ ಯುಕೆಜಿ ತರಗತಿಗಳಿಗೆ ಅತಿಥಿ ಶಿಕ್ಷಕಿಯಾಗಿ ಅತಿ ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಇಬ್ಬರು ಮಕ್ಕಳ ಆರೈಕೆ ಮಾಡಿಕೊಂಡು ಬದುಕುತ್ತಿದ್ದಾರೆ.

ಕ್ರೀಡೆಗೆ ಪ್ರೋತ್ಸಾಹ ನೀಡಿ: “ನನ್ನ ಮಗಳು ಕ್ರೀಡೆಯಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು ಎಂಬ ಹಂಬಲ. ನನ್ನಿಂದಾಗದ ಸಾಧನೆಯನ್ನು ನನ್ನ ಮಗಳು ಮಾಡಲಿ ಎಂಬುದೇ ಆಶಯ. ಅದಕ್ಕಾಗಿ ಕ್ರೀಡೆಯ ಹಾದಿ ತೋರಿಸಿರುವೆ. ಆದರೆ ಗೆದ್ದಾಗ ಅಭಿನಂದನೆ ಸಿಗುತ್ತದೆಯೇ ಹೊರತು ಗೆಲ್ಲುವ ಹಾದಿಯಲ್ಲಿ ಪ್ರೋತ್ಸಾಹ ಸಿಗುತ್ತಿಲ್ಲ. ನನ್ನ ಪತಿ ನನ್ನನ್ನು ತೊರೆದು ಐದು ವರ್ಷವಾಯಿತು. ಯುಕೆಜಿ ತರಗತಿಗಳಿಗೆ ಅತಿಥಿ ಶಿಕ್ಷಕಿಯಾಗಿ ದುಡಿಯುತ್ತಿರುವೆ. ಅಲ್ಲಿ ಸಿಗುವ ಗೌರವ ಧನ ಮನೆ ಖರ್ಚಿಗೆ ಸಾಕಾಗುತ್ತದೆ. ಅಂಬಿಕಾ ಅವಳಿಗೆ ಅಗತ್ಯವಿರುವ ಶೂ, ಫಿಟ್ನೆಸ್‌, ಸ್ಪರ್ಧೆಗಳಿಗೆ ತೆರಳಲು ತಗಲುವ ವೆಚ್ಚಕ್ಕೆ ಕಷ್ಟವಾಗಿದೆ. ನನ್ನ ಮಗಳು ಕ್ರೀಡೆಯಲ್ಲಿ ಸಾಧನೆ ಮಾಡಿ ಏನಾದರೂ ಉದ್ಯೋಗ ಪಡೆದುಕೊಳ್ಳಲಿ ಎಂಬುದೇ ಆಶಯ. ಯಾರಾದರೂ ಪುಣ್ಯಾತ್ಮರು ನೆರವಾದರೆ ನಮ್ಮ ಸಮಸ್ಯೆ ದೂರವಾಗಬಹುದು ಎಂಬ ನಂಬಿಕೆ,” ಎಂದು ಸವಿತಾ ಅವರು ನೋವಿನಿಂದ ಹೇಳಿಕೊಂಡಿದ್ದಾರೆ. ಗೆದ್ದ ಮೇಲೆ ಬೆನ್ನ ತಟ್ಟುವವರು, ಫೋಟೋ ಕ್ಲಿಕ್ಕಿಸಿಕೊಳ್ಳುವರಿಗೆ ನಮ್ಮಲ್ಲಿ ಕಡಿಮೆ ಇಲ್ಲ, ಆದರೆ ಜಯದ ಹಾದಿಯಲ್ಲಿ ನೆರವಾಗುವವರ ಅಗತ್ಯವಿದೆ. ಬಡ ಕುಟುಂಬದ ಈ ಕ್ರೀಡಾಪಟುವಿಗೆ ನಮ್ಮ ಸಮಾಜ ಸ್ಪಂದಿಸುವ ಅಗತ್ಯವಿದೆ. ಮುಂದೊಂದು ದಿನ ರಾಜ್ಯಕ್ಕೆ, ದೇಶಕ್ಕೆ ಕೀರ್ತಿ ತರುವ ಸಾಮರ್ಥ್ಯವಿರುವ ಬೆಳೆವಸಿರಿ ಅಂಬಿಕಾ ಅವರ ಕಷ್ಟಕ್ಕೆ ಸ್ಪಂದಿಸುವ ಮನಸ್ಸು ಸದ್ಯದ ಅನಿವಾರ್ಯತೆ.

Related Articles