Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕಷ್ಟಗಳ ಮೆಟ್ಟಿನಿಂತ ಒಂಟಿಗಣ್ಣಿನ “ಬಿಲಿಯರ್ಡ್ಸ್‌ ರಾಜಾ” ಸುಬ್ರಹ್ಮಣ್ಯನ್‌

ಭಾರತದ ದಿವ್ಯಾಂಗರ ಬಿಲಿಯರ್ಡ್ಸ್‌ ತಂಡ ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಥಾಯ್ಲೆಂಡ್‌ಗೆ ಪ್ರಯಾಣಿಸಲಿದೆ ಎಂಬ ಸುದ್ದಿ ತಿಳಿಯುತ್ತಲೇ, ಈ ಪ್ಯಾರಾ ಬಿಲಿಯರ್ಡ್ಸ್‌ ಕ್ರೀಡೆಯನ್ನು ಭಾರತಕ್ಕೆ ಪರಿಚಯಿಸಿದ ವೆಂಕಟೇಶನ್‌ ಸುಬ್ರಹ್ಮಣ್ಯನ್‌ ಪ್ರೀತಿಯ ರಾಜಾ ಸುಬ್ರಹ್ಮಣ್ಯನ್‌ ಅವರ ನೆನಪಾಯಿತು. ಮುಂಬಯಿಯ ಮಾಟುಂಗದ ಕಿಂಗ್‌ ಸರ್ಕಲ್‌ ಸಮೀಪ ನೆಲೆಸಿರುವ ಒಂಟಿ ಜೀವಿ ರಾಜಾ ಸುಬ್ರಹ್ಮಣ್ಯನ್‌‌ ಅವರನ್ನು ದೇವರು ಹಲವು ರೀತಿಯಲ್ಲಿ ಪರೀಕ್ಷೆ ಮಾಡಿದ್ದಾನೆ. ಆದರೆ ಈ ರಾಜಾ ಎಲ್ಲದರಲ್ಲೂ ಜಯ ಗಳಿಸಿ ಇಂದು ದಿವ್ಯಾಂಗರ ಬಿಲಿಯರ್ಡ್ಸ್‌ನಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಮಿಂಚುವಂತೆ ಮಾಡಿದ್ದಾರೆ. Blindness, Polio, Heart Blockages, Osteoarthritis, Obesity is unable to stop RAJA to become an International Billiards and Snooker Champion.

ಚಿಕ್ಕಂದಿನಲ್ಲಿ ನೀಡಿದ ಪೋಲಿಯೋ ಲಸಿಕೆಯ ಗುಣಮಟ್ಟ ಚೆನ್ನಾಗಿಲ್ಲದ ಕಾರಣ ಪೋಲಿಯೋಗೆ ತುತ್ತು, ನಂತರ ಅಪಘಾತದಲ್ಲಿ ಬಲಗಣ್ಣು ಕಳೆದುಕೊಂಡರು, ಅಸ್ಥಿಸಂಧಿವಾತ (Osteoarthritis), ಹೃದಯದ ಬ್ಲಾಕೇಜ್‌ನಿಂದಾಗಿ ಹೃದಯಾಘಾತ, ವಿಪರೀತವಾಗಿ ಬೆಳೆದ ಬೊಜ್ಜು ಇವುಗಳಿಂದಾಗಿ ರಾಜಾ ಸುಬ್ರಹ್ಮಣ್ಯನ್‌ ನಲುಗಿ ಹೋಗಿದ್ದರು. ಆದರೆ ಇದ್ಯಾವ ಕಾಯಿಲೆಯೂ ಅವರನ್ನು ಸೋಲಿಸಿಲ್ಲ, ಕಾರಣ ಅವರೊಬ್ಬ ಕ್ರೀಡಾಪಟು. ಭಾರತದಲ್ಲಿ ಮೊದಲ ಬಾರಿಗೆ 2019ರಲ್ಲಿ ದಿವ್ಯಾಂಗರಿಗಾಗಿಯೇ ರಾಷ್ಟ್ರೀಯ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ ಆಯೋಜಿಸಿದ ನೈಜ ಚಾಂಪಿಯನ್‌.

ಇದೇ ತಿಂಗಳು ಬ್ಯಾಂಕಾಕ್‌ನಲ್ಲಿ ನಡೆಯಲಿರುವ ಮೊದಲ ವಿಶ್ವ ದಿವ್ಯಾಂಗರ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಸಜ್ಜಾಗುತ್ತಿರುವ ರಾಜಾ ಸುಬ್ರಹ್ಮಣ್ಯನ್‌ www.sportsmail.net ಜೊತೆ ತಮ್ಮ ಬದುಕಿನ ಯಶೋಗಾಥೆಯನ್ನು ಹಂಚಿಕೊಂಡಿದ್ದಾರೆ.

ಮುಂಬಯಿಯ ಮಾಟುಂಗ ಜಿಮ್ಖಾನದಲ್ಲಿ ಟೇಬಲ್‌ ಟೆನಿಸ್‌ ಆಟಗಾರನಾಗಿ ಬೆಳೆದ ರಾಜಾ, ಮಹಾರಾಷ್ಟ್ರದ ಉತ್ತಮ ಟಿಟಿ ಆಟಗಾರನಾಗಿ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದರು. ನಂತರ ಆತುಕೊಂಡಿದ್ದು ಬಿಲಿಯರ್ಡಸ್‌ ಕ್ರೀಡೆಯನ್ನು. ಆದರೆ ದಿವ್ಯಾಂಗರಿಗಾಗಿ ಪ್ರತ್ಯೇಕ ಬಿಲಿಯರ್ಡ್ಸ್‌ ಕ್ರೀಡೆ ಇರಲಿಲ್ಲ. ಆಡಬೇಕಾದರೆ ಸಾಮಾನ್ಯರೊಂದಿಗೇ ಆಡಬೇಕು. ಹಲವಾರು ದೈಹಿಕ ನ್ಯೂನ್ಯತೆಗಳ ನಡುವೆಯೇ ಸಾಮಾನ್ಯರೊಂದಿಗೂ ಸ್ಪರ್ಧಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಉತ್ತಮ ಸ್ನೂಕರ್‌ ಹಾಗೂ ಬಿಲಿಯರ್ಡ್ಸ್‌ ಆಟಗಾರನೆಂದೆನಿಸಿದರು. ರಾಷ್ಟ್ರ ಮಟ್ಟದ ಟೂರ್ನಿಗಳಲ್ಲಿ ಮಾತ್ರವಲ್ಲ, ಈ ಹಿಂದೆಯೂ ಎರಡು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ರಾಜಾ ಪಾಲ್ಗೊಂಡಿದ್ದರು. ವಿಶ್ವ ದಿವ್ಯಾಂಗರ ಸ್ನೂಕರ್‌ ಓಪನ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದವರು.

ಬಿಲಿಯರ್ಡ್ಸ್‌ ಹಾಗೂ ಸ್ನೂಕರ್‌ ಆಡಬೇಕಾದರೆ ಏಕಾಗ್ರತೆ ಬೇಕು, ಬಹಳ ಹೊತ್ತು ನಿಂತಿರಬೇಕು. ಆದರೆ ರಾಜಾ ಸುಬ್ರಹ್ಮಣ್ಯನ್‌ ಅವರಿಗೆ ಇರುವುದು ಒಂದೇ ಕಣ್ಣು, ಕಾಲು ಪೋಲಿಯೋ. ಆದರೂ ಯಾವುದೇ ಕಾರಣಕ್ಕೂ ಬಿಲಿಯರ್ಡ್ಸ್‌ ಅಭ್ಯಾಸವನ್ನು ಬಿಡದೆ ನಿತ್ಯವೂ ತಪಸ್ಸಿನಂತೆ ಆಡುತ್ತಿದ್ದಾರೆ.

ಈ ಎಲ್ಲ ಸಮಸ್ಯೆಗಳ ನಡುವೆ ಆಡುತ್ತಿರುವಾಗ ಎರಡೂ ಕಾಲುಗಳಲ್ಲಿ ಬಲ ಇಲ್ಲದಾಯಿತು. ಜೊತೆಯಲ್ಲಿ ಹೃದಯದಲ್ಲಿ ಬ್ಲಾಕ್‌ ಕಾಣಿಸಿಕೊಂಡಿತು. ಬೈಪಾಸ್‌ ಸರ್ಜರಿ ಆಗುವಾಗ 112ಕೆಜಿಗೂ ಹೆಚ್ಚು ತೂಕ ಹೊಂದಿದ್ದ ರಾಜಾ ಅವರಿಗೆ ನಡೆದಾಡಲು ಅಸಾಧ್ಯವಾಯಿತು. ತೂಕ ಇಳಿಸಬೇಕಾಗುವುದು ಅನಿವಾರ್ಯವಾಯಿತು. ಅದಕ್ಕಾಗಿ ನಿತ್ಯವೂ 15 ಕಿಮೀ ನಡೆದರು. ಸಿಗರೇಟು ಸೇವನೆಯಿಂದ ದೂರ ಸರಿದರು. ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡರು. 112 ಕೆಜಿಯಿಂದ 67 ಕೆಜಿಗೆ ಇಳಿದರು. ಮತ್ತೆ ಬಿಲಿಯರ್ಡಸ್‌ ಅಂಗಣದಲ್ಲಿ ಕಾಣಿಸಿಕೊಂಡರು.

ಪುಣೆಯಲ್ಲಿ ಅಖಿಲ ಭಾರತ ಪ್ಯಾರಾ ಸ್ನೂಕರ್‌: ರಾಜಾ ಸುಬ್ರಹ್ಮಣ್ಯನ್‌ ಒಬ್ಬ ದಿವ್ಯಾಂಗರಾಗಿ ಕೇವಲ ತನ್ನ ಬದುಕಿನ ಬಗ್ಗೆ ಯೋಚಿಸಿಲ್ಲ. ಇತರ ದಿವ್ಯಾಂಗರ ಬದುಕಿನ ಬಗ್ಗೆ ಕಾಳಜಿ ವಹಿಸಿದ್ದಾರೆ. ದಿವ್ಯಾಂಗ ಸ್ನೂಕರ್‌ ಹಾಗೂ ಬಿಲಿಯರ್ಡ್ಸ್‌ ಆಟಗಾರರಿಗೆ ಒಂದು ವೇದಿಕೆ ಸಿಗಬೇಕು, ಅವರು ಕೂಡ ಸಾಮಾನ್ಯರಂತೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವಂತಾಗಬೇಕು ಎಂದು ಹಂಬಲಿಸಿ, 2019ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಅಖಿಲ ಭಾರತ ಪ್ಯಾರಾ ಸ್ನೂಕರ್‌ ಚಾಂಪಿಯನ್‌ಷಿಪ್‌ ಪುಣೆಯಲ್ಲಿ ಆಯೋಜಸಿದರು. ವಿಶ್ವ ಚಾಂಪಿಯನ್‌ ಪಂಕಜ್‌ ಆಡ್ವಾಣಿ ಅವರು ಈ ಟೂರ್ನಿಯಲ್ಲಿ ಉದ್ಘಾಟನೆ ಮಾಡಿರುವುದು ವಿಶೇಷ.

ಒಂಟಿಯಾಗಿ ಬದುಕುತ್ತಿರುವೆ, ಬಿಲಿಯರ್ಡ್ಸ್‌ ಆಟವೇ ಸಂಗಾತಿ: ಮಂಗಳವಾರ ಮುಂಬಯಿ ಮಾಟುಂಗದಿಂದ ಮಾತನಾಡಿದ ವೆಂಕಟೇಶ್ವರನ್‌ ಸುಬ್ರಹ್ಮಣ್ಯನ್‌ ಯಾನೆ ರಾಜಾ ಸುಬ್ರಹ್ಮಣ್ಯನ್‌, “ಅಪ್ಪ ಅಮ್ಮ ಈಗ ಇಲ್ಲ. ಮದುವೆ ಆಗಿಲ್ಲ. ಅಕ್ಕ ಅಮೆರಿಕದಲ್ಲಿದ್ದಾರೆ. ಅಪ್ಪ ಕಟ್ಟಿದ ಒಂದು ಮನೆಯಿಂದ ಬಾಡಿಗೆ ಬರುತ್ತಿದೆ. ದಿನವೂ ಬಿಲಿಯರ್ಡ್ಸ್‌ ಆಡುವುದು ಬಿಟ್ಟರೆ ಬೇರೆ ಏನಿಲ್ಲ. ದೇವರು ಕೊಡಬಾರದ ಕಷ್ಟಗಳನ್ನು ಕೊಟ್ಟ ಆದರೆ ನನ್ನಲ್ಲಿರುವ ಆತ್ಮವಿಶ್ವಾಸಕ್ಕೆ ಆತ ಯಾವುದೇ ತೊಂದರೆಯನ್ನು ಮಾಡಿಲ್ಲ. ನಾನೀಗ ಬದುಕುತ್ತಿರುವುದು ಆ “ವಿಲ್‌ ಪವರ್‌” ನಿಂದ. ಬೆಂಗಳೂರಿನಲ್ಲಿ ನಾವು ರಾಷ್ಟ್ರೀಯ ಪ್ಯಾರಾ ಬಿಲಿಯರ್ಡ್ಸ್‌ ಸಂಸ್ಥೆ ಹುಟ್ಟುಹಾಕಲು ಯೋಜನೆ ರೂಪಿಸಿದ್ದೇವೆ, ವಿಶ್ವಕಪ್‌ ಮುಗಿದ ಬಳಿಕ ನಾವೆಲ್ಲ ಬೆಂಗಳೂರಿನಲ್ಲಿ ಮತ್ತೊಮ್ಮೆ ಸಭೆ ನಡೆಸಲಿದ್ದೇವೆ. ಬ್ಯಾಂಕಾಕ್‌ನಲ್ಲಿ ನಡೆಯಲಿರುವ ಮೊದಲ ಪ್ಯಾರಾ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ ದಿವ್ಯಾಂಗರ ಕ್ರೀಡಾ ಬದುಕಿನಲ್ಲಿ ಹೊಸ ಅಧ್ಯಾಯ ಬರೆಯಲಿದೆ ಎಂಬ ನಂಬಿಕೆ ಇದೆ. ನನ್ನ ಬಿಲಿಯರ್ಡ್ಸ್‌ ಆಟಕ್ಕೆ ಆಶ್ರಯ ನೀಡಿದ ಮಾಟುಂಗ ಜಿಮ್ಖಾನಕ್ಕೆ ನಾನು ಚಿರ ಋಣಿಯಾಗಿರುವೆ. ಅದೇ ರೀತಿಯಲ್ಲಿ ಹಲವು ರೀತಿಯಲ್ಲಿ ನನಗೆ ಪ್ರೋತ್ಸಾಹ ನೀಡಿದವರನ್ನೂ ಈ ಸಂದರ್ಭದಲ್ಲಿ ಸ್ಮರಿಸುವೆ,” ಎಂದರು.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.