Thursday, November 21, 2024

ನಾಶಿಕ್‌ ಹೈವೆಯಲ್ಲಿ ಭೀಮಭಾಯಿ ಅಜ್ಜಿಯ ಪುಸ್ತಕದ ಹೊಟೇಲ್‌

ಲಿಂಕ್‌ಡಿನ್‌ನಲ್ಲಿ ಗೆಳೆಯರೊಬ್ಬರು ಒಂದು ಅಜ್ಜಿಯ ಸಾಹಸ ಕತೆಯನ್ನು ಹಂಚಿಕೊಂಡಿದ್ದರು. ಓದಿ ಖುಷಿಯಾಯಿತು. ಕಾಮೆಂಟ್‌ನಲ್ಲಿ ಅವರನ್ನು ಸಂಪರ್ಕಿಸುವುದು ಹೇಗೆ ಎಂದು ಒಬ್ಬರು ಪ್ರಶ್ನಿಸಿದರು. ಅಲ್ಲಿ ಅಜ್ಜಿಯ ಮಗ ಪ್ರವೀಣ್‌ ಝೊಂಡ್ಲೆ ಅವರ ನಂಬರ್‌ ಹಾಕಿದ್ದರು. ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿಸಿದಾಗ ಆ ಅಜ್ಜಿಯ ಬದುಕಿನ ಕತೆ ಈ ಮನುಕುಲಕ್ಕೆ ಮಾದರಿಯಾಗಬೇಕು. ಒಂದೆಡೆ ದಾಖಲಾಗಿರಬೇಕು. ಕನ್ನಡಿಗರು ಇದನ್ನು ಓದಬೇಕು ಎಂದು ಅಂದುಕೊಂಡು ಈ ಕ್ರೀಡಾ ಸುದ್ದಿ ನಡುವೆ ಪ್ರಕಟಿಸಿರುವೆ. ಓದಿ. Ajjichay Pustakancha Hotel this is a unique hotel where you can eat and read.

ಮುಂಬಯಿ ಆಗ್ರಾ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಶಿಕ್‌ ಸಮೀಪ ಓಜಾರ್‌ ಎಂಬ ಪುಟ್ಟ ಗ್ರಾಮ. ಅಲ್ಲಿ ಭಿಮಾಭಯ್‌ ಝೋಂಡ್ಲೆ ಎಂಬ 75 ವರ್ಷ ಪ್ರಾಯದ ತಾಯಿ ಒಂದು ಹೊಟೇಲ್‌ ನಡೆಸುತ್ತಿದ್ದಾರೆ. ಈ ಹೊಟೇಲ್‌ ಬಗ್ಗೆ BBC ಸುದ್ದಿ ಸಂಸ್ಥೆ ವರದಿ ಮಾಡಿದ ನಂತರ ಅಜ್ಜಿ ಭಾರತದಾದ್ಯಂತ ಪ್ರಸಿದ್ಧಿ ಪಡೆಯುತ್ತಾರೆ. ಈ ಹೊಟೇಲ್‌ನಲ್ಲಿ ಅಂಥದ್ದೇನಿದೆ ಎಂದು ನಿಮಗಿನಿಸಬಹದು. ನಿಜವಾಗಿಯೂ ವಿಶೇಷವಿದೆ.

ಹೊಟೇಲ್‌ ಅಂದರೆ ಸಣ್ಣ ಕ್ಯಾಂಟೀನ್‌ ರೀತಿ. ಇದರ ಹೆಸರು “ಅಜ್ಜಿಯ ಪುಸ್ತಕದ ಹೊಟೇಲ್‌” ಮರಾಠಿಯಲ್ಲಿ “ಅಜ್ಜಿಚ್ಯಾ ಪುಸ್ತಕಾಂಚ ಹೊಟೇಲ್‌” ಎಂಬ ಹೆಸರಿದೆ. ಕಾರಣ ಇದು ಪುಸ್ತಕದ ಹೊಟೇಲ್‌. ಇಲ್ಲಿ ಬಂದವರು ತಿಂಡಿ ತಿನ್ನುತ್ತ, ಚಾ ಕುಡಿದು ಪುಸ್ತಕ ಓದಬಹುದು. ಅಲ್ಪ ಪ್ರಮಾಣದಲ್ಲಿ ಆರಂಭಗೊಂಡ ಹೊಟೇಲ್‌ನಲ್ಲಿ ಈಗ 7000 ಅಮೂಲ್ಯ ಪುಸ್ತಕಗಳಿವೆ. ದೇಶದ ವಿವಿಧ ಭಾಗಗಳಿಂದ ಜನರು, ಪತ್ರಕರ್ತರು ಈ ಅಜ್ಜಿ ಭೀಮಾಭಾಯಿಯನ್ನು ನೋಡಲು ಬರುತ್ತಾರೆ.

ಅಜ್ಜಿಯದ್ದು ಚಿಕ್ಕ ಕುಟುಂಬ. ಕೃಷಿ ಮಾಡಿಕೊಂಡು ಬದುಕುತಿದ್ದಾರೆ. ಗಂಡ ಕುಡುಚ. ಇದ್ದ ಗದ್ದೆಗಳನ್ನೆಲ್ಲ ಕುಡಿತಕ್ಕೆ ಮಾರಿದ್ದ. ಚಿಕ್ಕ ಮಗ ಪ್ರವೀಣ್‌ ತಾಯಿಯ ಕಷ್ಟವನ್ನು ಅರ್ಥ ಮಾಡಿಕೊಂಡು ಬೆಳಿಗ್ಗೆ ಮನೆ ಮನೆಗೆ ಪೇಪರ್‌ ಹಾಕಿಕೊಂಡು ನೆರವಾಗುತ್ತಿದ್ದ. ಮಗಳೂ ಪ್ರೋತ್ಸಾಹ ನೀಡುತ್ತಿದ್ದಳು. 2010ರಲ್ಲಿ ರಸ್ತೆಯ ಪಕ್ಕದಲ್ಲಿದ್ದ ಅವರ ಗದ್ದೆಗೆ ಪಕ್ಕದ ಫ್ಯಾಕ್ಟರಿಯವರು ಬಿಟ್ಟ ವಿಷಯುಕ್ತ ನೀರು ಬಂದು ಅಲ್ಲಿ ಕೃಷಿ ಮಾಡಲು ಅಸಾಧ್ಯವಾಯಿತು. ಭೀಮಾಬಾಯಿ ಬೇರೆ ದಾರಿ ಇಲ್ಲದೆ ರಸ್ತೆ ಪಕ್ಕದಲ್ಲಿ ಒಂದು ಚಿಕ್ಕ ಗುಡಿಸಲಿನಲ್ಲಿ ಹೊಟೇಲ್‌ ತೆರೆದರು. ಐದನೇ ತರಗತಿಯ ವರೆಗೆ ಓದಿರುವ ಭೀಮಾಭಾಯಿಗೆ ಓದಿನ ಬಗ್ಗೆ ಬಹಳ ಹಂಬಲ. ತನ್ನ ಹೊಟೇಲ್‌ಗೆ ಬಂದವರು ಬರೇ ಚಾ ಕುಡಿದು ತಿಂಡಿ ತಿಂದು ಹೋಗಬಾರದು, ಅವರು ಏನಾದರೂ ಹೊಸತನ್ನು ತಿಳಿದುಕೊಂಡು ಹೋಗಬೇಕು ಎಂದು ಬಯಸಿ ಟೇಬಲ್‌ ಹತ್ತಿರ ಕೆಲವು ಪುಸ್ತಕಗಳನ್ನು ಇಟ್ಟರು. ಇದರಿಂದ ಓದುಗರ ಸಂಖ್ಯೆಯೂ ಹೆಚ್ಚಾಯಿತು. ಪುಸ್ತಕದ ಸಂಖ್ಯೆಯೂ ಹೆಚ್ಚಾಯಿತು. ಭೀಮಾಭಾಯಿಗೆ ಇದುವರೆಗೂ 75 ಕ್ಕೂ ಹೆಚ್ಚು ಪ್ರಶಸ್ತಿಗಳು ಬಂದಿವೆ.

ತಾಯಿಯಿಂದ ಸ್ಫೂರ್ತಿ ಪಡೆದ ಮಗ ಪ್ರವೀಣ್‌:

ತಾಯಿ ಪಡುತ್ತಿದ್ದ ಕಷ್ಟ ನೋಡಿ ಮಗ ಪ್ರವೀಣ್‌ ಚಿಕ್ಕಂದಿನಿಂದಲೂ ಬೆಳಿಗ್ಗೆ ಎದ್ದು ಮನೆ ಮನೆಗೆ ಪೇಪರ್‌ ಹಂಚುತ್ತಿದ್ದ. ಜೊತೆಯಲ್ಲಿ ಓದು, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ. ನಾಶಿಕ್‌ನ ಪ್ರಸಿದ್ಧ ದಿನ ಪತ್ರಿಕೆ “ಗಾವಕರಿ” ಪತ್ರಿಕೆಯಲ್ಲಿ ಉದ್ಯೋಗವೂ ಸಿಕ್ಕಿತು. ಆದರೆ ತನಗೆ ಅನ್ನ ನೀಡಿದ ಪತ್ರಿಕೆ ಹಂಚುವ ಕೆಲಸವನ್ನು ಬಿಡಲಿಲ್ಲ. ಕಳೆದ 25 ವರ್ಷಗಳಿಂದ ಪ್ರವೀಣ್‌ ಪತ್ರಿಕೆ ಹಂಚುವ ಕೆಲಸವನ್ನೂ ಮಾಡುತ್ತಿದ್ದಾರೆ. ಈ ನಡುವೆ ಪುಸ್ತಕದ ಹೊಟೇಲ್‌ ಹೆಚ್ಚು ಜನಪ್ರಿಯತೆ ಪಡೆದು ವ್ಯಾಪಾರ ಹೆಚ್ಚಾಗ ತೊಡಗಿತು. ತಾಯಿಗೆ ಕೆಲಸ ಮಾಡಲು ಕಷ್ಟವಾಗುತ್ತದೆ ಎಂದು ಅರಿತ ಪ್ರವೀಣ್‌ ಪತ್ರಿಕೆಯ ಕೆಲಸವನ್ನು ತೊರೆದು ಹೊಟೇಲ್‌ನಲ್ಲಿ ಕೆಲಸ ಮಾಡಲಾರಂಭಿಸಿದ. ಈಗ ಅಜ್ಜಿಯ ಪುಸ್ತಕದ ಹೊಟೇಲ್‌ ಸಂಸಾರದ ರಥವನ್ನು ಸಾಗಿಸುತ್ತಿದೆ.

ಪ್ರವೀಣ್‌ ಅವರೊಂದಿಗೆ ಮಾತನಾಡಿದಾಗಿ ನಿಜವಾಗಿಯೂ ಖುಷಿ ಅನಿಸಿತು. “ನಮ್ಮಪ್ಪ ಕುಡಿದು ನಮ್ಮಮ್ಮನಿಗೆ ಕಷ್ಟ ಕೊಡುತ್ತಿದ್ದರು. ಈ ಜಾಗದ ಮೇಲೂ ಸಾಲ ಮಾಡಿದ್ದರು. ನಮ್ಮಮ್ಮ ಬೇರೆಯವರ ಹೊಲದಲ್ಲಿ ಕೆಲಸ ಮಾಡಿ ಸಾಲ ತೀರಿಸಿ ಜಾಗನ್ನು ಮರಳಿ ಪಡೆದರು. ನಮ್ಮನ್ನು ಸಲಹಿದ್ದೇ ಅಕ್ಷರ ಮತ್ತು ಓದು. ನಮ್ಮಮ್ಮ ಐದನೇ ತರಗತಿ ಓದಿದ್ದರಿಂದ ಇಂಥ ಯೋಚನೆ ಬರಲು ಸಾಧ್ಯವಾಯಿತು. ಆಕೆಗೆ ಹೆಚ್ಚಿನ ಓದಿಗೆ ಅವಕಾಶ ಸಿಗಲಿಲ್ಲ. ಸಮಾಜದ ಜನ ಓದಿನ ಮೂಲಕ ಜ್ಞಾನವನ್ನು ಹೆಚ್ಚಿಕೊಳ್ಳಬೇಕು. ಹೊಟ್ಟೆಯ ಬಗ್ಗೆ ಇರುವ ಕಾಳಜಿ ಬುದ್ಧಿಯ ಬಗ್ಗೆಯೂ ಇರಬೇಕು ಎಂಬುದು ನಮ್ಮಮ್ಮನ ನಿಲುವು. ನಮ್ಮ ಹೊಟೇಲ್‌ಗೆ ಬಂದು ಒಬ್ಬ ವ್ಯಕ್ತಿ ಬದಲಾದರೆ ಅದೇ ನಮಗೆ ಖುಷಿ. ಒಬ್ಬ ವ್ಯಕ್ತಿ ಓದಿನ ಬಗ್ಗೆ ಆಸಕ್ತಿ ತೋರಿದರೆ ಅದೇ ಸಂಭ್ರಮ. ಹಣ ಮಾಡಲು ಹಲವಾರು ದಾರಿಗಳಿವೆ ಆದರೆ ಓದು ಆಸಕ್ತಿ ಕಡಿಮೆ. ಅಲ್ಲಿಲ್ಲಿ ಹರಟೆ ಮಾಡುತ್ತಿದ್ದ ಜನ ಈಗ ನಮ್ಮ ಹೊಟೇಲ್‌ಗೆ ಬಂದು ಓದುತ್ತಿದ್ದಾರೆ. ನಮ್ಮಮ್ಮಗೆ ಎಲ್ಲಿಲ್ಲದ ಖುಷಿ, ಫೋನನ್ನು ಅವರಿಗೆ ಕೊಡುತ್ತೇವೆ, ಅವರಿಗೆ ಮರಾಠಿ, ಸ್ವಲ್ಪ ಹಿಂದಿ ಬಿಟ್ಟರೆ ಬೇರೆ ಭಾಷೆ ಬಾರದು. ನೀವು ಮಾತನಾಡಿದರೆ ಅವರಿಗೆ ಬಹಳ ಖುಷಿ ಆಗುತ್ತದೆ,” ಎಂದು ಪ್ರವೀಣ್‌ ದೂರವಾಣಿಯನ್ನು ಭೀಮಭಾಯಿಯ ಕೈಗೆ ನೀಡಿದರು,

“ನೀವು ಅಷ್ಟು ದೂರದಿಂದ ಕರೆ ಮಾಡಿದ್ದಕ್ಕೆ ಧನ್ಯವಾದಗಳು. ಈ ಸಮಾಜ ಬದಲಾಗಬೇಕಾದರೆ ಶಿಕ್ಷಣ ಬೇಕು. ಶಿಕ್ಷಣ ಅಂದರೆ ಬರೇ ಪದವಿ ಅಲ್ಲ. ಅರಿವು. ಆ ಅರಿವನ್ನು ಗಳಿಸಬೇಕಾದರೆ ಓದಬೇಕು. ನಮ್ಮ ಯಜಮಾನರು ಮಾಡಿದ ತಪ್ಪನ್ನು ನಮ್ಮ ಸುತ್ತಲಿನವರು ಮಾಡಬಾರದು ಎಂಬುದೇ ನನ್ನ ಉದ್ದೇಶ. ದೇವರು ಇಲ್ಲಿಯ ತನಕ ತಂದು ಬಿಟ್ಟಿದ್ದಾರೆ. ಒಮ್ಮೆ ಬನ್ನಿ ..ನಮ್ಮ ಹೊಟೇಲ್‌ನಲ್ಲಿ ಚಹಾ ಕುಡಿದು ..ಪುಸ್ತಕ ಓದಿ ಹೋಗಿ,” ಎಂದು ಮರಾಠಿಯಲ್ಲೇ ಆ ತಾಯಿ ಉತ್ತರಿಸಿದಾಗ ಧನ್ಯತಾ ಭಾವ.

Related Articles