Thursday, April 25, 2024

ಸೋಲರಿಯದೆ ಫೈನಲ್ ತಲುಪಿದ ಬ್ಲಾಸ್ಟರ್ಸ್

ಸ್ಪೋರ್ಟ್ಸ್ ಮೇಲ್ ವರದಿ

ಸ್ಪಿನ್ ಮಾಂತ್ರಿಕರ ದಾಳಿಗೆ ಸಿಲುಕಿದ ಮೈಸೂರು ವಾರಿಯರ್ಸ್ ತಂಡ 139 ರನ್ ಗಳಿಸುವಲ್ಲಿ ವಿಲವಾಗುವುದರೊಂದಿಗೆ ಬೆಂಗಳೂರು ಬ್ಲಾಸ್ಟರ್ಸ್ ತಂಡ ಯಾವುದೇ ಪಂದ್ಯದಲ್ಲೂ ಸೋಲನುಭವಿಸದೆ ಫೈನಲ್ ಪ್ರವೇಶಿಸಿತು.

ಶ್ರೇಯಸ್ ಗೋಪಾಲ್ (13ಕ್ಕೆ 3), ಆರ್ಶದೀಪ್ ಸಿಂಗ್ ಬ್ರಾರ್ 5ಕ್ಕೆ 1) ಹಾಗೂ ಆನಂದ ದೊಡ್ಡಮನಿ(16ಕ್ಕೆ 2) ದಾಳಿಗೆ ಸಿಲುಕಿದ ಮೈಸೂರು ವಾರಿಯರ್ಸ್ ನಾಟಕೀಯವಾಗಿ ಕುಸಿದು 20 ರನ್‌ಗಳ ಅಂತರದಲ್ಲಿ ಸೋಲನುಭವಿಸುವುದರೊಂದಿಗೆ ಮನೆಯಂಗಣದಲ್ಲಿ ಮತ್ತೊಮ್ಮೆ ಆಘಾತ ಅನುಭವಿಸಿ ಪ್ರಸಕ್ತ  ಸಾಲಿನ ಕರ್ನಾಟಕ ಪ್ರೀಮಿಯರ್ ಲೀಗ್ ಅಭಿಯಾನವನ್ನು ಮುಗಿಸಿತು. ಸೋತೇ ಹೋದೆವು ಎಂಬ ಆತಂಕದಲ್ಲಿದ್ದ ಬೆಂಗಳೂರು ಬ್ಲಾಸ್ಟರ್ಸ್ ತಂಡ ಅಲ್ಪ ಮೊತ್ತವನ್ನೂ ಸಮರ್ಥಿಸಿಕೊಂಡು ಫೈನಲ್‌ಗೆ ಲಗ್ಗೆ ಇಟ್ಟಿತು.
ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ ಲಗುಬಗನೆ ವಿಕೆಟ್ ಕಳೆದುಕೊಂಡಿತು. ಕುಶಲ್ ವಾಧ್ವಾನಿ  (25ಕ್ಕೆ 3) ಹಾಗೂ ಜೆ. ಸುಚಿತ್ (12ಕ್ಕೆ 2) ದಾಳಿಗೆ ಸಿಲುಕಿದ ಬೆಂಗಳೂರು ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 138 ರನ್ ಗಳಿಸಿತು.
ಮಳೆಯಿಂದಾಗಿ ಪಂದ್ಯ 65 ನಿಮಿಷಗಳ ಕಾಲ ತಡವಾಗಿ ಆರಭಗೊಂಡಿತು. 139 ರನ್ ಜಯದ ಗುರಿಹೊತ್ತ ಮೈಸೂರು ಪರ ಅರ್ಜುನ್ ಹೊಯ್ಸಳ 52 ರನ್ ಗಳಿಸಿದಾಗ ಜಯದ ಹಾದಿ ಸುಗಮವಾಗಿತ್ತು. ಆದರೆ ನಾಯಕ ರಾಬಿನ್ ಉತ್ತಪ್ಪ ಸ್ಪಿನ್ನರ್‌ಗಳನ್ನು ದಾಳಿಗೆ ಬಿಟ್ಟಾಗ ಮೈಸೂರು ಲಗುಬಗನೆ ವಿಕೆಟ್ ಕಳೆದುಕೊಂಡು ಪೆವಿಲಿಯನ್ ಪರೇಡ್ ನಡೆಸಿತು. ಕೇವಲ 118 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಬುಧವಾರ ನಡೆಯುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ಹಾಗೂ ಬಿಜಾಪುರ ಬುಲ್ಸ್ ನಡುವೆ ಹೋರಾಟ ನಡೆಯಲಿದೆ.

Related Articles