Thursday, November 21, 2024

ಕ್ರೀಡಾಪಟುಗಳಿಗೆ ವರ, ಸ್ಪೋರ್ಟ್ಸ್‌ ಕ್ಲಬ್‌ ಬ್ರಹ್ಮಾವರ

ಸೋಮಶೇಖರ್‌ ಪಡುಕರೆ, sportsmail

ಕ್ರೀಡೆಯನ್ನೇ ಉಸಿರಾಗಿಸಿಕೊಂಡು, ಕ್ರೀಡೆಯಲ್ಲೇ ಬದುಕು ಕಟ್ಟಿಕೊಂಡು, ಕ್ರೀಡೆಯ ಮೂಲಕವೇ ಈ ಸಮಾಜಕ್ಕೆ ಏನಾದರೂ ಒಳಿತನ್ನು ಮಾಡಬೇಕೆಂಬ ಹಂಬಲದಿಂದ ಸಮಾನ ಮನಸ್ಕರು ಹುಟ್ಟು ಹಾಕಿದ ಕ್ರೀಡಾ ಸಂಸ್ಥೆಯೇ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬ್ರಹ್ಮಾವರ ಸ್ಪೋರ್ಟ್ಸ್‌ ಕ್ಲಬ್.‌ ಈ ಕ್ಲಬ್‌ ಇಂದು ತನ್ನ ಚಟುವಟಿಕೆ ಮತ್ತು ಬೆಳವಣಿಗೆಯ ಮೂಲಕ ರಾಜ್ಯದಲ್ಲೇ ಅತ್ಯಂತ ಮಾದರಿ ಕ್ಲಬ್‌ ಆಗಿ ರೂಪುಗೊಂಡಿರುವುದುಕ್ರೀಡಾ ವಲಯದ ಅಚ್ಚರಿ.

ಈ ರಾಜ್ಯದಲ್ಲಿ ಸಾವಿರಾರು ಸ್ಪೋರ್ಟ್ಸ್‌ ಕ್ಲಬ್‌ಗಳಿರಬಹುದು, ಅವುಗಳ ಉದ್ದೇಶವ ವಿಭಿನ್ನವಾಗಿರಬಹುದು, ಆದರೆ ಬ್ರಹ್ಮಾವರ ಸ್ಪೋರ್ಟ್ಸ್‌ ಕ್ಲಬ್‌ನ ಉದ್ದೇಶ ಮತ್ತು ಅದರ ಸಾಧನೆಗಳನ್ನು ಗಮನಿಸಿದಾಗ ಅದು ಈ ರಾಜ್ಯಕ್ಕೆ ಮಾದರಿ ಎಂದರೆ ಅತಿಶಯೋಕ್ತಿಯಾಗಲಾರದು.

ರಾಜ್ಯ ಸರಕಾರ ನೀಡುವ ಉತ್ತಮ ಸ್ಪೋರ್ಟ್ಸ್‌ ಕ್ಲಬ್‌ ಪ್ರಶಸ್ತಿ, ಏಕಲವ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ಇನ್ನಿತರ ಗೌರವಗಳ ಪಟ್ಟಿಯ ಜೊತೆಯಲ್ಲಿ ಕ್ರೀಡಾ ಸಾಧನೆಗಳನ್ನು ಗಮನಿಸಿದಾಗ, ಕ್ರೀಡೆಯ ಜತೆಯಲ್ಲಿ ಸಂಸ್ಥೆಯ ಇತರ ಕಲೆ ಮತ್ತು ಸಾಂಸ್ಕೃತಿಕ ಕಾಳಜಿಯನ್ನು ಸ್ಮರಿಸಿದಾಗ ಇದು ಕರಾವಳಿಯ ಕ್ರೀಡಾಪಟುಗಳು ಮತ್ತು ಕ್ರೀಡಾಸಕ್ತರ  ಪಾಲಿನ ವರವಾಗಿ ಕಂಡುಬಂತು.

2005ರಲ್ಲಿ ಹುಟ್ಟಿಕೊಂಡ ಈ ಕ್ಲಬ್‌ ಈಗಾಲೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಿದ ಕೀರ್ತಿಗೆ ಪಾತ್ರವಾಗಿದೆ. ಕ್ರಿಕೆಟ್‌, ಬ್ಯಾಡ್ಮಿಂಟನ್‌, ಈಜು, ಟೆನ್ನಿಸ್‌, ಟೇಬಲ್‌ ಟೆನ್ನಿಸ್‌, ವಾಕಿಂಗ್‌ ಟ್ರ್ಯಾಕ್‌, ಓಪನ್‌ ಏರ್‌ ಸ್ಟೇಜ್ ಮೊದಲಾದ‌ ಸೌಲವಭ್ಯ ಇದೆ. ಇದುವರೆಗೂ ವಿವಿಧ  ಕ್ರೀಡೆಗಳಲ್ಲಿ  ಹತ್ತು ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ತರಬೇತಿ ಪಡೆದಿರುವುದು ಮಾತ್ರವಲ್ಲ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ.

ಸ್ಥಳೀಯ ಎಸ್‌ಎಂಎಸ್‌ ಕಾಲೇಜಿನಲ್ಲಿ ಆರಂಭಗೊಂಡ ಈ ಕ್ರೀಡಾ ಸಂಸ್ಥೆ ಈಗ ಅಂತಾರಾಷ್ಟ್ರೀಯ ಗುಣಮಟ್ಟದ ಮೂಲಭೂತ ಸೌಕಜರ್ಯಗಳಿಂದ ಕೂಡಿದೆ. ಸಂಸ್ಥೆಯ ಪ್ರಸಕ್ತ ಅಧ್ಯಕ್ಷ, 35 ವರ್ಷಗಳ ಕಾಲ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಚಂದ್ರಶೇಖರ್‌ ಹೆಗ್ಡೆ ಅವರು ಸಂಸ್ಥೆ ಸಾಗಿ ಬಂದ ಹಾದಿಯನ್ನು sportsmail ಜತೆ ಹಂಚಿಕೊಂಡಿದ್ದಾರೆ.

ಸ್ಫೂರ್ತಿಯಾದ ಕ್ರೀಡಾಕೂಟ:

2004ರಲ್ಲಿ ಬೆಂಗಳೂರು ಸ್ಪೋರ್ಟ್ಸ್‌ ಕ್ಲಬ್‌ ಮತ್ತು ಎಸ್‌ಎಂಎಸ್‌ ಕಾಲೇಜು ಇದರ ಜಂಟಿ ಆಶ್ರಯದಲ್ಲಿ ಕಾಲೇಜು ಅಂಗಣದಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ವ್ಯಾಪ್ತಿಯ ಕ್ರೀಡಾಕೂಟ ನಡೆಯಿತು. ಖ್ಯಾತ ಕ್ರೀಡಾಪಟುಗಳಾದ ಆಶ್ವಿನಿ ನಾಚಪ್ಪ ಮತ್ತು ಉದಯ ಪ್ರಭು ಅವರು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಇಲ್ಲಿನ ಸಂಘಟಕರಲ್ಲಿ ಹೊಸ ಉತ್ಸಾಹ ತುಂಬಿದರು. ಈ ಉತ್ಸಾಹವೇ ಬ್ರಹ್ಮಾವರ ಸ್ಪೋರ್ಟ್ಸ್‌ ಕ್ಲಬ್‌ ಹುಟ್ಟಿಗೆ ಕಾರಣವಾಯಿತು. ಇದರ ರೂಪುರೇಶೆಗಳನ್ನು ಸ್ವತಃ ಚಂದ್ರಶೇಖರ್‌ ಹೆಗ್ಡೆ ಅವರೇ ರೂಪಿಸಿದರು. ಒ.ಎಸ್‌.ಸಿ. ಎಜ್ಯುಕೇಷನ್‌ ಸೊಸೈಟಿ ಮತ್ತು ಎಸ್‌ಎಂಎಸ್‌ ಕಾಲೇಜು ಇದಕ್ಕೆ ಸಂಪೂರ್ಣ ಬೆಂಬಲ ನೀಡಿತು. ಅಂದಿನ ಪ್ರಾಂಶುಪಾಲರಾಗಿದ್ದ ಕೆ. ನಾರಾಯಣನ್‌ ಕ್ರೀಡಾ ಚಟುವಟಿಕೆಗಳಿಗೆ ಅಗತ್ಯವಿರುವ ಎಲ್ಲ ರೀತಿಯ ನೆರವನ್ನು ನೀಡಿದರು.

ಅಂತಾರಾಷ್ಟ್ರೀಯ ಗುಣಮಟ್ಟದ ಬ್ಯಾಡ್ಮಿಂಟನ್‌ ಕೋರ್ಟ್‌

ಡಾ. ಪ್ರವೀಣ್‌ ಕುಮಾರ್‌ ಶೆಟ್ಟಿಯವರು ಸ್ಥಾಪಕ ಅಧ್ಯಕ್ಷರಾದದ್ದು ಸಂಸ್ಥೆಗೆ ಉತ್ತಮ ರೀತಿಯಲ್ಲಿ ಅಡಿಪಾಯ ಸಿಕ್ಕಿತು. ಸಂಸ್ಥೆಯ ರೂವಾರಿ ಚಂದ್ರಶೇಖರ್‌ ಹೆಗ್ಡೆ ಅವರು ಸ್ಥಾಪಕ ಕಾರ್ಯದರ್ಶಿಯಾಗಿದ್ದರು. ನಂತರ ಮಡಾಮಕ್ಕಿ ಶಶಿಧರ ಶೆಟ್ಟಿ, ಡಾ. ಪ್ರಕಾಶ್‌ ತೋಳಾರ್‌, ಭರತ್‌ ಕುಮಾರ್‌ ಶೆಟ್ಟಿ, ಮೊದಲಾದ ಕ್ರೀಡಾ ಪ್ರೋತ್ಸಾಹಕರು ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ್ದರು. ಕಾರ್ಯದರ್ಶಿ ಗ್ರೆಗರಿ ಡಿʼಸಿಲ್ವಾ ಅವರು ಕ್ಲಬ್‌ ಸದಾ ಚಟುವಟಿಕೆಯಲ್ಲಿರುವಂತೆ ಶ್ರಮಿಸುತ್ತಿದ್ದಾರೆ.

ಚಟುವಟಿಕೆಗಳು:

ಮಂಗಳೂರು ವಿಶ್ವವಿದ್ಯಾನಿಲಯ ಕ್ರಿಕೆಟ್‌ ತಂಡದ ಮಾಜಿ ನಾಯಕ, ಕ್ಲಬ್‌ನ ಸ್ಥಾಪಕ ಸದಸ್ಯ ಮತ್ತು ಉಪನ್ಯಾಸಕ ವಿಜಯ್‌ ಆಳ್ವಾ ಅವರು  ಕ್ಲಬ್‌ ಮೂಲಕ ಹಲವು ವರ್ಷಗಳಿಂದ ಕ್ರಿಕೆಟ್‌ ತರಬೇತಿ ನೀಡಿದ್ದರು. ಇವರಲ್ಲಿ ತರಬೇತಿ ಪಡೆದ ಅನೇಕರು ಮಂಗಳೂರು ವಿಶ್ವವಿದ್ಯಾನಿಲಯ ಮಾತ್ರವಲ್ಲ ಕೆಎಸ್‌ಸಿಎ ಲೀಗ್‌ ಪಂದ್ಯಗಳಲ್ಲೂ ಆಡಿದ್ದಾರೆ.‌ ಈಗ ಮಂಗಳೂರು ವಿಶ್ವವಿದ್ಯಾನಿಲಯದ ನಾಯಕರಾಗಿದ್ದ ಜನಾರ್ಧನ್‌ ಹೇರೂರು ಮತ್ತು ನವೀನ್‌ ಶೆಟ್ಟಿ ಅವರು ತರಬೇತಿ ನೀಡುತ್ತಿದ್ದಾರೆ. ಹಲವಾರು ಕ್ರೀಡಾಪಟುಗಳು ಇಲ್ಲಿ ತರಬೇತಿ ಪಡೆದು ಬೇರೆ ಬೇರೆ ಹಂತದಲ್ಲಿ ಮಿಂಚಿದ್ದಾರೆ. ಅಂತಾರಾಷ್ಟ್ರೀಯ ಗುಣಮಟ್ಟದ ಬ್ಯಾಡ್ಮೀಂಟನ್‌ ಕೋರ್ಟ್‌ ಇದ್ದು ಇಲ್ಲಿ ಕ್ಲಬ್‌ನ ಸದಸ್ಯರು ಮತ್ತು ಸಾರ್ವಜನಿಕರಿಗೆ ಆಡುವ ಅವಕಾಶವಿದೆ.

ಟೆನಿಸ್‌ ಅಂಗಣ

ಉಡುಪಿ ಜಿಲ್ಲೆಯ ಮೊದಲ ಟೆನಿಸ್‌ ತರಬೇತಿ ಸಂಸ್ಥೆ:

ಕರ್ನಾಟಕ ಲಾನ್‌ ಟೆನಿಸ್‌ ಅಸೋಸಿಯೇಷನ್‌ನಿಂದ ಮಾನ್ಯತೆ ಪಡೆದಿರುವ ಬ್ರಹ್ಮಾವರ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಎರಡು ಅಂತಾರಾಷ್ಟ್ರೀಯ ಗುಣಮಟ್ಟದ ಟೆನಿಸ್‌ ಕೋರ್ಟ್‌ಗಳಿವೆ. ಇಲ್ಲಿ ರಾಜ್ಯಮಟ್ಟದ, ಜಿಲ್ಲಾ ಮಟ್ಟದ ಟೆನಿಸ್‌ ಟೂರ್ನಿಗಳು ನಡೆಯುತ್ತಿವೆ. ಉಡುಪಿ ಜಿಲ್ಲೆಯಲ್ಲೇ ವೃತ್ತಿಪರ ಟೆನಿಸ್‌ ತರಬೇತಿ ಆರಂಭಿಸಿದ ಕೀರ್ತಿ ಬ್ರಹ್ಮಾವರ ಸ್ಪೋರ್ಟ್ಸ್‌ ಕ್ಲಬ್‌ಗೆ ಸಲ್ಲುತ್ತದೆ. ಮೂರು ನ್ಯಾಷನಲ್‌ ರಾಂಕಿಂಗ್‌ ಟೂರ್ನಿ ನಡೆಸಿದ ಕೀರ್ತಿ ಬ್ರಹ್ಮಾವರ ಸ್ಪೋರ್ಟ್ಸ್‌ ಕ್ಲಬ್‌ಗೆ ಸಲ್ಲುತ್ತದೆ. ರಾಜ್ಯ ಟೆನಿಸ್‌ ಸಂಸ್ಥೆಯ ಕಾರ್ಯಕಾರಿ ಸಮಿತಿಯಲ್ಲಿ ಬ್ರಹ್ಮಾವರ ಸ್ಪೋರ್ಟ್ಸ್‌ ಕ್ಲಬ್‌ನ ಅಧ್ಯಕ್ಷ ಚಂದ್ರಶೇಖರ್‌ ಹೆಗ್ಡೆ ಇರುವುದು ಹೆಮ್ಮೆಯ ಸಂಗತಿ.

ಅಂತಾರಾಷ್ಟ್ರೀಯ ಈಜುಕೊಳ:

ಎಸ್‌ಎಂಎಸ್‌ ಕಾಲೇಜಿನ ಮಾಜಿ ಪ್ರಾಂಶುಪಾಲರು, ಕ್ರೀಡಾ ಪ್ರೋತ್ಸಾಹಕರು, ಸ್ವತಹ ಕ್ರೀಡಾಪಟುಗಳಾಗಿದ್ದ ಬೈಕಾಡಿ ಸಲ್ವಾದೋರ್‌ ನೊರೋನ್ಹಾ ಸ್ಮಾರಕ ಈಜುಕೊಳ ಈಗ ಉಡುಪಿ ಜಿಲ್ಲೆಯ ಆಕರ್ಷಣೆಯಾಗಿದೆ. ಅಂತಾರಾಷ್ಟ್ರೀಯ ಈಜ ಚಾಂಪಿಯನ್ಷಿಪ್‌ ನಡೆಸಲು ಈ ಈಜುಕೊಳ ಸೂಕ್ತವಾಗಿದೆ.

ಮಿನಿ ಒಲಿಂಪಿಕ್ಸ್‌ ಮಾದರಿಯ ಅಂತಾರಾಷ್ಟ್ರೀಯ ಗುಣಮಟ್ಟದ ಈಜುಕೊಳವನ್ನು ಕಳೆದ ವಾರ ಉದ್ಘಾಟನೆ ಮಾಡಲಾಗಿದೆ. ಡಿಸೆಂಬರ್‌ 1ರಿಂದ ಇಲ್ಲಿ ತರಬೇತಿ ಆರಂಭಗೊಳ್ಳಲಿದ್ದು, ಬೆಂಗಳೂರಿನ ವಿಜಯನಗರ ಈಜು ತರಬೇತಿ ಕೇಂದ್ರದಲ್ಲಿ ತರಬೇತಿ ನೀಡುತ್ತಿದ್ದ ಮಂಜುನಾಥ್‌ ಖಾರ್ವಿ ಅವರು ಇಲ್ಲಿ ತರಬೇತಿ ನೀಡಲಿದ್ದಾರೆ.   ಮುಂದಿನ ದಿನಗಳಲ್ಲಿ ಇಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಈಜು ಚಾಂಪಿಯನ್ಷಿಪ್‌ ನಡೆಯಲಿದೆ, ಆ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ್‌ ಹೆಗ್ಡೆ ಅವರು ತಿಳಿಸಿರುತ್ತಾರೆ.

ರಾಷ್ಟ್ರೀಯ ಕ್ರೀಡಾ ದಿನಾಚರಣೆ:

ಬ್ರಹ್ಮಾವರ ಸ್ಪೋರ್ಟ್ಸ್‌ ಕ್ಲಬ್‌ ಯಾಕೆ ವಿಶೇಷವಾಗಿದೆ ಎಂಬುದಕ್ಕೆ ಈ ಕ್ಲಬ್‌ ರಾಷ್ಟ್ರೀಯ ಕ್ರೀಡಾ ದಿನಾಚರಣೆಗೆ ನೀಡುತ್ತಿರುವ ಗೌರವದಿಂದಾಗಿ. ಕೆಲವು ವರ್ಷ ಕ್ರೀಡಾ ಇಲಾಖೆಗಳು, ಕ್ರೀಡಾ ಸಂಸ್ಥೆಗಳೇ ಆಗಸ್ಟ್‌ 29ರಂದು ನಡೆಯುವ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸುವುದಿಲ್ಲ. ಆದರೆ ಬ್ರಹ್ಮವಾರ ಸ್ಪೋರ್ಟ್ಸ್‌ ಕ್ಲಬ್‌ ಹಾಕಿ ಮಾಂತ್ರಿಕ ಧ್ಯಾನ್‌ಚಂದ್‌ ಅವರ ಹುಟ್ಟುಹಬ್ಬದ ಶುಭಸಂದರ್ಭದಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ನಡೆಸಿಕೊಂಡು ಬರುತ್ತಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಉಡುಪಿ ಜಿಲ್ಲೆಯ ಕ್ರೀಡಾಪಟುಗಳನ್ನು ಈ ದಿನದಂದು ಗೌರವಿಸಿ, ನಗದು ಬಹುಮಾನವನ್ನು ಕ್ಲಬ್‌ ನೀಡುತ್ತಿದೆ. ಉತ್ತಮ ದೈಹಿಕ ಶಿಕ್ಷಕರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತಿದೆ.ಈ ರೀತಿಯಲ್ಲಿ ರಾಷ್ಟ್ರೀಯ ಕ್ರೀಡಾದಿನಾಚರಣೆಯನ್ನು ಆಚರಿಸುತ್ತಿರುವುದು ದೇಶದಲ್ಲೇ ವಿರಳ.

ಶ್ರೀಮತಿ ಅರುಣಾ ಸುದರ್ಶನ ಹೆಗ್ಡೆ ಬಯಲು ರಂಗಮಂದಿರ

ಕಲೆಗೂ ಪ್ರೋತ್ಸಾಹ:

ಬ್ರಹ್ಮಾವರ ಸ್ಪೋರ್ಟ್ಸ್‌ ಕ್ಲಬ್‌ ಯಾವುದೇ ಕ್ರೀಡೆ ಇರಲಿ ನೆರವು ಕೇಳಿ ಬಂದ ಕ್ರೀಡಾ ಪಟುಗಳನ್ನು ಬರಿಗೈಯಲ್ಲಿ ಹಿಂದಿರುಗಿಸಿದ್ದಿಲ್ಲ. ತಮ್ಮ ಸಾಮರ್ಥ್ಯ ಮತ್ತು ಅಶಕ್ತ ಕ್ರೀಡಾಪಟುಗಳಿಗೆ ಅಗತ್ಯ ಇರುವ ನೆರವನ್ನು ನೀಡುತ್ತ ಬಂದಿದೆ. ಕ್ರೀಡೆಯ ಜತೆಯಲ್ಲಿ ಸಂಸ್ಥೆ ಕಲೆಗೂ ಪ್ರೋತ್ಸಾಹ ನೀಡುತ್ತಿದೆ. ಯಕ್ಷಗಾನವನ್ನು ಆಯೋಜಿಸಿ ಕಲೆಗೂ ಪ್ರೋತ್ಸಾಹ ನೀಡಿದೆ. ಯಕ್ಷಗಾನದ ದಿನ ಅಶಕ್ತ ಕಲಾವಿದರಿಗೆ ನೆರವು ನೀಡುವುದು, ಅವರನ್ನು ಗೌರವಿಸು ಕಾರ್ಯವನ್ನೂ ಸಂಸ್ಥೆ ಮಾಡುತ್ತಿದೆ. ಸಮಾಜ ಸೇವೆ ಮಾಡುತ್ತಿರುವ ಅನೇಕರಿಗೆ ಸಂಸ್ಥೆ ನೆರವು ನೀಡಿ ಗೌರವಿಸಿದೆ. ಬಡ ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗೂ ಸ್ಪಂದಿಸಿದೆ. ರಾಷ್ಟ್ರೀಯ ಮ್ಯಾರಥಾನ್‌ ಆಯೋಜಿಸಿದ ಕೀರ್ತಿಯೂ ಬ್ರಹ್ಮಾವರ ಸ್ಪೋರ್ಟ್ಸ್‌ ಕ್ಲಬ್‌ಗೆ ಸಲ್ಲುತ್ತದೆ. ಅಂಚೆಚೀಟಿ ಸಂಗ್ರಾಹಕ ಡೇನಿಯಲ್‌ ಮಂಥೆರೋ ಅವರಿಗೂ ಕ್ಲಬ್‌ 25,000 ರೂ. ನೆರವು ನೀಡಿದೆ. ಗೋಪಾಲ್‌ ಖಾರ್ವಿ ಗಿನ್ನೀಸ್‌ ದಾಖಲೆ ಮಾಡುವಾಗಲೂ ಸಂಸ್ಥೆ ಅವರಿಗೆ 25,000 ರೂ. ಆರ್ಥಿಕ ನೆರವನ್ನು ನೀಡಿತ್ತು.

ಅಥ್ಲೀಟ್ಸ್‌ಗೂ ಗೌರವ:

ಕ್ಲಬ್‌ನಲ್ಲಿ ತರಬೇತಿ ಪಡೆದ ಜಾವಲಿನ್‌ ಎಸೆತಗಾರ್ತಿ ಕರೀಶ್ಮಾ ಅವರು ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವುದು ಹೆಮ್ಮೆಯ ಸಂಗತಿ. ಒಲಿಂಪಿಯನ್‌ ಎಂ.ಆರ್‌. ಪೂವಮ್ಮ ಅವರನ್ನು ಸನ್ಮಾನಿಸಿ 25,000 ರೂ. ನಗದು ಬಹುಮಾನ ನೀಡಿ ಕ್ಲಬ್‌ ಗೌರವಿಸಿದೆ. ವೈ. ಸತ್ಯನಾರಾಯಣ ನಾಯಕ್‌ ಅವರನ್ನು ಬ್ರಹ್ಮಾವರ ಸ್ಪೋರ್ಟ್ಸ್‌ ಕ್ಲಬ್‌ ಮರೆಯುವಂತಿಲ್ಲ. ಅವರು ಇಂದು ನಮ್ಮ ಕಣ್ಣಮುಂದೆ ಇಲ್ಲದಿದ್ದರೂ ಅವರಲ್ಲಿ ತರಬೇತಿ ಪಡೆದ ಅನೇಕ ಅಥ್ಲೀಟ್‌ಗಳು ಇಂದು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದಾರೆ.  ಸತ್ಯನಾರಾಯಣ ನಾಯಕ್‌ ಅವರು ಎಸ್‌ಎಂಎಸ್‌ ಕಾಲೇಜಿನಲ್ಲಿ ದೈಹಿಕ ಶಿಕ್ಷಕರಾಗಿದ್ದು, ಬ್ರಹ್ಮಾವರ ಸ್ಪೋರ್ಟ್ಸ್‌ ಕ್ಲಬ್‌ನಲ್ಲೂ ತರಬೇತಿ ನೀಡುತ್ತಿದ್ದರು. ಅವರ ಅಗಲುವಿಕೆ ಕ್ರೀಡಾಪಟುಗಳ ಪಾಲಿಗೆ ತುಂಬಲಾರದ ನಷ್ಟ.

ಕ್ಲಬ್‌ ಹೌಸ್‌ ಸ್ಥಾಪನೆ:

ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸುಮಾರು 300ಕ್ಕೂ ಹೆಚ್ಚು ಗಣ್ಯರು ಈ ಕ್ಲಬ್‌ನ ಸದಸ್ಯರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಸ್ಪೋರ್ಟ್ಸ್‌ ಕ್ಲಬ್‌ ತನ್ನದೇ ಆದ ಕ್ಲಬ್‌ ಹೌಸನ್ನು ಹೊಂದುವ ಯೋಜನೆ ಮಾಡಿಕೊಂಡಿದೆ. ಬ್ರಹ್ಮಾವರದ ಚಾಂತಾರಿನಲ್ಲಿರುವ ಈ ಕ್ಲಬ್‌ ತನ್ನದೇ ಆದ ಭೂಮಿಯನ್ನು ಹೊಂದಿದ್ದು, ಕ್ಲಬ್‌ ಹೌಸ್‌ ಸ್ಥಾಪನೆಗೆ ಬಗ್ಗೆ ಯೋಜನೆಯನ್ನು ರೂಪಿಸಲಾಗಿದೆ. ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಕ್ಲಬ್‌ನ ಅಧ್ಯಕ್ಷ ಚಂದ್ರಶೇಖರ್‌ ಹೆಗ್ಡೆ ಹೇಳಿದ್ದಾರೆ. ಈ ರೀತಿ ಕ್ರೀಡೆಯನ್ನೇ ಆಧಾರವಾಗಿಟ್ಟುಕೊಂಡು ಕ್ಲಬ್‌ ಹೌಸ್‌ ಸ್ಥಾಪಿಸುತ್ತಿರುವುದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬೇರೆಲ್ಲೂ ಕಾಣಸಿಗದು.

ಬ್ರಹ್ಮಾವರ ಸ್ಪೋರ್ಟ್ಸ್‌ ಕ್ಲಬ್‌ನ ಕಾರ್ಯದರ್ಶಿ, ಮಾಜಿ ದೈಹಿಕ ಶಿಕ್ಷಕ ಗ್ರೆಗರಿ ಡಿʼಸಿಲ್ವಾ ಅವರು ಸಂಸ್ಥೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಪ್ರಮುಖ ಕೆಲಸಗಳ ನಿರ್ವಹಣೆ ಹಾಗೂ ಅದಕ್ಕೆ ಅಗತ್ಯವಿರುವ ಮಾಹಿತಿಯನ್ನು ನೀಡುವುದರಲ್ಲಿ ಗ್ರೆಗರಿ ತಜ್ಞರು. ಕೋರ್ಟ್‌, ನಿರ್ಮಾಣ, ಗ್ರೌಂಡ್‌ ನಿರ್ಮಿಸುವುದು, ಟ್ರ್ಯಾಕ್‌ ನಿರ್ಮಾಣ ಹೀಗೆ ಕ್ರೀಡೆಯ ಪ್ರತಿಯೊಂದು ವಿಭಾಗದಲ್ಲೂ ಗ್ರೆಗರಿ ಎತ್ತಿದ ಕೈ. ಉಡುಪಿ ಜಿಲ್ಲೆಯಲ್ಲಿ ಸಮಾರು ಹತ್ತಿಪ್ಪತ್ತು ಕ್ರೀಡಾಂಗಣಗಳು ಗ್ರೆಗರಿ ಅವರ ಯೋಜನೆಯಂತೆ ರೂಪಿತಗೊಂಡಿವೆ. ಅಜ್ಜರಕಾಡು ಕ್ರೀಡಾಂಗಣ, ಎಸ್‌ಎಂಎಸ್‌ ಕ್ರೀಡಾಂಗಣ ಅವುಗಳಲ್ಲಿ ಪ್ರಮುಖವಾದುದು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಗ್ರೆಗರಿ ಅವರು ಬ್ರಹ್ಮಾವರ ಸ್ಪೋರ್ಟ್ಸ್‌ ಕ್ಲಬ್‌ಗಾಗಿ ಶ್ರಮಿಸುತ್ತಿದ್ದಾರೆ.

ಸಂಸ್ಥೆಯ ಆಧಾರ ಸ್ತಂಭಗಳಾದ ಚಂದ್ರಶೇಖರ್‌ ಹೆಗ್ಡೆ ಮತ್ತು ಗ್ರೆಗರಿ ಡಿʼಸಿಲ್ವಾ

 

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕ್ರೀಡೆಯ ಹೆಸರಿನಲ್ಲಿ ಆರ್ಥಿಕ ನೆರವನ್ನು ನೀಡುವಾಗ ಕೇವಲ ನಗರ ಪ್ರದೇಶದ ಕ್ಲಬ್‌ಗಳು ಹಾಗೂ ಯಾವುದೋ ಕ್ರೀಡಾಪಟುಗಳಿಗೆ ಸೇರಿದ ಕ್ಲಬ್‌ಗಳಿಗೆ ನೆರವು ನೀಡುವುದರ ಜತೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಬ್ರಹ್ಮಾವರ ಸ್ಪೋರ್ಟ್ಸ್‌ ಕ್ಲಬ್‌ನಂಥ ಕ್ರೀಡಾ ಸಂಸ್ಥೆಗಳಿಗೆ ನೆರವು ನೀಡಿದರೆ ಗ್ರಾಮೀಣ ಪ್ರದೇಶದಿಂದ ಇನ್ನಷ್ಟು ಪ್ರತಿಭೆಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಾಧ್ಯ.

Related Articles