Friday, November 22, 2024

ಅಲ್ ಅಮೀನ್ ಕಾಲೇಜಿಗೆ ಚಾಂಪಿಯನ್ ಪಟ್ಟ

ಸ್ಪೋರ್ಟ್ಸ್ ಮೇಲ್ ವರದಿ

ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ಬೆಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಅಲ್-ಅಮೀನ್ ಕಾಲೇಜು ಪುರುಷರ ತಂಡ ಟೀಮ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ವನಿತೆಯರ ವಿಭಾಗದಲ್ಲಿ ಎನ್‌ಎಂಕೆಆರ್‌ವಿ ಕಾಲೇಜು ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಅಲ್ ಅಮೀನ್ ಕಾಲೇಜು ತಂಡ 71 ಅಂಕ ಗಳಿಸಿದರೆ, ಕೆಐಎಂಎಸ್‌ಆರ್ ಕಾಲೇಜು ತಂಡ 38 ಅಂಕಗಳನ್ನು ಗಳಿಸಿ ಎರಡನೇ ಸ್ಥಾನಿಯಾಯಿತು. ವನಿತೆಯರ ವಿಭಾಗದಲ್ಲಿ ಎನ್‌ಎಂಕೆಆರ್‌ವಿ 69 ಅಂಕಗಳನ್ನು ಗಳಿಸಿ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಕೋಲಾರದ ಸರಕಾರಿ ಮಹಿಳಾ ಪದವಿ ಕಾಲೇಜು ತಂಡ ೫೮ ಅಂಕಗಳನ್ನು ಗಳಿಸಿ ಎರಡನೇ ಸ್ಥಾನಿಯಾಯಿತು.
ಪುರುಷರ ವೈಯಕ್ತಿಕ ವಿಭಾಗದಲ್ಲಿ ಕೆಐಎಂಎಸ್‌ಆರ್ ಕಾಲೇಜಿನ ತೇಜಸ್ ಜಿ.ಎಲ್ 674 ಅಂಕಗಳನ್ನು ಗಳಿಸಿ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ಕೆಐಎಎಸ್‌ಆರ್ ಕಾಲೇಜಿನ ಕಾವೇರಿ ಎಲ್. ಪಾಟೀಲ್ 998 ಅಂಕಗಳನ್ನು ಗಳಿಸಿ ಮಹಿಳಾ ವಿಭಾಗದ ಚಾಂಪಿಯನ್ ಪಟ್ಟ ಗೆದ್ದುಕೊಂಡರು.

ಅಂತಿಮ ದಿನದ ಲಿತಾಂಶ

ಜಾವೆಲಿನ್ ಎಸೆತದಲ್ಲಿ  ಸರಕಾರಿ ಪ್ರಥಮ ದರ್ಜೆ ಕಾಲೇಜು ಬಿಡದಿ ಇಲ್ಲಿಯ ಸಾಗರ್ ಟಿ ಪ್ರಥಮ, ಕೋಲಾರದ  ಪವನ್ ಕಾಲೇಜಿನ ಮಹೇಂದ್ರ ದ್ವಿತೀಯ ಹಾಗೂ  ಸರದಾರ್ ವಲ್ಲಭಬಾಯಿ ಪಟೇಲ್ ಕಾಲೇಜಿನ ಸಾಗರ್ ಎನ್. ಮೂರನೇ ಸ್ಥಾನ ಗಳಿಸಿದರು.
ಹಾಫ್  ಮ್ಯಾರಥಾನ್‌ನಲ್ಲಿ ಅಲ್ ಅಮೀನ್ ಕಾಲೇಜಿನ ವಿವೇಕ್ ಎಂ. ಮೇದಾರ್ ಪ್ರಥಮ, ಕೆ.ಆರ್. ಪುರಂ ಪ್ರಥಮದರ್ಜೆ ಕಾಲೇಜಿನ ಜನಾರ್ಧನ್  ದ್ವಿತೀಯ ಹಾಗೂ ವಿಜಯಾ ಮೈನ್ ಕಾಲೇಜಿನ ನವದೀಪ್ ಮೂರನೇ ಸ್ಥಾನ ಗಳಿಸಿದರು.
ಡೆಕಾಥ್ಲಾನ್‌ನಲ್ಲಿ  ಪವನ್ ದೈಹಿಕ ಶಿಕ್ಷಣ ಕಾಲೇಜಿನ ಮಹೇಂದ್ರ ಪ್ರಥಮ, ಬಂಗಾರಪೇಟೆ ಪ್ರಥಮದರ್ಜೆ ಕಾಲೇಜಿನ ಗಜೇಂದ್ರ ದ್ವಿತೀಯ ಹಾಗೂ ಕ್ರಿಸ್ತು ಜಯಂತಿ ಕಾಲೇಜಿನ  ಮಾರ್ಕ್ ಆಂಡ್ರೇನ್ ತೃತೀಯ ಸ್ಥಾನ ಗಳಿಸಿದರು.  20 ಕಿ.ಮೀ. ನಡಿಗೆಯಲ್ಲಿ  ಸೇಂಟ್ ಕಾರ್ಲೆಟ್ ಕಾಲೇಜಿನ ಜಾಯ್‌ವಿನ್ ಜೆರೋಮ್ ಫೆರ್ನಾಂಡೀಸ್ ಪ್ರಥಮ ಸ್ಥಾನ ಗಳಿಸಿದರೆ, ಕೆಆರ್ ಪುಂ ಪ್ರಥಮದರ್ಜೆ ಕಾಲೇಜಿನ ಆನಂದ್ ವಿ. ದ್ವಿತೀಯ, ವಿಜಯ ನಗರ ಕಾಲೇಜಿನ ಯೋಗೇಶ್ ವಿ. ಮೂರನೇ ಸ್ಥಾನ ಗೆದ್ದರು. ಬೆನೆಡಿಕ್ಟ್ ಅಕಾಡೆಮಿಯ ನಿಖಿಲ್ ಸೋಮನ್ ಪೋಲ್‌ವಾಲ್ಟ್‌ನಲ್ಲಿ ಚಿನ್ನ ಗೆದ್ದರು. 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಕೆಐಎಂಎಸ್‌ಆರ್ ಕಾಲೇಜಿನ ಗೋಪಾಲ್ ಎಸ್.ಎಂ. ಚಿನ್ನ ಗೆದ್ದರು.

Related Articles