Friday, November 22, 2024

ಗೌರವದೊಂದಿಗೆ ನಿರ್ಗಮಿಸಿದ ಅಫಘಾನಿಸ್ತಾನ

ಅಹಮದಾಬಾದ್:‌ ಅಫಘಾನಿಸ್ತಾನ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ತಲಪುವಲ್ಲಿ ವಿಫಲವಾಗಿರಬಹುದು ಆದರೆ ಬಲಿಷ್ಠ ತಂಡಗಳ ವಿರುದ್ಧ ಜಯ ದಾಖಲಿಸಿ ಗೌರವದೊಂದಿಗೆ ನಿರ್ಗಮಿಸಿದೆ. Afghanistan cricket team returned home with honour.

ಯಾವುದೇ ವಿವಾದವಿಲ್ಲದೆ ಶಿಸ್ತಿನಿಂದ ಆಟಪ್ರದರ್ಶಿಸಿ, ಪ್ರತಿಯೊಂದು ಪಂದ್ಯವನ್ನೂ ಅತ್ಯಂತ ಕ್ರೀಡಾ ಸ್ಫೂರ್ತಿಯಿಂದ ಆಡಿ ಮುಂದಿನ ವಿಶ್ವಕಪ್‌ನಲ್ಲಿ ಇನ್ನೂ ಹೆಚ್ಚಿನ ಸವಾಲು ನೀಡಲಿದ್ದೇವೆ ಎಂಬ ಸಂದೇಶ ಸಾರಿದೆ.

ಶುಕ್ರವಾರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಗೆದ್ದರೂ ಸೆಮಿಫೈನಲ್‌ ಹಾದಿ ಕಠಿಣವಾಗಿತ್ತು. ಆದರೂ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಆಫ್ಘಾನ್‌, 244 ರನ್‌ ಗಳಿಸಿತ್ತು. ಅಜ್ಮತ್‌ಉಲ್ಲಾ ಅಜೇಯ 97 ರನ್‌ ಗಳಿಸಿ ಸಾಧಾರಣ ಮೊತ್ತಕ್ಕೆ ನೆರವಾದರು. ದಕ್ಷಿಣ ಆಫ್ರಿಕಾ ರಸ್ಸೆ ವ್ಯಾನ್‌ ಡೆರ್‌ ಡುಸ್ಸಾನ್‌ ಅವರ ಅಜೇಯ 76 ರನ್‌ ನೆರವಿನಿಂದ 5 ವಿಕೆಟ್‌ ಕಳೆದುಕೊಂಡು ಇನ್ನೂ 15 ಎಸೆತ ಬಾಕಿ ಇರುವಾಗಲೇ ಗುರಿ ತಲುಪಿತು. ಈ ಜಯದೊಂದಿಗೆ ತನ್ನ ಲೀಗ್‌ ಪಂದ್ಯಗಳನ್ನು ಮುಗಿಸಿದ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ತಲುಪಿತು.

ಅಫಘಾನಿಸ್ತಾನ ತಂಡ ಆಡಿರುವ 9 ಪಂದ್ಯಗಳಲ್ಲಿ 4 ರಲ್ಲಿ ಜಯ ಗಳಿಸಿ 5 ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಆದರೆ ಗೆದ್ದಿರುವ ಮೂರು ಪಂದ್ಯಗಳಲ್ಲಿ ಕ್ರಿಕೆಟ್‌ ಜಗತ್ತಿನ ಹೃದಯ ಗೆದ್ದಿತ್ತು. ಮಾಜಿ ಚಾಂಪಿಯನ್‌ ಇಂಗ್ಲೆಂಡ್‌, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಆಫ್ಘಾನ್‌ನ ದಿಟ್ಟ ಹೋರಾಟಕ್ಕೆ ತಲೆ ಬಾಗಿರುವುದು ಈ ಬಾರಿಯ ವಿಶ್ವಕಪ್‌ನ ಹೈಲೈಟ್ಸ್‌.

Related Articles