“ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು” ಈ ತತ್ವಪದ ಹಾಗೂ ಈ ಜಗತ್ತು ಕಂಡ ಶ್ರೇಷ್ಠ ಕುಸ್ತಿಪಟು ವೀರೇಂದರ್ ಸಿಂಗ್ ಅವರ ಸಾಧನೆಯನ್ನು ಕಂಡಾಗ ನಿಜವಾಗಿಯೂ ಮೂಕನಾಬೇಗು ಎಂದೆನಿಸುವುದು ಸಹಜ. A silent champion of the silent sports Virender Singh Olympic medalist and world champion.
ಕಿವಿ ಕೇಳದು, ಬಾಯಿ ಬಾರದು ಈ ಕಾರಣಕ್ಕಾಗಿಯೇ ವೀರೇಂದರ್ ಸಿಂಗ್ ಅವರನ್ನು ಕಿವುಡ ಹಾಗೂ ಮೂಗರ ಸಾಲಿಗೆ ಸೇರಿಸಿ ಮೂಲೆ ಗುಂಪು ಮಾಡಿದೆವು. ಆದರೆ ಅವರೊಳಗಿರುವ ಚಾಂಪಿಯನ್‌ಗೆ ಮಾತೂ ಬೇಡ ಇನ್ನೊಬ್ಬರ ಮಾತು ಕೇಳುವ ಅಗತ್ಯವೂ ಬೇಡವೆನಿಸಿತು. ಎದುರಿಗೆ ಸಿಕ್ಕ ಸ್ಪರ್ಧಿಯನ್ನು ನೆಲಕ್ಕೆ ಅಪ್ಪಳಿಸು ಮೂಲಕ ಅವರು ಮಾತನಾಡಿದರು. ವಿಶ್ವ ಚಾಂಪಿಯನ್ ಪಟ್ಟಕ್ಕೇರಿದರು. ಆದರೂ ನಾವು ಗುರುತಿಸುವಾಗ ಮೂಗ, ಕಿವುಡ ಎಂದೇ ದಾಖಲು ಮಾಡುತ್ತಿರುವುದು ದುರಂತ. ಈ ದೃಷ್ಠಿ ದಿವ್ಯಾಂಗರ ಸಾಧನೆ ನಿಜವಾಗಿಯೂ ಜಗತ್ತಿಗೇ ಮಾದರಿ. ಒಲಿಂಪಿಕ್ಸ್‌ನಲ್ಲಿ ಚಿನ್ನದ ಮೂರು ಚಿನ್ನ ಹಾಗೂ ಒಂದು ಕಂಚಿನ ಪದಕ ಗೆದ್ದಿರುತ್ತಿದ್ದರೆ ವೀರೇಂದರ್ ಸಿಂಗ್ ಅವರ ಬದುಕಿನ ಕತೆಯೇ ಬೇರಾಗುತ್ತಿತ್ತು, ಆದರೆ ಅವರು ಗೆದ್ದಿರುವುದು ಮೂಗ ಮತ್ತು ಕಿವುಡರ ಒಲಿಂಪಿಕ್ಸ್‌ನಲ್ಲಿ. ಈ ಸಾಧಕನಿಗೊಂದು ಸಲಾಂ. ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ ನೀಡುವಾಗ ಕೇಂದ್ರ ಸರಕಾರ ಇಂಥ ಸಾಧಕರನ್ನು ಪರಿಗಣಿಸಬೇಕು. ಒಂದು ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ ಯಾವ ರೀತಿಯ ಗೌರವ ನೀಡುತ್ತೇವೋ ಅದೇ ರೀತಿ ನಾಲ್ಕು ಒಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದಿರುವ (ಮೂರು ಚಿನ್ನ ಒಂದು ಕಂಚು) ವೀರೇಂದರ್ ಸಿಂಗ್ ಅವರಿಗೂ ತಕ್ಕುದಾದ ಗೌರವ ಸಿಗಬೇಕು. ನಾವೇ ಹೇಳುವುದಿಲ್ಲವೇ?… ಮಾತು ಬೆಳ್ಳಿ ಮೌನ ಬಂಗಾರ ಎಂದು.
ಹರಿಹಾಣದ ಜಾಜ್ಜರ್ ಜಿಲ್ಲೆಯ ಸಸ್ರೋಲಿ ಗ್ರಾಮದಲ್ಲಿ ಜನಿಸಿದ ವೀರೇಂದರ್ ಸಿಂಗ್ ಚಿಕ್ಕಂದಿನಿಂದಲೂ ಕುಸ್ತಿಯಲ್ಲಿ ಆಸಕ್ತಿ ಹೊಂದಿದವ. ಏಕೆಂದರೆ ಅವರ ತಂದೆ ಮತ್ತು ಚಿಕ್ಕಪ್ಪ ಕುಸ್ತಿಪಟುಗಳು, ವೀರೇಂದರ್‌ಗೆ ಹುಟ್ಟಿನಿಂದ ಕಿವಿ ಕೇಳಿಸದು, ಬಾಯಿ ಬಾರದು. ಆದರೆ ತನ್ನೆದುರು ಸ್ಪರ್ಧಿಸುವ ಹುಡುಗರಿಗೆಲ್ಲ ಸೋಲಿನ ರುಚಿ ತೋರಿಸುತ್ತಿದ್ದ.
ಕಿವುಡನೆಂದು ಹೊರಗಿಟ್ಟರು!: ಚಿಕ್ಕಂದಿನಿಂದಲೂ ವೀರೇಂದರ್ ಸಿಂಗ್ ಸಮಾನ್ಯರೊಂದಿಗೆ ಸ್ಪರ್ಧಿಸುತ್ತಿದ್ದ. ಹೋದಲ್ಲೆಲ್ಲ ಪ್ರಶಸ್ತಿ ಗೆಲ್ಲುತ್ತಿದ್ದ. ಸುಮಾರು 22 ವರ್ಷಗಳ ಹಿಂದಿನ ಮಾತು. ಅಂದರೆ 2002 ವಿಶ್ವ ಕ್ಯಾಡೆಟ್ ಕುಸ್ತಿ ಚಾಂಪಿಯನ್‌ಷಿಪ್‌ನ ಭಾರತ ಹಂತದ ಸ್ಪರ್ಧೆಗಳು ನಡೆಯುತ್ತಿದ್ದವು. 16 ವರ್ಷ ಪ್ರಾಯದ ವೀರೇಂದರ್ ಸಿಂಗ್‌ಗೆ ಬೇರೆಯವರು ತನ್ನ ಬಗ್ಗೆ ಏನು ಮಾತಾಡಿಕೊಳ್ಳುತ್ತಿದ್ದಾರೆ ಎಂಬುದು ಕೇಳದೇ ಇರಬಹುದು, ಆದರೆ ಏನು ನಡೆಯತ್ತಿದೆ ಎಂಬುದು ಚೆನ್ನಾಗಿಯೇ ಗೊತ್ತಿತ್ತು. ಎಲ್ಲರನ್ನೂ ಬಗ್ಗು ಬಡಿದು ರಾಷ್ಟ್ರ ಮಟ್ಟದಲ್ಲಿ ಚಿನ್ನ ಗೆದ್ದು, ಸಹಜವಾಗಿಯೇ ವಿಶ್ವ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾದ. ಆದರೆ ಕಿವುಡ ಎಂಬ ಕಾರಣವನ್ನೊಡ್ಡಿ ಭಾರತೀಯ ಕುಸ್ತಿ ಸಂಸ್ಥೆ ವೀರೇಂದ್ರ ಅವರನ್ನು ಸ್ಪರ್ಧೆಯಿಂದ ಹೊರಗಿಟ್ಟಿತು. ಚಿಕ್ಕಂದಿನಲ್ಲೇ ಅನುಭವಿಸಿದ ಕಹಿ ಅನುಭವ ವೀರೇಂದರ್ ಸಿಂಗ್ ಅವರನ್ನು ಬಲಿಷ್ಠರನ್ನಾಗಿ ಮಾಡೀತೇ ವಿನಃ ಶಕ್ತಿ ಕುಂದುವಂತೆ ಮಾಡಿಲ್ಲ. ತನ್ನೆಲ್ಲ ನೋವಿನ ಹೊಡೆತಗಳನ್ನು ಎದುರಾಳಿಗಳ ಮೇಲೆ ನೀಡಿದ. ಯಶಸ್ಸಿನ ಹಾದಿ ತುಳಿದ.
ಮೌನದ ಆಟಕ್ಕೆ ವೀರೇಂದರ್ ಹೆಜ್ಜೆ: ಸಾಧನೆಯ ನಡುವೆಯೂ ಕಡೆಗಣಿಸಲ್ಪಟ್ಟ ನೋವನ್ನು ನುಂಗಿಕೊಂಡ ವೀರೇಂದರ್ ಸಿಂಗ್‌ಗೆ ಮುಂದೇನು ಮಾಡಬೇಕೆಂದು ತೋಚಲಿಲ್ಲ. ಹಾಗೆಯೇ ಯೋಚಿಸುತ್ತಿರುವಾಗ ಕಿವುಡರ ಒಲಿಂಪಿಕ್ಸ್ ಬಗ್ಗೆ ಮಾಹಿತಿ ಸಿಕ್ಕಿತು. ಅದು 2005 ರ ವರ್ಷ. ಆ ವರ್ಷ ಡೆಫ್ ಒಲಿಂಪಿಕ್ಸ್ ಅಂದರೆ ಕಿವುಡರ ಒಲಿಂಪಿಕ್ಸ್ ಅಥವಾ ಮೌನದ ಆಟ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆದಿತ್ತು. 84 ಕೆಜಿ ಫ್ರೀ ಸ್ಟೈಲ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ವೀರೇಂದರ್ ಚಿನ್ನದ ಪದಕ ಗೆದ್ದು ಇತಿಹಾಸ ಬರೆದರು. ನಂತರ ಅರ್ಮೇನಿಯಾದಲ್ಲಿ ನಡೆದ ಕಿವುಡರ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಸಾಧನೆ ಮಾಡಿದರು. 2009ರಲ್ಲಿ ತೈವಾನ್‌ನಲ್ಲಿ ನಡೆದ ಕಿವುಡರ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ವೀರೇಂದರ್ ಚಿನ್ನದ ಪದಕವನ್ನು ಮರಳಿ ಗೆಲ್ಲುವಲ್ಲಿ ವಿಫಲರಾದರು. ಆದರೆ ಕಂಚಿನ ಪದಕ ಗೆದ್ದು ದೇಶಕ್ಕೆ ಹಿಂತಿರುಗಿದರು.
2012ರಲ್ಲಿ ಬಲ್ಗೇರಿಯಾದಲ್ಲಿ ನಡೆದ ವಿಶ್ವ ಕಿವುಡರ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿಯೂ ಕಂಚಿನ ಪದಕದ ಸಾಧನೆ. 2013ರಲ್ಲಿ ಬಲ್ಗೇರಿಯಾದಲ್ಲಿ ನಡೆದ ಕಿವುಡರ ಒಲಿಂಪಿಕ್ಸ್‌ನಲ್ಲಿ 74 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವೀರೇಂದರ್ ಸಿಂಗ್ ಚಿನ್ನದ ಸಾಧನೆ ಮಾಡಿದರು. ಈ ಬಾರಿ ಕೇಂದ್ರ ಸರಕಾರ ಅವರ ಸಾಧನೆಯನ್ನು ಗುರುತಿಸಿತು. 2015ರಲ್ಲಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಇದರಿಂದ ಸ್ಫೂರ್ತಿ ಪಡೆದ ವೀರೇಂದರ್ ಸಿಂಗ್ 2016 ರ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದರು. ನಂತರ 2017ರಲ್ಲಿ ಟರ್ಕಿಯಲ್ಲಿ ನಡೆದ ಕಿವುಡರ ಒಲಿಂಪಿಕ್ಸ್‌ನಲ್ಲೂ ಚಿನ್ನದ ಸಾಧನೆ ಮಾಡಿದರು.2021 ರಲ್ಲಿ ಕೇಂದ್ರ ಸರಕಾರ ವೀರೇಂದರ್ ಸಿಂಗ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ನಿನ್ನೆ ಅವರ ಫೇಸ್‌ಬುಕ್ ಪುಟ ನೋಡಿದಾಗ ಮತ್ತೊಂದು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವೆ ಎಂಬ ಮಾಹಿತಿ ಕಂಡು ಬಂತು. 2025ರ ಮೌನದ ಕ್ರೀಡಾಕೂಟ ಟೋಕಿಯೋದಲ್ಲಿ ನಡೆಯಲಿದೆ. ವೀರೇಂದರ್ ಸಿಂಗ್ ಸ್ಪರ್ಧೆ ಮಾಡಲಿದ್ದಾರೆ.
ವೀರೇಂದರ್ ಸಿಂಗ್ ಕತೆ ಸಿನಿಮಾವಾಯಿತು: ಬೇರೆ ಯಾವುದೇ ಸೌಲಭ್ಯ ನೀಡದಿದ್ದರೂ ಚಿಂತೆ ಇಲ್ಲ. ಈ ದಿವ್ಯಾಂಗರ ಬದುಕಿನ ಕತೆಯನ್ನು ಸಿನಿಮಾ ಮಾಡುವವರು ಇದ್ದೇ ಇರುತ್ತಾರೆ. ಕಷ್ಟಗಳು ಪರಿಹಾರ ಕಂಡುಕೊಳ್ಳದಿದ್ದರೂ ಬೇಗನೇ ಮಾರಾಟವಾಗುತ್ತವೆ. ಅದೇ ರೀತಿ ವೀರೇಂದರ್ ಸಿಂಗ್ ಬದುಕಿನ ಕತೆಯೂ ಸಿನಿಮಾವಾಯಿತು. ಹಿಂದಿಯಲ್ಲಿ “ಗೂಂಗಾ ಪೆಲ್ವಾನ್ʼ ಹೆಸರಿನಲ್ಲಿ ಚಿತ್ರ 2014ರಲ್ಲಿ ತೆರೆ ಕಂಡಿತು. 2015ರಲ್ಲಿ ರಾಷ್ಟ್ರೀಯ ಪ್ರಶಸ್ತಿಯೂ ಸಿಕ್ಕಿತು. ಆದರೆ ವೀರೇಂದರ್ ಹಾಗೆಯೇ ಇದ್ದಾರೆ.