ಬೆಂಗಳೂರು:
ಯಂಗ್ ಚಾಲೆಂಜರ್ಸ್ ವಿರುದ್ಧ 5-0 ಅಂತರದಲ್ಲಿ ಜಯ ಗಳಿಸಿದ ಹಾಲಿ ಚಾಂಪಿಯನ್ ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡ ಬಿಡಿಎಫ್‌ಎ ಸೂಪರ್ ಡಿವಿಜನ್ ಚಾಂಪಿಯನ್‌ಷಿಪ್‌ನಲ್ಲಿ ತನ್ನ ಜಯದ ಓಟವನ್ನು ಮುಂದುವರಿಸಿದೆ.
ಬೆಂಗಳೂರು ಫುಟ್ಬಾಲ್ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡ ಆರಂಭದಿಂದಲೂ ಎದುರಾಳಿ ತಂಡದ ಮೇಲೆ ಒತ್ತಡ ಹೇರಿದ ಪರಿಣಾಮ ಇರ್ಫಾನ್ ಯರ್ವಾಡ್ (5, 25ನೇ ನಿಮಿಷ), ಜೈರೋ ರೋಡ್ರಿಗಸ್ (7ನೇ ನಿಮಿಷ), ಚೆಸ್ಟರ್‌ಪೌಲ್ ಲಿಂಗ್ಡೋ (66ನೇ ನಿಮಿಷ) ಮತ್ತು ಶಾಜಾನ್ ಫ್ರಾಕ್ಲಿನ್ (77ನೇ ನಿಮಿಷ) ಗೋಲು ಗಳಿಸಿ ಜಯದ ರೂವಾರಿ ಎನಿಸಿದರು.
ಈ ಹಿಂದಿನ ಪಂದ್ಯಗಳ ರೀತಿಯಲ್ಲೇ ಎಫ್‌ಸಿಬಿಯು ಆರಂಭದಿಂದಲೇ ಅವಕಾಶಗಳನ್ನು ಸೃಷ್ಟಿಮಾಡತೊಡಗಿ, ಮೊದಲ ಐದು ನಿಮಿಷಗಳಲ್ಲಿ ಗೋಲು ಗಳಿಸುವುದನ್ನು ಮುಂದುವರಿಸಿತು. ಅಯ್ನಾಮ್ ಜೆರ್ವಾ ಮೂಲೆಯಿಂದ ಚೆಂಡನ್ನು ಇರ್ಫಾನ್ ಕಡೆಗೆ ನೀಡಿದರು. ಇರ್ಫಾನ್ ಹೆಡರ್ ಮೂಲಕ ಗೋಲು ಗಳಿಸಿ ಚಾಂಪಿಯನ್ ತಂಡಕ್ಕೆ ಮೊದಲ ಗೋಲು ತಂದಿತ್ತರು. ಎರಡು ನಿಮಿಷದಲ್ಲೇ ಜೈರೋ ಡೋಡ್ರಿಗಸ್ 7ನೇ ನಿಮಿಷದಲ್ಲಿ ತಂಡದ ಪರ ಎರಡನೇ ಗೋಲು ಗಳಿಸಿದರು. ಇದರೊಂದಿಗೆ ಎಫ್‌ಸಿ ಬೆಂಗಳೂರು ಯುನೈಟೆಡ್ 2-0 ಅಂತರದಲ್ಲಿ ಮುನ್ನಡೆಯಿತು.
ಎಫ್‌ಸಿಬಿಯು ತನ್ನ ಪ್ರಾಭಲ್ಯ ಮತ್ತು ನಿಯಂತ್ರಣವನ್ನು ಮುಂದುವರಿಸಿತು, ಜೊತೆಯಲ್ಲಿ ಕೆಲವು ಅರೆ ಅವಕಾಶಗಳನ್ನು ನಿರ್ಮಸಿತು. 25ನೇ ನಿಮಿಷದಲ್ಲಿ ಶಾಜಾನ್ ಫ್ರಾಂಕ್ಲೀನ್ ನೀಡಿದ ಪಾಸ್ ಮೂಲಕ ಇರ್ಫಾನ್ ಯರ್ವಾಡ್ ತನ್ನ ಎರಡನೇ ಗೋಲು ಗಳಿಸಿ ತಂಡಕ್ಕೆ 3-0 ಮುನ್ನಡೆ ನೀಡಿದರು.
ದ್ವಿತಿಯಾರ್ಧದಲ್ಲಿಯೂ ಎಫ್‌ಸಿಬಿಯು ತನ್ನ ಪ್ರಭುತ್ವನ್ನು ಮುಂದುವರಿಸಿತು. ಎಯ್ನಾಮ್‌ಗೆ ಆರಂಭದಲ್ಲೇ ಗೋಲು ಗಳಿಸುವ ಅವಕಾಶ ಸಿಕ್ಕಿತು. ಆದರೆ ಯಂಗ್ ಚಾಲೆಂಜರ್ ಗೋಲ್‌ಕೀಪರ್ ಅದಕ್ಕೆ ಅವಕಾಶ ನೀಡಲಿಲ್ಲ. 59ನೇ ನಿಮಿಷದಲ್ಲಿ ಜೈರೋಗೆ ಮತ್ತೊಂದು ಗೋಲು ಗಳಿಸುವ ಅವಕಾಶವಿದ್ದಿತ್ತು, ಆದರೆ ಚೆಂಡು ಗೋಲ್‌ಬಾಕ್ಸ್‌ನ ಮೇಲಿಂದ ಸಾಗಿತು. 66ನೇ ನಿಮಿಷದಲ್ಲಿ ಸೆಲ್ವಿನ್ ಮಿರಾಂಡ ಗೋಲ್‌ಬಾಕ್ಸ್‌ಗೆ ಗುರಿಯಿಟ್ಟು ತುಳಿದ ಚೆಂಡು ಗೋಲ್ ಕೀಪರ್ ಕೈಗೆ ತಾಗಿ ಹೊರಕ್ಕೆ ಚಿಮ್ಮತು, ಲಿಂಗ್ಡೋ ಯಾವುದೇ ಪ್ರಮಾದವೆಸಗದೆ ತಂಡದ ಪರ ನಾಲ್ಕನೇ ಗೋಲು ಗಳಿಸುವ ಮೂಲಕ ಎಫ್‌ಸಿ ಬೆಂಗಳೂರು ಯುನೈಟೆಡ್ 4-0 ಅಂತರದಲ್ಲಿ ಮುನ್ನಡೆಯಿತು. 77ನೇ ನಿಮಿಷದಲ್ಲಿ ಫ್ರಾಕ್ಲಿನ್ ವೈಯಕ್ತಿಕ ಮೊದಲ ಗೋಲು ಗಳಿಸಿ ತಂಡಕ್ಕೆ 5-0 ಮುನ್ನಡೆ ನೀಡಿದರು.