ನನ್ನ ಕ್ರೀಡಾ ಬದುಕಿಗೆ ಹೊಸ ರೂಪು ನೀಡಿದ್ದೇ ಕಾಶೀನಾಥ್: ಮನು ಡಿ.ಪಿ.
ಸೋಮಶೇಖರ್ ಪಡುಕರೆ, ಬೆಂಗಳೂರು
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಜಾವೆಲಿನ್ ಎಸೆತದಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಬೇಲೂರಿನ ಮನು ಡಿ.ಪಿ. ತಮ್ಮ ಕ್ರೀಡಾ ಬದುಕಿಗೆ ತಿರುವು ನೀಡಿ ಯಶಸ್ಸಿನ ಹಾದಿ ತೋರಿಸಿದ್ದು ಕಾಮನ್‌ವೆಲ್ತ್ ಪದಕ ವಿಜೇತ, ಗುರು ಕಾಶಿನಾಥ್ ನಾಯ್ಕ್ ಎಂದು ಹೇಳಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರುವ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರಿಗೂ ತರಬೇತಿ ನೀಡಿದ್ದು ಕಾಮನ್‌ವೆಲ್ತ್ ಪದಕ ವಿಜೇತ ಕಾಶೀನಾಥ್ ನಾಯ್ಕ್.
Sportsmail ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮನು, “ಆಳ್ವಾಸ್‌ನಲ್ಲಿ ಓದುತ್ತಿರುವಾಗ ಖೇಲೋ ಇಂಡಿಯಾ ಸ್ಕೂಲ್ ಗೇಮ್ಸ್‌ನಲ್ಲಿ ಕಾಶೀನಾಥ್ ಅವರ ಪರಿಚಯವಾಯಿತು. ನಾನು ಜಾವೆಲಿನ್ ಬಹಳ ಎತ್ತರದಲ್ಲಿ ಜಾವೆಲಿನ್ ಎಸೆಯುತ್ತಿದ್ದೆ, ಬಹಳ ದೂರಕ್ಕೆ ಎಸೆಯುವಲ್ಲಿ ನೆರವು ನೀಡಿದರು. ನಂತರ ಆರ್ಮಿಯಲ್ಲಿ ತರಬೇತಿ ಪಡೆಯಲು ನೆರವಾದರು. ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆಯ್ಕೆಯಾಗುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ,” ಎಂದು ಹೇಳಿದರು.
“ನನಗೆ ದೇವರೆಂದರೆ ಗುರು. ಕಾಶೀನಾಥ್ ಅವರನ್ನು ನಾನು ಆ ಸ್ಥಾನದಲ್ಲಿಟ್ಟು ನೋಡುತ್ತೇನೆ, ನನಗೆ ನನ್ನ ಕ್ರೀಡಾ ಬದುಕಿನ ಬಗ್ಗೆ ನಂಬಿಕೆ ಇರಲಿಲ್ಲ. ಆದರೆ ಒಂದೇ ಭೇಟಿಯಲ್ಲಿ ಎಲ್ಲವೂ ಬದಲಾಯಿತು. 32 ಮೀಟರ್ ಎಸೆಯುತ್ತಿದ್ದ ನಾನೀಗ 84.35 ಮೀಟರ್ ಎಸೆಯಲು ನನ್ನ ಗುರು ಕಾಶೀನಾಥ್ ಕಾರಣ,” ಎಂದರು.
ನೀರಜ್ ಚೋಪ್ರಾ ಸಾಧನೆಯೇ ಸ್ಫೂರ್ತಿ: ಹಾಸನದಿಂದ 39 ಕಿ.ಮೀ. ದೂರದಲ್ಲಿರುವ ಬೇಲೂರಿನ ದೇವರಕೇಶ್ವಿ ಗ್ರಾಮದ ಮನುಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದ ನೀರಜ್ ಚೋಪ್ರಾ ಅವರ ಸಾಧನೆಯೇ ಸ್ಫೂರ್ತಿಯಂತೆ. “ನನಗೆ ಸ್ಫೂರ್ತಿ ನೀಡಿದ್ದು ನೀರಜ್ ಚೋಪ್ರಾ ಅವರ ಚಿನ್ನದ ಸಾಧನೆ. ಪುಣೆಯಲ್ಲಿ ಎರಡು ಬಾರಿ ಅವರನ್ನು ಭೇಟಿಯಾಗಿದ್ದೆ. ಅವರು ಹಿತಮಿತವಾಗಿ ಮಾತನಾಡುವವರು. ಅವರ ಸಾಧನೆಯನ್ನೇ ಗುರಿಯಾಗಿಟ್ಟುಕೊಂಡಿರುವೆ. ನಾನಿನ್ನೂ ಆರಂಭದಲ್ಲಿದ್ದೇನೆ, ಸಾಗಬೇಕಾದ ಹಾದಿ ಇನ್ನೂ ದೂರ ಇದೆ. ನಿರಂತರ ಪ್ರಯತ್ನದಲ್ಲಿ ತೊಡಗಿಕೊಳ್ಳುವೆ. ಉತ್ತಮ ಕೋಚ್ ಸಿಕ್ಕಿದ್ದಾರೆ. ನೀರಜ್‌ಗೆ ತರಬೇತಿ ನೀಡಿದ ಗುರುಗಳೇ ನನ್ನ ಗುರುಗಳು, ಆದ್ದರಿಂದ ಆ ಆತ್ಮವಿಶ್ವಾ ಭದ್ರವಾಗಿದೆ,” ಎಂದರು.
ಹೈಸ್ಕೂಲ್‌ನಿಂದ ಜಾವೆಲಿನ್ ಎಸೆತ: ಮನು ಆರಂಭದಲ್ಲಿ ವಾಲಿಬಾಲ್, ಥ್ರೋಬಾಲ್, ಹೈಜಂಪ್ ಮೊದಲಾದ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆದರೆ ಯಶಸ್ಸು ಕಾಣಲಿಲ್ಲ. 9ನೇ ತರಗತಿಯಲ್ಲಿರುವಾಗ ತಾಲೂಕು ಮತ್ತು ಹೋಬಳಿ ಮಟ್ಟದ ಕ್ರೀಡಾಕೂಟಗಳಿಗೆ ಸ್ಪರ್ಧಿಗಳನ್ನು ಆಯ್ಕೆ ಮಾಡುವಾಗ ದೈಹಿಕ ಶಿಕ್ಷಕರು ಜಾವೆಲಿನ್ ಎಸೆಯಲು ಆಯ್ಕೆ ಮಾಡಿದರು. ಮನು ಅಲ್ಲಿಂದ ಮತ್ತೆ ಹಿಂದಿರುಗಿ ನೋಡಲಿಲ್ಲ.
ಆಳ್ವಾಸ್‌ನಲ್ಲಿ ಪದವಿ: ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ಬಯಸಿ ಮನು ಮೂಡಬಿದಿರೆಯ ಆಳ್ವಾಸ್ ಕಾಲೇಜಿಗೆ ಸೇರ್ಪಡೆಯಾದರು. ಅಲ್ಲಿ ಒಂದು ವರ್ಷದಲ್ಲೇ ಕೋಚ್ ಭಾರತೀಯ ಕ್ರೀಡಾಪ್ರಾಧಿಕಾರವನ್ನು ಸೇರಿದ ಕಾರಣ ತರಬೇತಿಗೆ ತೊಂದರೆಯಾಯಿತು. ಆದರೆ ಮನು ಅಭ್ಯಾಸವನ್ನು ನಿಲ್ಲಿಸಲಿಲ್ಲ.
ಕಾಶೀನಾಥ್ ಪರಿಚಯ: 2019ರಲ್ಲಿ ಪುಣೆಯಲ್ಲಿ ಖೇಲೋ ಇಂಡಿಯಾ ಸ್ಕೂಲ್ ಗೇಮ್ಸ್ ನಡೆಯುತ್ತಿತ್ತು. ಆಳ್ವಾಸ್‌ನಿಂದ ಮನು ಕರ್ನಾಟಕವನ್ನು ಪ್ರತಿನಿಧಿಸಿದರು. ಆಗ 67 ಮೀ. ದೂರಕ್ಕೆ ಜಾವೆಲಿನ್ ಎಸೆಯುತ್ತಿದ್ದರು. ಖೇಲೋ ಇಂಡಿಯಾ ಸ್ಕೂಲ್ ಗೇಮ್ಸ್‌ನಲ್ಲಿ ಮನು 67ಮೀ. ದೂರಕ್ಕೆ ಎಸೆದು ಚಿನ್ನದ ಪದಕ ಗೆದ್ದರು. ಆಗ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದಿರುವ ಸುಬೇದಾರ್ ಕಾಶೀನಾಥ್ ನಾಯ್ಕ್ ಅವರ ಕಣ್ಣಿಗೆ ಮನು ಕಾಣಿಸಿಕೊಂಡರು. ಈ ಯುವಕನಲ್ಲಿ ಸಾಮರ್ಥ್ಯ ಇದೆ ಎಂದು ಗುರುತಿಸಿ ತರಬೇತಿಗಾಗಿ ಪುಣೆಗೆ ಆಹ್ವಾನ ನೀಡಿದರು.
ಸಿವಿಲ್ ಬಾಯ್ ಆಗಿ ಸೇರ್ಪಡೆ: ಸೇನೆಯಲ್ಲಿ ಕ್ರೀಡಾ ತರಬೇತಿ ಪಡೆಯಲು ಸಿವಿಲ್ ಬಾಯ್ ಹಂತದಲ್ಲಿ ಸೇರಬೇಕಾಗಿತ್ತು. ಕಾಶೀನಾಥ್ ಅವರು ಮನುವಿನ ಸಾಮರ್ಥ್ಯ ನೋಡಿ ಸಿವಿಲ್ ಬಾಯ್ ಆಗಿ ಸೇರ್ಪಡೆ ಮಾಡಿಕೊಂಡು ತರಬೇತಿ ನೀಡತೊಡಗಿದರು. ಮನು ತಾನು ಮಾಡುತ್ತಿದ್ದ ತಪ್ಪುಗಳನ್ನು ಸರಿಪಡಿಸಿಕೊಂಡರು. 70 ಮೀ. ದೂರಕ್ಕೆ ಜಾವೆಲಿನ್ ಎಸೆದರು. 2019ರ ಖೇಲೋ ಇಂಡಿಯಾದಲ್ಲಿ ಚಿನ್ನ ಪದಕವಾಯಿತು. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ 76.30 ಮೀ. ದೂರಕ್ಕೆ ಎಸೆದಾಗ ಸೇನೆಯಲ್ಲಿ ಕ್ರೀಡಾಕೋಟಾದಡಿ ಹವಾಲ್ದಾರ್ ಉದ್ಯೋಗ ಸಿಕ್ಕಿತು. ನಂತರ ಕೊರೋನಾದಿಂದಾಗಿ ಜಾವೆಲಿನ್ ಕೇವಲ ಸ್ಪರ್ಧೆಗೆ ಸೀಮಿತವಾಯಿತು. ನಂತರದ ಎರಡು ಸ್ಪರ್ಧೆಗಳಲ್ಲಿ 78-79 ಮೀ. ದೂರಕ್ಕೆ ಎಸೆದರೂ ಪದಕ ದಕ್ಕಲಿಲ್ಲ. ಆದರೆ ನಂತರದ ಸ್ಪರ್ಧೆಗಳಲ್ಲಿ ಮನು ದೇಶದ ಉತ್ತಮ ಜಾವೆಲಿನ್ ಎಸೆತಗಾರರಾಗಿ ಮೂಡಿ ಬಂದರು.
ಈಗ ಕ್ರೀಡೆಯೇ ಶಿಕ್ಷಣ!: ಮನು ಅವರು ಪುಣೆಯಲ್ಲಿ ತರಬೇತಿ ಆರಂಭಿಸಿದ ಬಳಿಕ ಆಳ್ವಾಸ್‌ನಲ್ಲಿ ಪದವಿಯನ್ನು ಪೂರ್ಣಗೊಳಿಸಲಾಗಲಿಲ್ಲ. ಇದರಿಂದಾಗಿ ಎರಡನೇ ವರ್ಷದ ಪದವಿಗೇ ಶಿಕ್ಷಣ ನಿಂತಿತು. ಆದರೆ ಆ ಬಗ್ಗೆ ಮನು ಬೇಸರ ವ್ಯಕ್ತಪಡಿಸಿಲ್ಲ. ನನ್ನ ಪಾಲಿಗೆ ಕ್ರೀಡೆಯೇ ವಿಶ್ವವಿದ್ಯಾನಿಲಯ ಎನ್ನುತ್ತಾರೆ. “ ಆರಂಭದಲ್ಲಿ ಪದವಿ ಪೂರ್ಣಗೊಳಿಸಲಾಗಲಿಲ್ಲ ಎಂಬ ನೋವು ಇದ್ದಿತ್ತು. ಅಪ್ಪ ಅಮ್ಮನಿಗೆ ಪೊಲೀಸ್ ಇಲಾಖೆ ಸೇರಬೇಕೆಂಬ ಹಂಬಲ. ಆದರೆ ನನಗೆ ಕ್ರೀಡೆಯಲ್ಲಿ ಮುಂದುವರಿಯಬೇಕೆಂಬ ಉತ್ಕಟತೆ. ಸಾಗಿ ಬಂದ ಹಾದಿಯನ್ನು ಹಿಂದಿರುಗಿ ನೋಡಿದಾಗ ಕ್ರೀಡೆ ನನಗೆ ಬದುಕಿನ ಹಲವಾರು ಪಾಠಗಳನ್ನು ಕಲಿಸಿದೆ. ಬದುಕಿನಲ್ಲೂ ಸೋಲು ಗೆಲುವು ಇರುತ್ತದೆ. ಅದೇ ರೀತಿ ಕ್ರೀಡೆಯಲ್ಲೂ ಇದೆ. ಇಲ್ಲಿಯೂ ಬದುಕಿನ ಪಾಠವಿದೆ. ನನ್ನ ಪಾಲಿಗೆ ಈಗ ಕ್ರೀಡೆಯೇ ವಿಶ್ವವಿದ್ಯಾನಿಲಯ, ಪ್ರತಿಯೊಂದು ಸ್ಪರ್ಧೆಯೂ ಹೊಸ ಹೊಸ ಪರೀಕ್ಷೆ,” ಎಂದರು.
ಕೃಷಿ ಕುಟುಂಬದಿಂದ ಬಂದ ಸಾಧಕ: ಹಿತಮಿತವಾಗಿ ಮಾತನಾಡುವ ಮನು ಸ್ಪರ್ಧೆಗಳ ಮೂಕಲವೇ ಬದುಕಿನ ಪಾಠ ಕಲಿತುಕೊಂಡು ಮಾನಸಿಕವಾಗಿ ಸದೃಢರಾಗಿದ್ದಾರೆ. ತಂದೆ ಪ್ರಕಾಶ್ ಕೃಷಿಕರು. ತಾಯಿ ಸುಜಾತ ಕೃಷಿಯಲ್ಲಿ ನೆರವಾಗುತ್ತಿದ್ದಾರೆ. ಕಾಮನ್‌ವೆಲ್ತ್‌ನಲ್ಲಿ ಪದಕದ ನಿರೀಕ್ಷೆ ಮಾಡಬಹುದೇ? ಎಂಬ ಪ್ರಶ್ನೆಗೆ ಉತ್ತರಿಸಿದ ಮನು, “ಪ್ರಯತ್ನ ಮಾಡುತ್ತೇನೆ, ಎಲ್ಲರೂ ಪದಕದ ಗುರಿ ಇಟ್ಟುಕೊಂಡೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಉತ್ತಮ ಮೂರು ಸ್ಥಾನ ಪಡೆದವರು ಮಾತ್ರ ಪದಕ ಗೆಲ್ಲುತ್ತಾರೆ. ಆದ್ದರಿಂದ ಉತ್ತಮ ಮೂರು ಸ್ಥಾನಕ್ಕಾಗಿ ನನ್ನ ಗುರಿ ಹಾಗೂ ಅದಕ್ಕಾಗಿ ಪ್ರಯತ್ನ. ಹವಾಮಾನ, ದೇಹಸ್ಥಿತಿ ಇವುಗಳಿಗೆ ಹೊಂದಿಕೊಂಡು ಎಸೆತದಲ್ಲಿ ಏರಿಳಿತಗಳಿರುತ್ತವೆ, ಉತ್ತಮ ಪ್ರಯತ್ನ ಮಾಡುವೆ,” ಎಂದು ಹೇಳುವ ಅವರ ಮಾತಿನಲ್ಲಿ ಒಬ್ಬ ಪ್ರಬುದ್ಧ ಕ್ರೀಡಾಪಟುವನ್ನು ಕಾಣಬಹುದು.