Thursday, November 21, 2024

ಬಿಎಸಿಎ-ಕೆಆರ್‌ಎಸ್‌, ಗೋವಾ ತಂಡಗಳಿಗೆ ಜಯ

ನಿಟ್ಟೆ: ಇಲ್ಲಿನ ಬಿ.ಸಿ. ಆಳ್ವಾ ಕ್ರಿಕೆಟ್‌ ಅಂಗಣದಲ್ಲಿ ನಡೆಯುತ್ತಿರುವ ಮೂರನೇ ಆವೃತ್ತಿಯ ಬೆಳ್ಳಿಪ್ಪಾಡಿ ಆಳ್ವಾಸ್‌ ಕ್ರಿಕೆಟ್‌ ಅಕಾಡೆಮಿ ಹಾಗೂ ಕೆಆರ್‌ಎಸ್‌ ಕ್ರಿಕೆಟ್‌ ಅಕಾಡೆಮಿಯ ರಾಷ್ಟ್ರೀಯ ಆಹ್ವಾನಿತ ಕ್ರಿಕೆಟ್‌ ಚಾಂಪಿಯನ್‌ಷಿಪ್‌ನ ಮೊದಲ ದಿನದ ಪಂದ್ಯದಲ್ಲಿ ಬಿಎಸಿಎ-ಕೆಆರ್‌ಎಸ್‌ ಹಾಗೂ ಕ್ರಿಕ್‌ಕಾಕರ್ಸ್‌ ಗೋವಾ ತಂಡಗಳು ಜಯ ಗಳಿಸಿವೆ.  BACA-KRS beat Mharaja’s Bengaluru by 2 wickets.

ದಿನದ ಮೊದಲ ಪಂದ್ಯದಲ್ಲಿ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಬಿಎಸಿಎ ಕೆಆರ್‌ಎಸ್‌ ತಂಡ ಮಹಾರಾಜಾಸ್‌ ಬೆಂಗಳೂರು ತಂಡವನ್ನು 121 ರನ್‌ಗೆ ಕಟ್ಟಿ ಹಾಕಿತು. ಮಹಾರಾಜಾಸ್‌ ತಂಡದ ಪರ ನಾಯಕ ರಾಜಗೋಪಾಲ ನಾಯ್ಡು (21) ಅವರು ಅದ್ಭುತ ಬ್ಯಾಟಿಂಗ್‌ ಪ್ರದರ್ಶಿಸಿ ಉತ್ತಮ ಮೊತ್ತಕ್ಕೆ ನೆರವಾದರು. ಸತೀಶ್‌ (12) ಹಾಗೂ ನಾಗೇಂದ್ರ (15) ತಂಡದ ಸವಾಲಿನ ಮೊತ್ತಕ್ಕೆ ನೆರವಾದರು.

ಬಿಎಸಿಎ ಕೆಆರ್‌ಎಸ್‌ ತಂಡದ ಪರ ನಾಯಕ ಉದಯ್‌ ಕಟಪಾಡಿ ಉತ್ತಮ ಬೌಲಿಂಗ್‌‌ ಪ್ರದರ್ಶಿಸಿದರು. 12 ರನ್‌ಗೆ ಅಮೂಲ್ಯ 3 ವಿಕೆಟ್‌ ಗಳಿಸಿ ಬೆಂಗಳೂರಿನ ರನ್‌ ಗಳಿಕೆಗೆ ಕಡಿವಾಣ ಹಾಕಿದರು. ಪ್ರದೀಪ್‌ ಹಾಗೂ ಗಿರೀಶ್‌ ತಲಾ 2 ವಿಕೆಟ್‌ ಗಳಿಸಿದರು.

20 ಓವರ್‌ಗಳಲ್ಲಿ 122 ರನ್‌ ಜಯದ ಗುರಿಹೊತ್ತ ಬಿಎಸಿಎ-ಕೆಆರ್‌ಎಸ್‌ ತಂಡದ ಪರ ನವೀನ್‌ (37) ಹಾಗೂ ಸಂಜಯ್‌ (18) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಜಯದ ಹಾದಿಯನ್ನು ಉತ್ತಮಗೊಳಿಸಿದ್ದರು. ಆದರೆ ಈ ಇಬ್ಬರು ಆಟಗಾರರು ಪೆವಿಲಿಯನ್‌ ಸೇರುತ್ತಿದ್ದಂತೆ ಆತಿಥೇಯ ತಂಡ ಲಗುಬಗನೆ ವಿಕೆಟ್‌ ಕಳೆದುಕೊಂಡಿತ್ತು. ಅನುಭವಿ ಆಟಗಾರ ವಿಜಯ್‌ ಆಳ್ವ. 9 ಎಸೆತಗಳನ್ನೆದುರಿಸಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್‌ ನೆರವಿನಿಂದ ಅಜೇಯ 17 ರನ್‌ ಸಿಡಿಸಿ ಜಯ ತಂದಿತ್ತರು. ಇನ್ನೊಂದೆಡೆ ಪ್ರದೀಪ್‌ ಅವರು ಅಜೇಯ 9 ರನ್‌‌ ಗಳಿಸಿ ಸೋಲಿನ ದವಡೆಗೆ ಸಿಲುಕಿದ್ದ ತಂಡಕ್ಕೆ 2 ವಿಕೆಟ್‌ ಜಯ ತಂದಿತ್ತರು. ಮಹಾರಾಜಾಸ್‌ ಬೆಂಗಳೂರು ತಂಡದ ಪರ ನಾಗೇಂದ್ರ 9 ರನ್‌ಗೆ 3 ವಿಕೆಟ್‌ ಗಳಿಸಿ ಯಶಸ್ವಿ ಬೌಲರ್‌ ಎನಿಸಿದರು. ರಾಜೇಶ್‌ 24 ರನ್‌ಗೆ 2 ವಿಕೆಟ್‌ ಗಳಿಸಿದರು. ನಾಯಕ ರಾಜಗೋಪಾಲ್‌ ನಾಯ್ಡು 15 ರನ್‌ಗೆ 1 ವಿಕೆಟ್‌ ಗಳಿಸಿದರು.

ಕ್ರಿಕ್‌ಕಾಕರ್ಸ್‌ಗೆ   CRICKOCKERS ಜಯ: ದಿನದ ಎರಡನೇ ಪಂದ್ಯ ಚೋಳಾಸ್‌ ತಮಿಳುನಾಡು ಹಾಗೂ ಕ್ರಿಕ್‌ಕಾಕರ್ಸ್‌ ಗೋವಾ ನಡುವೆ ನಡೆಯಿತು. ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ ಗೋವಾ ತಂಡ ಆರು ವಿಕೆಟ್‌ ಅಂತರದಲ್ಲಿ ಜಯ ತನ್ನದಾಗಿಸಿಕೊಂಡಿತು, ಟಾಸ್‌ ಗೆದ್ದ ಚೋಳಾಸ್‌ ತಂಡ ಬ್ಯಾಟಿಂಗ್‌ ಆಯ್ದುಕೊಂಡಿತು. ಆದರೆ ಉತ್ತಮ ಮೊತ್ತವನ್ನು ಕಲೆಹಾಕುವಲ್ಲಿ ವಿಫಲವಾಯಿತು. 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ ಕೇವಲ 82 ರನ್‌ ಗಳಿಸಿತು.,  ತಂಡದ ಪರ ಸುರೇಶ್‌ (20), ಸುಭಾಶ್‌ (13) ಹಾಗೂ ವೆಂಕಟೇಶ್‌ (9) ಗೋವಾದ ಬೌಲಿಂಗ್‌ ದಾಳಿಯನ್ನು ಕೆಲ ಹೊತ್ತು ಸಮರ್ಪಕವಾಗಿ ಎದುರಿಸಿದರು. ಗೋವಾದ ಪರ ರಿಜ್ವಾನ್‌ 8 ರನ್‌ಗೆ 3 ವಿಕೆಟ್‌ ಗಳಿಸಿ ಯಶಸ್ವಿ ಬೌಲರ್‌ ಎನಿಸಿದರು. ಸುನಿಲ್‌ 16 ರನ್‌ಗೆ 3 ವಿಕೆಟ್‌ ಗಳಿಸಿದರೆ, ರಘುವೀರ್‌ 7 ರನ್‌ಗೆ 1 ವಿಕೆಟ್‌ ಗಳಿಸಿ ಎದುರಾಳಿ ಚೋಳಾಸ್‌ನ ರನ್‌ ಗಳಿಕೆಗೆ ಕಡಿವಾಣ ಹಾಕಿದರು. 83 ರನ್‌ಗಳ ಅಲ್ಪ ಮೊತ್ತವನ್ನು ಬೆಂಬತ್ತಿದ ಗೋವಾ ತಂಡ, ಸುನಿಲ್‌ (29), ವಿನಯ್‌ (15) ಹಾಗೂ ಸುಧೇಶ್‌ (11) ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿ 15.1 ಓವರ್‌ಗಳಲ್ಲಿ 86 ರನ್‌ ಸಿಡಿಸಿ ಜಯ ತಂದಿತ್ತರು. ಚೋಳಾಸ್‌ ತಮಿಳುನಾಡು ಪರ ಸುಭಾಶ್‌ (17ಕ್ಕೆ 3) ಉತ್ತಮ ಬೌಲಿಂಗ್‌ ಪ್ರದರ್ಶಿಸಿದರು. ಸಂಜಯ್‌ ಹಾಗೂ ಸತ್ಯಮೂರ್ತಿ ತಲಾ ಒಂದು ವಿಕೆಟ್‌ ಗಳಿಸಿದರು.

ಸಂಭ್ರಮದ ಉದ್ಘಾಟನೆ: ಮೂರು ದಿನಗಳ ಕಾಲ ನಡೆಯುವ ಕ್ರಿಕೆಟ್‌ ಚಾಂಪಿಯನ್‌ಷಿಪ್‌ 75ನೇ ಗಣರಾಜ್ಯೋತ್ಸವದ ಸಂಭ್ರಮಾಚರಣೆಯೊಂದಿಗೆ ಚಾಲನೆ ಕಂಡಿತು. ಮಾಜಿ ಎಂಎಲ್‌ಸಿ ಗಣೇಶ್‌ ಕಾರ್ಣಿಕ್‌ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.  ನಿಟ್ಟೆ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ನಿರಂಜನ್‌ ಚಿಪ್ಳೂಣ್ಕರ್‌, ನಿಟ್ಟೆ ವಿಶ್ವವಿದ್ಯಾನಿಲಯ ರಿಜಿಸ್ಟ್ರಾರ್‌, ಯೋಗೇಶ್‌ ಹೆಗ್ಡೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

  ನಿಟ್ಟೆ ವಿಶ್ವವಿದ್ಯಾನಿಲಯದ ಮಾಜಿ ದೈಹಿಕ ಶಿಕ್ಷಣ ನಿರ್ದೇಶಕರಾದ ಕರುಣಾಕರ ಶೆಟ್ಟಿ, ಅಂತಾರಾಷ್ಟ್ರೀಯ ಮಾಜಿ ಅಥ್ಲೀಟ್‌ ಬಾಬು ಶೆಟ್ಟಿ ಉತ್ತಮ ಪ್ರದರ್ಶನ ತೋರಿದ ಆಟಗಾರರಿಗೆ ಬಹುಮಾನ ವಿತರಿಸಿದರು. ಬೆಳ್ಳಿಪ್ಪಾಡಿ ಕ್ರಿಕೆಟ್‌‌ ಅಕಾಡೆಮಿಯ ಅಧ್ಯಕ್ಷೆ ಅನಿತಾ ಆಳ್ವಾ ಹಾಗೂ ಕೆಆರ್‌ಎಸ್‌ ಕ್ರಿಕೆಟ್‌ ಅಕಾಡೆಮಿಯ ಅಧ್ಯಕ್ಷ ಹಾಗೂ ಪ್ರಧಾನ ಕೋಚ್‌ ಉದಯ್‌ ಕಟಪಾಡಿ ಅವರು ಕಾರ್ಯಕ್ರಮದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದರು.

Related Articles