ಸ್ಪೋರ್ಟ್ಸ್ ಮೇಲ್ ವರದಿ
ಹಾಕಿ ಕರ್ನಾಟಕ ಆಶ್ರಯದಲ್ಲಿ ನಡೆದ 5 ಎ ಸೈಡ್ ಪುರುಷರ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಕೆನರಾ ಬ್ಯಾಂಕ್ ತಂಡ ಪ್ರಶಸ್ತಿ ಗೆದ್ದುಕೊಂಡಿದೆ.
ಫೈನಲ್ ಪಂದ್ಯದಲ್ಲಿ ಕೆನರಾ ಬ್ಯಾಂಕ್, ಭಾರತೀಯ ಕ್ರೀಡಾ ಪ್ರಾಧಿಕಾರದ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡಿತು. ಎ.ಕೆ. ಸೋಮಣ್ಣ (7ನೇ ನಿಮಿಷ) ಹಾಗೂ ಪ್ರಧಾನ್ ಸೋಮಣ್ಣ (17ನೇ ನಿಮಿಷ) ಕೆನರಾ ಬ್ಯಾಂಕ್ ಪರ ಗೋಲು ಗಳಿಸಿ ಜಯದ ರೂವಾರಿ ಎನಿಸಿದರು. ಭಾರತೀಯ ಕ್ರೀಡಾ ಪ್ರಾಧಿಕಾರದ ಪರ ಮೊಹಮ್ಮದ್ ರಾಹೀಲ್ ಮೌಸೀನ್ ಒಂದು ಗೋಲು ಗಳಿಸಿದರು.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ ತಂಡ ಕಸ್ಟಮ್ಸ್ ಹಾಗೂ ಎಕ್ಸೈಸ್ ತಂಡವನ್ನು 5-3 ಗೋಲುಗಳ ಅಂತರದಲ್ಲಿ ಮಣಿಸಿ ಫೈನಲ್ ತಲುಪಿತ್ತು. ಭಾರತೀಯ ಕ್ರೀಡಾ ಪ್ರಾಧಿಕಾರದ ಪರ ಅಭರಣ್ ಸುದೇವ್, ಮೊಹಮ್ಮದ್ ರಾಹೀಲ್ ತಲಾ 2 ಗೋಲು ಗಳಿಸಿದರು. ಕಸ್ಟಮ್ಸ್ ಹಾಗೂ ಎಕ್ಸೈಸ್ ಪರ ಬಿದ್ದಪ್ಪ ಕೆ.ಡಿ. ಹಾಗೂ ತಿಮ್ಮಣ್ಣ ತಲಾ ಒಂದು ಗೋಲು ಗಳಿಸಿದರು.
ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕೆನರಾ ಬ್ಯಾಂಕ್ ತಂಡ ಎಂಇಜಿ ವಿರುದ್ಧ 6-2 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಫೈನಲ್ ಪ್ರವೇಶಿಸಿತು. ಕೆನರಾ ಬ್ಯಾಂಕ್ ಪರ ಸೋಮಯ್ಯ ಕೆಪಿ ಹ್ಯಾಟ್ರಿಕ್ ಸಾಧನೆ ಮಾಡಿದರು.
ವಿಜೇತ ತಂಡ 22,000 ರೂ. ಹಾಗೂ ರನ್ನರ್ ಅಪ್ ತಂಡ 11,000 ರೂ. ನಗದು ಬಹುಮಾನ ಗೆದ್ದುಕೊಂಡಿತು. ಎಂಇಜಿ ತಂಡದ ಅರಸು ಉತ್ತಮ ಗೋಲ್‌ಕೀಪರ್, ಭಾರತೀಯ ಕ್ರೀಡಾ ಪ್ರಾಧಿಕಾರ ತಂಡದ ಕೆ.ಟಿ.ಕಾರಿಯಪ್ಪ ಉತ್ತಮ ಆಟಗಾರ ಗೌರವಕ್ಕೆ ಪಾತ್ರರಾದರು.