Thursday, November 21, 2024

ಬೈಕ್‌ನಲ್ಲೇ ಸಪ್ತ ಖಂಡಗಳ ಸುತ್ತಿದ ಕನ್ನಡಿಗ ದೀಪಕ್‌ ಕಾಮತ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು

ಶಾಲೆಗಳಲ್ಲಿ ಎನ್‌ಸಿಸಿ ವಿದ್ಯಾರ್ಥಿಗಳಲ್ಲಿ ಯಾವ ರೀತಿಯ ಸಾಹಸ ಪ್ರವೃತ್ತಿಯನ್ನು ಹುಟ್ಟು ಹಾಕುತ್ತದೆ ಎಂಬುದಕ್ಕೆ ಬೆಂಗಳೂರಿನ ದೀಪಕ್‌ ಕಾಮತ್‌ ಅವರು ಉತ್ತಮ ನಿದರ್ಶನ. ಚಿಕ್ಕಂದಿನಲ್ಲಿಯೇ ಸಾಹಸ ಪ್ರವೃತ್ತಿಗಳನ್ನು ಮೈಗೂಡಿಸಿಕೊಂಡ ದೀಪಕ್‌ ಕಾಮತ್‌ ಭಾರತದಲ್ಲೇ ನಿರ್ಮಿಸಿದ ಬೈಕ್‌ನಲ್ಲಿ ಜಗತ್ತಿನ ಏಳು ಖಂಡಗಳನ್ನು ಸುತ್ತಿ ಇತಿಹಾಸ ನಿರ್ಮಿಸಿದ್ದಾರೆ. ಪ್ರಾಯೋಜಕರು ಇಲ್ಲದಿದ್ದರೂ ತನ್ನ ಸ್ವಂತ ದುಡಿಮೆಯಲ್ಲಿ ಗಳಿಸಿದ ಹಣವನ್ನು ವ್ಯಯ ಮಾಡಿ ಇಂದು ಜಗತ್ತನ್ನು ಬೈಕ್‌ನಲ್ಲೇ ಸುತ್ತಿದ ಮೊದಲ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೂಲತಃ ಉಡುಪಿಯ ಕಿನ್ನಿಮೂಲ್ಕಿಯವರಾದ ದೀಪಕ್‌ ಕಾಮತ್‌ (Deepak Kamath) ತಮ್ಮ ಸಾಹಸಗಾಥೆಯನ್ನು sportsmail ಜೊತೆ ಹಂಚಿಕೊಂಡಿದ್ದಾರೆ. ಅವರ ಮಾತಿನಲ್ಲೇ ಅವರ ಬದುಕಿನ ಸಾಹಸದ ಹಾದಿಯನ್ನೊಮ್ಮೆ ಹಿಂದಿರುಗಿ ನೋಡೋಣ.

ಉಡುಪಿ, ಮಂಗಳೂರು ಮೂಲ:

“ನನ್ನ ತಾಯಿ ಉಡುಪಿ ಕಿನ್ನಿಮೂಲ್ಕಿಯ ವಿಮಲ ಕಾಮತ್‌, ತಂದೆ ಮಂಗಳೂರಿನ ಕಮಲಾಕ್ಷ ಕಾಮತ್‌. ಶಿಕ್ಷಣ, ಉದ್ಯೋಗವೆಲ್ಲ ಬೆಂಗಳೂರಿನಲ್ಲಿ. ನನ್ನ ಬದುಕಿನ ಸಾಹಸ ಹೆಜ್ಜೆಗಳು ಆರಂಭಗೊಂಡಿದ್ದು 1988ರಲ್ಲಿ. ಬೆಂಗಳೂರಿನ ಎಂಇಎಸ್‌ ಕಾಲೇಜಿನಲ್ಲಿ ಪ್ರವೇಶ ಪಡೆದು, ವಾಣಿಜ್ಯ ವಿಭಾಗ ಆಯ್ಕೆ ಮಾಡಿಕೊಂಡೆ. ಬದುಕಿನಲ್ಲಿ ಏನಾದರೂ ಸಾಧನೆ ಮಾಡಬೇಕೆಂಬುದು ನನ್ನ ಮನದಲ್ಲಿ ದೃಢ ಸಂಕಲ್ಪವಿದ್ದಿತ್ತು. ಕಾರ್ಮೆಲ್‌ ಹೈಸ್ಕೂಲಿನಲ್ಲಿ ಓದುತ್ತಿರುವಾಗಲೂ ಸ್ಕೌಟ್‌ನಲ್ಲಿದ್ದೆ. ಇದು ನನಗೆ ಕಾಲೇಜಿನಲ್ಲಿ ಎನ್‌ಸಿಸಿ ಸೇರುವಂತೆ ಮಾಡಿತು. ಎಂಇಎಸ್‌ ಕಾಲೇಜಿನಲ್ಲಿ ಎರಡು ಎನ್‌ಸಿಇ ಘಟಕ ಇದ್ದಿತ್ತು. ಬೆಟಾಲಿಯನ್‌ ಮತ್ತು ಸಶಸ್ತ್ರ ವಿಭಾಗ. ವಿಜಯಂತಾ, ಬೊಫೋರ್ಸ್‌, ಅರ್ಜುನ್‌ ಮೊದಲಾದ ಯುದ್ಧ ಟ್ಯಾಂಕ್‌ಗಳನ್ನು ನೋಡುವ ಅವಕಾಶವಿದ್ದಿತ್ತು. ಆಗ ಕರ್ನಾಟಕ ಮತ್ತು ಗೋವಾ ಸೇರಿ 165 ಕೆಡೆಟ್‌ಗಳು ಇರುತ್ತಿದ್ದರು. ಇದರಲ್ಲಿ ಎಂಇಎಸ್‌ ಕಾಲೇಜಿನ ಕೆಡೆಟ್‌ಗಳೇ ಹೆಚ್ಚಾಗಿದ್ದರು. ಸೇಂಟ್‌ ಜೊಸೆಫ್‌ ಕಾಲೇಜಿನಲ್ಲಿ 30-35 ಕ್ಯಾಡೆಟ್‌ಗಳು ಇರುತ್ತಿದ್ದರು. ನಮ್ಮ ಕಾಲೇಜಿನಲ್ಲಿದ್ದ ಪ್ರೋಫೆಸರ್‌ಗಳಲ್ಲಿ ಗೌರವದ ಮೇಜರ್‌ಗಳು ಇರುತ್ತಿದ್ದುದು ನಮಗೆ ಹೆಮ್ಮೆಯ ಸಂಗತಿ. ಪ್ರೊ. ವಿಶ್ವನಾಥ್‌ ಶಾಸ್ರ್ತಿ ಮತ್ತು ರಾಘವೇಂದ್ರ ಎಚ್‌,ಎನ್‌. ಅವರನ್ನು ನಾನಿಲ್ಲಿ ಸ್ಮರಿಸುವೆ. ನನ್ನಲ್ಲಿರುವ ಆಸಕ್ತಿಯನ್ನು ಗುರುತಿಸಿದ ಅವರು ವಿವಿಧ ಶಿಬಿರಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತಿದ್ದರು. ಅಸ್ಸಾಂ, ಅಹಮದ್‌ ನಗರ, ಮೋವ್‌ ಮೊದಲಾದ ಸ್ಥಳಗಳಲ್ಲಿ ನಡೆದ ಶಿಬಿರಗಳಲ್ಲಿ ಪಾಲ್ಗೊಂಡೆ. ಇದು ನನ್ನನ್ನು ಸಾಧನೆಯ ಕಡೆಗೆ ಮುಖ ಮಾಡುವಂತೆ ಮಾಡಿತು, ಬೋಫೋರ್ಸ್‌ ಯುದ್ಧ ಟ್ಯಾಂಕರ್‌, ವಿಜಯಂತ ಮೊದಲಾದ ಟ್ಯಾಂಕರ್‌ನಲ್ಲಿ ಕುಳಿತುಕೊಳ್ಳುವ ಅವಕಾಶ ಸಿಕ್ಕಾಗ ನಮ್ಮಲ್ಲಿ ಅದೇನೋ ಹೊಸ ಧೈರ್ಯ, ಹೊಸ ಹುಮ್ಮಸ್ಸು ಮನೆ ಮಾಡಿತ್ತು. ನಂತರ ಗಣರಾಜ್ಯೋತ್ಸವ ಶಿಬಿರದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. 3000 ಎನ್‌ಸಿಸಿ ಕ್ಯಾಡೆಟ್‌ಗಳಿಗೆ ದೆಹಲಿಯಲ್ಲಿ ಒಂದು ತಿಂಗಳ ಕಾಲ ತರಬೇತಿ ಪಡೆಯುವ ಅವಕಾಶ ಸಿಕ್ಕಿತು. ರಾಜಪಥ್‌ನಲ್ಲಿ ನಡೆಯುವ ಪೆರಡ್‌ನಲ್ಲಿ ಪಾಲ್ಗೊಳ್ಳಲು 175 ಕೆಡೆಟ್‌ಗಳಿಗೆ ಅವಕಾಶವಿದ್ದಿತ್ತು. ಆ ತಂಡದಲ್ಲಿ ನನಗೂ ಅವಕಾಶ ಸಿಕ್ಕಿತು. ರಾಜಪಥ್‌ನಲ್ಲಿ 175 ಕ್ಯಾಡೆಟ್‌ಗಳ ಜೊತೆಯಲ್ಲಿ ಪಥಸಂಚಲನ ಮಾಡುವ ಗೌರವವೇ ಬೇರೆ. ಅದೊಂದು ಅದ್ಭುತ ಅನುಭವ, ಅದೊಂದು ಸ್ಫೂರ್ತಿದಾಯಕ ಅನುಭವ. ನಂತರ 27ರಂದು ಪ್ರಧಾನ ಮಂತ್ರಿಗಳ ರಾಲಿಯಲ್ಲಿ ಪಾಲ್ಗೊಳ್ಳುವ ಅವಕಾಶ. ಈ ಸಂದರ್ಭದಲ್ಲಿ ಕರ್ನಾಟಕದ ಇಬ್ಬರು ಸೈಕ್ಲಿಸ್ಟ್‌ಗಳಿಗೆ ಧ್ವಜ ಹಿಡಿದು ಮುನ್ನಡೆಯುವ ಅವಕಾಶ. ಇದು ನನ್ನನ್ನು ಸೈಕ್ಲಿಂಗ್‌ನಲ್ಲಿ ಜಗತ್ತನ್ನು ಸುತ್ತಲು ಸ್ಫೂರ್ತಿಯಾಯಿತು,”

ಸೈಕ್ಲಿಂಗ್‌ನಲ್ಲಿ ಸಾಹಸ ಯಾತ್ರೆ:

“ದೆಹಲಿಯಿಂದ ಹಿಂದಿರುಗಿದ ನಂತರ ಹೊಸದಾಗಿ ಏನನ್ನಾದರೂ ಮಾಡಬೇಕು ಎಂದು ನಮ್ಮ ಉಪನ್ಯಾಸಕರಲ್ಲಿ ಕೇಳಿಕೊಂಡೆ. ಸೈಕಲ್‌ನಲ್ಲೇ ಭಾರತವನ್ನು ಸುತ್ತಿ ಎನ್‌ಸಿಸಿಯನ್ನು ಉತ್ತೇಜಿಸುವುದು ಮತ್ತ ಎನ್‌ಸಿಸಿ ಅಧಿಕಾರಿಗಳನ್ನು ಸಂಪರ್ಕಿಸಿ ಮಾತನಾಡುವುದಾಗಿ ಕೇಳಿಕೊಂಡೆ. ನನ್ನ ಕಾಲೇಜು ಮತ್ತು ಅಲ್ಲಿಯ ಎನ್‌ಸಿಸಿ ಅಧಿಕಾರಿಗಳು ಇದಕ್ಕೆ ಬೆಂಬಲ ನೀಡಿದರು. ನನ್ನ ಇನ್ನೊಬ್ಬ ಗೆಳೆಯನೊಂದಿಗೆ  17 ರಾಜ್ಯಗಳನ್ನು ಸೈಕಲ್‌ನಲ್ಲೇ ಸುತ್ತುವ ಸಾಹಸ ಯಾನಕ್ಕೆ ಮುಂದಾದೆ. ಕಾಠ್ಮಂಡುವಿನ ವರೆಗೆ ಹೋಗಿ ಬೆಂಗಳೂರಿಗೆ ಹಿಂದಿರುಗಿದೆವು. ನಮ್ಮ ಪ್ರಯಾಣದ ಮಧ್ಯದಲ್ಲಿ ಸಾಧ್ಯವಾದ ಕಡೆಗಳಲ್ಲೆಲ್ಲ ನನ್ನ ತಂದೆ ಹಾಗೂ ತಾಯಿ ಬಂದು ನಮ್ಮನ್ನು ಹುರಿದುಂಬಿಸುತ್ತಿದ್ದರು. ಇದು ನಮ್ಮ ಯಾನಕ್ಕೆ ಮತ್ತಷ್ಟು ಶಕ್ತಿ ತುಂಬುತ್ತಿತ್ತು. ಅಪ್ಪ-ಅಮ್ಮ ಮುಂಬೈ, ಡೆಲ್ಲಿ, ಚೆನ್ನೈ ಮೊದಲಾದ ಕಡೆಗಳಲ್ಲಿ ನಮ್ಮನ್ನು ಸಂಪರ್ಕಿಸುತ್ತಿದ್ದರು. ಮನೆಯವರಿಂದ ಈ ರೀತಿಯ ಪ್ರೋತ್ಸಾಹ ಸಿಕ್ಕಿರುವುದನ್ನು ನಾನು ಎಲ್ಲಿಯೂ ನೋಡಿರಲಿಲ್ಲ. ಅದೊಂದು ವಿಶೇಷ. 4 ತಿಂಗಳ ಕಾಲ 12,000 ಕಿಮೀ ಅಂತರವನ್ನು ಕ್ರಮಿಸಿ ಹಿಂದಿರುಗಿದಾಗ ಕಾಲೇಜಿನಲ್ಲಿ ನನ್ನನ್ನು ಅಭಿನಂದಿಸಿದ ರೀತಿ ನನ್ನಲ್ಲಿ ಹೊಸ ಚೈತನ್ಯವನ್ನು ತಂದಿತು. 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಮ್ಮನ್ನು ಸುತ್ತುವರಿದಾಗ ಅಲ್ಲೊಂದು ಹೊಸ ಪ್ರಪಂಚವೇ ನಿರ್ಮಾಣವಾಗಿತ್ತು, ಆ ಚಿತ್ರಣ ಈಗಲೂ ನನ್ನ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಎಂಇಎಸ್‌ ಕಾಲೇಜು ನೀಡಿದ ಪ್ರೋತ್ಸಾಹ, ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ. ಆ ಬಳಿಕ ಪ್ರತಿಯೊಬ್ಬರೂ ಕೇಳಲಾರಂಭಿಸಿದರು, “ಏನಪ್ಪಾ, ಇಂಡಿಯಾ ಸೈಕ್ಲಿಂಗ್‌ ಆಯಿತು, ಇನ್ನು ವಿಶ್ವ ಸೈಕ್ಲಿಂಗಾ?” ಎಂದು. ಇದು ನನ್ನಲ್ಲಿರುವ ಸಾಹಸ ಪ್ರವೃತ್ತಿಯನ್ನು ಪುಟಿದೇಳುವಂತೆ ಮಾಡಿತು. ಅಂದೇ ವಿಶ್ವ ಸೈಕ್ಲಿಂಗ್‌ ಯಾತ್ರೆಗೆ ಸಜ್ಜಾದೆ.”

ಸೈಕಲ್‌ನಲ್ಲೇ ಬೆಂಗಳೂರಿನಿಂದ ಇಟಲಿಗೆ:

ಅಕ್ಟೋಬರ್‌ 2, 1989 ರಲ್ಲಿ ವಿಶ್ವ ಸೈಕ್ಲಿಂಗ್‌ ಯಾನ ಆರಂಭಗೊಂಡಿತು.  ಆದರೆ ಈ ವಿಶ್ವ ಸೈಕ್ಲಿಂಗ್‌ ಯಾನವನ್ನು ಇಟಲಿಗೇ ನಿಲ್ಲಿಸಬೇಕಾಗಿ ಬಂದದು ದುರಾದೃಷ್ಟಕರ. ಇಟಲಿ-ಬಲ್ಗೇರಿಯಾ ಗಡಿಯಲ್ಲಿ ನನ್ನ ಸೈಕಲ್‌ ಕಳವಾಯಿತು. ನಮ್ಮ ಯೋಜನೆ ಅಷ್ಟು ಉತ್ತಮವಾಗಿರಲಿಲ್ಲ, ನಾನು ಕೀನ್ಯಾಕ್ಕೆ ವೀಸಾ ತೆಗೆದುಕೊಂಡಿದ್ದೆ. ಅಲ್ಲಿಂದ ಮುಂದಿನ ದೇಶಗಳಿಗಾಗಿ ವೀಸಾ ತೆಗೆದುಕೊಂಡಿದ್ದೆ. ಆಗಿನ ದಿನಗಳಲ್ಲಿ ಭಾರತದ ರಾಯಭಾರಿ ಕಚೇರಿಯಲ್ಲಿ ಉತ್ತಮ ರೀತಿಯ ಪ್ರೋತ್ಸಾಹ ಸಿಕ್ಕಿತ್ತು. ಈಜಿಪ್ಟ್‌ನಲ್ಲಿ ಭಾರತದ ರಾಯಭಾರಿ ಪಾಸ್ಕಲ್‌ ಅಲಾನ್‌ ನಝರತ್‌, ಅವರು ನಮ್ಮ ಮಾರ್ಗರೆಟ್‌ ಆಳ್ವಾ ಅವರ ಸಹೋದರ. ಅವರು ನಮಗೆ ಎಲ್ಲ ರೀತಿಯ ನೆರವು ಮಾಡಿದ್ದರು. ರೋಮ್ ವರೆಗೆ ಅಗತ್ಯವಿರುವ ವೀಸಾ ಒದಗಿದುವಲ್ಲಿ ನೆರವು ಮಾಡಿದರು, ಉಳಿದುಕೊಳ್ಳುವ ವ್ಯವಸ್ಥೆಯನ್ನೂ ಮಾಡಿದ್ದರು. ಈಜಿಪ್ಟ್‌ನಿಂದ ಗ್ರೀಸ್‌ ಗಡಿ ದಾಟಿ ಅಥೇನ್ಸ್‌ ಕಡೆಗೆ ಪ್ರಯಾಣಿಸುವಾಗ ನಾನು ಲಯನ್ಸ್‌ ಕ್ಲಬ್‌ನ ಸದಸ್ಯರನ್ನು ಭೇಟಿ ಮಾಡಿದೆ. ಅವರು ನನಗೆ ಆತಿಥ್ಯ ನೀಡಿದರು, ಅಲ್ಲಿ ಅವರು ಒಂದಿಷ್ಟು ಹಣ ಸಂಗ್ರಹಿಸಿ ನನಗೆ ನೀಡಿದರು. ಸೈಕಲ್‌ನಲ್ಲಿ ಮುನ್ನಡೆದಾಗ ಮುಂದೆಯೂ ಲಯನ್ಸ್‌ ಕ್ಲಬ್‌ನವರು ನನಗೆ ನೆರವಾಗಬಹುದು ಎಂದು ಗ್ರಹಿಸಿದ್ದೆ. ಆಗ 1988ರಲ್ಲಿ ಗಣರಾಜ್ಯೋತ್ಸವ ಪೆರೆಡ್‌ನಲ್ಲಿ ಪಥ ಸಂಚಲನ ಮಾಡಿದ್ದ ಇಬ್ಬರು ಯುವಕರು ಒಂದಿಷ್ಟು ಕತೆಗಳನ್ನು ಕಟ್ಟಿದರು, ನಮಗೆ ಅವಮಾನವಾಯಿತು. ಆಗ ಇಂಟರ್‌ನೆಟ್‌ ಇಮೇಲ್‌ ವ್ಯವಸ್ಥೆ ಇದ್ದಿರಲಿಲ್ಲ. ಸುಳ್ಳು ಕತೆಗಳು ನಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿತು. ಹಿಂದೆ ಬಂದವರು ಮಾಡಿರುವ ವಂಚನೆಯನ್ನು ಇವರೂ ಮಾಡಬಹುದೆಂಬುದು ಅಲ್ಲಿಯ ಜನರ ನಂಬಿಕೆಯಾಗಿತ್ತು. ಇದರಿಂದ ನನಗೆ ನಾಚಿಕೆಯಾಯಿತು, ಅದರೆ ಬುಟ್ಟಿಯಲ್ಲಿ ಒಂದು ಆಪಲ್‌ ಕೊಳೆತರೆ ಇಡೀ ಬುಟ್ಟಿಯೇ ಕೊಳೆತ ಆಪಲ್‌ಗಳಿಂದ ತುಂಬಿದೆ ಎಂದು ಹೇಳಲಾಗದು. ಹಾಗಾಗಿ ನನ್ನ ಯಾನವನ್ನು ಮುಂದುವರಿಸಿದೆ. ಇದಕ್ಕೂ ಮುನ್ನ ರಾಜೀವ ಗಾಂಧೀ ಅವರ ಕಚೇರಿಯಲ್ಲಿ ಟಾಟಾ ಕನ್ಸಲ್ಟೆನ್ಸಿಯ ಒಬ್ಬ ವ್ಯಕ್ತಿ ನನ್ನೊಂದಿಗೆ ಬಂದಿದ್ದರು. ಅವರು ಕೀನ್ಯಾಕ್ಕಿಂತ ಮುಂದೆ ಯಾನ ಮಾಡಿರಲಿಲ್ಲ, ಅವರು ಅಪ್ಪಟ ಸಸ್ಯಾಹಾರಿ. ಅವರು ಸಹಕಾರ ನೀಡದೆ, ಕೀನ್ಯಾದಿಂದ ಹಿಂದಿರುಗಿದರು. ಇದರಿಂದಾಗಿ ಒಬ್ಬನೇ ಪ್ರಯಾಣ ಮುಂದುವರಿಸಿದೆ.

ಗ್ರೀಸ್‌ನಿಂದ ಬಲ್ಗೇರಿಯಾಕ್ಕೆ ಬಂದಾಗ ಬಲ್ಗೇರಿಯಾದಲ್ಲಿ ಗಡಿ ಸಮಸ್ಯೆ ಇನ್ನೂ ಜೀವಂತವಾಗಿದ್ದಿತ್ತು. ಭಾರತೀಯ ಪರ್ವತಾರೋಹಣ ಸಂಸ್ಥೆ ನೀಡಿದ ಟೆಂಟ್‌ನಲ್ಲಿ ನಾನು ಉಳಿದುಕೊಳ್ಳಲು ತೀರ್ಮಾನಿಸಿದೆ. ಸೈಕಲ್‌ ಲಾಕ್‌ ಮಾಡಿ ಟೆಂಟ್‌ನಲ್ಲಿ ಮಲಗಿದೆ. ಬೆಳಿಗ್ಗೆ ಎದ್ದು ನೋಡಿದಾಗ ಸೈಕಲ್‌ ಕಾಣೆಯಾಗಿತ್ತು. ಗ್ರೀಸ್‌ ಪೊಲೀಸರಲ್ಲಿ ದೂರು ದಾಖಲಿಸಿದೆ. ಅಲ್ಲದೆ ಬಲ್ಗೇರಿಯಾ ಗಡಿಯಲ್ಲೂ ದೂರು ದಾಖಲಿಸಿದೆ. ಆಗ ಬಲ್ಗೇರಿಯಾದಲ್ಲಿ ಭಾರತದ ರಾಯಭಾರಿಯಾಗಿದ್ದ ಗಿರೀಶ್‌ ದೂಂಬೆ ಅವರನ್ನು ಭೇಟಿಯಾದೆ. ಅವರು ಅಲ್ಲಿರುವ ಭಾರತೀಯರಿಗೆ ನನ್ನನ್ನು ಪರಿಚಯಿಸಿ ಕೆಲವು ದಿನ ಉಳಿದುಕೊಳ್ಳಲು ನೆರವು ನೀಡಿದರು. ಪೊಲೀಸರು ಸೈಕಲ್‌ ಪತ್ತೆ ಮಾಡಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ನಾನು ಪ್ರಯಾಣ ಮುಂದುವರಿಸಬೇಕಾಯಿತು. ಅಲ್ಲಿಂದ ಯೂಗೋಸ್ಲಾವಿಯಾದ ರಾಜಧಾನಿಗೆ ಬಂದೆ. ಈಗ ಯೂಗಸ್ಲೋವಿಯಾ ಇಲ್ಲ. ಅಲ್ಲಿಯ ರೈಲ್ವೆ ನಿಲ್ದಾಣದಲ್ಲಿ ನನ್ನ ಪಾಕೆಟ್‌ ಕಳವಾಯಿತು. ಅದರಲ್ಲಿ 110 ಡಾಲರ್‌ ಇದ್ದಿತ್ತು. ಅಲ್ಲಿಂದ ಟ್ರೈನ್‌ನಲ್ಲಿ ಬೊಲೊನಿಯಾಕ್ಕೆ ಪ್ರಯಾಣಿಸಿದೆ. ಅಲ್ಲಿ ನನ್ನ ಆತ್ಮೀಯ ಗೆಳೆಯರೊಬ್ಬರಿರುವುದು ಗೊತ್ತಿತ್ತು, ಅಲ್ಲಿ ಉಳಿದುಕೊಳ್ಳಬಹುದು ಎಂಬ ಯೋಚನೆ”.

36 ಗಂಟೆಗಳ ಕಾಲ ಪೊಲೀಸ್‌ ಆತಿಥ್ಯ:

 

“ಟ್ರೈಸ್ಟಿ ಗಡಿ ಯೂರೋಪ್‌ಗೆ ಬಾಗಿಲು ಇದ್ದಂತೆ. ಅಲ್ಲಿಯ ಟ್ರೈಸ್ಟಿ ನಿಲ್ದಾಣದಲ್ಲಿ ಇಳಿಯಬೇಕಾಗಿತ್ತು. ಆದರೆ ಅಲ್ಲಿ 36 ಗಂಟೆಗಳ ಕಾಲ ನನ್ನನ್ನು ಹಿಡಿದಿಟ್ಟರು. ನನಗೆ ಮತ್ತೆ ರೈಲು ಹತ್ತಲು ಬಿಡಲಿಲ್ಲ, ಅದಕ್ಕೆ ಮೊದಲ ಕಾರಣ ನಾನು ಭಾರತೀಯ, ನಾನು ಸೈಕಲ್‌ನಲ್ಲಿ ವಿಶ್ವ ಪರ್ಯಟನೆಗೆ ಹೊರಟವ, ನನ್ನ ಸೈಕಲ್‌ ಕಳವಾಗಿದೆ, ಎಂದೆ. ನನ್ನಲ್ಲಿ ಆಗ ಇದ್ದದ್ದು 500 ಡಾಲರ್‌ಗಿಂತಲೂ ಕಡಿಮೆ ಮೊತ್ತ. ಇವೆಲ್ಲ ಅವರಿಗೆ ನನ್ನ ಬಗ್ಗೆ ಸಂಶಯ ಹುಟ್ಟುವಂತೆ ಮಾಡಿತು. ಅಲ್ಲಿ ನಿಜವಾಗಿಯೂ ನನಗೆ ಅವಮಾನವಾಯಿತು, ಆದರೆ ನನ್ನನ್ನು ಚೆನ್ನಾಗಿಯೇ ನೋಡಿಕೊಂಡರು. ಉತ್ತಮ ಆಹಾರ, ಮಲಗಲು ವ್ಯವಸ್ಥೆ ಎಲ್ಲವನ್ನೂ ಮಾಡಿದರು. ಆದರೂ ನನಗೆ ಅದೆಲ್ಲ ಹಿತವೆನಿಸಲಿಲ್ಲ. ಗೊಂದಲ ಮನೆ ಮಾಡಿತ್ತು. 36 ಗಂಟೆಗಳ ನಂತರ ಅವರು ನನಗೆ ರೈಲಿನಲ್ಲಿ ಪ್ರಯಾಣ ಮಾಡಲು ಅವಕಾಶ ನೀಡಿದರು. ನಾನು ಅಲ್ಲಿಂದ ಬೊಲೋನಿಯಾಕ್ಕೆ ಬಂದೆ. ಬೊಲೋನಿಯಾದಲ್ಲಿ ಯಾವ ಗೆಳತಿಯನ್ನು ಕಾಣಬೇಕೆಂದು ಬಯಸಿದ್ದೆನೋ ಆಕೆಗೆ ಮದುವೆಯಾಗಿ ಇಂಗೆಂಡ್‌ಗೆ ಹನಿಮೂನ್‌ಗೆ ಹೋಗಿದ್ದರು. ಮನೆಗೆ ಬಾಗಿಲು. ಈ ಸಂದರ್ಭದಲ್ಲಿ ನನ್ನಲ್ಲಿರುವ ಹಣವೂ ಖಾಲಿಯಾಗುತ್ತ ಬಂದಿತ್ತು. ಆಗ ನನಗೆ ಏರ್‌ ಇಂಡಿಯಾ ಪ್ರಾಯೋಜಕತ್ವ ನೀಡುತ್ತಿತ್ತು,. ಏರ್‌ ಇಂಡಿಯಾದಲ್ಲಿ ಯಾವುದೇ ದೇಶಕ್ಕೂ ನಾನು ಉಚಿತವಾಗಿ ಪ್ರಯಾಣಿಸಬಹುದಾಗಿತ್ತು. ನನಗೆ ಲಂಡನ್-ನ್ಯೂಯಾರ್ಕ್‌ ಟಿಕೆಟ್‌ ನೀಡಿದ್ದರು. ರೋಮ್‌ಗೆ ತೆರಳಿ ಏರ್‌ ಇಂಡಿಯಾ ಕಚೇರಿಗೆ ಹೋದೆ. ನನಗೆ ಲಂಡನ್‌ -ನ್ಯೂಯಾರ್ಕ್‌ ಟಿಕೆಟ್‌ಗೆ ಬದಲಾಗಿ ರೋಮ್‌-ಮುಂಬೈ ಟಿಕೆಟ್‌ ನೀಡಬಹುದಾ? ನಾನು ತಾಯ್ನಾಡಿಗೆ ಹಿಂದಿರುಗಬಯಸುತ್ತೇನೆ ಎಂದೆ. ಅದೇ ರೀತಿ ಮನೆಗೆ ಹಿಂದಿರುಗಿದೆ. ತಾಯಿಗೆ ಬಹಳ ಖುಷಿಯಾಯಿತು. ಕೆಲವು ದಿನಗಳ ಹಿಂದೆ ಪೊಲೀಸರು ನಿನ್ನ ಬಗ್ಗೆ ವಿಚಾರಣೆ ಮಾಡಿದ್ದರು ಎಂಬ ವಿಷಯವನ್ನು ತಾಯಿ ಹೇಳಿದರು. ಕ್ರಿಸ್ಟಿಯಲ್ಲಿ ನನ್ನನ್ನು ತಡೆಹಿಡಿದಾಗ ಅಲ್ಲಿಯ ಅಧಿಕಾರಿಗಳು ಈಜಿಪ್ಟ್‌ನಲ್ಲಿ ವೀಸಾದ ಬಗ್ಗೆ ವಿಚಾರಣೆ ಮಾಡಿದ್ದರು. ಅವರು ನಕಲಿ ವೀಸಾ ಎಂದು ವಿಚಾರಣೆ ನಡೆಸಿದ್ದಾರೆ. ಇಟಾಲಿಯ ವಲಸೆ ವಿಭಾಗದ ಮೂಲಕ ವಿಚಾರಣೆ ಮಾಡಿಸಿದ್ದಾರೆ. ದೆಹಲಿಯಲ್ಲಿರುವ ಇಟಲಿಯ ರಾಯಭಾರಿ ಕಚೇರಿಯ ಮೂಲಕ ಬೆಂಗಳೂರಿನಲ್ಲಿರುವ ಪೊಲೀಸ್‌ ಕಮಿಷನರ್‌ ಕಚೇರಿಯನ್ನು ಸಂಪರ್ಕಿಸಿ, ನೃಪತುಂಗ ರಸ್ತೆಯಲ್ಲಿರುವ ಕಮಿಷನರ್‌ ಕಚೇರಯಿಂದ ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ವಿಚಾರಣೆ ಆಗಿದೆ. ಅಂದು ಭಾನುವಾರ ಬೆಳಿಗ್ಗೆ ಮನೆಗೆ ಬಂದು ತಾಯಿಯಲ್ಲಿ ದೀಪಕ್‌ ಅನ್ನುವವರು ಇದ್ದಾರಾ? ಎಂದು ವಿಚಾರಿಸಿದ್ದಾರೆ. ತಾಯಿ ಹೌದು ನನ್ನ ಮಗ, ಈಗ ಆತ ಸೈಕಲ್‌ನಲ್ಲಿ ವಿದೇಶ ಪ್ರವಾಸದಲ್ಲಿದ್ದಾನೆ ಎಂದು ತಿಳಿಸಿದ ನಂತರ ಆ ಸುದ್ದಿ ಕ್ರಿಸ್ಟಿ ತಲುಪಿತು. ಇದೆಲ್ಲ 36 ಗಂಟೆಗಳಲ್ಲಿ ನಡೆಯಿತು. ಅಂದಿನ ದಿನದೊಂದಿಗೆ ಇಂದಿನ ದಿನಗಳನ್ನು ಹೋಲಿಕೆ ಮಾಡಿದರೆ ಭಾರತದ ಪಾಸ್‌ಪೋರ್ಟ್‌ಗೆ ಇಂದು ಎಲ್ಲೆಡೆ ಉತ್ತಮ ಗೌರವ ನೀಡುತ್ತಾರೆ. ಇದಕ್ಕೆ ಇಂದಿನ ಸರಕಾರದ ಸುಧಾರಿತ ವಿದೇಶಿ ನೀತಿಗಳೇ ಕಾರಣ.”

ರಾಜೀವ್‌ ಗಾಂಧೀ ಭಾವ ಚಿತ್ರ:

“ರಾಜೀವ್‌ ಗಾಂಧೀ ಪ್ರಧಾನಿಯಾಗಿದ್ದಾಗ ಒಮ್ಮೆ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಅವರೊಂದಿಗೆ ತೆಗೆಸಿಕೊಂಡಿದ್ದ ಒಂದು ಫೋಟೋವನ್ನು ಪಾಸ್‌ಪೋರ್ಟ್‌ನಲ್ಲಿ ಇರಿಸಿಕೊಂಡಿದ್ದೆ. ಯಾರಾದರೂ ನನ್ನ ಪಾಸ್‌ಪೋರ್ಟ್‌ ನೋಡಿದರೆ ಈ ಫೋಟೋ ಅವರಿಗೆ ಕಾಣುತ್ತಿತ್ತು. ಆದರೆ ನನ್ನ ಯಾನದ ಸಮಯ ಅವರು ಅಧಿಕಾರ ಕಳೆದುಕೊಂಡು ವಿ.ಪಿ. ಸಿಂಗ್‌ ಪ್ರಧಾನಿಯಾಗಿದ್ದರು. ರಾಜೀವ್‌ ಗಾಂಧಿ ಫೋಟೋ ಇರಿಸಿಕೊಂಡಿದ್ದೂ ನನಗೆ ಕೆಲವು ಕಡೆ ಸವಾಲುಗಳನ್ನು ಎದುರಿಸಲು ಕಾರಣವಾಗಿರಬಹುದು ಎಂಬುದು ನಂಬಿಕೆ. ಇಂಥ ಸಾಹಸ ಕ್ರೀಡೆಗಳಿಗೆ ಕಾರ್ಪೋರೇಟ್‌ ವಲಯಗಳು ಆರ್ಥಿಕ ನೆರವನ್ನು ನೀಡುವುದು ಅಗತ್ಯ ಎಂದು ನನ್ನ ನಂಬಿಕೆ. ಈ ರೀತಿಯ ನೆರವು ನೀಡುವುದರಿಂದ  ಜಗತ್ತು ಭಾರತವನ್ನು ಕಾಣುವ ದೃಷ್ಟಿಕೋನವನ್ನು ನಾವು ಬದಲಾಯಿಸಬಹುದು, ಈ ಸೈಕಲ್‌ ಸಾಹಸ ಯಾತ್ರೆಯಿಂದ ನಾನು ಕಂಡಕೊಂಡ ಸತ್ಯ ಇದು.

ಅನೇಕ ಜನರು ನನ್ನನ್ನು ಕೇಳಿದರು, “ಈ ಸೈಕಲ್‌ ಯಾನದಿಂದ ನೀನು ಏನನ್ನು ಕಲಿತೆ” ಎಂದು. “ಜಗತ್ತಿನ ವಿವಿಧೆಡೆ ಹೋದಾಗ ಭಾರತೀಯರಿಗೆ ಅಗತ್ಯವಿರುವ ಗೌರವ ಸಿಗುತ್ತಿಲ್ಲ,” ಎಂಬುದನ್ನು ನಾನು ಕಲಿತೆ ಎಂದಿದ್ದೆ, ಹಣದ ಅಧಿಕಾರವಿದ್ದರೆ ಮಾತ್ರ ನಮ್ಮನ್ನು ಕಾಣುವ ದೃಷ್ಟಿಕೋನವನ್ನು ಬದಲಾಯಿಸಬಹದು ಎಂಬ ನಿರ್ಧಾರದೊಂದಿಗೆ ನಾನು ತಾಯ್ನಾಡಿಗೆ ಹಿಂದಿರುಗಿದೆ. ಹಾಗಂತ ಹಣವೇ ಮುಖ್ಯವೆಂದು ಹೇಳುತ್ತಿಲ್ಲ. ಎಲ್ಲಿಯಾದರೂ ಹೊರದೇಶಗಳಿಗೆ ಹೋದಾಗ ನಮ್ಮ ವೆಚ್ಚವನ್ನು ನಾವೇ ಭರಿಸುವಂತಾಗಬೇಕು, ಇನ್ನೊಬ್ಬರ ಕೈ ಬಾಯಿ ನೋಡುವಂತಾಗಬಾರದು. ನಮ್ಮನ್ನು ಅವರು ಭಿಕ್ಷುಕರ ರೀತಿಯಲ್ಲಿ ನೋಡಬಾರದು. ಇದಕ್ಕಾಗಿ ಇಂಥ ಸಾಹಸ ಯಾತ್ರೆ ಮಾಡುವವರಿಗೆ ಉತ್ತಮ ಪ್ರಾಯೋಜಕತ್ವ ನೀಡಬೇಕು. ಅಯ್ಯೋ ಪಾಪ. ಊಟಕ್ಕಿಲ್ಲ, ಎಂಬಂಥ ಅನುಕಂಪದ ಮಾತುಗಳನ್ನು ಸಾಹಸಿಗ ಕೇಳಿಸಿಕೊಳ್ಳಬಾರದು. ಅದು ಆತನ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ,”

ಮೋಟಾರ್‌ ಸೈಕಲ್‌ ಆಫರ್‌!!

“ಮನೆಗೆ ಬಂದ ಬಳಿಕ ಓದಿನ ಕಡೆಗೆ ಹೆಚ್ಚಿನ ಗಮನ ಕೊಡು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ ಮೋಟಾರ್‌ ಸೈಕಲ್‌ ನೀಡುವುದಾಗಿ ಘೋಷಿಸಿದರು. ಆಗ 1989-90 ಯಮಹ ಆರ್‌ಎಕ್ಸ್‌ 100  ಬ್ರಾಂಡ್‌ಗಳು ಭಾರತಕ್ಕೆ ಬರಲಾರಂಭಿಸಿದ್ದವು. ನನಗೆ ಆರ್‌ಎಕ್ಸ್‌ 100 ಬಗ್ಗೆ ಅಪಾರ ಪ್ರೀತಿ ಇದ್ದರೂ, ಅಮ್ಮ 17-18 ಸಾವಿರ ದೊಡ್ಡ ಮೊತ್ತ. ನನ್ನ ಗೆಳೆಯರೊಬ್ಬರು ಬಳಸಿದ ಯಝಡಿ ಬೈಕ್‌ವೊಂದನ್ನು ಮಾರುತ್ತಿದ್ದಾರೆ. ಅವರು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದ್ದಾರೆ. ಬೇಕಾದರೆ ನೋಡು, ಅವರು 8 ಸಾವಿರಕ್ಕೆ ಕೊಡುತ್ತಾರೆ ಎಂದರು. ತಾಯಿಯ ಸಹೋದ್ಯೋಗಿಯ ಮನೆಗೆ ಹೋದೆವು. ಅದು ಬನಶಂಕರಿಯಲ್ಲಿದೆ. ನಮಗೆ ಜಾವಾ ಬಿ ಮಾಡೆಲ್‌ ಬೈಕ್‌ ಸಿಕ್ಕಿತು. ಮನೆಯಲ್ಲೊಂದು ಮೋಟಾರ್‌ ಸೈಕಲ್‌ ಇರಬೇಕೆಂಬುದು ಎಲ್ಲರ ಆಸೆಯಾಗಿತ್ತು. ನನಗೂ ಇದ್ದಿತ್ತು. ಯಾವುದಾದರೂ ಮೋಟಾರ್‌ ಸೈಕಲ್‌ ಇದ್ದರೆ ಸಾಕೆಂಬುದು ಅಂತಿಮ ತೀರ್ಮಾನವಾಗಿತ್ತು. ಮನೆಹತ್ತಿರ ಮೆಕ್ಯಾನಿಕ್‌ ಬಸವರಾಜ್‌ ಇದ್ದಿದ್ದರು. ಅವರೊಂದಿಗೆ ಮೊದಲೇ ಗೆಳೆತನ ಬೆಸೆದಿತ್ತು. ಮನೆಯಲ್ಲಿ ಲಾಂಬ್ರೆಟಾ ಇದ್ದಿತ್ತು. ಪಿಯಾಜ್ಯೋ 150 ಇದ್ದಿತ್ತು. ಬಜಾಜ್‌ ಚೇತಕ್‌ ಬಂತು. ಅದಾದ ಬಳಿಕ ಯಝಡಿ ಬಂತು.

ಬೈಕ್‌ನಲ್ಲಿ ಭಾರತ ಪ್ರವಾಸ:

ಮೈಸೂರಿನಲ್ಲಿದ್ದ ಐಡಿಯಲ್‌ ಜಾವಾ ಕಚೇರಿಗೆ ಹೋಗಿ ನಾನು ಭಾರತದಾದ್ಯಂತ ಬೈಕ್‌ನಲ್ಲೇ ಪ್ರವಾಸ ಮಾಡಬೇಕೆಂದಿದ್ದೇನೆ, ನೀವು ಸಹಾಯ ಮಾಡುತ್ತೀರಾ? ಎಂದು ವಿಚಾರಿಸಿದೆ. ಅದಕ್ಕೆ ಒಂದು ಎಂಜಿನ್‌ ರೆಡಿ ಮಾಡಿ ಕೊಡಿ ಎಂದೆ. ಅದಕ್ಕೆ ಒಪ್ಪಿದರು. ಹೊಸ ಎಂಜಿನ್‌ ಹಾಕಿಕೊಟ್ಟರು. ನನ್ನ ಗೆಳೆಯನ ತಂದೆ ನನಗೆ 8 ಸಾವಿರ ರೂ. ಪ್ರಾಯೋಜಕತ್ವ ನೀಡಿದರು. ಆರಂಭದಲ್ಲಿ ಅವರು ಯಾವುದಾದರೂ ಕಾರ್ಪೋರೇಟ್‌ನಿಂದ ಪ್ರಾಯೋಜಕತ್ವ ನೀಡುವುದಾಗಿ ಹೇಳಿದ್ದರು. ಅವರು ವೃತ್ತಿಯಲ್ಲಿ ಸಿ.ಎ. ಪ್ರವಾಸಕ್ಕೆ ಹೊರಡಲು ಒಂದು ದಿನ ಬಾಕಿ ಇರುವಾಗ, ಈ ಸಣ್ಣ ಮೊತ್ತಕ್ಕೆ ಕಾರ್ಪೋರೇಟ್‌ ಪ್ರಾಯೋಜಕತ್ವ ಬೇಡ ನಾನೇ ಕೊಡುತ್ತೇನೆ ಎಂದು ತಮ್ಮ ಗಳಿಕೆಯಿಂದ ನೀಡಿದರು. ನಾನು ಕಾರ್ದುಂಗ್ಲಾ ಪಾಸ್‌ಗೆ ಹೋಗುವ ಯೋಜನೆ ಹಾಕಿದೆ. ಆಗಿನ ಕಾಲಕ್ಕೆ ಅದು ಅತ್ಯಂತ ಎತ್ತರದಲ್ಲಿರುವ ರಸ್ತೆಯಾಗಿತ್ತು. ಶ್ರೀನಗರದ ಸೋನ್‌ ಮಾರ್ಗದ ಮೂಲಕ ಹೋಗಲಾಗಲಿಲ್ಲ. ಅಲ್ಲಿ ಹಿಮಪಾತವಾಗಿತ್ತು. ನಾವು ಹಿಂದೆ ಬಂದೆವು. ಆದರೂ 19 ರಾಜ್ಯಗಳನ್ನು ಸುತ್ತಿದೆವು.

ಕಾರ್‌ದುಂಗ್ಲಾ ಯಾನವನ್ನು ಪೂರ್ಣಗೊಳಿಸದೆ ಹಿಂದಿರುಗಿದ ನಂತರ ಮೈಸೂರಿನಲ್ಲಿರುವ ಜಾವಾ ಫ್ಯಾಕ್ಟರಿಗೆ ಮತ್ತೊಮ್ಮೆ ಭೇಟಿ ನೀಡಿ, “ನಮಗೆ ಈ ಯಾನವನ್ನು ಪೂರ್ಣಗೊಳಿಸಲಾಗಲಿಲ್ಲ. ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕುತ್ತಿದ್ದೇವೆ, ಇದರ ಹೆಸರು, “ರೀಚ್‌ ಫಾರ್‌ ದಿ ಸ್ಕೈ” . ಎಂದೆ. ನಾವು ಕನ್ಯಾಕುಮಾರಿಯಿಂದ ಆರಂಭಿಸಿ ಮನಾಲಿ ತಲುಪಿ ಅಲ್ಲಿಂದ ಕಾರ್‌ದುಂಗ್ಲಾ ಅಲ್ಲಿಂದ ಕಾಠ್ಮಂಡುಗೆ ಹಿಂದಿರುಗಿ ಬೆಂಗಳೂರಿಗೆ ಹಿಂದಿರುಗುತ್ತೇವೆ ಎಂದೆ. ಅದೇ ರೀತಿ ಯಾನ ಆರಂಭಿಸಿದೆವು. ಇದು ಅತ್ಯಂತ ವೇಗದ ರೈಡ್‌ ಆಗಿತ್ತು. ನಾವು ಭಾರತದ 19 ರಾಜ್ಯಗಳನ್ನು ತಲುಪಿದೆವು. ಜೊತೆಯಲ್ಲಿ ನೇಪಾಳವನ್ನೂ ಸಂದರ್ಶಿಸಿದೆವು. 16 ದಿನಗಳಲ್ಲಿ 11,130 ಕಿಮೀ ದೂರವನ್ನು ಕ್ರಮಿಸಿ ದಾಖಲೆ ನಿರ್ಮಿಸಿದೆವು. ಇದಕ್ಕೆ ನಾವು ಬಳಸಿದ್ದು ಐಡಿಯಲ್‌ ಜಾವಾ ರೋಡ್‌ ಕಿಂಗ್‌ ಬೈಕ್‌. ಅದು ಕಂಪೆನಿಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಲ್ಲಿದ್ದ ಬೈಕ್‌. ಇದು 1991ರ “ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌”ನಲ್ಲಿ ದಾಖಲಾಯಿತು. ಇದೇ ಸಂದರ್ಭದಲ್ಲಿ ಕೋಲ್ಕೊತಾದಿಂದ ಸಲಹುದ್ದೀನ್‌ ಮತ್ತು ನೀನಾ ಚೌಧರಿ ಅವರು 53 ದಿನಗಳಲ್ಲಿ ಜಗತ್ತನ್ನೇ ಸುತ್ತಿ ಬಂದರು. ಹಿಂದೂಸ್ಥಾನ್‌ ಕಾಂಟೆಸ್ಸಾವನ್ನು ಚಲಾಯಿಸಿ ಅವರು ದಾಖಲೆ ಬರೆದರು. ಆಗ ಗಿನ್ನಿಸ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್ಸ್‌ ಕೆಲವೊಂದು ನಿಯಮಗಳನ್ನು ರೂಪಿಸಿತ್ತು. ಆರು ಖಂಡಗಳ ಒಟ್ಟು ಅಂತರವನ್ನು ಸಮಭಾಜಕ ವೃತ್ತದ ಅಂತರ ಅಂದರೆ 40,075 ಕಿಮೀ. ಅಂದರೆ 25,000 ಮೈಲು ಪ್ರಮಾಣದಲ್ಲಿ ಕ್ರಮಿಸಬೇಕಾಗಿತ್ತು. ಅಂದರೆ ಪ್ರತಿಯೊಂದು ಖಂಡದಲ್ಲೂ ಕನಿಷ್ಠ 1000 ಮೈಲು ಕ್ರಮಿಸಬೇಕಾಗಿತ್ತು. ಸವಾಲೆಂದರೆ ಒಮ್ಮೆ ಬಳಸಿದ ಮಾರ್ಗದಲ್ಲಿ ಮತ್ತೊಮ್ಮೆ ಪ್ರಯಾಣಿಸುವಂತಿಲ್ಲ. ಆದ್ದರಿಂದ ಸಲಹುದ್ದೀನ್‌ ಹಾಗೂ ನೀನಾ ಚೌಧರಿ ಆರು ಖಂಡಗಳನ್ನು ಕಾರಿನಲ್ಲಿ ಸವಾರಿ ಮಾಡಿದ ಜಗತ್ತಿನ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನಂತರ ಇಂಗ್ಲೆಂಡ್‌ನಲ್ಲಿ ಬ್ರಿಟಿಷ್‌ ಸೇನಾ ತಂಡ 40 ದಿನಗಳಲ್ಲಿ ಈ ಸಾಧನೆ ಮಾಡಿ ದಾಖಲೆ ಮುರಿಯಿತು. ಇದಕ್ಕೆ ಸವಾಲಾಗಿ ಭಾರತದ ಈ ಜೋಡಿ ಮಿತ್ಸುಬಿಷಿ ಲ್ಯಾನ್ಸರ್‌ನಲ್ಲಿ ವಿಶ್ವ ಪರ್ಯಟನೆ ಮಾಡಿ 39 ದಿನಗಳು ಮತ್ತು ಕೆಲವು ಗಂಟೆಗಳ ಅಂತರದಲ್ಲಿ ಗುರಿ ತಲುಪಿ ಸಾಧನೆ ಮಾಡಿತು. ನಂತರ ದೆಹಲಿಯ ನವೀನ್‌ ಕಪಿಲಾ ಮತ್ತು ತಂಡ 38 ದಿನಗಳು ಮತ್ತು ಕೆಲವು ಗಂಟೆಗಳಲ್ಲಿ ಗುರಿ ತಲುಪಿ ಸಲಹುದ್ದೀನ್‌ ಮತ್ತು ನೀನಾ ಚೌಧರಿಯ ದಾಖಲೆ ಮುರಿದರು. ಆದರೆ ಹಿಂದಿನ ದಾಖಲೆ ಈಗ ದಾಖಲೆಯಾಗಿ ಉಳಿದಿಲ್ಲ. ಗಿನ್ನಿಸ್‌ ಬುಕ್‌ ಆಫ್‌ ರೆಕಾರ್ಡ್ಸ್‌ ಹಿಂದಿನ ದಾಖಲೆಯನ್ನು ಅಳಿಸಿತು. ಸಲಹುದ್ದಿನ್‌ ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರಿದರು.  ನನ್ನ ಹೆಸರನ್ನು ಹಾಗೆಯೇ ಉಳಿಸಿಕೊಳ್ಳಬೇಕೆಂದು ವಾದ ಮಾಡಿದರು. ಇದು ಮತ್ತೆ ನನ್ನ ಗಮನಕ್ಕೆ ಬಂತು. ದ್ವಿಚಕ್ರದಲ್ಲಿ ಈ ಸಾಧನೆ ಮಾಡಬಹುದೇ? ಎಂದು ವಿಚಾರಿಸಿದೆ. ಇದೇ ನಿಯಮದಡಿ ನೀವು ಮಾಡಬಹುದು ಎಂದು ತಿಳಿಸಿದರು.”

ಬೈಕ್‌ನಲ್ಲೇ ವಿಶ್ವ ಪರ್ಯಟನೆ:

“ಕಾರಿನಲ್ಲಿ ದಾಖಲೆ ಮಾಡಿದವರಿಗೆ ಯಾವ ನಿಯಮಗಳು ಅನ್ವಯಿಸುತ್ತವೆಯೋ ಅದೇ ನಿಯಮ ಬೈಕ್‌ನಲ್ಲಿ ಸಾಧನೆ ಮಾಡುವವರಿಗೆ ಅನ್ವಯಿಸುತ್ತದೆ ಎಂದು ಗಿನ್ನಿಸ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್ಸ್ ಸಂಸ್ಥೆಯವರು ತಿಳಿಸಿದರು. 1991ರಲ್ಲಿ ಐಡಿಯಲ್‌ ಜಾವಾ ಲಾಕ್‌ಡೌನ್‌ ಆಯಿತು. ಅಲ್ಲಿಂದ ಐಡಿಯಲ್‌ ಜಾವ ಅವನತಿಯ ಕಡೆಗೆ ಹೆಜ್ಜೆ ಹಾಕಿತು. ಯುವಕರು 100cc ಮೋಟಾರ್‌ ಸೈಕಲ್ ಕಡೆಗೆ ಹೆಚ್ಚಿನ ಒಲವು ತೋರಿದರು. ಮೈಲೇಜ್‌ ಉತ್ತಮ ಇರುವುದರಿಂದ ಎಲ್ಲರೂ 100cc ಬೈಕ್‌ ಖರೀದಿಗೆ ಮುಂದಾದರು. ಇದರಿಂದ ಎಝ್‌ಡಿಗೆ ಬೇಡಿಕೆ ಇಲ್ಲದಾಯಿತು. ಆದರೂ ಅವರು ನಮ್ಮ ಸಾಹಕ್ಕೆ ಬೈಕ್‌ ನೀಡಲು ಬದ್ಧರಾಗಿದ್ದರು. ಎರಡು ವರುಷಗಳು ಕಳೆದವು. 1993ರಲ್ಲಿ ಅಮ್ಮ ನಮ್ಮನ್ನಗಲಿದರು. ಇದರಿಂದ ಮತ್ತೊಂದು ವರ್ಷ ಹಾಗೆಯೇ ಕಳೆಯಿತು.”

“1994ರ ಅಕ್ಟೋಬರ್‌ 8 ರಂದು ನಮ್ಮ ಯಾನ ಆರಂಭವಾಯಿತು. ತಾಂತ್ರಿಕ ಸಲಹೆಗಾರ ಬಸವರಾಜ್‌ ಮತ್ತು ನಾನು ಹೊರಟೆವು. ನಮ್ಮ ಕನಸಿನ ಯಾನ ಆರಂಭಗೊಂಡಿತು. ಆಗ ಸೂರತ್‌ನಲ್ಲಿ ಪ್ಲೇಗ್‌ ಮಾರಿ ಆವರಿಸಿತ್ತು. ನಾವು ದೆಹಲಿ ತಲುಪಿದಾಗ ಭಾರತದಿಂದ ಗಲ್ಫ್‌ ಏರ್‌ವೇಸ್‌ ಬಿಟ್ಟರೆ ಯಾವುದೇ ವಿಮಾನ ಹಾರಾಡುತ್ತಿರಲಿಲ್ಲ. ಅಲ್ಲಿಯ ರೋಟರಿ ಕ್ಲಬ್‌ನ ಸದಸ್ಯರನ್ನು ಸಂಪರ್ಕಿಸಿ, ಹಲವು ಪ್ರಭಾವಗಳನ್ನು ಬೀರಿ ಕೈರೋಗೆ ವಿಮಾನ ಟಿಕೆಟ್‌ ಬುಕ್‌ ಮಾಡುವಲ್ಲಿ ಯಶಸ್ವಿಯಾದೆವು. ನೀವು ಮುಂದಕ್ಕೆ ಹೋಗಿ, ನಿಮ್ಮ ಬೈಕ್‌ ತಲುಪಿಸಲಾಗುವುದು ಎಂದು ಭರವಸೆ ನೀಡಿದರು. ಅದಕ್ಕೆ ಒಪ್ಪಿಕೊಂಡಿದ್ದು ನನ್ನ ಮೊದಲ ಪ್ರಮಾದವಾಗಿತ್ತು. ಆ ಬಳಿಕ ಯಾವುದೇ ಪ್ರಮಾದ ಮಾಡಿರಲಿಲ್ಲ. ಆದರೆ ಮೊದಲ ಪ್ರಮಾದ ಬಹಳ ದುಬಾರಿಯಾಯಿತು. ನಾವು ಈಜಿಪ್ಟ್‌ ತಲುಪಿದೆವು. ಆದರೆ ಬೈಕ್‌ ಬರಲೇ ಇಲ್ಲ. 17 ದಿನಗಳಾದರೂ ಬೈಕ್‌ ಬರಲಿಲ್ಲ. ಗಲ್ಫ್‌ ಏರ್‌ ದಿನಬಳಕೆಯ ವಸ್ತುಗಳಿಗೆ ಮೊದಲ ಆದ್ಯತೆ ನೀಡಿತ್ತು. ಅವರಿಗೆ ಬೈಕ್‌ ಅಗತ್ಯ ವಸ್ತುವಾಗಿರಲಿಲ್ಲ. ನಾವು 17 ದಿನಗಳ ಕಾಲ ಕೈರೋದಲ್ಲಿದ್ದಾಗ ಎಲ್ಲ ವೀಸಾಗಳ ವಾಯಿದೆ ಮುಗಿಯತೊಡಗಿತು. ಎಲ್ಲಾ ವೀಸಾಗಳು ಸಮಯ ಆಧರಿಸಿ ನೀಡಲಾಗಿತ್ತು. ಈ ಸಂದರ್ಭದಲ್ಲಿ ಭಾರತೀಯ ರಾಯಭಾರಿ ಕಚೇರಿ ನಮಗೆ ಎಲ್ಲ ರೀತಿಯ ನೆರವನ್ನು ನೀಡಿತ್ತು. ಅಂತಿಮವಾಗಿ ಬೈಕ್‌ ಈಜಿಪ್ಟ್‌ಗೆ ಬಂದಿಳಿಯಿತು,”

ಅಮಿತಾ ಬಚ್ಚನ್‌ ಹಾಡು ಕೇಳಿ ನಲಿದ ಈಜಿಪ್ಟ್‌ ಸೈನಿಕರು!!:

“ಕೈರೋದಿಂದ ಹೊರಟು 300 ಕಿಮೀ ಸಾಗುತ್ತಿದ್ದಂತೆ ನಮ್ಮನ್ನು ತಡೆಯಲಾಯಿತು. ಆಸ್ವಾನ್‌ ಕಡೆಗೆ ಪ್ರಯಾಣಿಸುವಂತಿಲ್ಲ. ಅಲ್ಲಿ ದಕ್ಷಿಣ ಸೂಡಾನ್‌ನಿಂದ ಸೈನಿಕ ದಾಳಿ ನಡೆದಿದೆ ಎಂದು ತಿಳಿದು ಬಂತು. ಅಲ್ಲಿಯ ಜನರನ್ನು ಈಜಿಪ್ಟ್‌ಗೆ ಕಳುಹಿಸಲಾಗುತ್ತಿದೆ. ಪ್ರಯಾಣಿಕರಿದ್ದ ಬಸ್ಸಿಗೆ ಬೆಂಕಿ ಹಚ್ಚಿದ ಸುದ್ದಿ ಹಬ್ಬಿತ್ತು. ಇದರಿಂದ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದಾಗಿ ಮುಂದಕ್ಕೆ ಪ್ರಯಾಣಿಸುವಂತಿಲ್ಲ ಎಂದರು. ಪೊಲೀಸ್‌ ಚೆಕ್‌ಪೋಸ್ಟ್‌ನಲ್ಲಿದ್ದ ಮಾಧ್ಯಮ ಪ್ರತಿನಿಧಿಯೊಬ್ಬರು ನಮ್ಮ ವಿನಂತಿಯನ್ನು ಭಾಷಾಂತರ ಮಾಡಿ ಪೊಲೀಸರಿಗೆ ತಿಳಿಸಿದರು. ಸ್ವಲ್ಪ ಹೊತ್ತು ಕಾಯಿರಿ, ನಮ್ಮ ಹಿರಿಯ ಅಧಿಕಾರಿಗಳು ಬರುತ್ತಾರೆ, ಅವರೊಂದಿಗೆ ಮಾತನಾಡುವ ಎಂದರು. ಸಮಯ ಕಳೆಯಲು ನಾವು ವಾಕ್‌ಮನ್‌ ಮೂಲಕ ಸಂಗೀತ ಕೇಳಲು ನಿರ್ಧರಿಸಿದೆವು. ನಾವು ಹೆಲ್ಮೆಟ್‌ನಲ್ಲಿಯೇ ರೇಡಿಯೋ ಕೇಳುವ ವ್ಯವಸ್ಥೆ ಮಾಡಿಕೊಂಡಿದ್ದೆವು. ಅದು ನಮ್ಮಿಬ್ಬರ ನಡುವೆ ಮಾತನಾಡುವ ಸಲುವಾಗಿ ಮಾಡಿದ್ದು. ರೈಡ್‌ ಮಾಡುವಾಗ ಅದರಲ್ಲೇ ವಾಕ್‌ಮನ್‌ ಮೂಲಕ ಸಂಗೀತ ಕೇಳುತ್ತಿದ್ದೆವು. ತಡೆದ ಸ್ಥಳದಲ್ಲಿ ನಾವು ವಾಕ್‌ಮನ್‌ ಮೂಲಕ ಸಂಗೀತ ಕೇಳಲು ಅನುವಾಗುತ್ತಿದ್ದಂತೆ, ಮಿಲಿಟರಿ ಪಡೆಯ ಒಬ್ಬ ಯೋಧ, “ಏನು ಕೇಳುತ್ತಿದ್ದೀರಿ?, ಕೊಡಿ ಇಲ್ಲಿ” ಎಂದು ಗದರಿಸಿದ. ಅವರ ಕೈಗೆ ನಮ್ಮ ವಾಕ್‌ಮನ್‌ ನೀಡಿದೆವು. ಆಗ ಶರಾಬಿ ಹಾಡನ್ನು ಕೇಳುತ್ತಿದ್ದೆವು. ಹಾಡು ಕೇಳುತ್ತಿದ್ದಂತೆ ಸೈನಿಕ, “ಯೇ… ಎಮಿತಾ ಬಚ್ಚನ್‌… ಎಮಿತಾ ಬಚ್ಚನ್‌ ಎಂದು ಸಂಭ್ರಮಿಸಿದ” ಅದೇ ವೇಳೆ ಹಿರಿಯ ಸೇನಾಧಿಕಾರಿಯೂ ಆಗಮಿಸಿದರು. ಅವರಿಗೂ ಅಮಿತಾಬ್‌ ಬಚ್ಚನ್‌ ಹಾಡು ಕೇಳಿಸಿದೆವು. ಅವರೂ ಸಂಭ್ರಮದಿಂದ ಕುಣಿದರು. ಅಲ್ಲಿ ಅಮಿತಾಬ್‌ ಬಚ್ಚನ್‌ ಹಾಡು ಜನಪ್ರಿಯವಾಗಿರುವುದನ್ನು ಕಂಡು ಅಚ್ಚರಿ ಮತ್ತು ಖುಷಿಯಾಯಿತು. ಆಮೇಲೆ ನಿಮಗೆ ಈ ವಿಷಯ ಕೇಳಿ ಅಚ್ಚರಿಯಾಗುತ್ತದೆ. “ಅವರು ನಮ್ಮನ್ನು ಸೈನಿಕರ ಬೆಂಗಾವಲಿನಲ್ಲಿ ಕಳುಹಿಸಿಕೊಟ್ಟರು. ಒಂದು ಮಿಟಲರಿ ಗನ್‌ ಇರುವುದು ಎದುರುಗಡೆ ಮತ್ತು ನಮ್ಮ ಹಿಂದುಗಡೆ ಸೆಡಾನ್‌. 700 ಕಿಮೀ ದೂರವನ್ನು ನಾವು ಸೈನಿಕರ ಬೆಂಗಾವಲಿನಲ್ಲಿ ಪ್ರಯಾಣಿಸಿದೆವು. ಅಲ್ಲಿಂದ ಆಸ್ವಾನ್‌ ವರೆಗೂ ನಮಗೆ ಭದ್ರತೆ. ಒಂದು ರೂಪಾಯಿ ಕೂಡ ಕೇಳಿಲ್ಲ. ಊಟ, ತಿಂಡಿ, ಅವರು ಹೇಳಿದ ಕಡೆ ನಿಲ್ಲಿಸುವುದು, ಪೆಟ್ರೋಲ್‌ ಎಲ್ಲವನ್ನೂ ನೀಡಿ ನಮ್ಮನ್ನು ಖುಷಿಯಲ್ಲಿ ಬೀಳ್ಕೊಟ್ಟರು. “ನೀವು ಎಷ್ಟು ಸ್ಪೀಡಲ್ಲಿ ಹೋಗುತ್ತೀರಿ?” ಎಂದು ಕೇಳಿದರು. 80-90 ಅಂದೆವು. ಕೆಲವು ಕಡೆ ನಿಲ್ಲಿಸುವಂತಿಲ್ಲ. ಅದಕ್ಕಾಗಿ ಪೆಟ್ರೋಲ್‌ ಯಾವಾಗಲೂ ತುಂಬಿರಲಿ ಎಂದು ಸಲಹೆ ನೀಡಿದರು. ನಮಗೆ ಈಜಿಪ್ಟ್‌ನಲ್ಲಿ ಅಗತ್ಯವಿರುವಷ್ಟು ಮೈಲಿಗಳನ್ನು ತಲುಪಲು ಸಾಧ್ಯವಾಯಿತು. ಅದೂ ಈಜಿಪ್ಟ್‌ನ ಸೈನಿಕರಿಂದ.”

“ನಂತರ ನಾವು ಕೈರೋದಿಂದ ರೋಮ್‌ಗೆ ಪ್ರಯಾಣಿಸಿದೆವು. ಅಲ್ಲಿಂದ ಯೂರೋಪ್‌ ಯಾನ. ಇಟಲಿಯಿಂದ ಆಸ್ಟ್ರಿಯಾ, ಚೆಕ್‌ ಗಣರಾಜ್ಯ, ಜರ್ಮನಿ, ಫ್ರಾನ್ಸ್‌ ಮತ್ತು ಇಂಗೆಂಡ್‌ ತಲುಪಿದೆವು. ಇಂಗ್ಲೆಂಡ್‌ನಲ್ಲಿ ನನಗೆ ಸಾಕಷ್ಟು ಗೆಳೆಯರಿದ್ದರು. ಈ ಸಾಹಸಕ್ಕೆ ಕೆನರಾ ಬ್ಯಾಂಕ್‌ ನನಗೆ ಪ್ರಾಯೋಕರು. ವಿದೇಶಿ ವಿನಿಮಯಗಳನ್ನು ಅವರಲ್ಲೇ ಮಾಡಿದ್ದರಿಂದ ಅವರು ಪ್ರಾಯೋಜಕರು. ಅವರು ನಮಗೆ ಯಾವುದೇ ರೀತಿಯ ಹಣ ಕೊಟ್ಟಿಲ್ಲ. ಆದರೆ ಅವರು ನಮ್ಮ ಅಧಿಕೃತ ಬ್ಯಾಂಕರ್.‌ ಏಕೆಂದರೆ ರಾಜಾಜಿನಗರದ ಕೆನರಾ ಬ್ಯಾಂಕ್‌ ನಮಗೆ ಬ್ಯಾಂಕ್‌ ಗ್ಯಾರೆಂಟಿ ನೀಡಿತ್ತು. ಮೋಟಾರ್‌ ಸೈಕಲ್‌ ಹಿಂದಕ್ಕೆ ಬಾರದಿದ್ದರೆ ಬ್ಯಾಂಕ್‌ ಗ್ಯಾರೆಂಟಿ ನೀಡಿದ್ದರು.”

ಬೈಕ್‌ಗೂ ಪಾಸ್‌ಪೋರ್ಟ್‌!:

“ನಮಗೆ ವಿದೇಶ ಯಾನ ಮಾಡಲು ಪಾಸ್‌ಪೋರ್ಟ್‌ ಹೇಗೆ ಅಗತ್ಯವೋ ಅದೇ ರೀತಿಯಲ್ಲಿ ಬೈಕ್‌ಗೂ ಪಾಸ್‌ಪೋರ್ಟ್‌ ಇದೆ, ಹೆಸರು ಕಾರ್ನೆಟ್‌ ಡಿ ಪಸಾಜ್‌ (Carnet De Passage) ಅದಿಲ್ಲದೆ ಭಾರತದಿಂದ ಹೊರ ದೇಶಗಳಿಗೆ ಮೋಟಾರ್‌ ಬೈಕ್‌ಗಳನ್ನು ಕೊಂಡೊಯ್ಯುವಂತಿಲ್ಲ. ಇದು ಫ್ರೆಂಚ್‌ ದಾಖಲೆ. ಅಂತಾರಾಷ್ಟ್ರೀಯ ಅಟೋಮೊಬೈಲ್‌ ಅಸೋಸಿಯೇಷನ್‌ ಇದನ್ನು ಕೊಡಮಾಡುತ್ತದೆ. ಭಾರತದಲ್ಲಿ ಇದನ್ನು ಮುಂಬೈಯಲ್ಲಿರುವ ವೆಸ್ಟರ್ನ್‌ ಇಂಡಿಯಾ ಆಟೋಮೊಬೈಲ್‌ ಅಸೋಸಿಯೇಷನ್‌ ಕೊಡಮಾಡುತ್ತದೆ. ಬೈಕ್‌ಗೆ ಪಾಸ್‌ಪೋರ್ಟ್‌ ಮಾಡಿಸಬೇಕಾದರೆ ಮೋಟಾರ್‌ ಬೈಸಿಕಲ್‌ನ ಮೌಲ್ಯದ 200% ಡೆಪಾಸಿಟ್‌ ಅಥವಾ ಬ್ಯಾಂಕ್‌ ಗ್ಯಾರೆಂಟಿ ನೀಡದರೆ ಮಾತ್ರ ಬೈಕ್‌ ಪಾಸ್‌ಪೋರ್ಟ್‌ ನೀಡುತ್ತಾರೆ.”

“ನನ್ನ ಬೈಕ್‌ 1979 ಮಾಡೆಲ್‌. ಆದ್ದರಿಂದ ಬ್ಯಾಂಕ್‌ ಗ್ಯಾರೆಂಟ್‌ ಒಂದೈದು ಸಾವಿರ ರೂ. ಬ್ಯಾಂಕ್‌ ಗ್ಯಾರೆಂಟಿಯನ್ನು ಬೆಂಗಳೂರಿನ ರಾಜಾಜಿನಗರದ ಕೆನರಾ ಬ್ಯಾಂಕ್‌ ನೀಡಿತ್ತು. ಯಾವುದೇ ಡೆಪಾಸಿಟ್‌ ಇಲ್ಲದೆ ನೀಡಿರುವುದು ದೊಡ್ಡ ಉಪಕಾರ. ಹೊರಡುವಾಗ, ವಿಂಬ್ಲೆಯಲ್ಲಿ ನಮ್ಮ ಅತಿಥಿ ಗೃಹವಿದೆ, ಅಲ್ಲಿ ಉಳಿದುಕೊಳ್ಳಬಹುದು, ಎಂದು ಹೇಳಿದ್ದರು. ನಾವು ಇಂಗ್ಲೆಂಡ್‌ ತಲುಪಿ ಕೆನರಾ ಬ್ಯಾಂಕ್‌ ಗೆಸ್ಟ್‌ ಹೌಸ್‌ನಲ್ಲಿ ಉಳಿದುಕೊಂಡಿದ್ದೆವು. ಅಲ್ಲಿ ಜಿಎಸ್‌ಬಿ ಸಮಾಜ, ಕನ್ನಡಿಗರ ಸಂಘದ ಅನೇಕ ಕನ್ನಡಿಗರನ್ನು ಭೇಟಿಯಾಗಲು ಸಾಧ್ಯವಾಯಿತು. ಅಲ್ಲಿ ಒಬ್ಬರು ನಮ್ಮ ತಾತನ ಬಗ್ಗೆ ತಿಳಿದಿದ್ದರು. ಅಲ್ಲಿ ಅವರು ನಮಗೆ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪರಿಚಯ ಮಾಡಿಸಿದರು. ಇಂಗ್ಲೆಂಡ್‌ನಲ್ಲಿ ಗುಜರಾತಿ ಸಮುದಾಯ ಅತ್ಯಂತ ಬಲಿಷ್ಠ ಸಮುದಾಯವಾಗಿದೆ. ಅಲ್ಲಿ ಒಬ್ಬರಿಗೆ ಏರ್‌ ಇಂಡಿಯಾದ ಸಂಪರ್ಕ ಚೆನ್ನಾಗಿತ್ತು. ಅವರು ನಮಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಟಿಕೆಟ್‌ಗೆ ಮಾತನಾಡಿದರು. ಅದರ ವೆಚ್ಚವನ್ನು ಅವರೇ ಭರಿಸಿದರು.,”

ಬೈಕ್‌ ಬೇರೆ, ಸೈಕಲ್ಲೇ ಬೇರೆ!!!

“ನಾವಿಲ್ಲಿ ಮೋಟಾರ್‌ ಬೈಕ್‌ಗೆ ಬೈಕ್‌ ಎಂದು ಕರೆಯುತ್ತೇವೆ, ಆದರೆ ಇಂಗ್ಲೆಂಡ್‌ನಲ್ಲಿ  ಸೈಕಲ್‌ಗೆ ಬೈಕ್‌  ಎನ್ನುತ್ತಾರೆ. ಅದು ನಮಗೆ ಬಹಳ ತಡವಾಗಿ ಗೊತ್ತಾಯಿತು. ನಾನು ಅವರಲ್ಲಿ “ಮೈ ಬೈಕ್‌ ಮೈ ಬೈಕ್‌ “ ಎಂದು ಮಾತನಾಡುತ್ತಿದ್ದೆ, ಅವರು ಅದಕ್ಕೆ “ಓಕೆ, ಯೂ ಕಮ್‌ ಟು ಹೀ ಥ್ರೂ, ವಿ ವಿಲ್‌ ಅರೇಂಜ್‌ ಬೈಕ್”‌ ಎನ್ನುತ್ತಿದ್ದರು. ಬೆಳಿಗ್ಗೆ ಹತ್ತು ಗಂಟೆಗೆ ನಾವು ಹೊರಡಲು ಅನುವಾದೆವು, ಆಗ ಬೈಕಿನ ಟಯರ್‌, ಎಂಜಿನ್‌ ಆಯಿಲ್‌ ತೆಗೆಯಬೇಕು. ಪೆಟ್ರೋಲ್‌ ಟ್ಯಾಂಕ್‌ ಖಾಲಿ ಮಾಡಬೇಕು, ಬ್ಯಾಟರಿ ತೆಗೆಯಬೇಕು, ಬ್ಯಾಟರಿಯ ಡಿಸ್ಟಿಲ್‌ ವಾಟರ್‌ ತೆಗೆಯಬೇಕು, ಇದು ಕ್ರಮ. ಬೆಳಿಗ್ಗೆ ಹೀ ಥ್ರೂ ವಿಮಾ ನಿಲ್ದಾಣಕ್ಕೆ ಹೋದಾಗ ಅಲ್ಲಿ ಏರ್‌ಪೋರ್ಟ್‌ ಮ್ಯಾನೇಜರ್‌ ಆಗಿ ಆರತಿ ಎನ್ನುವವರು ಕಾರ್ಯನಿರ್ವಹಿಸುತ್ತಿದ್ದರು. “ಬೈಕ್‌ ಹೊರಗಡೆ ಇದೆ” ಎಂದೆ, “ಸರಿ ಒಳಗಡೆ ತನ್ನಿ” ಎಂದರು. ತಂದಾಗ ಗೊಂದಲ ಮನೆ ಮಾಡಿತ್ತು. “ನಿಮಗೆ ಸೈಕಲ್‌ ತೆಗೆದುಕೊಂಡು ಹೋಗಲು ಮಾತ್ರ ಅನುಮತಿ ಇದೆ ಬೈಕ್‌ ಅಲ್ಲ” ಎಂದರು. ಅಚ್ಚರಿಯಾಯಿತು. ಸರಿ, ಯುಕೆಯಲ್ಲಿ ಏರ್‌ ಇಂಡಿಯಾ ಪ್ರಮುಖರಾಗಿರುವ ಮಿಶ್ರಾ ಅವರೊಂದಿಗೆ ಮಾತನಾಡುವೆ, ಎಂದರು.”

ಹಿಥ್ರೂ ವಿಮಾ ನಿಲ್ದಾಣದಲ್ಲಿ ಜಾವಾ ಬೈಕ್‌ಗೆ ಸಿಕ್ಕ ಗೌರವ!:

“ಸರಿ,  ಮಾತನಾಡಿದ ನಂತರ, “ವಿಶೇಷ ಅನುಮತಿಯಲ್ಲಿ ನಿಮಗೆ ಲಗೇಜ್‌ ವಿಭಾಗದಲ್ಲಿ ಬೈಕ್‌ಗೆ ಅವಕಾಶ ಮಾಡುತ್ತೇವೆ” ಎಂದರು. “ನಿಮ್ಮ ಮೋಟಾರ್‌ ಸೈಕಲ್‌ ತನ್ನಿ” ಎಂದರು. “ಇದನ್ನು ಸಾಮಾನ್ಯವಾಗಿ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಬೋರ್ಡಿಂಗ್‌ ಪಾಸ್‌ ಪಡೆಯುವಲ್ಲಿ ನನ್ನ ಬೈಕ್‌ ನಿಲ್ಲಿಸಿದ್ದೆ. ಇದು ಜಗತ್ತಿನ ಅತ್ಯಂತ ಜನನಿಬಿಡ ಮತ್ತು ಕಾರ್ಯನಿರತ ವಿಮಾನ ನಿಲ್ದಾಣ. ಅಲ್ಲಿಯ ಕಮಾಂಡರ್‌ ನಡೆದು ಹೋಗುತ್ತಿದ್ದ, ಕೂಡಲೇ ನಮ್ಮ ಬೈಕ್‌ ಕಡೆಗೆ ನೋಡಿ “ಹೇ ಇಟ್ಟ್‌ ಲುಕ್‌ ಲೈಕ್‌ ಎ ಜಾವಾ” ಎಂದು ಹತ್ತಿರಕ್ಕೆ ಬಂದರು. “ಸರ್‌ ಇದು ಯೆಝ್‌ಡಿ, ಮೈಸೂರಿನಲ್ಲಿರುವ ಐಡಿಯಲ್‌ ಜಾವಾ ಇದನ್ನು ಉತ್ಪಾದಿಸುತ್ತದೆ,” ಎಂದೆ. “ಹೋ… ನಮ್ಮ ತಂದೆಯವರು ಜಾವಾ ಬಳಸುತ್ತಿದ್ದರು,” ಎಂದರು. ಇದು ಸಾಮಾನ್ಯ. “ನಾವು ಈ ಬೈಕ್‌ನಲ್ಲಿ ವಿಶ್ವ ಪರ್ಯಟನೆ ಮಾಡುತ್ತಿದ್ದೆವು,” ಎಂದೆ. ಮಾತಿನ ಮಧ್ಯೆ, “ಏರ್‌ಬಾರ್ನ್‌ ಆದ ಬಳಿಕ  ಕಾಕ್‌ಪಿಟ್‌ ನೋಡುವ ಅವಕಾಶ ಸಿಗಬಹುದಾ?” ಎಂದು ಕೇಳಿದೆ. “ಲೆಟ್‌ ಯು ನೋ ವಿದ್‌ ಏರ್‌ ಹಾಸ್ಟೆಸ್‌” ಎಂದು ಹೇಳಿ ಹೋದರು. ನಮಗೆ ವಿಮಾನದ ಒಳಗಡೆ ಪ್ಯಾಸೆಂಜರ್‌ ಲಗೆಜ್‌ ಹಾಕುವಲ್ಲಿ ಬೈಕ್‌ ಇರಿಸಲು ಅವಕಾಶ ಕಲ್ಪಿಸಲಾಯಿತು. ವಿಮಾನ ಟೇಕ್‌ ಆಫ್‌ ಆಗಿ ಸ್ವಲ್ಪ ಹೊತ್ತಿನ ಬಳಿಕ ಏರ್‌ ಹಾಸ್ಟೆಸ್‌ ಒಬ್ಬರನ್ನು ಕರೆದು “ಕಾಕ್‌ಪಿಟ್‌ ನೋಡಲು ಕ್ಯಾಪ್ಟನ್‌ ಅವರನ್ನು ವಿನಂತಿಸಿಕೊಂಡಿದ್ದೆ, ದಯವಿಟ್ಟು ಕೇಳಿ,” ಎಂದೆ. ಇದೆಲ್ಲ 9/11 ಗಿಂತ ಮೊದಲೇ ನಡೆದದ್ದು. ಆಗ ಜಗತ್ತು ಅಷ್ಟು ಅಭದ್ರವಾಗಿರಲಿಲ್ಲ. ಸ್ವಲ್ಪ ಹೊತ್ತಿನ ನಂತರ ನಮಗೆ ಕಾಕ್‌ಪಿಟ್‌ ಪ್ರವೇಶಿಸುವ ಅವಕಾಶ ಸಿಕ್ಕಿತು. ನಾನು ಮತ್ತು ನನ್ನ ಗೆಳೆಯ ಒಟ್ಟಿಗೆ ಹೋದೆವು. ಫ್ಲ್ಯಾಶ್‌ ಇಲ್ಲದ ಫೋಟೋ ಕ್ಲಿಕ್ಕಿಸಿದೆವು. ಆಗ ನಾವು ಅಟ್ಲಾಂಟಿಕ್‌ ಸಾಗರದ ಮೇಲಿಂದ ಪ್ರಯಾಣಿಸುತ್ತಿದ್ದೆವು. ನಾವು ಸುಮಾರು  ಐದೂವರೆ ಗಂಟೆಗಳ ಕಾಲ ಕಾಕ್‌ಪಿಟ್‌ನಲ್ಲಿ ಕುಳಿತು ಜಗತ್ತಿನ ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡಿದೆವು. ನನಗೆ ಬರೇ ಐದು ನಿಮಿಷಗಳ ಅವಕಾಶ ಸಿಗಬಹುದು ಎಂದು ಊಹಿಸಿದ್ದೆ, ಆದರೆ ಕಮಾಂಡೋ ಅವರ ತಂದೆ ಜಾವಾ ಬೈಕ್‌ ಹೊಂದಿದ್ದ ಕಾರಣ ಅಲ್ಲಿ ನಂಬಿಕೆ ಮನೆ ಮಾಡಿತ್ತು, ಜಾನ್‌ ಎಫ್‌ ಕೆನಡಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ನಮಗಿಂತ ನಮ್ಮ ಬೈಕ್‌ಗೆ ಸಿಕ್ಕ ಗೌರವ ಅಪೂರ್ವವಾಗಿತ್ತು. ಜೆಎಫ್‌ಕೆ ಗ್ರೀನ್‌ ಚಾನೆಲ್‌ನಲ್ಲಿ ನಮ್ಮ ಬೈಕ್‌. ಈ ರೀತಿ ಭಾರತೀಯರಿಂದ ಮಾತ್ರ ಸಾಧ್ಯ ಎಂದು ವಲಸೆ ಅಧಿಕಾರಿ ಹೇಳಿದ್ದನ್ನು ಕೇಳಿಸಿಕೊಂಡೆ. ಅದನ್ನು ನಾನು ಜೀವಮಾನ ಪರ್ಯಂತ ಮರೆಯುವಂತಿಲ್ಲ.,”

21 ದಿನಗಳಲ್ಲಿ 20,030 ಕಿಮೀ ಪ್ರಯಾಣ:

“ಅಲ್ಲಿಂದ ನಾವು ಅಮೆರಿದಕಲ್ಲಿ 21 ದಿನಗಳಲ್ಲಿ 20,030 ಕಿಮೀ ದೂರವನ್ನು ಪ್ರಯಾಣಿಸಿ ಅಲ್ಲಿಂದ ಮಯಾಮಿ, ಅಲ್ಲಿಂದ ಅರ್ಜೆಂಟೀನಾದ ಬ್ಯೂನಸ್‌ಐರಿಸ್‌ ತಲುಪಿದೆವು. ಅಲ್ಲಿ ಅಗತ್ಯವಿರುವ ಕಿಲೋ ಮೀಟರ್‌ಗಳನ್ನು ಕ್ರಮಿಸಿ, ಅಲ್ಲಿಂದ ಆಸ್ಟ್ರೇಲಿಯಾದ ಬ್ರಿಸ್ಬನ್‌ ತಲುಪಿದೆವು. ಬ್ರಿಸ್ಬನ್‌ನಿಂದ ರಸ್ತೆ ಮಾರ್ಗವಾಗಿ ಪರ್ಥ್‌ ತಲುಪಿದೆವು. ಇದು ಆಸ್ಟ್ರೇಲಿಯಾ ಪೂರ್ವ ತುದಿಯಿಂದ ಪಶ್ಚಿಮ ತುದಿವರೆಗಿನ ಪ್ರಯಾಣ. ಅಲ್ಲಿಂದ ಚೆನ್ನೈ ತಲುಪಿದೆವು. 40,000 ಕಿಮೀ ಪೂರ್ಣಗೊಳಿಸಬೇಕಾಗಿರುವುದರಿಂದ ಚೆನ್ನೈಯಿಂದ ರಸ್ತೆ ಮಾರ್ಗವಾಗಿ ದೆಹಲಿಗೆ ಪ್ರಯಾಣಿಸಿದೆವು. ಅಲ್ಲಿಂದ ಜೈಪುರ, ಹೋಗುವಾಗ ಬೆಂಗಳೂರಿನಿಂದ ನಾಗ್ಪುರ ಮಾರ್ಗವಾಗಿ ದೆಹಲಿ ತಲುಪಿದ್ದೆವು, ಈ ಬಾರಿ ದೆಹಲಿಯಿಂದ ಜೈಪುರ, ಜೈಪುರದಿಂದ ಮುಂಬೈ ಮತ್ತು ಮುಂಬೈಯಿಂದ ಬೆಂಗಳೂರು ತಲುಪಿದೆವು,”

42,038 ಕಿಮೀ, 47 ರೈಡಿಂಗ್‌ ದಿನಗಳ, 119 ಒಟ್ಟು ದಿನಗಳು….ಇದು ವಿಶ್ವ ದಾಖಲೆ:

“ಒಟ್ಟು 119 ದಿನಗಳಲ್ಲಿ 47 ರೈಡಿಂಗ್‌ ದಿನಗಳು, 42,038 ಕಿಮೀ ದೂರ ಕ್ರಮಿಸಿದೆವು. ಇದು 1995ರಲ್ಲಿ ವಿಶ್ವದಾಖಲೆಯಾಗಿ ದಾಖಲಾಯಿತು. ಇದು ಗೂಗಲ್‌ ಹುಟ್ಟುವುದಕ್ಕೆ ಮೊದಲೇ ಮಾಡಿದ ಸಾಧನೆ. ಗೂಗಲ್‌ ಹುಟ್ಟಿದ್ದು 1998ರಲ್ಲಿ. ಗೂಗಲ್‌ ಮ್ಯಾಪ್‌ ಬಳಸಿಲ್ಲ. ಇಂಟರ್‌ನೆಟ್‌ ಇರಲಿಲ್ಲ. ಮೊಬೈಲ್‌ ಫೋನ್‌, ಸ್ಯಾಟ್‌ಲೈಟ್‌ ಫೋನ್‌ ಇರಲಿಲ್ಲ. ಯಾವುದೇ ರೀತಿಯ ಬಾಹ್ಯ ಸಹಾಯ ತೆಗೆದುಕೊಂಡಿಲ್ಲ.”.

“ಬಾಹ್ಯ ವಿಜ್ಞಾನವನ್ನ ಬಳಸದೆ ಭಾರತೀಯರಿಬ್ಬರು, ಅದರಲ್ಲೂ ಕನ್ನಡಿಗರು ಮಾಡಿರುವ ಈ ಸಾಧನೆ ಅಪೂರ್ವ ಹಾಗೂ ಅದ್ವಿತೀಯ. ಈ ಸಾಧನೆ ನಿಮಗೆ ತೃಪ್ತಿ ತಂದಿದೆಯಾ ಕೇಳಿದರೆ ನಾನು ಇಲ್ಲವೆಂದೇ ಉತ್ತರ ನೀಡುವೆ. ನಾವು ಅತ್ಯಂತ ವೇಗದಲ್ಲಿ ಜಗತ್ತಿನ ಏಳು ಖಂಡಗಳನ್ನು ತಲುಪಿದ್ದೇವೆ, 1997ರಲ್ಲಿ ಇಂಗ್ಲೆಂಡಿನ ನಿಕ್‌ ಸ್ಯಾಂಡರ್ಸ್‌ ಇಕ್ವೇಟರ್‌ ಉದ್ದದ ನಿಯಮವನ್ನು ಹಿಂಪಡೆದ ಸಂದರ್ಭದಲ್ಲಿ ಈ ಸಾಧನೆ ಮಾಡಿದ್ದರು. ಆದರೆ ಎಲ್ಲ ಖಂಡಗಳನ್ನು ಅವರು ತಲುಪಿದಲ್ಲ. ಅದು ನಮ್ಮ ಅರ್ಧದಷ್ಟು ಸಾಧನೆಯಾಗಿತ್ತು. ಆದ್ದರಿಂದ ದಾಖಲೆ ಈಗಲೂ ದೀಪಕ್‌ ಕಾಮತ್‌ ಹಾಗೂ ಬಸವರಾಜ್‌ ಅವರ ಹೆಸರಿನಲ್ಲಿದೆ. ಮೆಕ್ಯಾನಿಕಲ್‌ ಬಸವರಾಜ್‌ ಈಗಲೂ ಕಾಮಾಕ್ಷಿಪಾಳ್ಯದಲ್ಲಿ ತಮ್ಮದೇ ಆದ ಸರ್ವಿಸ್‌ ಸೆಂಟರ್‌ ನಡೆಸುತ್ತಿದ್ದಾರೆ,”

ದಾಖಲೆಯ ನಂತರದ ಬದುಕು….

“ಸಾಹಸ ಬದುಕು ಅಲ್ಲಿಗೆ ಮುಗಿಯಲಿಲ್ಲ. 1996ರಲ್ಲಿ ಅನಿತಾ ಅವರೊಂದಿಗೆ ಮದುವೆಯಾಯಿತು. ಬೈಕ್‌ ರೈಡಿಂಗ್‌ನಿಂದ ಸಂಪೂರ್ಣವಾಗಿ ಹೊರಗಿದ್ದೆ. ಒಂದೂವರೆ ವರ್ಷ ಯಝಡಿ ಜೊತೆ ಕೆಲಸ ಮಾಡುತ್ತಿದ್ದೆ. 1996 ಆರಂಭದಲ್ಲಿ ಯಝಡಿ ಮುಚ್ಚಲ್ಪಟ್ಟಿತು. ಆಗ ಬೇರೆ ಕೆಲಸ ನೋಡುವಂತೆ ಕಂಪೆನಿಯವರೇ ಕರೆದು ಹೇಳಿದರು. ಕುಟುಂಬದ ಕಡೆಗೆ ಗಮನ ಹರಿಸಬೇಕಾಯಿತು. ಮಗಳು ಅನುಷ್ಕಾ ಹುಟ್ಟಿದಳು. ದೇಶ ಸುತ್ತುವ ಬಗ್ಗೆ ಯಾವ ರೀತಿಯ ಆಸಕ್ತಿ ವಹಿಸಿದ್ದೆನೋ, ಅದೇ ರೀತಿ ಈಗ ಬದುಕಿನ ಬಗ್ಗೆ ಗಮನ ಹರಿಸತೊಡಗಿದೆ. ಎಲ್ಲವೂ ಸಾಂಗವಾಗಿ ನಡೆಯಿತು. 2015ರಲ್ಲಿ ಮಗಳು ಓದಲು ಚೆನ್ನೈಗೆ ತೆರಳಿದಳು. ಆಗ ನನ್ನ ಪತ್ನಿ ಮತ್ತೆ ಯಾಕೆ ಮೋಟಾರ್‌ ಸೈಕಲ್‌ ಯಾನ ಆರಂಭಿಸಬಾರದು ಎಂದು ಕೇಳಿದಳು. 2015ರಲ್ಲಿ ನನ್ನ ಪತ್ನಿ ಬೆನೆಲಿ 600 ಬೈಕ್‌ ಖರೀದಿಸಲು ನೆರವಾದಳು. ಕಡಿಮೆಯಾದ ಹಣವನ್ನು ಆಕೆಯೇ ಭರಿಸಿದಳು. ಅದೇ ವರ್ಷ ಅಕೆಯನ್ನು ಕರೆದುಕೊಂಡು ಅರುಣಾಚಲ ಪ್ರದೇಶ ಮತ್ತು ಭೂತಾನ್‌ ಹೋದೆ. ಬರುತ್ತ ದೆಹಲಿ ಮೂಲಕ ಹಾದು ಬಂದೆವು. ಸವಾರಿ ಬೈಕ್‌ನಲ್ಲೇ. 2016ರಲ್ಲಿ ಸಿಕ್ಕಿಂ ಮತ್ತು ನೇಪಾಳ್‌ಗೆ ಹೋದೆವು,”

ಮೂಳೆಗಳ ರಸ್ತೆಯಲ್ಲಿ ಸವಾರಿ ಮಾಡಿದ ಮೊದಲ ಭಾರತೀಯ:

“2017ರಲ್ಲಿ ಬಜಾಜ್‌ ಜೊತೆ ಸಂಬಂಧ. ಆಗ ಬಜಾಜ್‌ ಡೊಮಿನರ್‌ ಬಿಡುಗಡೆಯಾಯಿತು. ಮೂರು ಮೋಟಾರ್‌ ಸೈಕಲ್‌ಗಳುನ್ನು “ಸ್ತಾನ್‌” ದೇಶಗಳಲ್ಲಿ ಯಾನ ಮಾಡುವ ಪ್ರಸ್ತಾವನೆ, ಅದು ಉಜ್ಬೆಕಿಸ್ತಾನ್‌, ತಜಕಿಸ್ತಾನ್‌, ಕಿರ್ಗಿಸ್ತಾನ್‌, ಕಜಕಿಸ್ತಾನ್‌, ಮಂಗೋಲಿಯಾ ಮತ್ತು ರಷ್ಯಾ ದೇಶಗಳಲ್ಲಿ ಸವಾರಿ ಮಾಡುವ ಅವಕಾಶ. ಇದೇ ವೇಳೆ “ರೋಡ್‌ ಆಫ್‌ ಬೋನ್ಸ್‌” ಅಂದರೆ ಮೂಳೆಗಳ ರಸ್ತೆಯಲ್ಲಿ ಸವಾರಿ ಮಾಡಿದೆ. ಈ ಅಪಾಯಕಾರಿ ರಸ್ತೆಯಲ್ಲಿ ಸವಾರಿ ಮಾಡಿದ ಮೊದಲ ಭಾರತೀಯ. ಇದು ರಷ್ಯಾದಲ್ಲಿದೆ. ಈ ರಸ್ತೆಯನ್ನು ನಿರ್ಮಿಸುವಾಗ ಸಾವಿರಾರು ಕಾರ್ಮಿಕರು ಸಾವಿಗೀಡಾದರು. ಅವರನ್ನು ರಸ್ತೆಯ ಅಡಿಯಲ್ಲೇ ಹಾಕಿ ನಿರ್ಮಿಲಾಯಿತು. ಕಾರಣಕ್ಕೆ ರೋಡ್‌ ಆಫ್‌ ಬೋನ್ಸ್‌ ಎಂದು ಕರೆಯುತ್ತಾರೆ. ರಷ್ಯಾದ ದೊರೆ ಸ್ಟಾಲಿನ್‌ ಕಾಲದಲ್ಲಿ ನಿರ್ಮಾಣವಾಯಿತು. ಜಗತ್ತಿನ ಅತ್ಯಂತ ಅಪಾಯಕಾರಿ ರಸ್ತೆಗಳಲ್ಲಿ ಐದನೇ ಸ್ಥಾನದಲ್ಲಿದೆ ಈ ರಸ್ತೆ. ನನ್ನ ಜೊತೆ ಬೆಂಗಳೂರಿನ ಸುಧೀರ್‌ ಮತ್ತು ದಿಲಿಪ್‌ ಎಂಬ ಇಬ್ಬರು ರೈಡರ್‌ಗಳಿದ್ದರು. ನಾವು ಬೆಂಗಳೂರಿನಿಂದ ಹೊರಟು 45 ದಿನಗಳಲ್ಲಿ 16,000 ಕಿಮೀ ಕ್ರಮಿಸಿದೆವು. ಟ್ರಾನ್ಸ್‌ ಸೈಬೀರಿಯನ್‌ ಹೈವೆ ಸೇರಿದಂತೆ ಜಗತ್ತಿನ ಅತಿ ಸುಂದರ, ಅತಿ ಅಪಾಯಕಾರಿ ರಸ್ತೆಗಳಲ್ಲಿ ಪ್ರಯಾಣಿಸಿದೆವು. ಈ ಯಾನದ ಹೆಸರೇ “ಟ್ರಾನ್ಸ್‌ ಸೈಬೀರಿಯನ್‌ ಒಡಿಸ್ಸಿ” ಸಿಲ್ಕ್‌ ರೋಡ್‌ ಎಂದು ಕರೆಯಲ್ಪಡುವ ಪಾಮಿರ್‌ ಹೆದ್ದಾರಿಯಲ್ಲಿನ ಸವಾರಿ ಅದ್ಭುತ. ಜಗತ್ತಿನ ದುರ್ಗಮ ರಸ್ತೆಗಳಲ್ಲಿ ಒಂದಾಗಿರುವ “ಓಲ್ಡ್‌ ಸಮ್ಮರ್‌ ರೋಡ್‌” ಇಲ್ಲಿ ಸಾಗುವ ಪ್ರಯತ್ನ ಮಾಡಿದೆವು, ಆದರೆ 156 ಕಿಮೀ ದೂರ ಕ್ರಮಿಸಿ ವಾಪಾಸಾದೆವು. ಇದು ಯಾವುದೇ ನೆರವು ಇಲ್ಲದೆ ಮಾಡುವ ಸಾಹಸ ರೈಡಿಂಗ್‌. ಅಪಾಯವಾದರೆ ನೆರವಿಗೆ ಯಾರೂ ಇರಲಿಲ್ಲ. ಹೀಗೆ ಅದೊಂದು ಯಶಸ್ಸಿನ ಪ್ರಯಾಣವನ್ನು ಮುಗಿಸಿದೆವು.”

ಆರ್ಟಿಕ್‌ ಟು ಅಂಟಾರ್ಟಿಕಾ:

“ದುರ್ಗಮ ಸ್ತಾನ್‌ ಯಾನದ ನಂತರ ನಮ್ಮ ಬ್ರಾಂಡ್‌ಗಳನ್ನು ಫ್ಲೈಟ್‌ ಪಾತ್‌ ಆಫ್‌ ದಿ ಕೊಂಡಾರ್‌ನಲ್ಲಿ ಕಾಣುವ ಹಂಬಲ ಎಂದು ಬಜಾಜ್‌ನವರು ತಿಳಿಸಿದರು. ನನಗೆ ಈ ಕೊಂಡಾರ್‌ ಬಗ್ಗೆ ಅಷ್ಟು ಗೊತ್ತಿರಲಿಲ್ಲ. ಇದು ರಣಹದ್ದುಗಳಲ್ಲಿ ಒಂದು ಪ್ರಬೇಧ, ಇದನ್ನು “ಟೈಟನ್‌ ಆಫ್‌ ದಿ ಸ್ಕೈ” ಎಂದು ಕರೆಯುತ್ತಾರೆ. ಇದರ ರೆಕ್ಕೆ 9 ಅಡಿಗೂ ಹೆಚ್ಚಿರುತ್ತದೆ. ಇದು ದಕ್ಷಿಣ ಅಮೆರಿಕದ ಕ್ಯಾಲಿಫೋರ್ನಿಯಾದಿಂದ ಆಂಡೀಸ್‌ ಪರ್ವತ ಶ್ರೇಣಿಗಳ ನಡುವೆ ಹೆಚ್ಚಾಗಿ ಕಾಣಸಿಗುತ್ತದೆ. ಹೇಗೂ ನಾನು ಕ್ಯಾಲಿಫೋರ್ನಿಯಾ ಯಾನ ಮಾಡುವುದಿದೆ, ಇದರ ಜೊತೆಯಲ್ಲಿ ಆರ್ಟಿಕ್‌ ಟು ಅಂಟಾರ್ಟಿಕ್‌ ಯಾನಕ್ಕೆ ಅವಕಾಶ ಯಾಕೆ ಮಾಡಿಕೊಡಬಾರದು ಎಂದು ಬಜಾಜ್‌ ಅವರಲ್ಲಿ ಕೇಳಿದೆ. ಯೋಜನೆಗೆ ಹಸಿರು ನಿಶಾನೆ ಸಿಕ್ಕಿತು. ಅದೇ ರಿತಿ 2018ರ “ಪೊಲಾರ್‌ ಒಡಿಸ್ಸಿ”ಗೆ ಸಜ್ಜಾಗಿ ನಾವು ಆಂಕರೇಜ್‌ಗೆ ಬಂದು ತಲುಪಿದೆವು. ಇದು ನನ್ನ ಬದುಕಿನ ಅತಿ ದೊಡ್ಡ ಯಾನ. 51,000 ಕಿಮೀ, 15 ದೇಶಗಳು, 99 ದಿನಗಳು.”

ಸಾಹಸಕ್ಕೆ ಪತ್ನಿ ಅನಿತಾ ಸೇರ್ಪಡೆ:

“ಅಮೆರಿಕದ ಅಲಾಸ್ಕಾದ ಆಂಕರೇಜ್‌ನಿಂದ ಆರ್ಟಿಕ್‌ ಸಮುದ್ರವನ್ನು ಅಮೆರಿಕದ ಕಡೆಯಿಂದ ತಲುಪಿದೆವು. ನಂತರ ಕೆನಡದ ಕಡೆಯಿಂದ ಮತ್ತೊಂದು ಯಾನ. ವ್ಯಾಂಕೋವರ್‌ಗೆ ಬಂದಾಗ ನನ್ನ ಸಾಹಸ ಯಾನಕ್ಕೆ ಪತ್ನಿ ಅನಿತಾ ಸೇರ್ಪಡೆಯಾದಳು. ಕೆನಡ ಮತ್ತು ಯುಎಸ್‌ ನಡುವೆ 19,000 ಕಿಮೀ ದೂರವನ್ನು ಅನಿತಾ ನನ್ನೊಂದಿಗೆ ಕ್ರಮಿಸಿದಳು. ನಂತರ ನಮ್ಮ ತಂಡವನ್ನು ವುಷುವಾಯಕ್ಕೆ ಕೊಂಡೊಯ್ದೆ. ಇದು ಅರ್ಜೆಂಟೀನಾದಲ್ಲಿದೆ. ಇದು ದಕ್ಷಿಣ ಅಮೆರಿಕ ಖಂಡದ ದಕ್ಷಿಣದ ತುದಿಯಾಗಿದೆ. ಅಲ್ಲಿಂದ ಒಂಟಿಯಾಗಿ ಅಂಟಾರ್ಟಿಕಾಕ್ಕೆ ನನ್ನ ಮೋಟಾರ್‌ ಸೈಕಲ್‌ ಕೊಂಡೊಯ್ದೆ. ಅದು ನನ್ನ ಬದುಕಿನ ಅವಿಸ್ಮರಣೀಯ ಕ್ಷಣವಾಗಿತ್ತು. ಅದು ನಾನು ತಲುಪಿದ ಏಳನೇ ಖಂಡ.,”

ಜಗತ್ತಿನ ಮೂರನೇ ಸಾಧಕ:

“ವಿಶ್ವದ ಏಳು ಖಂಡಗಳನ್ನು ಬೈಕ್‌ನಲ್ಲಿ ತಲುಪಿದವರಲ್ಲಿ ಮೂವರು ಸಾಧಕರಿದ್ದಾರೆ. ಗಾರ್ಡನ್‌ ಬ್ರೌನಿಂಗ್‌, (1997), ಸ್ಟೆಫ್‌ ಜೆವೊನ್ಸ್‌ (2016) ನಂತರ ಭಾರತದ ದೀಪಕ್‌ ಕಾಮತ್‌ (2019)  ಅಂಟಾರ್ಟಿಕಾದಲ್ಲಿ 11 ಕಿಮೀ ಬೈಕ್‌ನಲ್ಲಿ ಸಾಗಿ ದಾಖಲೆ ಬರೆದರು. ಭಾರತದಿಂದ ಮತ್ತು ಏಷ್ಯಾದಿಂದ ಈ ಸಾಧನೆ ಮಾಡಿದ ಮೊದಲ ಸಾಹಸಿ ಎಂದು ಹೇಳಲು ಹೆಮ್ಮೆ ಅನಿಸುತ್ತಿದೆ,”

2019 ಫೆಬ್ರವರಿ 19 ರಂದು ಭಾರತಕ್ಕೆ ಹಿಂದಿರುಗಿದೆ. ನನ್ನ ಯಶಸ್ಸಿನ ಹಾದಿಯಲ್ಲಿ ನೆರವಾದವರು ಅಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌. ಫೆಬ್ರವರಿ 20 ರಂದು ಕರೆ ಮಾಡಿದಾಗ, ಮಾನ್ಯ ಸಚಿವರು 22 ರಂದು ಭೇಟಿಗೆ ಸಿಗುತ್ತಾರೆ ಎಂಬ ವಿಷಯ ತಿಳಿಯಿತು. ಪತ್ನಿಯೊಂದಿಗೆ ಅವರನ್ನು ಭೇಟಿಯಾದೆ, ಅವರೊಂದಿಗೆ ಭೋಜನ ಮಾಡುವ ಅವಕಾಶವೂ ಸಿಕ್ಕಿತು. ಅಭಿನಂದಿಸಿದರು. ಅವರನ್ನು ಬೇಗನೇ ಕಳೆದುಕೊಂಡೆವೆಂಬ ನೋವು ಇಂದಿಗೂ ಇದೆ,”

ಅಮೆರಿಕದಲ್ಲಿ ರಾಯಲ್‌ ಎನ್ಫೀಲ್ಡ್‌:

“2019ರಲ್ಲಿ ಮತ್ತೊಂದು ಸಾಹಸ ಮಾಡುವ ಅವಕಾಶ. ಈ ಬಾರಿ ರಾಯಲ್‌ ಎನ್ಫೀಲ್ಡ್‌ ಇಂಟರ್‌ಸೆಪ್ಟರ್‌ನಲ್ಲಿ ಅಮೆರಿಕದ 29 ರಾಜ್ಯಗಳನ್ನು ಸಂಚರಿಸುವ ಅವಕಾಶ. ಅದು 17,000 ಕಿಮೀ ಯಾನ. ಆಗ ತಾನೇ ಇಂಟರ್‌ಸೆಪ್ಟರ್‌ ಬಿಡುಗಡೆ ಮಾಡಿದ್ದರು. ಮತ್ತೆ ಕೋವಿಡ್‌ ಆಗಮನ. ಆ ಪರಿಸ್ಥಿತಿಯಲ್ಲೂ ನನಗೆ ದೇಶದ ನಾಲ್ಕೂ ಮೂಲೆಗಳಿಗೆ ಸಂಚರಿಸುವ ಅವಕಾಶ ಬಂತು. ಬೆಂಗಳೂರಿನಿಂದ ಭಾರತದ ಪಶ್ಚಿಮ ತುತ್ತ ತುದಿಯ ಪ್ರದೇಶವಾ ಕೋಟೇಶ್ವರ, ನಾರಾಯಣ ಸರೋವರ, ಅಲ್ಲಿಂದ ಗುಲಾಬಾ, ಅಲ್ಲಿಂದ ಪೂರ್ವದ ಕೊನೆಯ ಊರು ಕಿಬಿತು ತಲುಪಿದೆ, ಅದು ಅರುಣಾಚಲ ಪ್ರದೇಶದಲ್ಲಿದೆ. ಅಲ್ಲಿಂದ ದಕ್ಷಿಣದ ತುತ್ತತುದಿ ಕನ್ಯಾಕುಮಾರಿಗೆ, 60 ದಿನಗಳಲ್ಲಿ 20,000 ಕಿಮೀ ಬೈಕ್‌ ಸವಾರಿ ಮಾಡಲಾಯಿತು. ಇದು ನನ್ನ ತಾಯ್ನಾಡಿನ ಯಾನ. ಭಾರತ ದೇಶದ ಸೌಂದರ್ಯ ಬೇರೆಡೆ ಸಿಗದು.”

ಕಂಫರ್ಟ್‌ ಝೋನ್‌ನಿಂದ ಹೊರ ಬನ್ನಿ:

ಜಗತ್ತು ವಿಶಾಲವಾಗಿದೆ. ಬದುಕಿನ ಒಂದು ಹಂತದಲ್ಲಿ ನಾವು ನಮ್ಮ ಆರಾಮ ವಲಯದಿಂದ ಹೊರ ಬರಬೇಕು. ನಿಮಗೆ ಸಾಧ್ಯವಾಗುವ ಸ್ಥಳಗಳನ್ನು ಗುರುತಿಸಿ ಪ್ರಯಾಣಿಸಬೇಕು. ಆಸಕ್ತಿ, ರುಚಿ ಬೇರೆ ಬೇರೆಯಾಗಿರಬಹುದು, ಆದರೆ ಒಂದು ಸ್ಥಳವನ್ನು ನೋಡಲು ನಾವು ಪಡುವ ಪ್ರಯತ್ನ ಖುಷಿಯಿಂದ ಕೂಡಿರುತ್ತದೆ. ನಾನು ಜಗತ್ತನ್ನು ಕಾಣುವ ರೀತಿಯೇ ಬೇರೆ ಹಾಗಾಗಿ ನನ್ನ ದಾರಿ ಭಿನ್ನವಾಗಿರುತ್ತದೆ.”

ಆಫ್ರೋ ಯೂರೋಪಿಯನ್‌ ಒಡಿಸ್ಸಿ:

“2020ರಲ್ಲಿ ಆಫ್ರೋ ಯೂರೋಪಿಯನ್‌ ಒಡಿಸ್ಸಿಯ ಯೋಜನೆ ಮಾಡಲಾಗಿತ್ತು. ಆಫ್ರಿಕಾ ಮತ್ತು ಯೂರೋಪ್‌ನಲ್ಲಿ ಬೈಕ್‌ ಚಾಲನೆಯ ಯೋಜನೆಯಾಗಿತ್ತು. ಆದರೆ ಕೋವಿಡ್‌ ಕಾರಣ ಅದು ಸಾಧ್ಯವಾಗಲಿಲ್ಲ. ಆದರೆ 2021ರಲ್ಲಿ ಅದು ಸಾಧ್ಯವಾಯಿತು. ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಅವರು ವಿದೇಶಾಂಗ ಸಚಿವಾಲಯದ ನೆರವು ನೀಡಿದರು. ದೇಶದಲ್ಲಿರುವ ಯಾವುದೇ ರಾಯಭಾರಿ ಕಚೇರಿ ಟೂರಿಸ್ಟ್‌ ವೀಸಾವನ್ನು ನೀಡುತ್ತಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಕೋವಿಡ್‌. ತೇಜಸ್ವಿ ಸೂರ್ಯ ಅವರ ನೆರವಿನಿಂದ ಅದು ಸಾಧ್ಯವಾಯಿತು. ಯಾವುದೇ ರಾಯಭಾರಿ ಕಚೇರಿ ನನ್ನ ಸಾಧನೆಗಾಗಿ ವೀಸಾ ನೀಡಲು ವಿರಾಕರಿಸಿಲ್ಲ. ಅಫ್ರಿಕಾ ಖಂಡದ ದಕ್ಷಿಣದ ತುತ್ತ ತುದಿಯಿಂದ ಯೂರೋಪ್‌ ಖಂಡದ ಉತ್ತರದ ತುತ್ತ ತುದಿಗೆ ನನ್ನ ಪ್ರಯಾಣ. 9 ತಿಂಗಳಲ್ಲಿ 55,761 ಕಿಮೀ, 39 ದೇಶಗಳು, ಇದುವರೆಗೂ ಈ ಸಾಹಸ ಯಾನವನ್ನೂ ಯಾರೂ ಮಾಡಿರಲಿಲ್ಲ.

ದಕ್ಷಿಣ ಆಫ್ರಿಕಾದಲ್ಲಿ ಮದುವೆಯ ಬೆಳ್ಳಿ ಹಬ್ಬ:

“ಈ ಸಾಧನೆಯ ಹಾದಿಯಲ್ಲಿ ನಾವು ಮದುವೆಯ 25 ವರ್ಷದ ಆಚರಣೆಯನ್ನು ದಕ್ಷಿಣ ಆಫ್ರಿಕಾದಲ್ಲಿ ಆಚರಿಸಿದೆವು. ಇದು 2021ರ ಸಂಭ್ರಮ. ನನ್ನ ಪತ್ನಿ ಅನಿತಾ ಜೊತೆಯಲ್ಲಿದ್ದಳು. ಅಲ್ಲೊಂದು ಆರು ಸಾವಿರ ಕಿಲೋ ಮೀಟರ್‌ ಸುತ್ತಿ, ದಕ್ಷಿಣ ಆಫ್ರಿಕಾಕ್ಕೆ ನಾವು 2021, ನವೆಂಬರ್‌ 23 ರಂದು ತಲುಪಿದೆವು. ನವೆಂಬರ್‌ 24ರಂದು ವಿಶ್ವದೆಲ್ಲೆಡೆ ಒಮಿಕ್ರಾನ್‌ ಸದ್ದು ಮಾಡಿತ್ತು. 25 ರಂದು ಪಾಶ್ಚಿಮಾತ್ಯ ರಾಷ್ಟ್ರಗಳು ಆಫ್ರಿಕಾದ ಐದು ರಾಷ್ಟ್ರಗಳಿಗೆ ನಿರ್ಬಂಧ ಹೇರಿದವು. ಪ್ರತಿಯೊಂದು ವಿಮಾನವೂ ನೆಲ ಸೇರಿದವು. ನವೆಂಬರ್‌ 26ರಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷರು ನಾವು ಯಾವುದೇ ಕಾರಣಕ್ಕೂ ನಿರ್ಬಂಧ ಹೇರುವುದಿಲ್ಲ, ನಮ್ಮ ಗಡಿಗಳು ತೆರೆದಿರುತ್ತವೆ ಎಂದು ಘೋಷಿಸಿದರು. ನಮ್ಮಲ್ಲಿ ಎಲ್ಲಿಯೂ ಪ್ರಯಾಣ ಮಾಡಬಹುದು ಎಂದರು. ಜಗತ್ತು ಎರಡು ವರ್ಷಗಳ ನಂತರ ಚೇತರಿಸಿಕೊಳ್ಳುತ್ತಿದೆ. ಇದನ್ನು ದಕ್ಷಿಣ ಆಫ್ರಿಕಾ ಅರ್ಥ ಮಾಡಿಕೊಂಡಿತ್ತು. ನನ್ನ ಪತ್ನಿ ಅಲ್ಲಿಂದ ಇಂಗ್ಲೆಂಡ್‌ಗೆ ಪ್ರಯಾಣಿಸುವವಳಿದ್ದಳು. ಅಲ್ಲಿ ಮಗಳಿದ್ದಾಳೆ. ಆದರೆ ಅದು ಸಾಧ್ಯವಾಗಲಿಲ್ಲ. ಭಾರತ ಸರಕಾರದ ನೆರವಿನಿಂದ ಭಾರತಕ್ಕೆ ಪ್ರಯಾಣಿಸುವಂತಾಯಿತು. ಅಲ್ಲಿಂದ ನಾನು ಒಂಟಿಯಾಗಿ ಪ್ರಯಾಣಿಸಿದೆ. ಮೊಜಾಂಬಿಕ್‌, ಜಿಂಬಾಬ್ವೆ, ಬೋಟ್ಸ್ವಾನಾ, ನಮೀಬಿಯಾ ಮೂಲಕ ವೆಸ್ಟರ್ಸ್‌ ಕಾರಿಡಾರ್‌ ನಲ್ಲಿ ಪ್ರಯಾಣಿಸಿದೆ. ಇದುವರೆಗೂ ಭಾರತದ ಯಾವುದೇ ಸಾಹಸಿಗಳು ಈ ಯಾನ ಮಾಡಿರಲಿಲ್ಲ. ಅಲ್ಲಿಂದ ಮೊರೋಕ್ಕೊಗೆ ಸಾಗಿದೆ. ಅಲ್ಲಿ ಪತ್ನಿ ಅನಿತಾ ಸೇರಿಕೊಂಡಳು. ಅಲ್ಲಿಂದ ಆಕೆ ಮೂರುವರೆ ತಿಂಗಳ ಕಾಲ ಯಾನದಲ್ಲಿ ನನ್ನೊಂದಿಗಿದ್ದಳು. ಹಾಗೆಯೇ ಯೂರೋಪ್‌ನಲ್ಲಿ 19 ದೇಶಗಳನ್ನು ಸುತ್ತಿದೆವು. ಅಂತಿಮವಾಗಿ ಯೂರೋಪ್‌ನ ಉತ್ತರದ ತುದಿ ನಾರ್ಥ್‌ ಕೇಪ್‌ ತಲುಪಿದೆವು. 2022 ಆಗಸ್ಟ್‌ನಲ್ಲಿ ಭಾರತ ತಲುಪಿದೆವು. ಆ ಬಳಿಕ ಹಲವಾರು ಯೋಜನೆಗಳನ್ನು ರೂಪಿಸಿದ್ದೇವೆ.

ಅನಿತಾ ಜೊತೆಯಲ್ಲಿ ಹಾದಿ ಸುಗಮ:

“ನನ್ನ ಬದುಕಿನ ಹಾದಿಯಲ್ಲಿ ಅನಿತಾ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದ್ದಾಳೆ. ಭಾರತದ ಪ್ರತಿಯೋದು ರೈಡ್‌ನಲ್ಲಿಯೂ ಆಕೆ ನನ್ನ ಸಹ ಚಾಲಕಿ. ಅದರೆ ಡ್ರೈವ್‌ ಮಾಡುವುದಿಲ್ಲ. ಸುಮಾರು 30,000 ಕಿಮೀ ಗಳಷ್ಟು ದೂರ ನನ್ನೊಂದಿಗೆ ಪ್ರಯಾಣಿಸಿದ್ದಾಳೆ. ಪೊಲಾರ್‌ ಒಡಿಸ್ಸಿಯಲ್ಲಿ ಅಮೆರಿಕ, ಕೆನಡ ಮತ್ತು ಯುಎಸ್‌ನಲ್ಲಿ 19,000 ಕಿಮೀ ನನ್ನೊಂದಿಗೆ ಪ್ರಯಾಣಿಸಿದ್ದಾಳೆ. ನಂತರ ಆಫ್ರೋ ಯೂರೋಪಿಯನ್‌ ಒಡಿಸ್ಸಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ 6000 ಕಿಮೀ ಜೊತೆಯಲ್ಲಿದ್ದು, ನಂತರ ಮೊರಾಕ್ಕೋದಲ್ಲಿ ಸೇರಿಕೊಂಡು 22,000 ಕಿಮೀ ಪ್ರಯಾಣಿಸಿದ್ದಾಳೆ. ಇತ್ತೀಚಿನ ರೈಡ್‌ಗಳಲ್ಲಿ ಅನಿತಾ 26,000 ಕಿಮೀ ನನ್ನ ಜೊತೆಗಿದ್ದು ಪ್ರೋತ್ಸಾಹ ನೀಡಿದ್ದಾಳೆ. ಒಬ್ಬ ಯಶಸ್ವಿ ಗಂಡಸಿನ ಹಿಂದೆ ಒಬ್ಬ ಯಶಸ್ವಿ ಮಹಿಳೆ ಇರುತ್ತಾಳೆ ಎಂದು ಹೇಳುತ್ತಾರಲ್ಲ, ಅದು ನಿತ್ಯ ಸತ್ಯವಾದುದು,”

 

ಇತರ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿ:

ಬರೇ ಹಣ ನೀಡುವ ಕ್ರಿಕೆಟ್‌ಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ನಾವು ಮಾಡುವ ಸಾಹಸ ಕ್ರೀಡೆಗಳಿಗೆ ಯಾವುದೇ ಪ್ರೋತ್ಸಾಹ ನೀಡುತ್ತಿಲ್ಲ ಎನ್ನುತ್ತಾರೆ ದೀಪಕ್‌ ಕಾಮತ್.‌ ಪ್ರಾಯೋಜಕತ್ವ ಕೇಳಲು ಹೋದರೆ ನಿಮಗೆ ಸೋಷಿಯಲ್‌ ಮೀಡಿಯಾದಲ್ಲಿ ಎಷ್ಟು ಲೈಕ್‌ ಬರುತ್ತಿದೆ ಎಂದು ಕೇಳುತ್ತಾರೆ. ದೀಪಕ್‌ ಅವರು ಗೂಗಲ್‌ ಹುಟ್ಟುವುದಕ್ಕೆ ಮೊದಲೇ ಈ ದೇಶಕ್ಕೆ ಕೀರ್ತಿ ತಂದವರು. ಇಂಥ ಸಾಧಕರನ್ನು ನಾವು ಗುರುತಿಸುವಲ್ಲಿ ವಿಫಲರಾಗುತ್ತಿದ್ದೇವೆ ಎನ್ನುವುದು ಬೇಸರದ ಸಂಗತಿ.

Related Articles