Thursday, March 28, 2024

ಐಎಸ್‌ಎಲ್: ಬಿಎಫ್ಸಿ ತಂಡ ಪ್ರಕಟ

ಸ್ಪೋರ್ಟ್ಸ್ ಮೇಲ್ ವರದಿ

ಇಂಡಿಯನ್ ಸೂಪರ್ ಲೀಗ್‌ನ ಮೊದಲ ಪಂದ್ಯದಲ್ಲಿ ಚೆನ್ನೈಯಿನ್ ಎಫ್ ಸಿ  ವಿರುದ್ಧ ಆಡಲು ಸಜ್ಜಾಗಿರುವ ಬೆಂಗಳೂರು ಎಫ್ ಸಿ  ತಂಡ ಮಂಗಳವಾರ  25 ಮಂದಿ ಸದಸ್ಯರ ತಂಡವನ್ನು ಪ್ರಕಟಿಸಿದೆ.

ಕಳೆದ ವರ್ಷ ಐಎಸ್‌ಎಲ್‌ಗೆ ಕಾಲಿಟ್ಟು ಫೈನಲ್ ತಲುಪಿದ್ದ ಬೆಂಗಳೂರು ತಂಡ ಹೊಸ ಉಲ್ಲಾಸದೊಂದಿಗೆ ಅಂಗಣಕ್ಕಿಳಿಯಲಿದೆ. ಕಳೆದ ಬಾರಿ ಲೀಗ್‌ನಲ್ಲಿ 40 ಅಂಕ ಗಳಿಸಿ ಅಗ್ರ ಸ್ಥಾನಕ್ಕೇರಿದರೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದ್ದ ತಂಡ ಈ ಬಾರಿ ಹೆಚ್ಚು ಬದಲಾವಣೆ ಮಾಡದೆ ಅದೇ ಆಟಗಾರರನ್ನು ಉಳಿಸಿಕೊಂಡಿದೆ. ಈ ಬಾರಿ ಐವರು ಯುವ ಆಟಗಾರರು ತಂಡಕ್ಕೆ ಸೇರ್ಪಡೆಗೊಂಡಿರುವುದು ವಿಶೇಷ.
ಕಾರ್ಲಸ್ ಕುವಾಡ್ರಾಟ್ ಅವರು ಎಎ್‌ಸಿ ಕಪ್ ಸೆಮಿಫೈನಲ್ ಪಂದ್ಯದ ವೇಳೆ ತಂಡಕ್ಕೆ ಸೇರ್ಪಡೆಯಾಗಿದ್ದು, ಕಠಿಣ ಅಭ್ಯಾಸದ ಮೂಲಕ ತಂಡವನ್ನು ಲೀಗ್‌ಗೆ ಸಜ್ಜುಗೊಳಿಸಿದ್ದಾರೆ. ಎ ಎಫ್ ಸಿ  ಕಪ್ ಮೂಲಕ ನಾವು ಋತುವಿನ ಆರಂಭ  ಕಂಡಿದ್ದೇವೆ. ಇದರೊಂದಿಗೆ ತಂಡದ ಆಟಗಾರರೊಂದಿಗೆ ಬೇಗನೆ ಕೆಲಸ ಆರಂಭಿಸಲು ಸಾಧ್ಯವಾಯಿತು. ಕಳೆದ ಋತುವಿನ ಹೆಚ್ಚಿನ ಆಟಗಾರರನ್ನು ನಾವು ಉಳಿಸಿಕೊಂಡಿರುವುದು ಉತ್ತಮದ ಸಂಗತಿ. ಈ ಋತುವಿನಲ್ಲಿ ಐವರು ಯುವ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದು, ಅಂಗಣಕ್ಕಿಳಿಯಲು ಪೈಪೋಟಿ ನಡೆಸಿದ್ದಾರೆ. ತಂಡದಲ್ಲಿ ಯುವ ಹಾಗೂ ಹಿರಿಯ ಆಟಗಾರರ ಸಮ್ಮಿಲನವಿದೆ. ಈ ಬಾರಿ ಲೀಗ್ ಅತ್ಯಂತ ಕಠಿಣವೆನಿಸಲಿದೆ. ಜಯಕ್ಕಾಗಿ ನಾವು ನಮ್ಮಿಂದಾದ ಎಲ್ಲ ಪ್ರಯತ್ನ ಮಾಡಲಿದ್ದೇವೆ ಎಂದು ಕೋಚ್ ಹೇಳಿದ್ದಾರೆ.
ಬೆಂಗಳೂರು ತಂಡದ ನಾಯಕರಾಗಿ ಸುನಿಲ್ ಛೆಟ್ರಿ ಮುಂದುವರಿಯಲಿದ್ದಾರೆ. ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್ ಸಂಧೂ , ಡಿಫೆಂಡರ್ ರಾಹುಲ್ ಭಿಕೆ ಹಾಗೂ ಹರ್ಮನ್‌ಜೋತ್ ಖಾಬ್ರಾ, ದಾಳಿ ವಿಭಾಗದಲ್ಲಿ ಬೈಥಾಂಗ್ ಹಾಕಿಪ್, ಥಾಂಗ್‌ಖೋಸಿಯಮ್ ಹಾಗೂ ಉದಾಂತ್ ಸಿಂಗ್ ಪ್ರಮುಖ ಅಸ್ತ್ರವಾಗಿದ್ದಾರೆ. ಮಿಡ್‌ಫೀಲ್ಡರ್ ಕೇನ್ ಲೂವಿಸ್, ಡಿಫೆಂಡರ್ ಸೈರುವಾತ್ ಕಿಮಾ ಹಾಗೂ ಕೆಲವು ದೇಶೀಯ ಆಟಗಾರರು ತಂಡದ ಶಕ್ತಿ ಎನಿಸಿದ್ದಾರೆ. ಡಿಫೆಂಡರ್ ರಿನೊ ಆಂಟೋ, ಗುರ್ಸಿಮ್ರಾತ್ ಸಿಂಗ್ ಗಿಲ್‌ಮತ್ತು ಗೋಲ್‌ಕೀಪರ್ ಸೊರಾಮ್ ಪೊಯಿರೆ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದಾರೆ.
ಸೆಪ್ಟಂಬರ್ ೩೦ರಂದು ಬ್ಲೂ ಪಡೆ ಚೆನ್ನೈಯಿನ್  ತಂಡದ ವಿರುದ್ಧ ಬೆಂಗಳೂರಿನಲ್ಲಿ ಮೊದಲ ಪಂದ್ಯವನ್ನಾಡಲಿದೆ.

ತಂಡದ ವಿವರ

ಗೋಲ್‌ಕೀಪರ್ಸ್-ಗುರ್‌ಪ್ರೀತ್ ಸಿಂಗ್ ಸಂಧೂ , ಸೊರಾಮ್ ಪೊಯಿರೆ ಅಂಗಂಬಾ, ಆದಿತ್ಯ ಪಾತ್ರ.
ಡಿಫೆಂಡರ್ಸ್- ರಾಹುಲ್ ಭಿಕೆ , ಅಲ್ಬೆರ್ಟ್ ಸೆರ್ರಾನ್ , ಸೈರುತ್ ಕಿಮಾ, ಜುವಾನನ್ ಗೊನ್ಸಾಲಿಸ್, ಹರ್ಮನ್‌ಜೋತ್ ಸಿಂಗ್ ಖಾಬ್ರಾ, ರಿನೋ ಆಂಟೋ, ನಿಶು ಕುಮಾರ್, ಅಶೀರ್ ಅಖ್ತರ್, ಗುರ್ಸಿಮ್ರಾತ್ ಸಿಂಗ್ ಗಿಲ್.
ಮಿಡ್‌ಫೀಲ್ಡರ್ಸ್-ಎರಿಕ್ ಪಾರ್ಥಲು, ಕೇನ್ ಫ್ರಾನ್ಸಿಸ್  ಲಿವಿಸ್, ಡಿಮಾಸ್ ಡೆಲ್ಗಾಡೊ, ವಿದ್ಯಾನಂದ್ ಸಿಂಗ್, ಬೊಯ್ತಾಂಗ್ ಹವೋಕಿಪ್, ಫ್ರಾನ್ಸಿಸ್ಕೋ ಹೆರ್ನಾಂಡೇಜ್, ಅಜಯ್ ಛೆಟ್ರಿ, ಅಲ್ತಾಮಶ್ ಸಯ್ಯದ್.
ಫಾರ್ವರಡ್ಸ್- ನಿಕೊಲಾಸ್ ಲಡಿಸ್ಲಾವೊ ಫೆಡೋರ್ ಮಿಕು, ಸುನಿಲ್ ಛೆಟ್ರಿ, ಥಾಂಗ್‌ಖೋಯಿಸೆಮ್ ಹವೋಕಿಪ್, ಉದಾಂತ್ ಸಿಂಗ್, ಚೆಂಚೋ ಗೈಲ್‌ಶೇನ್.

Related Articles