ಚನ್ನಗಿರಿ ಕೇಶವಮೂರ್ತಿ ಜೀವನ ಸಾಧನೆಯ ಪುಸ್ತಕ ಲೋಕಾರ್ಪಣೆ
ಬೆಂಗಳೂರು: ವಿಶ್ವಮಾನ್ಯ ಕ್ರಿಕೆಟ್ ಅಂಕಿ ಅಂಶ ತಜ್ಞ ಚನ್ನಗಿರಿ ಕೇಶವಮೂರ್ತಿ ಅವರ ಜೀವನ ಸಾಧನೆಯ ‘ಸಾಹಿತ್ಯವೇ ಹಸಿರು ಕ್ರಿಕೆಟೇ ಉಸಿರು’ ಯಶೋಗಾಥೆ ಪುಸ್ತಕ ಲೋಕಾರ್ಪಣೆಗೊಂಡಿತು. Book contains the achievements of world-renowned cricket statistician Chennagiri Keshava Murthy released.
ವಿಶ್ವ ವಿಖ್ಯಾತ ಕ್ರಿಕೆಟ್‌ನ ಸ್ಪಿನ್ ಮಾಂತ್ರಿಕ ಬಿ.ಎಸ್. ಚಂದ್ರಶೇಖರ್ ಅವರು ಜಯನಗರದ ತಮ್ಮ ಸ್ವಗೃಹದಲ್ಲಿ ಭಾನುವಾರ ಪುಸ್ತಕ ಬಿಡುಗಡೆ ಮಾಡಿದರು.
ಚನ್ನಗಿರಿ ಕೇಶವಮೂರ್ತಿ ಅವರ ಸಾಹಿತ್ಯ ಮತ್ತು ಕ್ರಿಕೆಟ್ ಸೇವೆ ಮಾದರಿಯಾಗಿದ್ದು, ಅವರೊಬ್ಬ ಶ್ರೇಷ್ಠ ಕ್ರಿಕೆಟ್ ಅಂಕಿ ಅಂಶ ತಜ್ಞರಾಗಿರುವುದು ನಮ್ಮ ಕರ್ನಾಟಕದ ಹೆಮ್ಮೆ ಎಂದು ಅವರು ಪ್ರಶಂಸಿಸಿದರು.
ಕೇಶವಮೂರ್ತಿ ಕುರಿತ ‘ಸಾಹಿತ್ಯವೇ ಹಸಿರು ಕ್ರಿಕೆಟೇ ಉಸಿರು’ ಪುಸ್ತಕ ಸಾಹಿತ್ಯ ಹಾಗೂ ಕ್ರಿಕೆಟ್ ಆಸಕ್ತರಿಗೆ ಮಾರ್ಗದರ್ಶಿಯಾಗಿದೆ ಎಂದು ಅವರು ತಿಳಿಸಿದರು.
ಪತ್ತೇದಾರಿ ಕಾದಂಬರಿಗಳನ್ನೂ ಬರೆದಿರುವ ಕೇಶವಮೂರ್ತಿ ಅವರು ಕ್ರಿಕೆಟ್ ಕುರಿತು ಪುಸ್ತಕಗಳ ರಚನೆ ಮಾಡಿರುವುದು ಕ್ರೀಡಾ ಸಾಹಿತ್ಯಕ್ಕೆ ಅನನ್ಯ ಕೊಡುಗೆಗಳಾಗಿವೆ ಎಂದು ಸಂಧ್ಯಾ ಚಂದ್ರಶೇಖರ್ ಹೇಳಿದರು.85ರ ಇಳಿವಯಸ್ಸಿನಲ್ಲೂ ಚನ್ನಗಿರಿ ಕೇಶವಮೂರ್ತಿ ಅವರು ಇವತ್ತಿಗೂ ಕ್ರಿಕೆಟ್ ಅಂಕಿ ಅಂಶ ದಾಖಲು ಮಾಡುತ್ತಿರುವುದು ಅಪರೂಪ ಎಂದು ಚಂದ್ರಶೇಖರ್ ದಂಪತಿಗಳು ಶುಭ ಹಾರೈಸಿದರು.
ಪುಸ್ತಕದ ಸಂಪಾದಕ ಕಗ್ಗೆರೆ ಪ್ರಕಾಶ್, ಸಿಕೆಎಂ ಮಗ ಸಂಜಯ್ ಚನ್ನಗಿರಿ, ಮಗಳು ಸವಿತಾ ಉಪಸ್ಥಿತರಿದ್ದರು.