ಮಾನವಿ: ರಾಜ್ಯ ಗೃಹ ಸಚಿವರು ಬೆಂಗಳೂರಿನಲ್ಲಿ ಜಾಗತಿಕ ಗುಣ ಮಟ್ಟದ ಕ್ರೀಡಾ ನಗರಿ, ಸ್ಪೋರ್ಟ್ಸ್ ಸಿಟಿ ಸ್ಥಾಪಿಸಲಾಗುವುದು, ಅದಕ್ಕೆ ಈಗಾಗಲೇ ಭೂಮಿ ನೋಡಲಾಗಿದೆ ಎಂದು ಹೇಳಿದ್ದಾರೆ. ಅದು ಸ್ಥಾಪನೆಯಾಗಲಿ. ಆದರೆ ರಾಜ್ಯದಲ್ಲಿರುವ ಜಿಲ್ಲಾ, ತಾಲೂಕು ಕ್ರೀಡಾಂಗಣಗಳ ಪರಿಸ್ಥಿತಿ ಹೇಗಿದೆ ಎಂಬುದನ್ನು ಅಥ್ಲೆಟಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಪರಮೇಶ್ವರ್ ಒಮ್ಮೆ ಪರಿಶೀಲಿಸಬೇಕಾಗಿ ವಿನಂತಿ. Before building sports city in Karnataka, one should read this story.
ಇದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ತಾಲೂಕು ಕ್ರೀಡಾಂಗಣ. ಇದು ಸ್ಥಾಪನೆಯಾಗಿ ಎರಡು ವರ್ಷ ಆಗಿಲ್ಲ. ಆಗಲೇ ಪಾಳು ಬಿದ್ದಿದೆ. ಎಲ್ಲೆಂದರಲ್ಲಿ ಗುಟ್ಕಾ ತಿಂದು ಉಗುಳಿರುವುದು, ಕ್ರೀಡಾಂಗಣಕ್ಕೆ ಗಾರೆಯೇ ಮಾಡದಿರುವುದು, ದ್ವಜ ಸ್ತಂಭ ನಾಪತ್ತೆಯಾಗಿರುವುದು, ಬಿಯರ್ ಬಾಟಲಿಗಳು, ಅಲ್ಲೇ ಕುಡಿದು ಮಲಗಿರುವ ಎಣ್ಣೆ ಗಿರಾಕಿಗಳು, ಕ್ರೀಡಾಂಗಣದ ಮಧ್ಯದಲ್ಲಿ ಒಂದು ಹಾಳಾದ ಕ್ರಿಕೆಟ್ ಪಿಚ್ ಇದೆ. ಅದಕ್ಕೆ ಯಾರೂ ಅಡ್ಡಿ ಮಾಡಬಾರದೆಂದು ಕಬ್ಬಿಣದ ಸಲಾಕೆಗಳನ್ನು ಅಡ್ಡ ಇಡಲಾಗಿದೆ. ಕಂಡ ಕಂಡಲ್ಲಿ ಮೂತ್ರ ವಿಸರ್ಜನೆ ಮಾಡಿರುವುದು, ರಾತ್ರಿಯಾದರೆ ಅನೈತಿಕ ಆಟದ ಕ್ರೀಡಾಂಗಣವಾಗಿರುವ ಈ ನೂತನ ಕ್ರೀಡಾಂಗಣವನ್ನು ಕೇಳುವವರೇ ಇಲ್ಲವಾಗಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತದೆ ಎಂದು ತರಾತುರಿಯಲ್ಲಿ ಈ ಕ್ರೀಡಾಂಗಣವನ್ನು ಉದ್ಘಾಟನೆ ಮಾಡಲಾಗಿದೆ.
ಸ್ವಾಗತ ಗೋಪುರಕ್ಕೂ ಗಾರೆಯೇ ಆಗಿಲ್ಲ!: ಒಂದು ಕ್ರೀಡಾಂಗಣಕ್ಕೆ ಪ್ರವೇಶಿಸುವ ಮುನ್ನವೇ ಪ್ರವೇಶ ದ್ವಾರದಲ್ಲಿರುವ ಗೋಪುರ ಆ ಕ್ರೀಡಾಂಗಣ ಹೇಗಿದೆ ಎಂಬುದನ್ನು ಸೂಚಿಸುತ್ತದೆ. ಸ್ವಾಗತ ಗೋಪುರ ನೋಡಿದರೆ ನಮ್ಮ ಕ್ರೀಡಾ ಕ್ಷೇತ್ರಕ್ಕೆ ನಾವೆಷ್ಟು ಕೊಡುಗೆ ನೀಡಿದ್ದೇವೆ ಎಂಬುದನ್ನು ಸಾರಿ ಹೇಳುತ್ತಿದೆ. ಉದ್ಘಾಟನೆ ಆಗಿ ವರುಷವೇ ಕಳೆದರೂ ಸ್ವಾಗತ ಗೋಪುರ ಗಾರೆಯನ್ನೇ ಕಂಡಿಲ್ಲ. ಆಧಾರಕ್ಕಾಗಿ ಕೊಟ್ಟ ಕಬ್ಬಿಣದ ಸಲಾಕೆಗಳು ತುಕ್ಕು ಹಿಡಿದು ನಶಿಸುವ ಹಂತದಲ್ಲಿದೆ.
ಇದು ಒಂದು ಸ್ಯಾಂಪಲ್ ಅಷ್ಟೇ, ರಾಜ್ಯದ ಎಲ್ಲ ಕಡೆ ತಿರುಗಿದರೂ ಅನೇಕ ಕ್ರೀಡಾಂಗಣ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗರಿಲಿಕ್ಕಿಲ್ಲ. ಬೆರಳೆಣಿಕೆಯ ಕ್ರೀಡಾಂಗಣಗಳಲ್ಲಿ ನಿರ್ವಹಣೆ ನಡೆಯುತ್ತಿದೆ. ನಾವು ಎಷ್ಟು ದೊಡ್ಡ ಕ್ರೀಡಾಂಗಣವನ್ನು ಕಟ್ಟಿದ್ದೇವೆ, ಕಟ್ಟುತ್ತಿದ್ದೇವೆ ಎಂಬುದು ಮುಖ್ಯವಲ್ಲ. ಅವುಗಳನ್ನು ಯಾವ ರೀತಿಯಲ್ಲಿ ನಿರ್ವಹಣೆ ಮಾಡುತ್ತಿದ್ದೇವೆ ಎಂಬುದು ಮುಖ್ಯ. ಬೆಂಗಳೂರಿನಲ್ಲಿರುವ ಸೌಲಭ್ಯಗಳನ್ನು ಕಂಡು ರಾಜ್ಯದೆಲ್ಲೆಡೆ ಇದೇ ರೀತಿಯ ಸೌಲಭ್ಯ ಇದೆ ಎಂಬು ಭ್ರಮಿಸುವುದು ಕೂಡ ಸಮಂಜಸವಲ್ಲ. ಉನ್ನತ ಹುದ್ದೆಯಲ್ಲಿದ್ದು ನಮಗೆ ಅಗತ್ಯ ಇರುವವರನ್ನು ಸನ್ಮಾನಿಸಿದರೆ ಅದು ಸಾಧಕರನ್ನು ಗುರುತಿಸಿದಂತೆ ಆಗದು. ಸಭೆಯಲ್ಲಿ ನೆರದವರನ್ನು ಪರಸ್ಪರ ಹೊಗಳಿ ಮೆಚ್ಚುಗೆಯ ಮಾತುಗಳನ್ನಾಡಿದರೆ ಕಾರ್ಯಕ್ರಮ ಚೆನ್ನಾಗಿ ಮೂಡಿಬರುವುದು ಸಹಜ.
ಭೂಪಟದಲ್ಲಿ ಚುಕ್ಕಿಯಂತೆ ಕಾಣುವ ದೇಶಗಳನ್ನು ನಾವು ಎನ್‌ಲಾರ್ಜ್ ಮಾಡಿ ನೋಡಬೇಕು. ಅಲ್ಲಿ ಕ್ರೀಡೆಗೆ ಯಾವ ರೀತಿಯ ಪ್ರೋತ್ಸಾಹ ಸಿಗುತ್ತಿದೆ ಎಂದು. ಅಪಾರ ಜನ ಸಂಖ್ಯೆ, ದೊಡ್ಡ ಗಾತ್ರವಿದ್ದರೆ ಒಲಿಂಪಿಕ್ಸ್‌ನಲ್ಲಿ ಪದಕ ಸಿಗುವುದಿಲ್ಲ. ಜನಸಂಖ್ಯೆ ಎಷ್ಟಿದ್ದಾರೆ ಎಂಬುದು ಮುಖ್ಯವಲ್ಲ. ಕ್ರೀಡಾಭಿವೃದ್ಧಿಗೆ ಯಾವ ರೀತಿಯಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂಬುದು ಮುಖ್ಯ. ಪ್ರೋತ್ಸಾಹ ನೀಡುವಾಗ ಗ್ರಾಮೀಣ ಸಾಧಕರನ್ನು ನೆನಪಿಸಿಕೊಂಡರೆ ಮುಂದಿನ ದಿನಗಳಲ್ಲಿ ಯಶಸ್ಸಿನ ಹಾದಿ ಸಿಗಬಹುದು. ಇಲ್ಲವಾದಲ್ಲಿ… ನಿನ್ನ ನಾ ಹೊಗಳಿ, ನನ್ನ ನೀ ಹೊಗಳಿ…. ನೀ ನನಗೆ.. ನಾ ನಿನಗೆ …ಜೀವನ ನಗುತಲಿರೆ….