ಬೆಂಗಳೂರು: ಬ್ರಿಟಿಷರ ಆಡಳಿತದಲ್ಲಿ ಸ್ಥಾಪನೆಗೊಂಡು ಬೆಂಗಳೂರು ಫುಟ್ಬಾಲ್ ಸಂಸ್ಥೆಯ ಮೂಲಕ ಮುಂದುವರಿಸಿಕೊಂಡು ಬಂದಿದ್ದ ಸ್ಟಾಫೊರ್ಡ್ ಚಾಲೆಂಜ್ ಫುಟ್ಬಾಲ್ ಚಾಂಪಿಯನ್‌ಷಿಪ್ (Staffordchallengecup) 30 ವರ್ಷಗಳ ನಂತರ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಅಂಗಣದಲ್ಲಿ ಮತ್ತೆ ನಡೆಯಲಿದೆ.
ಏಷ್ಯಾದಲ್ಲೇ ಅತ್ಯಂತ ಪುರಾತನ ಫುಟ್ಬಾಲ್ ಚಾಂಪಿಯನ್‌ಷಿಪ್ ಟೂರ್ನಿ ಎನಿಸಿರುವ ಸ್ಟಾಫೊರ್ಡ್ ಫುಟ್ಬಾಲ್ ಚಾಲೆಂಜ್ ಕಪ್ (Staffordchallengecup) 1993 ರ ನಂತರ ನಡೆದಿರಲಿಲ್ಲ. ಇರಾಕ್ 1990ರಲ್ಲಿ ಮೂಲ ಟ್ರೋಫಿಯನ್ನು ಗೆದ್ದಿತ್ತು. ಆದರೆ ಇರಾನ್ -ಇರಾಕ್ ಯುದ್ಧದ ವೇಳೆ ಆ ಟ್ರೋಫಿ ನಾಶವಾಗಿತ್ತು. ಈಗ ಹೊಸ ವಿನ್ಯಾಸದ ಟ್ರೋಫಿಯೊಂದಿಗೆ ಹೊಸ ಮಾದರಿಯ ಟೂರ್ನಿ ಸ್ಟಾಫೊರ್ಡ್ ಟ್ರೋಫಿ ಭಾರತದ ಫುಟ್ಬಾಲ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲಿದೆ.
ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ, ಅಖಿಲ ಭಾರತ ಫುಟ್ಬಾಲ್ ಅಸೋಸಿಯೇಷನ್‌ನ ಉಪಾಧ್ಯಕ್ಷ ಎನ್. ಎ, ಹ್ಯಾರಿಸ್ ಅವರು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷ ಎಂ.ಪಿ. ಸ್ವಾಮಿ, ಮಾಜಿ ಆಡಳಿತಾಧಿಕಾರಿ ಎಂ.ಆರ್. ರಂಗನಾಥ್, ಉಪ ಕಾರ್ಯದರ್ಶಿ ಅಸ್ಲಾಂ ಖಾನ್, ಕಾರ್ಯದರ್ಶಿ ಸತ್ಯನಾರಾಯಣ, ಖಜಾಂಚಿ ಕುಮಾರ್, ಗೌರವ ಉಪ ಕಾರ್ಯದರ್ಶಿ ಬಿ,ಕೆ, ಮುನಿರಾಜು ಹಾಜರಿದ್ದರು.
ಫೆ. 23 ರಿಂದ ನಡೆಯುವ ಚಾಂಪಿಯನ್‌ಷಿಪ್‌ನಲ್ಲಿ ದೇಶದ 10 ರಾಜ್ಯಗಳ ತಂಡಗಳು ಪಾಲ್ಗೊಳ್ಳಲಿವೆ. 1993ರಲ್ಲಿ ಐಟಿಐ ಈ ಚಾಂಪಿಯನ್‌ಷಿಪ್ ಗೆದ್ದ ಕೊನೆಯ ತಂಡವಾಗಿತ್ತು. ಆ ಬಳಿಕ ಚಾಂಪಿಯನ್‌ಷಿಪ್ ನಡೆದಿರಲಿಲ್ಲ. ಐಎಸ್‌ಎಲ್, ಐಲೀಗ್ ಹಾಗೂ ಐಲೀಗ್ ಎರಡನೇ ಡಿವಿಜನ್‌ನ ತಂಡಗಳ ಆಟಗಾರರು ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಆಗ ಚಿನ್ನಸ್ವಾಮಿ ಅಂಗಣದಲ್ಲಿ ಫುಟ್ಬಾಲ್:
ರಾಜ್ಯ ಫುಟ್ಬಾಲ್ ಅಂಗಣದಲ್ಲಿ ಸ್ಥಳದ ಅಭಾವವಿದ್ದ ಕಾರಣ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ಕ್ರಿಕೆಟ್‌ಗೆ ಮೀಸಲಾಗಿದ್ದ ಚಿನ್ನಸ್ವಾಮಿ ಅಂಗಣದಲ್ಲಿ ನಡೆಯುತ್ತಿತ್ತು. ಮಂಡ್ಯ, ಮೈಸೂರಿನಿಂದಲೂ ಫುಟ್ಬಾಲ್ ಅಭಿಮಾನಿಗಳು ಪಂದ್ಯ ವೀಕ್ಷಿಸಲು ಆಗಮಿಸುತ್ತಿದ್ದರು. ಸಂಜೆ ಪಂದ್ಯವಿದ್ದರೆ ಬೆಳಿಗ್ಗೆಯೇ ಬಂದು ಟಿಕೆಟ್‌ಗಾಗಿ ಸರದಿ ನಿಲ್ಲುತ್ತಿದ್ದರು. 1.50 ರೂ. 2, ರೂ, 5 ರೂ. ಮತ್ತು 10 ರೂ. ಟಿಕೆಟ್ ಬೆಲೆಯಾಗಿರುತ್ತಿತ್ತು.
ಮುಂದಿನ ವರ್ಷ ಅಂತಾರಾಷ್ಟ್ರೀಯ ತಂಡಗಳು:
ಈ ಬಾರಿಯ ವೇಳಾಪಟ್ಟಿಯನ್ನು ಈ ವಾರಾಂತ್ಯದಲ್ಲಿ ಪ್ರಕಟಿಸಲಾಗುವುದು. ದೇಶದ 10 ತಂಡಗಳು ಮಾತ್ರ ಪಾಲ್ಗೊಳ್ಳಲಿವೆ. ಮುಂದಿವ ವರ್ಷದಿಂದ ಅಖಿಲ ಭಾರತ ಫುಟ್ಬಾಲ್ ಸಂಸ್ಥೆಯ ವಾರ್ಷಿಕ ವೇಳಾ ಪಟ್ಟಿಯಲ್ಲಿ ಈ ಟೂರ್ನಿ ಸೇರ್ಪಡೆ ಮಾಡಲಾಗುವುದು ಎಂದು ಹ್ಯಾರಿಸ್ ಹೇಳಿದ್ದಾರೆ. ಮುಂದಿವ ವರ್ಷದಿಂದ ವಿದೇಶದ ತಂಡಗಳಿಗೆ ಆಹ್ವಾನ ನೀಡಿ ಟೂರ್ನಿಗೆ ಅಂತಾರಾಷ್ಟ್ರೀಯ ಸ್ಪರ್ಷ ನೀಡಲಾಗುವುದು ಎಂದಿದ್ದಾರೆ.
85 ವರ್ಷಗಳ ಹಿಂದೆ ಸ್ಥಾಪನೆ:
ಸ್ಟಾಫೊರ್ಡ್ ಫುಟ್ಬಾಲ್ ಚಾಲೆಂಜ್ ಕಪ್‌ನ ಇತಿಹಾಸವನ್ನು ಗಮನಿಸಿದಾಗ 1938ರಲ್ಲಿ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಈ ಟೂರ್ನಿ ಆರಂಭಗೊಂಡಿತು. ಆಗ ಬ್ರಿಟಿಷ್ ಸೇನೆಗಳ ನಡುವೆ ಪಂದ್ಯ ನಡೆಯುತ್ತಿತ್ತು. ಭಾರತೀಯರು ಹೆಚ್ಚಾಗಿ ಪ್ರೇಕ್ಷಕರು.
1938ರಲ್ಲಿ ಬ್ರಿಟಿಷ್ ಆಡಳಿದಲ್ಲಿ ಸ್ಥಾಪನೆಯಾದ ಟೂರ್ನಿ ಪ್ರತಿವರ್ಷ ನಡೆಯುತ್ತಿದ್ದು, ಏಷ್ಯಾದಲ್ಲೇ ಅತ್ಯಂತ ಪುರಾತನ ಟೂರ್ನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. 1938ರಲ್ಲಿ ವಿಲ್ಟ್‌ಶೈರ್ ರೆಜಿಮೆಂಟ್ ಪ್ರಶಸ್ತಿ ಗೆದ್ದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ನಮ್ಮ ಸ್ಥಳೀಯ ತಂಡಗಳು ಕೂಡ ಉತ್ತಮ ಪ್ರದರ್ಶನ ತೋರಿ ಚಾಂಪಿಯನ್ ಪಟ್ಟ ಗೆದ್ದಿರುವುದಕ್ಕೆ ನಿದರ್ಶನಗಳಿವೆ. 1941ರಲ್ಲಿ ಬೆಂಗಳೂರು ಮುಸ್ಲಿಮ್ಸ್ ತಂಡ, 1942ರಲ್ಲಿ ಬೆಂಗಳೂರು ಸ್ಪೋರ್ಟಿಂಗ್ 1952ರಲ್ಲಿ ಎಚ್‌ಎಎಲ್ ಮತ್ತು 1956ರಲ್ಲಿ ಬೆಂಗಳೂರು ಬ್ಲೂಸ್ ತಂಡಗಳು ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ್ದವು. 1993ರಲ್ಲಿ ಐಟಿಐ ಸ್ಪೋರ್ಟ್ಸ್ ಕ್ಲಬ್ ಕೊನೆಯ ಪ್ರಶಸ್ತಿ ಗೆದ್ದಿತ್ತು.
ಇದನ್ನೂ ಓದಿ : ಬೈಕ್‌ನಲ್ಲೇ ಸಪ್ತ ಖಂಡಗಳ ಸುತ್ತಿದ ಕನ್ನಡಿಗ ದೀಪಕ್ ಕಾಮತ್
ಇದನ್ನೂ ಓದಿ : ಹಾಕಿ ಗೋಲ್‌ಕೀಪರ್‌ಗೆ ಮನೆ ಉಡುಗೊರೆ ನೀಡಿದ ಕನ್ನಡಿಗ ಶಿವ ಗುಲ್ವಾಡಿ!
1980 ಮತ್ತು 1990ರಲ್ಲಿ ಟೂರ್ನಿಗೆ ಅಂತಾರಾಷ್ಟ್ರೀಯ ಮೆರುಗು ಸಿಕ್ಕಿತು. ಇರಾಕ್ ಯೂಥ್ ಕ್ಲಬ್ (1980) ಮತ್ತು ಇರಾಕ್ ಒಲಿಂಪಿಕ್ ತಂಡ (1990) ಪ್ರತಿಷ್ಠಿತ ಟೂರ್ನಿ ಗೆದ್ದಿದ್ದವು.