Thursday, November 21, 2024

ತಂದೆಯ ಹಾದಿಯಲ್ಲಿ ಸಾಗಿ ಚಾಂಪಿಯನ್‌ ಆದ ಚಿಕ್ಕಮಗಳೂರಿನ ಅಸಾದ್‌ ಖಾನ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು:

ಇತ್ತೀಚಿಗೆ ದೇಶದ ಪ್ರಮುಖ ನಗರಗಳಲ್ಲಿ ನಡೆದ ಮೊದಲ ಹೀರೋ ಮೋಟಾರ್ಸ್‌ ಡರ್ಟ್‌ ಬೈಕಿಂಗ್‌ ಚಾಲೆಂಜ್‌ ಚಾಂಪಿಯನ್‌ಷಿಪ್‌ನಲ್ಲಿ ಚಿಕ್ಕಮಗಳೂರಿನ ಅಸಾದ್‌ ಖಾನ್‌ ಅವರು ಚಾಂಪಿಯನ್‌ ಪಟ್ಟ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಅಸಾದ್‌ ಅವರ ಹದಿನೈದು ವರ್ಷಗಳ ಬೈಕ್‌ ರೇಸ್‌ನ ಬದುಕನ್ನೊಮ್ಮೆ ಹಿಂದಿರುಗಿ ನೋಡದಾಗ ಅವರ ಯಶಸ್ಸಿನಲ್ಲಿ ತಂದೆ ಹಿರಿಯ ಮೋಟಾರ್‌ ರೇಸ್‌ ತಜ್ಞ ಅಜೀಜ್‌ ಖಾನ್‌ ಅವರು ಸಾಗಿದ ಹಾದಿ ಸಿಗುತ್ತದೆ.

ಚಿಕ್ಕಮಗಳೂರಿನಲ್ಲಿ ನೆಲೆಸಿರುವ ಅಜೀಜ್‌ ಖಾನ್‌ ಅವರ ಕುಟುಂಬಕ್ಕೂ ಮೋಟಾರ್‌ ರೇಸ್‌ಗೂ ಅವಿನಾಭಾವ ಸಂಬಂಧ.  56 ವರ್ಷದ ಅಜೀಜ್‌ ಖಾನ್‌ 1980ರಿಂದ ಮೋಟಾರ್‌ ರೇಸ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದವರು. ಸುಜುಕಿ ಸಮುರಾಯ್‌ ಹಾಗೂ ಜಿಪ್ಸಿ ಎಸ್ಟೀಮ್‌ ಮೂಲಕ ಭಾರತದ ಮೋಟಾರ್‌ ಸ್ಪೋರ್ಸ್‌ನಲ್ಲಿ ತಮ್ಮದೇ ಅದ ಛಾಪು ಮೂಡಿಸಿದವರು. ಅಜೀಜ್‌ ಅವರಿಗೆ ಮೂವರು ಗಂಡು ಮಕ್ಕಳು ಒಬ್ಬಳು ಮಗಳು. ಸಾಯಿರಾ ಸಯೀದ್‌ ಮತ್ತು ಅಜೀಜ್‌ ಅವರ ಈ ಕ್ರೀಡಾ ಕುಟುಂಬ ಈಗ ವೃತ್ತಿಯಲ್ಲಿ ಬೇರೆ ಬೇರೆ ಮಾರ್ಗವನ್ನು ಕಂಡುಕೊಂಡಿದ್ದರೂ ಗಂಡು ಮಕ್ಕಳು ಬೈಕ್‌ ರೇಸ್‌ನಲ್ಲಿ ಆರಂಭಿಕವಾಗಿ ತೊಡಗಿಕೊಂಡವರು. ಅಸಾದ್‌ ಖಾನ್‌ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಿಭಾಗಗಳಲ್ಲಿ ಐದು ಬಾರಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಗೆದ್ದು ಪ್ರಭುತ್ವ ಸಾಧಿಸಿದ್ದಾರೆ. ಇವರ ತಮ್ಮ ಸಾದ್‌ ಖಾನ್‌ಗೆ ಬೈಕ್‌ ರೇಸ್‌ನ ಪ್ರೀತಿ ಇದ್ದರೂ ಐಟಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು ಅಣ್ಣನ ಮೋಟಾರ್‌ ಸ್ಪೋರ್ಟ್‌ಗೆ ನೆರವಾಗುತ್ತಿದ್ದಾರೆ. ಅಣ್ಣ ಫಹಾದ್‌ ಖಾನ್‌ ದಂತ ವೈದ್ಯರಾಗಿದ್ದು ತಂದೆ ಹಾಗೂ ತಮ್ಮನ ಮೋಟಾರ್‌ ಸ್ಪೋರ್ಟ್ಸ್‌ಗೆ ನೆರವಾಗುತ್ತಿದ್ದಾರೆ. ತಂಗಿ ಕುಲ್ಸುಮ್‌ ತಮ್ಮದೇ ಆದ ಸ್ವಂತ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಇವರೆಲ್ಲೂ ಕುಟುಂಬದ ಪ್ರೀತಿಯ ಮೋಟಾರ್‌ ಸ್ಪೋರ್ಟ್ಸ್‌ಗೆ ಒಂದಲ್ಲ ಒಂದು ರೀತಿಯಲ್ಲಿ ನಡೆರವಾಗುತ್ತಿದ್ದಾರೆ.

ಅಜೀಜ್‌ ಖಾನ್‌ ಅವರಂತೆ ಅವರ ಎರಡನೇ ಮಗ 32ರ ಹರೆಯದ ಅಸಾದ್‌ ಖಾನ್‌ ಮೋಟಾರ್‌ ರೇಸ್‌ನಲ್ಲಿ ಬದುಕು ಕಟ್ಟಿಕೊಂಡವರು. ದ್ವಿಚಕ್ರ ವಾಹನದಲ್ಲಿ ನಾಲ್ಕು ಬಾರಿ ರಾಷ್ಟ್ರೀಯ ಚಾಂಪಿಯನ್‌ ಪಟ್ಟ ಗೆದ್ದಿರುವುದಲ್ಲದೆ, ಒಂದು ಬಾರಿ ನಾಲ್ಕುಚಕ್ರ ವಾಹನದ ರೇಸ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಚಾಂಪಿಯನ್‌ ಪಟ್ಟ ಗೆದ್ದು ರಾಜ್ಯಕ್ಕೆ ಕೀರ್ತಿ ತಂದವರು.

ತಂದೆಯೇ ಸ್ಫೂರ್ತಿ: ಹೀರೋ ಡರ್ಟ್‌ ಬೈಕ್‌ ಚಾಲೆಂಜ್‌ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಅಸಾದ್‌ ಖಾನ್‌ ಪಾತ್ರರಾಗಿದ್ದಾರೆ. ಈ ಕುರಿತು ಸ್ಪೋರ್ಟ್ಸ್‌ ಮೇಲ್‌ ಜೊತೆ ಮಾತನಾಡಿದ ಅಸಾದ್‌, “ನಮ್ಮ ತಂದೆ ಅಜೀಜ್‌ ಖಾನ್‌ ಅವರು ಮೋಟಾರ್‌ ಸ್ಪೋರ್ಟ್ಸ್‌ನಲ್ಲಿ ನನಗೆ ಮಾದರಿ. ಚಿಕ್ಕಂದಿನಲ್ಲಿ ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ಮೋಟಾರ್‌ ಸ್ಪೋರ್ಟ್ಸ್‌, ರೇಸ್‌ಗಳನ್ನು ನೋಡಿ ಸಂಭ್ರಮಿಸುತ್ತಿದ್ದೆ, ನಮ್ಮ ತಂದೆಯವರು ಕ್ರೀಡೆಯ ಮೂಲಕ ಜನಪ್ರಿಯರಾದರು. ಅವರಂತೆಯೇ ಮೋಟಾರ್‌ ಸ್ಪೋರ್ಟ್ಸ್‌ನಲ್ಲಿ ನನ್ನನ್ನು ತೊಡಗಿಸಿಕೊಂಡೆ. ಅವರು ಬಳಸಿ, ಜಯ ಗಳಿಸಿದ್ದ ಸುಝುಕಿ ಸಮುರಾಯ್‌ ಬೈಕ್‌ನಲ್ಲೇ ಅಭ್ಯಾಸ ಮಾಡಲಾರಂಭಿಸಿದೆ. ಅವರ ಆಶೀರ್ವಾದದಿಂದ ರ‍್ಯಾಲಿಗಳಲ್ಲಿ ಪಾಲ್ಗೊಂಡು ಯಶಸ್ಸು ಕಾಣುತ್ತಿದ್ದೆ. ಈಗ ರಾಷ್ಟ್ರ ಮಟ್ಟದಲ್ಲಿ ನನ್ನನ್ನು ಅಜೀಜ್‌ ಅವರ ಮಗ ಅಸಾದ್‌ ಎಂದೇ ಗುರುತಿಸುತ್ತಾರೆ. ಇದು ನನಗೆ ಅತೀವ ಹೆಮ್ಮೆ ಅನಿಸುತ್ತಿದೆ.” ಎಂದರು.

ದೇಶದ 41 ನಗರಗಳಲ್ಲಿ ನಡೆದ ಡರ್ಟಿ ಬೈಕ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು 1 ಲಕ್ಷ ಸ್ಪರ್ಧಿಗಳು ನೋಂದಾವಣೆ ಮಾಡಿಕೊಂಡಿದ್ದರು. ಅದರಲ್ಲಿ 2,000 ಸ್ಪರ್ಧಿಗಳನ್ನು ಶಾರ್ಟ್‌ಲಿಸ್ಟ್‌ ಮಾಡಲಾಗಿತ್ತು. ನಂತರ ಸ್ಪರ್ಧಿಗಳ ಸಂಖ್ಯೆ 90ಕ್ಕೆ ಇಳಿಯಿತು. ಬಳಿಕ ಟಾಪ್‌ 20 ಸ್ಪರ್ಧಿಗಳ ನಡುವೆ ಫೈನಲ್‌ ನಡೆಯಿತು. ಐದು ಸುತ್ತುಗಳಲ್ಲಿ ನಡೆದ ಈ ಫೈನಲ್‌ ಸ್ಪರ್ಧೆಯಲ್ಲಿ ಅಸಾದ್‌ ಮೊದಲ ಸುತ್ತಿಗೆ ತಮ್ಮ ಸ್ವಂತ ಹೀರೋ ಇಂಪ್ಲಸ್‌ ಬೈಕ್‌ ಬಳಸಿ ಯಶಸ್ಸು ಕಂಡರು. ಉಳಿದ ನಾಲ್ಕು ಸುತ್ತುಗಳಿಗೆ ಹೀರೋ ಮೋಟಾರ್ಸ್‌ ಕೊಡಮಾಡಿದ ಹೀರೋ ಎಕ್ಸ್‌ಪಲ್ಸ್‌ ಬೈಕ್‌ ಬಳಸಿದರು. ಭಾರತದಲ್ಲಿ ಮೊದಲ ಬಾರಿಗೆ ನಡೆದ ಈ ರಾಷ್ಟ್ರೀಯ ಡರ್ಟ್‌ ಚಾಲೆಂಜ್‌ನಲ್ಲಿ ಅಸಾದ್‌ ಚಾಂಪಿಯನ್‌ ಪಟ್ಟ ಗೆದ್ದು ಒಂದು ನೂತನ ಬೈಕ್‌ ಬಹುಮಾನವಾಗಿ ಪಡೆದರು. ಮಾತ್ರವಲ್ಲ 10 ಲಕ್ಷ ರೂ, ಮೌಲ್ಯದ ಪ್ರಾಯೋಜಕತ್ವವನ್ನೂ ತಮ್ಮದಾಗಿಸಿಕೊಂಡ ಗೌರವಕ್ಕೆ ಪಾತ್ರರಾದರು.

ಕಾಫಿ ತೋಟದಲ್ಲಿ ಅರಳಿದ ಪ್ರತಿಭೆ: ಅಜೀಜ್‌ ಖಾನ್‌ ಅವರು ಚಿಕ್ಕ ಮಗಳೂರಿನಲ್ಲಿ ಕಾಫಿ ತೋಟವನ್ನು ಹೊಂದಿದ್ದಾರೆ. ತಂದೆಯ ಕಾಫಿ ತೋಟದಲ್ಲಿ ಕೆಲಸ ಮಾಡುತ್ತ ಬೆಳೆದ ಪ್ರತಿಭೆ ಅಸಾದ್‌ ಖಾನ್‌ಗೆ ತಮ್ಮ ಸಾಧನೆಯ ಬಗ್ಗೆ ಹೆಮ್ಮೆ ಇದೆ. “ನಮ್ಮ ತಂದೆ ಒಬ್ಬ ಸಾಹಸ ಕ್ರೀಡಾಪಟು, ಆದರೆ ಕಾಫಿ ತೋಟದಲ್ಲಿ ಅವರ ಶ್ರಮ ಅಪಾರವಾದುದು. ನಮ್ಮ ಕುಟುಂಬ ಆವರ ಶ್ರಮವನ್ನು ಆಧರಿಸಿ ಇತ್ತು. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡು, ಶಿಕ್ಷಣ, ಕ್ರೀಡೆ ಹಾಗೂ ಬದುಕಿನ ಇತರ ಮಾರ್ಗಗಳಲ್ಲಿ ತೊಡಗಿಕೊಂಡೆವು. ಅವರ ಶ್ರಮದ ಹಾದಿ ನಮ್ಮನ್ನು ಇಲ್ಲಿಯವರೆಗೆ ಕರೆತಂದಿದೆ,” ಎಂದರುಯಲ್ಲಿ.

ಅಜೀಜ್‌ ಖಾನ್‌ ಅವರು 1995 ಮತ್ತು 1997ರಲ್ಲಿ ಕರ್ನಾಟಕದಲ್ಲಿ ನಡೆಯುವ ಕೆ1000 ಮೋಟಾರ್‌ ರ‍್ಯಾಲಿಯಲ್ಲಿ ಚಾಂಪಿಯನ್‌ ಪಟ್ಟ ಗೆದ್ದಿದ್ದಾರೆ. ಮಾತ್ರವಲ್ಲ 1997ರಲ್ಲಿ ಕೊಚ್ಚಿಯಲ್ಲಿ ನಡೆದ ರಾಷ್ಟ್ರೀಯ ಕೊಚ್ಚಿನ್‌ ರ‍್ಯಾಲಿಯಲ್ಲೂ ಚಾಂಪಿಯನ್‌ ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಅಕಾಡೆಮಿ: ತಾನು ಕಲಿತ ವಿದ್ಯೆ ಇತರರಿಗೂ ಸಿಗುವಂತಾಗಲಿ ಎಂಬ ಉದ್ದೇಶದಿಂದ ಅಸಾದ್‌ ಖಾನ್‌ ಚಿಕ್ಕಬಳ್ಳಾಪುರದಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ ಮ್ಯಾಗ್ನಂ ಎಂಡುರೋ ಪಾರ್ಕ್‌ ಎಂಬ ತರಬೇತಿ ಕೇಂದ್ರವನ್ನು ಆರಂಭಿಸಿದ್ದಾರೆ. ಇಲ್ಲಿ ದೇಶದ ವಿವಿಧ ಭಾಗಗಳಿಂದ ಸಾಹಸ ಕ್ರೀಡಾಪಟುಗಳು ತರಬೇತಿಗಾಗಿ ಬರುತ್ತಾರೆ. ಅಲ್ಲದೆ ಎಡ್ವೆಂಚರ್‌ ರೆಸಾರ್ಟ್‌ ಕೂಡ ಅಕಾಡೆಮಿಯಲ್ಲಿದೆ. ತರಬೇತುದಾರರಿಗೆ ಉಳಿದುಕೊಳ್ಳುವ ವ್ಯವಸ್ಥೆಯೂ ಇದೆ.

ಮುಂದೆ ಅಂತಾರಾಷ್ಟ್ರೀಯ ಗುರಿ: ದೇಶದ ಮೋಟಾರ್‌ ಸ್ಪೋರ್ಟ್ಸ್‌ ಚಾಂಪಿಯನ್‌ಷಿಪ್‌ಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಅಸಾದ್‌ ಅವರ ಮುಂದಿನ ಗುರಿ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದು. ಮೆಕ್ಸಿಕೋದಲ್ಲಿ ಪ್ರತಿ ವರ್ಷ ನವೆಂಬರ್‌ ತಿಂಗಳಲ್ಲಿ ನಡೆಯುವ ಬಾಹಾ ರ‍್ಯಾಲಿಯಲ್ಲಿ ಪಾಲ್ಗೊಳ್ಳುವ ಗುರಿ ಅಸಾದ್‌ ಅವರದ್ದು. ಈ ಆಫ್‌ ರೋಡ್‌ ರ‍್ಯಾಲಿಯಲ್ಲಿ ಜಗತ್ತಿನ ಆರು ಖಂಡಗಳಿಂದ ಸ್ಪರ್ಧಿಗಳು ಪಾಲ್ಗೊಳ್ಳುತ್ತಾರೆ. ಇದಕ್ಕೆ ಅಂತಾರಾಷ್ಟ್ರೀಯ ಗುಣ ಮಟ್ಟದ ಬೈಕ್‌ಗಳಿದ್ದರೆ ಮಾತ್ರ ಸ್ಪರ್ಧೆಗೆ ಅವಕಾಶವಿರುತ್ತದೆ. ಅಸಾದ್‌ ಅವರು ಮುಂದಿನ ವರ್ಷ ಈ ರ‍್ಯಾಲಿಯಲ್ಲಿ ಪಾಲ್ಗೊಳ್ಳುವ ಗುರಿ ಹೊಂದಿದ್ದಾರೆ. “ಇದು ಅತ್ಯಂತ ಕಠಿಣವಾದ ರ‍್ಯಾಲಿಯಾಗಿದೆ. ಹೆಚ್ಚಾಗಿ ಅಮೇರಿಕದವರೇ ಪ್ರಭುತ್ವ ಸಾಧಿಸುತ್ತಾರೆ. 54ನೇ ವರ್ಷದ ರ‍್ಯಾಲಿಯು ಈ ತಿಂಗಳಲ್ಲಿ ನಡೆಯಲಿದೆ. ನಾನು ಮುಂದಿವ ರ‍್ಯಾಲಿಯಲ್ಲಿ ಪಾಲ್ಗೊಳ್ಳುವ ಗುರಿ ಹೊಂದಿದ್ದೇನೆ. ಅದಕ್ಕೆ ಅಗತ್ಯವಿರುವ ಸಿದ್ಧತೆ ಈಗಿನಿಂದಲೇ ಮಾಡುತ್ತಿರುವೆ. ಪ್ರಾಯೋಜಕರ ಅಗತ್ಯವಿದೆ. ಅದಕ್ಕಾಗಿ ಸಂಪರ್ಕ ಮಾಡಬೇಕಾಗಿದೆ,” ಎಂದರು.

ಡಕಾರ್‌ ರ‍್ಯಾಲಿಯು ಜಗತ್ತಿನ ಅತ್ಯಂತ ಅಪಾಯಕಾರಿ ರ‍್ಯಾಲಿಯಾಗಿದೆ. ಇದನ್ನು ನೋಡುವ ಆಶಯವನ್ನೂ ವ್ಯಕ್ತಪಡಿಸಿದ್ದಾರೆ. “ಡಕಾರ್‌ ರ‍್ಯಾಲಿಯನ್ನು ನೋಡುವುದೇ ರೋಮಾಂಚನ, ಅಲ್ಲಿ ಪ್ರೇಕ್ಷಕನಾಗಿ ಪಾಲ್ಗೊಂಡಲ್ಲಿ ನನ್ನ ಮುಂದಿನ ರ‍್ಯಾಲಿಗಳಿಗೆ  ಸ್ಫೂರ್ತಿ ಸಿಗಬಹುದು ಎಂಬ ನಂಬಿಕೆ ಇದೆ. ಈ ಕಾರಣಕ್ಕಾಗಿ ಡಕಾರ್‌ ರ‍್ಯಾಲಿಯಲ್ಲಿ ಪ್ರೇಕ್ಷಕನಾಗಿ ಪಾಲ್ಗೊಳ್ಳುವೆ, ಎಂಬ ಆಶಯವನ್ನೂ ಅಸಾದ್‌ ವ್ಯಕ್ತಪಡಿಸಿದ್ದಾರೆ.

ಭಾರತ ಸರಕಾರದ ಕ್ರೀಡಾ ಇಲಾಖೆ ಮೋಟಾರ್‌ ಸ್ಪೋರ್ಟ್ಸ್‌ಗೆ ಮಾನ್ಯತೆ ನೀಡಿದೆ. ಆದರೆ ಇದುವರೆಗೂ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವವರಿಗೆ ಯಾವುದೇ ರೀತಿಯ ಆರ್ಥಿಕ ನೆರವನ್ನು ನೀಡಿದ ಉದಾಹರಣೆಗಳಲ್ಲಿ. ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿರುವ ಸಾಹಸಿ ಕ್ರೀಡಾಪಟುಗಳಿಗೂ ಆರ್ಥಿಕ ನೆರವನ್ನು ನೀಡಿದರೆ ಸಿಎಸ್ ಸಂತೋಷ್‌, ಅಸಾದ್‌, ಹರಿತ್‌ ನೋಹಾ ರೀತಿಯಲ್ಲಿ ಅನೇಕ ರ‍್ಯಾಲಿಪಟುಗಳಿಗೆ ಸಹಾಯವಾಗುತ್ತದೆ.

Related Articles