Thursday, November 21, 2024

ಚದುರಂಗದ ಮನೆಯಲ್ಲಿ ಚೆಸ್‌ ಒಲಂಪಿಯಾಡ್‌ಗೆ ಚಾಲನೆ

ಚೆನ್ನೈ: ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಆಚರಿಸುತ್ತಿರುವ ಶುಭ ಸಂದರ್ಭದಲ್ಲಿ ಚದುರಂಗದ ತವರೂರಾದ ಭಾರತದಲ್ಲಿ ಚೆಸ್‌ ಒಲಂಪಿಯಾಡ್‌ ನಡೆಯುತ್ತಿರುವುದು ಹೊಸ ಸಂಭ್ರಮವನ್ನುಂಟು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಗುರುವಾರ ಚೆನ್ನೈನಲ್ಲಿ 44ನೇ ಚೆಸ್‌ ಒಲಿಂಪಿಯಾಡ್‌ಗೆ ಅವರು ಚಾಲನೆ ನೀಡಿ ಮಾತನಾಡಿದರು. ಎಲ್ಲಾ ಸ್ಪರ್ಧಿಗಳಿಗೂ, ಭಾರತದ ಕ್ರೀಡಾ ಇತಿಹಾದಲ್ಲಿ ಇದೊಂದು ಅಪೂರ್ವ ಕ್ಷಣ, ಎಂದ ಪ್ರಧಾನಿಗಳು, “ಆಟ ಆರಂಭವಾಗಲಿ,” ಎಂದು ಹೇಳುವ ಮೂಲಕ ಚೆಸ್‌ ಒಲಂಪಿಯಾಡ್‌ಗೆ ಚಾಲನೆ ನೀಡಿದರು.

“ಅತಿಥಿ ದೇವರಿಗೆ ಸಮಾನ” ಎಂದು ಹೇಳುವ ಮೂಲಕ ಮೋದಿಯವರು, ಜಗತ್ತಿನ ಇತರ ರಾಷ್ಟ್ರಗಳಿಂದ ಬಂದ ಸ್ಪರ್ಧಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದರು, ಮಾತ್ರವಲ್ಲ ಜಗತ್ತಿನ ಇತರ ದೇಶಗಳ ಆಟಗಾರರನ್ನು ಅತ್ಯಂತ ಗೌರವದಿಂದ ನೋಡಿಕೊಳ್ಳುವಂತೆ ಸೂಚಿಸಿದರು.

ಚೆಸ್‌ ಜನಿಸಿದ ಭಾರತದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಚೆಸ್‌ ಒಲಂಪಿಯಾಡ್‌ ಹಲವು ಪ್ರಥಮಗಳಿಗೆ ನಾಂದಿಯಾಗಿದೆ ಎಂದು ಪ್ರಧಾನಿಯವರು ಹೇಳಿದರು. ಮೂರು ದಶಕಗಳಲ್ಲಿ ಮೊದಲ ಬಾರಿಗೆ ಏಷ್ಯಾದಲ್ಲಿ ನಡೆಯುತ್ತಿದೆ, ಮೊದಲ ಬಾರಿಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ರಾಷ್ಟ್ರಗಳು ಪಾಲ್ಗೊಳ್ಳುತ್ತಿವೆ. ಮೊದಲ ಬಾರಿಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಟಾರ್ಚ್‌ ರಿಲೇ ನಡೆದಿರುವುದನ್ನು ಪ್ರಧಾನಿ ಮೋದಿಯವರು ಈ ಸಂದರ್ಭದಲ್ಲಿ ನೆನಪಿಸಿಕೊಟ್ಟರು.

ಚೆಸ್‌ ಮತ್ತು ತಮಿಳುನಾಡಿಗೂ ಐತಿಹಾದಿಕ ಸಂಬಂಧ ಇರುವುದನ್ನು ಮೋದಿಯವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. ತಿರುವರೂರು ಜಿಲ್ಲೆಯ ಪೂವನೂರು ಗ್ರಾಮದಲ್ಲಿರುವ ಚತುರಂಗ ವಲ್ಲಭ ನಥಾರ್‌ ಹೆಸರಿನ ಶಿವನ ದೇವಸ್ಥಾನ ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಕ್ರೀಡೆಗೆ ಸಂಘಟನಾ ಶಕ್ತಿ ಇದೆ: ಕ್ರೀಡೆಗೆ ಸಂಘಟಿಸುವ ಶಕ್ತಿ ಇದೆ. ಎಲ್ಲರನ್ನೂ ಒಂದಾಗಿದುವ ಶಕ್ತಿ ಕ್ರೀಡೆಗೆ ಇದೆ. ಕ್ರೀಡೆಯಲ್ಲಿ ಸೋಲೆಂಬುದಿಲ್ಲ, “ಇಲ್ಲಿ ವಿಜೇತರು ಮತ್ತು ಭವಿಷ್ಯದಲ್ಲಿ ಗೆಲ್ಲುವವರು ಇರುತ್ತಾರೆಯೇ ವಿನಃ ಸೋಲುವವರಿಲ್ಲ,” ಎಂದರು. ಇದಕ್ಕೂ ಮುನ್ನ ನಡೆದ ಮನೋರಂಜನಾ ಕಾರ್ಯಕ್ರಮದಲ್ಲಿ ಭಾರತದ ಸಾಂಸ್ಕೃತಿಕ ಜಗತ್ತು ಅನಾವರಣಗೊಂಡಿತು. ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದರು. ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ರಾಜ್ಯ ಸರಕಾರವು ಕ್ರೀಡಾಕೂಟಕ್ಕೆ 102 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿರುವುದಾಗಿ ಪ್ರಕಟಿಸಿದರು.

44ನೇ ಚೆಸ್‌ ಒಲಂಪಿಯಾಡ್‌ ನಾಲ್ಕ ಅಂಗಳ ಮಾದರಿಯಲ್ಲಿ ನಡೆಯಲಿದೆ. ಶೆರ್ಟೋನ್‌ ಮಹಾಬಲಿಪುರಂ ರೆಸಾರ್ಟ್‌ ಹಾಗೂ ಮಾಮಲ್ಲಪುರಂನಲ್ಲಿ ಸಿದ್ಧಗೊಳಸಿರುವ ಸಭಾಂಗಣದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. 180ರಾಷ್ಟ್ರಗಳಿಂದ 350 ತಂಡಗಳು 11 ಸುತ್ತುಗಳ ಸ್ಪರ್ಧೆಯಲ್ಲಿ ಸೆಣಸಲಿವೆ. ಆಗಸ್ಟ್‌ 9 ರಂದು ಕೊನೆಯ ಸುತ್ತಿನ ಸ್ಪರ್ಧೆಗಳು ನಡೆಯಲಿವೆ.

ಉಕ್ರೇನ್‌ನ ಮೇಲಿ ಯುದ್ಧ ಸಾರಿದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಚೆಸ್‌ ಫೆಡರೇಷನ್‌ ರಷ್ಯಾ ಮತ್ತು ಬೆಲಾರೂಸ್‌ಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳದಂತೆ ನಿಷೇಧ ಹೇರಿದೆ.

ಭಾರತದಿಂದ 30 ಸ್ಪರ್ಧಿಗಳು: ಪುರುಷ ಹಾಗೂ ಮಹಿಳಾ ವಿಭಾಗ ಸೇರಿ ಭಾರತದಿಂದ ಒಟ್ಟು 30 ಆಟಗಾರರು ದೇಶವನ್ನು ಪ್ರತಿನಿಧಿಸಲಿದ್ದಾರೆ. ಭಾರತದಿಂದ ಒಟ್ಟು 6 ತಂಡಗಳು (3 ಮುಕ್ತ ಹಾಗೂ 3 ಮಹಿಳಾ ವಿಭಾಗ) ಸ್ಪರ್ಧಿಸಲಿವೆ.

Related Articles