Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಅಭಿಲಾಶ್‌ ಶೆಟ್ಟಿ, ಪಡಿಕ್ಕಲ್‌ ಅದ್ಭುತ ಪ್ರದರ್ಶನ: ಕರ್ನಾಟಕ ಫೈನಲ್‌ಗೆ

ವಡೋದರ: ಕರಾವಳಿಯ ವೇಗದ ಬೌಲರ್‌ ಅಭಿಲಾಶ್‌ ಶೆಟ್ಟಿ (34 ಕ್ಕೆ 4) ಅವರ ಅದ್ಭುತ ಬೌಲಿಂಗ್‌ ಹಾಗೂ ದೇವದತ್ತ ಪಡಿಕ್ಕಲ್‌‌ (86)‌, ಆರ್‌. ಸ್ಮರಣ್‌ (76) ಅವರ ಅದ್ಭುತ ಬ್ಯಾಟಿಂಗ್‌ ನೆರವಿನಿಂದ ಹಾಲಿ ಚಾಂಪಿಯನ್‌ ಹರಿಯಾಣದ ವಿರುದ್ಧ 5 ವಿಕೆಟ್‌ ಅಂತರದಲ್ಲಿ ಜಯ ಗಳಿಸಿದ ಕರ್ನಾಟಕ ತಂಡ ವಿಜಯ ಹಜಾರೆ ಟ್ರೋಫಿ ಟೂರ್ನಿಯ ಫೈನಲ್‌ ತಲುಪಿದೆ. Clinical performance from Karnataka fifth time reached Vijay Hazare Trophy Final.

ಹರಿಯಾಣ ನೀಡಿದ 238 ರನ್‌ ಗುರಿಯನ್ನು ಕರ್ನಾಟಕ ಇನ್ನೂ 16 ಎಸೆತಗಳು ಬಾಕಿ ಇರುವಾಗಲೇ ಕೇವಲ 5 ವಿಕೆಟ್‌ ಕಳೆದುಕೊಂಡು ಜಯ ಸಾಧಿಸಿ ಐದನೇ ಬಾರಿಗೆ ಚಾಂಪಿಯನ್‌ಷಿಪ್‌ನ ಫೈನಲ್‌ ತಲುಪಿತು.

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಕರ್ನಾಟಕದ ಪರ  ವೇಗದ ಬೌಲರ್‌ ಅಭಿಲಾಶ್‌ ಶೆಟ್ಟಿ 34 ರನ್‌ಗೆ 4 ವಿಕೆಟ್‌‌ ಗಳಿಸಿ ಹರಿಯಾಣದ ರನ್‌ ಗಳಿಕೆಗೆ ಕಡಿವಾಣ ಹಾಕಿದರು. ಹರಿಯಾಣದ ಪರ ಅಂಕಿತ್‌ ಕುಮಾರ್‌ (48) ಹಾಗೂ ಹಿಮಾಂಶು ರಾಣಾ (44) ಅವರನ್ನು ಹೊರತುಪಡಿಸಿದರೆ ಇತರ ಆಟಗಾರರು ಕರ್ನಾಟಕ ಬೌಲಿಂಗ್‌  ದಾಳಿಯನ್ನು ಎದುರಿಸುವಲ್ಲಿ ವಿಫಲವಾಗಿ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 237 ರನ್‌ ಗಳಿಸಿತು. ಕರ್ನಾಟಕ ಪರ ಪ್ರಸೀಧ್‌ ಕೃಷ್ಣ (40ಕ್ಕೆ 2), ಹಾರ್ದಿಕ್‌ ರಾಜ್‌ (61ಕ್ಕೆ 1) ಹಾಗೂ ಶ್ರೇಯಸ್‌ ಗೋಪಾಲ್‌ (36ಕ್ಕೆ 2) ಉತ್ತಮ ಬೌಲಿಂಗ್‌ ಪ್ರದರ್ಶಿಸಿದರು.

ಸಾಧಾರಣ ಮೊತ್ತವನ್ನು ಬೆಂಬತ್ತಿದ ಕರ್ನಾಟಕದ ಪರ ನಾಯಕ ಮಯಾಂಕ್‌ ಆಗರ್ವಾಲ್‌‌ ಖಾತೆ ತೆರೆಯದೆ ಪೆವಿಲಿಯನ್‌ ಸೇರಿದರು. ಆದರೆ ದೇವದತ್ತ ಪಡಿಕ್ಕಲ್‌ ಹಾಗೂ ರವಿಚಂದ್ರನ್‌ ಸ್ಮರಣ್‌ ಉತ್ತಮ ಜೊತೆಯಾಟವಾಡಿ ಜಯದ ಹಾದಿಯನ್ನು ಸುಗಮಗೊಳಿಸಿದರು. 113 ಎಸೆತಗಳನ್ನು ಎದುರಿಸಿದ ಪಡಿಕ್ಕಲ್‌ 8 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ 86 ರನ್‌ ಸಿಡಿಸಿದರೆ, ಸ್ಮರಣ್‌ 94 ಎಸೆತಗಳನ್ನೆದುರಿಸಿ 3 ಬೌಂಡರಿ ಹಾಗೂ 3 ಸಿಕ್ಸರ್‌ ನೆರವಿನಿಂದ ಅಮೂಲ್ಯ 76 ರನ್‌ ಗಳಿಸಿದರು. ಈ ಇಬ್ಬರೂ ಆಟಗಾರರು ಮೂರನೇ ವಿಕೆಟ್‌ ಜೊತೆಯಾಟದಲ್ಲಿ 138 ರನ್‌ ಗಳಿಸಿ ಜಯದ ಹಾದಿ ಸುಗಮಗೊಳಿಸಿದರು. ಕೆ.ವಿ. ಅನೀಶ್‌ (22) ಹಾಗೂ ಶ್ರೇಯಸ್‌ ಗೋಪಾಲ್‌ (23*) ಜಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು. ದೇವದತ್ತ ಪಡಿಕ್ಕಲ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಗುರುವಾರ ವಿದರ್ಭ ಹಾಗೂ ಮಹಾರಾಷ್ಟ್ರ ನಡುವೆ ಎರಡನೇ ಸೆಮಿಫೈನಲ್‌ ಪಂದ್ಯ ನಡೆಯಲಿದೆ.


administrator