Thursday, March 28, 2024

ಗ್ಲೋಬಲ್ ಅಕಾಡೆಮಿಯಲ್ಲಿ ರಾಜ್ಯ ನೆಟ್‌ಬಾಲ್ ಚಾಂಪಿಯನ್‌ಷಿಪ್

ಸ್ಪೋರ್ಟ್ಸ್ ಮೇಲ್ ವರದಿ

ಕರ್ನಾಟಕ ರಾಜ್ಯ ಅಮೆಚೂರ್ ನೆಟ್‌ಬಾಲ್ ಸಂಸ್ಥೆ ಹಾಗೂ ಗ್ಲೋಬಲ್ ಅಕಾಡೆಮಿ ಆಫ್  ಟೆಕ್ನಾಲಜಿ (ಜಿಎಟಿ) ಅವರ ಜಂಟಿ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಎರಡನೇ ರಾಜ್ಯ ನೆಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ಗೆ ಬುಧವಾರ ಚಾಲನೆ ದೊರೆಯಲಿದೆ.

ಗ್ಲೋಬಲ್ ಅಕಾಡೆಮಿ ಆಫ್  ಟೆಕ್ನಾಲಜಿಯ ಪ್ರಮುಖ ಸಭಾಂಗಣದಲ್ಲಿ ನಡೆಯಲಿರುವ ಈ ಚಾಂಪಿಯನ್‌ಷಿಪ್ ಮಾರ್ಚ್ 13 ಮತ್ತು 14ರಂದು ನಡೆಯಲಿದೆ.  ಹಿರಿಯ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಚಾಂಪಿಯನ್‌ಷಿಪ್ ನಡೆಯಲಿದೆ.  ಬುಧವಾರ ಬೆಳಿಗ್ಗೆ 9: 30ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ದೈಹಿಕ  ಪ್ರಾಂಶುಪಾಲ ಹಾಗೂ ಚೇರ್ಮನ್ ಡಾ. ಶ್ರೀನಿವಾಸ್ ಹಾಗೂ ಕರ್ನಾಟಕ ಅಮೆಚೂರ್ ನೆಟ್‌ಬಾಲ್ ಅಸೋಸಿಯೇಷನ್‌ನ ಅಧ್ಯಕ್ಷ  ಅಶ್ಫಕ್ ಅಹಮ್ಮದ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.  ಎನ್‌ಇಎಫ್ ನ  ಪ್ರಧಾನ ಕಾರ್ಯದರ್ಶಿ ಎಸ್. ಲೇಪಾಕ್ಷ ಹಾಗೂ  ಎನ್‌ಇಎಫ್ನ ಹೆಚ್ಚುವರಿ ಕಾರ್ಯದರ್ಶಿ ವೆಂಕಟಪ್ಪ ಅವರು ಅತಿಥಿಗಳಾಗಿ ಪಾಲ್ಗೊಳ್ಳವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ಲೋಬಲ್ ಅಕಾಡೆಮಿ ಆಫ್  ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಎನ್. ಪ್ರತಾಪ್ ರೆಡ್ಡಿ ವಹಿಸುವರು. ಕಾರ್ಯಕ್ರಮದ ಉಸ್ತುವಾರಿಯನ್ನು  ಗ್ಲೋಬಲ್ ಅಕಾಡೆಮಿ ಆಫ್  ಟೆಕ್ನಾಲಜಿಯ ದೈಹಿಕ ಶಿಕ್ಷಣ ನಿರ್ದೇಶಕ ಸರವಣ ಆರ್ ಹಾಗೂ ಕರ್ನಾಟಕ ಅಮೆಚೂರ್ ನೆಟ್‌ಬಾಲ್ ಸಂಸ್ಥೆಯ ಕಾರ್ಯದರ್ಶಿ ಗಿರೀಶ್ ಸಿ. ನೋಡಿಕೊಳ್ಳುವರು.
34 ತಂಡಗಳು
ರಾಜ್ಯ ಚಾಂಪಿಯನ್‌ಷಿಪ್‌ನಲ್ಲಿ ಪುರುಷರ 18 ಹಾಗೂ ಮಹಿಳೆಯರ 16 ತಂಡಗಳು ಸೇರಿ ಒಟ್ಟು 34 ತಂಡಗಳು ಪಾಲ್ಗೊಳ್ಳುತ್ತಿವೆ. ಇಲ್ಲಿ ಉತ್ತಮ ಪ್ರದರ್ಶನ ತೋರಿದ ರಾಜ್ಯ ತಂಡ ಮಾರ್ಚ್ 23 ರಿಂದ 26 ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದೆ.
ನೆಟ್‌ಬಾಲ್ ಸಂಸ್ಥೆಯ ವೆಬ್‌ಸೈಟ್‌ಗೆ ಚಾಲನೆ
ಇತ್ತೀಚಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಮಾಡಿರುವ ಹಾಗೂ ರಾಜ್ಯದಲ್ಲಿ ನೆಟ್‌ಬಾಲ್ ಕ್ರೀಡೆಯನ್ನು ಉತ್ತಮ ರೀತಿಯಲ್ಲಿ ಪೋಷಿಸುತ್ತಿರುವ ಕರ್ನಾಟಕ ರಾಜ್ಯ ಅಮೆಚೂರ್ ನೆಟ್‌ಬಾಲ್ ಸಂಸ್ಥೆಯು ತನ್ನದೇ ಆದ ವೆಬ್‌ಸೈಟ್ ಹೊಂದಲಿದೆ. www.anbak.orgಗೆ ಇದೇ ವೇಳೆ ಚಾಲನೆ ದೊರೆಯಲಿದೆ. ಡಾ. ಶ್ರೀನಿವಾಸ ಗೌಡ ಅವರು ವೆಬ್‌ಸೈಟ್‌ಗೆ ಚಾಲನೆ ನೀಡಲಿದ್ದಾರೆ.
ರಾಷ್ಟ್ರೀಯ ಚಾಂಪಿಯನ್‌ಷಿಪ್
ಕರ್ನಾಟಕ ರಾಜ್ಯ ಅಮೆಚೂರ್ ನೆಟ್‌ಬಾಲ್ ಸಂಸ್ಥೆಯ ಆತಿಥ್ಯದಲ್ಲಿ ಮಾರ್ಚ್ 23 ರಿಂದ 26 ರವರೆಗೆ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ 36ನೇ ರಾಷ್ಟ್ರೀಯ ಚಾಂಪಿಯನ್‌ಷಿಪ್ ನಡೆಯಲಿದೆ. ದೇಶದ ವಿವಿಧ  ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳು ಈಗಾಗಲೇ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿವೆ. ಇಲ್ಲಿ ಅಗ್ರ 7 ಸ್ಥಾನ ಪಡೆದ ತಂಡಗಳು ಈ ಬಾರಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ  ಪಾಲ್ಗೊಳ್ಳುವ ಅರ್ಹತೆ ಪಡೆಯಲಿವೆ. ಕರ್ನಾಟಕ ಪುರುಷ ಹಾಗೂ ಮಹಿಳಾ ತಂಡ ಈಗಾಗಲೇ ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದು, ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಆತ್ಮವಿಶ್ವಾಸವನ್ನು ಹೊಂದಿವೆ ಎಂದು ರಾಜ್ಯ ಅಮೆಚೂರ್ ನೆಟ್‌ಬಾಲ್ ಸಂಸ್ಥೆಯ ಕಾರ್ಯದರ್ಶಿ ಗಿರೀಶ್ ಸಿ. ಸ್ಪೋರ್ಟ್ಸ್ ಮೇಲ್ ಗೆ ತಿಳಿಸಿದ್ದಾರೆ.

Related Articles