Friday, November 22, 2024

ಮಕ್ಕಳಲ್ಲಿ ಸ್ಫೂರ್ತಿ ತುಂಬಿದ ಡಿಎಸ್‌ಪಿ ವೆಲೆಂಟೈನ್ ಡಿ’ ಸೋಜ

ಸ್ಪೋರ್ಟ್ಸ್ ಮೇಲ್ ವರದಿ

ಪ್ರತಿಯೊಬ್ಬರಲ್ಲೂ ಒಬ್ಬ ಚಾಂಪಿಯನ್ ಅಡಗಿರುತ್ತಾನೆ. ಆ ಪ್ರತಿಭೆ ಯನ್ನು ಗುರುತಿಸಿ ಅವರಿಗೆ ತಕ್ಕ ತರಬೇತಿ ನೀಡಿದರೆ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರತಿಭಾವಂತರನ್ನು ಕಾಣಬಹುದು, ಇದು ಕೇವಲ ಕ್ರೀಡೆಗೆ ಮಾತ್ರ ಅನ್ವಯಿಸುವುದಲ್ಲ, ನೀವು ಆಯ್ಕೆ ಮಾಡಿಕೊಂಡ ಪ್ರತಿಯೊಂದು ಕ್ಷೇತ್ರದಲ್ಲೂ ಸಾಧ್ಯವಿದೆ ಎಂದು ಕರಾವಳಿಯ ದಕ್ಷ ಪೊಲೀಸ್ ಅಧಿಕಾರಿ, ಭಟ್ಕಳದ ಡಿಎಸ್‌ಪಿ ವೆಲೆಂಟೈನ್ ಡಿ’ ಸೋಜ ಅಭಿಪ್ರಾಯಪಟ್ಟರು.

ಅವರು ಮಾಬುಕಳದ ಚೇತನಾ ಪ್ರೌಢ ಶಾಲೆಯ ಅಂಗಣದಲ್ಲಿ ನಡೆಯುತ್ತಿರುವ ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿಯ ವಾರ್ಷಿಕ ಶಿಬಿರದಲ್ಲಿ  ಅತಿಥಿಯಾಗಿ ಪಾಲ್ಗೊಂಡು ಮಕ್ಕಳಲ್ಲಿ ಹೊಸ ಉಲ್ಲಾಸ ತುಂಬಿದರು.
‘ನಾನೊಬ್ಬ ಕ್ರೀಡಾಪಟುವಾಗಿದ್ದ ಕಾರಣಕ್ಕೆ ಇಂದು ಪೊಲೀಸ್ ಅಧಿಕಾರಿಯಾಗಿ ಸಮರ್ಥ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು. ಒಂದೇ ಅವಧಿಯಲ್ಲಿ ಎರಡು  ಕಡೆಯಿಂದ ಉದ್ಯೋಗಕ್ಕೆ ಅವಕಾಶ ಕೂಡಿ ಬಂದಿತ್ತು. ನಮ್ಮ ತಂದೆಯ ಆಸೆಯಂತೆ ಪೊಲೀಸ್ ಇಲಾಖೆ ಆಯ್ಕೆ ಮಾಡಿಕೊಂಡೆ. ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದ ಕಾರಣಕ್ಕೆ ನನ್ನ ವೃತ್ತಿ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಯಿತು. ಯಾವುದೇ ಸನ್ನವೇಶವನ್ನು ಎದುರಿಸಲು ನನ್ನ ಮನೋಬಲ ಒಗ್ಗಿಕೊಂಡಿರುತ್ತದೆ. ಇದಕ್ಕೆ ಮುಖ್ಯ ಕಾರಣ ಕ್ರೀಡೆ. ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಬೇಕಾದರೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಇಲ್ಲಿ  ವಿಜಯ ಆಳ್ವಾ ಅವರಂಥ ಉತ್ತಮ ತರಬೇತುದಾರರು ಸಿಕ್ಕಿದ್ದಾರೆ. ಮುಂದಿನ ವರ್ಷಗಳಲ್ಲಿ ಆ ಅಕಾಡೆಮಿಯಿಂದ ಕೆಲವು ಆಟಗಾರರಾದರೂ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಾರೆಂಬ ನಂಬಿಕೆ ನನ್ನಲ್ಲಿದೆ. ಉಡುಪಿ ಜಿಲ್ಲೆಯ ರಣಜಿ ಆಟಗಾರನೊಬ್ಬ ಆಳ್ವಾಸ್ ಅಕಾಡೆಮಿಯಿಂದಲೇ ಬರಬೇಕು ಎಂಬುದು ನನ್ನ ಹಾರೈಕೆ,‘ ಎಂದರು.
ಶಿಸ್ತು ಅಗತ್ಯ
ಪ್ರತಿಯೊಂದು ಕ್ರೀಡೆಯಲ್ಲೂ ಶಿಸ್ತು ಅಗತ್ಯ, ಪದಕ ಗೆಲ್ಲುವುದಕ್ಕಿಂತ ಶಿಸ್ತಿನ ಆಟ ಪ್ರದರ್ಶಿಸುವುದೇ ಮುಖ್ಯವಾಗಿರುತ್ತದೆ. ಶಿಸ್ತನ್ನು ಮೈಗೂಡಿಸಿಕೊಂಡರೆ ಪದಕ ಹಾಗೂ ಯಶಸ್ಸಿನ ಹಾದಿ ಸುಗಮವಾಗುತ್ತದೆ. ಸಮಾಜದಲ್ಲಿ ಕ್ರೀಡಾ ಸಾ‘ಕರಿಗೆ ಉತ್ತಮ ರೀತಿಯಲ್ಲಿ ಗೌರವ ನೀಡಲಾಗುತ್ತಿದೆ. ಪ್ರತಿಯೊಂದು ಕ್ಷೇತ್ರವೂ ಅವರನ್ನು ಗುರುತಿಸುತ್ತಿದೆ. ಕ್ರೀಡಾ ಸಾಧನೆಯಿಂದ ನಿಮ್ಮ ಉದ್ಯೋಗದ ಹಾದಿ ಸುಗಮವಾಗುತ್ತದೆ. ಆದ್ದರಿಂದ ನಿಮ್ಮ ಕ್ರೀಡಾ ಬದುಕಿನ ಹಾದಿ ಯಶಸ್ಸು ಕಾಣಲಿ, ಅದೇ ರೀತಿ ಕ್ರೀಡೆಯ ಜತೆಯಲ್ಲೇ ಓದಿನ ಕಡೆಗೂ ಹೆಚ್ಚಿನ ಗಮನ ಹರಿಸಬೇಕು. ನಿಮ್ಮ ಕ್ರೀಡಾ ಚಟುವಟಿಕೆಗೆ ಓದಿಗೆ ಪೂರಕವಾಗಿರಬೇಕು. ಕ್ರೀಡೆಗೆ ಮೀಸಲಿಟ್ಟ ಸಮಯವನ್ನು ಓದಿಗೂ ನೀಡಬೇಕು ಎಂದು ಹೇಳಿ ಯುವಕರಲ್ಲಿ ಹೊಸ ಉತ್ಸಾಹವನ್ನು ತುಂಬಿದರು.
ಈ ಸಂದರ್ಭದಲ್ಲಿ ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿಯ ಪ್ರಧಾನ ಕೋಚ್ ವಿಜಯ ಆಳ್ವಾ ಹಾಜರಿದ್ದರು.

Related Articles