Friday, March 29, 2024

ಮತ್ತೊಂದು ಕಪ್ ನಮ್ದೇ!, ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಗೆದ್ದ ಬೆಂಗಳೂರು

ಸ್ಪೋರ್ಟ್ಸ್ ಮೇಲ್ ವರದಿ

ಮುಂಬೈ ರಾಕೆಟ್ಸ್ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯದಲ್ಲಿ 4-3 ಅಂತರದಲ್ಲಿ ಜಯ ಗಳಿಸಿದ ಬೆಂಗಳೂರು ರಾಪ್ಟರ್ಸ್ ತಂಡ 4ನೇ ಆವೃತ್ತಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಗೆದ್ದುಕೊಂಡಿದೆ. ಪ್ರೊ ಕಬಡ್ಡಿ ಹಾಗೂ ಬ್ಯಾಡ್ಮಿಂಟನ್ ಲೀಗ್ ನಂತರ ಈಗ ಉಳಿದಿರುವುದು ಇಂಡಿಯನ್ ಸೂಪರ್ ಲೀಗ್ (ಫುಟ್ಬಾಲ್) ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ (ಕ್ರಿಕೆಟ್) ಮಾತ್ರ ಎಂದು ರಾಜ್ಯದ ಕ್ರೀಡಾಭಿಮಾನಿಗಳು ಹೇಳಿಕೊಳ್ಳುತ್ತಿದ್ದಾರೆ….ಧೈರ್ಯವಾಗಿ  ಹೇಳಿ ….ಈ ಸಲ ಕಪ್ ನಮ್ದೇ!

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯ ಒಂದು ಹಂತದಲ್ಲಿ 3-3ರಲ್ಲಿ ಸಮಬಲಗೊಂಡಿತ್ತು. ಇಂಡೋನೇಷ್ಯಾದ ಜೋಡಿ ಮೊಹಮ್ಮದ್ ಅಶಾನ್ ಹಾಗೂ ಹೆಂದ್ರಾ ಸತ್ಯವಾನ್ ರಾಕೆಟ್ಸ್‌ನ ಕಿಮ್ ಜಿ ಜಂಗ್ ಹಾಗೂ ಲೀ ಯಂಗ್ ಡೇ ವಿರುದ್ಧ 15-13, 15-10 ಅಂತರದಲ್ಲಿ ಜಯ ಗಳಿಸಿ ರಾಪ್ಟರ್ಸ್‌ಗೆ ಚಾಂಪಿಯನ್ ಪಟ್ಟ ತಂದುಕೊಟ್ಟರು.
ಐ ಜಂಗ್ ಹಾಗೂ ಪಿಯಾ ಜೆಬಾಡಿಯ್ಹಾ ಬೆರ್ನಾಡೆತ್ ರಾಪ್ಟರ್ಸ್‌ನ ಮಾರ್ಕಸ್ ಎಲ್ಲಿಸ್ ಹಾಗೂ ಲೌರೆನ್ ಸ್ಮಿತ್ ವಿರುದ್ಧ 15-8, 15-14 ಅಂತರದಲ್ಲಿ ಗೆದ್ದು  ರಾಕೆಟ್ಸ್‌ಗೆ 2-0 ಮುನ್ನಡೆ  ತಂದುಕೊಟ್ಟರು.
ಕಿಡಂಬಿ ಶ್ರೀಕಾಂತ್ 15-7, 15-10 ಅಂತರದಲ್ಲಿ ರಾಕೆಟ್ಸ್‌ನ ಆಂಡ್ರೆಸ್ ಆಂಟೊನ್ಸೆನ್‌ಗೆ ಸೋಲುಣಿಸಿದರು. ಇದರೊಂದಿಗೆ ಶ್ರೀಕಾಂತ್ ಲೀಗ್‌ನಲ್ಲಿ ಅಜೇಯವಾಗಿ ಉಳಿದರು. ನಂತರ ಥಿ ತ್ರಾಂಗ್ ವು ರಾಕೆಟ್ಸ್‌ನ ಶ್ರೀಯಾನ್ಶಿ ಪರ್ದೇಶಿ ವಿರುದ್ಧ 15-8, 15-9 ಅಂತರದಲ್ಲಿ ಗೆದ್ದು ಆತಿಥೇಯರಿಗೆ 3-2ರ ಮುನ್ನಡೆ ಕಲ್ಪಿಸಿದರು. ಸಾಯಿ ಪ್ರಣೀತ್ ವಿರುದ್ಧದ ಪಂದ್ಯದಲ್ಲಿ ಸಮೀರ್ ವರ್ಮಾ ಆರಂಭಿಕ ಆಘಾತ ಅನುಭವಿಸಿದರೂ 7-15, 15-12, 15-3 ಅಂತರದಲ್ಲಿ ಜಯ ಗಳಿಸಿದರು.

Related Articles